×
Ad

RSS ಅಂಗಸಂಸ್ಥೆಯ ಪ್ರೇರಣೆ; ಹಲವು ವಿಶ್ವವಿದ್ಯಾಲಯಗಳಲ್ಲಿ ‘ಇಂಡಿಯಾ’ ಬದಲಿಗೆ ‘ಭಾರತ್’ ಬಳಕೆ

Update: 2026-06-20 21:05 IST

Photo Credit: PTI

ಕೆಲವು ರಾಜ್ಯಗಳ ಹಲವು ರಾಜ್ಯ ಮತ್ತು ಕೇಂದ್ರ ವಿಶ್ವವಿದ್ಯಾಲಯಗಳು ತಮ್ಮ ಪದವಿ ಪ್ರಮಾಣಪತ್ರಗಳು, ಅಂಕಪಟ್ಟಿಗಳು, ಅಧಿಕೃತ ಪತ್ರವ್ಯವಹಾರಗಳು, ಆಮಂತ್ರಣ ಪತ್ರಿಕೆಗಳು ಮತ್ತು ನಾಮಫಲಕಗಳು ಸೇರಿದಂತೆ ಇತ್ಯಾದಿಗಳಲ್ಲಿ ‘ಇಂಡಿಯಾ’ ಎಂಬ ಪದದ ಬದಲಿಗೆ ‘ಭಾರತ್’ ಎಂದು ಬಳಸಲು ನಿರ್ಧರಿಸಿವೆ. ರವಿವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಧ್ಯಪ್ರದೇಶದ ಜಬಲ್‌ಪುರದಲ್ಲಿರುವ ರಾಜ್ಯ ಸರ್ಕಾರಿ ವಿಶ್ವವಿದ್ಯಾಲಯವಾದ ರಾಣಿ ದುರ್ಗಾವತಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿ ವಿತರಿಸಲಾಗುವ ಎಲ್ಲಾ ಪದವಿ ಪ್ರಮಾಣಪತ್ರಗಳಲ್ಲಿ ‘ಇಂಡಿಯಾ’ ಬದಲಿಗೆ ‘ಭಾರತ್’ ಎಂದು ನಮೂದಿಸಲಾಗಿರುತ್ತದೆ ಎಂದು The Indian Express ವರದಿ ಮಾಡಿದೆ.

ಈ ಬಗ್ಗೆ ದಿ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿದ ರಾಣಿ ದುರ್ಗಾವತಿ ವಿಶ್ವವಿದ್ಯಾಲಯದ ಕುಲಪತಿ ರಾಜೇಶ್ ಕುಮಾರ್ ವರ್ಮಾ, ವಿಶ್ವವಿದ್ಯಾಲಯವು ಇನ್ನುಮುಂದೆ ತನ್ನ ಎಲ್ಲಾ ಪದವಿ ಪ್ರಮಾಣಪತ್ರಗಳು ಮತ್ತು ಅಂಕಪಟ್ಟಿಗಳಲ್ಲಿ ಹಿಂದಿ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲೂ ‘ಭಾರತ್’ ಎಂದೇ ಬಳಸಲಿದೆ ಎಂದು ತಿಳಿಸಿದ್ದಾರೆ.

“G–20 ಶೃಂಗಸಭೆಯಲ್ಲೂ ‘ಭಾರತ್’ ಎಂಬ ಪದವನ್ನೇ ಬಳಸಲಾಗಿತ್ತು. ನಾವು ಭಾರತದ ಜನರು. ದೇಶದ ನಿಜವಾದ ಹೆಸರು ಭಾರತ್. ಇಂಡಿಯಾ ಎಂಬ ಹೆಸರು ನಂತರ ಬಂದದ್ದು. ಹಾಗಾಗಿ, ನಮ್ಮ ಎಲ್ಲಾ ಅಧಿಕೃತ ದಾಖಲೆಗಳಲ್ಲಿ ‘ಭಾರತ್’ ಎಂಬ ಪದವನ್ನು ಬಳಸಲು ನಮ್ಮ ಕಾರ್ಯಕಾರಿ ಮಂಡಳಿಯು ನಿರ್ಣಯವನ್ನು ಅಂಗೀಕರಿಸಿದೆ” ಎಂದಿದ್ದಾರೆ.

ಈ ಪ್ರಸ್ತಾಪಕ್ಕಾಗಿ 2025ರಲ್ಲಿ ಪ್ರಯಾಗ್‌ ರಾಜ್‌ ನಲ್ಲಿ ನಡೆದ ಮಹಾಕುಂಭದ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ‘ಜ್ಞಾನ ಮಹಾಕುಂಭ’ದಲ್ಲಿ ವಿಶ್ವವಿದ್ಯಾಲಯವನ್ನು ಸನ್ಮಾನಿಸಲಾಗಿತ್ತು ಎಂದೂ ಅವರು ಹೇಳಿದ್ದಾರೆ.

‘ನಿಜವಾದ ಹೆಸರು’ ಎಂಬ ತರ್ಕ

ಅಖಂಡ ಭಾರತದಲ್ಲಿ ನಂಬಿಕೆ ಇರುವಾಗ ಈ ಬದಲಾವಣೆಯ ಅಗತ್ಯವೇನಿತ್ತು ಎಂಬ ಪ್ರಶ್ನೆಗೆ ಉತ್ತರಿಸಿದ ವರ್ಮಾ, “ಇದು ಯಾವುದನ್ನೋ ತಿರಸ್ಕರಿಸುವ ಪ್ರಶ್ನೆಯಲ್ಲ. ನನ್ನ ಹೆಸರು ರಾಜೇಶ್ ವರ್ಮಾ. ನನ್ನ ಕುಟುಂಬದವರು ನನ್ನನ್ನು ‘ರಾಜು’ ಎಂದು ಕರೆಯಲು ಪ್ರಾರಂಭಿಸಿದರೆ, ಅವರು ಹಾಗೇಕೆ ಮಾಡಿದರು ಎಂದು ನಾನು ಪ್ರಶ್ನಿಸುತ್ತಿಲ್ಲ. ನಾನು ಕೇವಲ ರಾಜೇಶ್ ವರ್ಮಾ. ಈ ಜಗತ್ತಿನಲ್ಲಿ ಹುಟ್ಟಿದಾಗಿನಿಂದಲೂ ರಾಜೇಶ್ ವರ್ಮಾ ಆಗಿಯೇ ಇದ್ದೇನೆ ಎಂದು ಹೇಳುತ್ತಿದ್ದೇನೆ ಅಷ್ಟೇ. ಈ ದೇಶವು ಭರತ ಚಕ್ರವರ್ತಿಯ ಭೂಮಿಯಾಗಿರುವುದರಿಂದ ಇದರ ನಿಜವಾದ ಹೆಸರು ಭಾರತ್” ಎಂದು ಹೇಳಿದರು.

ಮಧ್ಯಪ್ರದೇಶದ ಮತ್ತೊಂದು ವಿಶ್ವವಿದ್ಯಾಲಯವಾದ ಇಂದೋರ್‌ ನ ದೇವಿ ಅಹಲ್ಯಾ ವಿಶ್ವವಿದ್ಯಾಲಯವು, ತಾನೇ ರಾಜ್ಯದಲ್ಲಿ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿರುವುದಾಗಿ ಹೇಳಿಕೊಂಡಿದೆ. ಅದರ ಕುಲಪತಿ ರಾಕೇಶ್ ಸಿಂಘೈ ಅವರು, “ನಾವು ಅಂತಹ ನಿರ್ಣಯವನ್ನು ಅಂಗೀಕರಿಸಿದ ಮೊದಲ ವಿಶ್ವವಿದ್ಯಾಲಯವಾಗಿದ್ದೇವೆ. ಈಗಾಗಲೇ ಎಲ್ಲೆಡೆ ಬರವಣಿಗೆಯಲ್ಲಿ ‘ಇಂಡಿಯಾ’ ಬದಲಿಗೆ ‘ಭಾರತ್’ ಎಂದು ಬಳಸಿದ್ದೇವೆ. ಇತರ ವಿಶ್ವವಿದ್ಯಾಲಯಗಳು ನಾವು ಹಾಕಿಕೊಟ್ಟ ಮಾದರಿಯನ್ನು ಅನುಸರಿಸುತ್ತಿವೆ” ಎಂದು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಉಲ್ಲೇಖಿಸಿದೆ.

ಈ ಉದಾಹರಣೆಗಳು ಕೇವಲ ಮಧ್ಯಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಇತರ ಕೆಲವು ರಾಜ್ಯಗಳ ಹಲವು ವಿಶ್ವವಿದ್ಯಾಲಯಗಳಲ್ಲೂ ಇಂತಹ ಬದಲಾವಣೆಗಳು ಕಂಡುಬಂದಿವೆ.

ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿರುವ ಕೇಂದ್ರ ವಿಶ್ವವಿದ್ಯಾಲಯವಾದ ಗುರು ಘಾಸಿದಾಸ್ ವಿಶ್ವವಿದ್ಯಾಲಯವೂ ‘ಇಂಡಿಯಾ’ ಬದಲಿಗೆ ‘ಭಾರತ್’ ಎಂದು ಬಳಸಲು ನಿರ್ಧರಿಸಿದೆ. ಅದರ ಕುಲಪತಿ ಅಲೋಕ್ ಕುಮಾರ್ ಚಕ್ರವಾಲ್ ಅವರು, “ನಾವು ‘ಇಂಡಿಯಾ’ ಬದಲಿಗೆ ‘ಭಾರತ್’ ಎಂದು ಬಳಸಲು ನಿರ್ಧರಿಸಿದ್ದೇವೆ. ಇದು ಇನ್ನೂ ಅಂಕಪಟ್ಟಿಗಳಲ್ಲಿ ಜಾರಿಗೆ ಬರಬೇಕಿದೆ. ಆದರೆ ನಿರ್ಧಾರವನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ. ದೇಶದ ನಿಜವಾದ ಹೆಸರು ಭಾರತ್. ವಿದೇಶಿಯರು ಇದಕ್ಕೆ ಇಂಡಿಯಾ ಎಂದು ಹೆಸರಿಟ್ಟರು. ನಾವು ಇದನ್ನು ಭಾರತ್ ಎಂದು ಕರೆಯಬೇಕು ಎಂಬುದು ಎಲ್ಲಾ ಬುದ್ಧಿವಂತರು ಮತ್ತು ಬುದ್ಧಿಜೀವಿಗಳ ನಂಬಿಕೆಯಾಗಿದೆ” ಎಂದು ಹೇಳಿದ್ದಾರೆ.

ಈಗಾಗಲೇ ಮುದ್ರಿಸಲಾಗಿರುವ ಅಂಕಪಟ್ಟಿಗಳು ಮತ್ತು ಪದವಿ ಪ್ರಮಾಣಪತ್ರಗಳ ಸಂಗ್ರಹ ಮುಗಿದ ನಂತರ, ಹೊಸದರಲ್ಲಿ ‘ಇಂಡಿಯಾ’ ಬದಲಿಗೆ ‘ಭಾರತ್’ ಎಂದು ಮುದ್ರಿಸಲಾಗುವುದು ಎಂದು ಅವರು ಹೇಳಿದರು.

ಈ ಎಲ್ಲಾ ಕ್ರಮಗಳ ಹಿಂದೆ RSS‌ನೊಂದಿಗೆ ನಿಕಟ ಸಂಪರ್ಕ ಹೊಂದಿರುವ ಮತ್ತು ದಿವಂಗತ ದಿನಾನಾಥ್ ಬಾತ್ರಾ ಅವರೊಂದಿಗೆ ಗುರುತಿಸಿಕೊಂಡಿದ್ದ ‘ಶಿಕ್ಷಾ ಸಂಸ್ಕೃತಿ ಉತ್ಥಾನ್ ನ್ಯಾಸ್’ ಎಂಬ ಸಂಘಟನೆಯ ಅಭಿಯಾನವಿದೆ.

ಈ ನ್ಯಾಸ್‌ನ ಒಂದು ವಿಭಾಗವಾದ ಭಾರತೀಯ ಭಾಷಾ ಮಂಚ್‌ನ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯ ಎಂ.ಎಲ್. ಗುಪ್ತಾ ಅವರು, ‘ಇಂಡಿಯಾ’ ಎಂಬ ಪದದ ಬದಲಿಗೆ ‘ಭಾರತ್’ ಎಂದು ಬಳಸಲು ತಾವು ವ್ಯಾಪಕ ಅಭಿಯಾನ ನಡೆಸಿದ್ದೇವೆ ಎಂದು ಹೇಳಿದ್ದಾರೆ. ಒಂದು ದೇಶಕ್ಕೆ ಅಥವಾ ವ್ಯಕ್ತಿಗೆ ಎರಡು ಹೆಸರುಗಳು ಇರಬಾರದು ಎಂದು ವಾದಿಸುವ ಗುಪ್ತಾ, ದೇಶದ ನಿಜವಾದ ಹೆಸರು ಭಾರತ್, ಆದರೆ ಬ್ರಿಟಿಷರು ಇಲ್ಲಿಗೆ ಬಂದ ನಂತರ ಸಿಂಧೂ (ಇಂಡಸ್) ನದಿಯ ಹೆಸರಿನಿಂದಾಗಿ ಇದು ಇಂಡಿಯಾ ಎಂದು ಕರೆಯಲ್ಪಟ್ಟಿತು ಎಂದು ಹೇಳಿದ್ದಾರೆ.

“ಬ್ರಿಟಿಷರು ಈ ಹೆಸರನ್ನು ಅವಹೇಳನಕಾರಿ ಅರ್ಥದಲ್ಲಿ ಬಳಸುತ್ತಿದ್ದರು. ನಾವು ಅದನ್ನು ಏಕೆ ಉಳಿಸಿಕೊಳ್ಳಬೇಕು?” ಎಂದು ಅವರು ಪ್ರಶ್ನಿಸುತ್ತಾರೆ.

ನ್ಯಾಸ್‌ನ ಪ್ರಯತ್ನಗಳು ಕ್ರಮೇಣ ಫಲ ನೀಡಿವೆ ಎಂದು ಹೇಳುವ ಅವರು, ಜಿ–20 ಶೃಂಗಸಭೆಯ ಸಂದರ್ಭದಲ್ಲಿ ಇಂಗ್ಲಿಷ್‌ನಲ್ಲಿಯೂ ‘ಭಾರತ್’ ಎಂಬ ಪದವನ್ನು ಬಳಸಿರುವುದನ್ನು “ದೇಶದ ಮನಸ್ಥಿತಿಯಲ್ಲಿ ಆಗಿರುವ ಬದಲಾವಣೆಯ ಸಂಕೇತ” ಎಂದು ಉಲ್ಲೇಖಿಸಿದ್ದಾರೆ.

ಗುಪ್ತಾ ಅವರು ‘ಇಂಡಿಯಾ ನಹೀ ಭಾರತ್’ (ಇಂಡಿಯಾ ಅಲ್ಲ, ಭಾರತ್) ಎಂಬ ಪುಸ್ತಕವನ್ನೂ ಬರೆದಿದ್ದು, ಅದರಲ್ಲಿ ಅವರು ಹೀಗೆ ಹೇಳಿದ್ದಾರೆ:

“ನಮ್ಮ ದೇಶದ ಹೆಸರು ಸಾವಿರಾರು ವರ್ಷಗಳಿಂದ ಭಾರತ್ ಎಂದೇ ಇದೆ. ಆದರೆ ಸ್ವಾತಂತ್ರ್ಯದ ನಂತರ, ಸಂವಿಧಾನದ 1ನೇ ವಿಧಿಯಲ್ಲಿ ನಮ್ಮ ದೇಶವನ್ನು ‘ಇಂಡಿಯಾ ದಟ್ ಈಸ್ ಭಾರತ್’ (ಭಾರತವಾಗಿರುವ ಇಂಡಿಯಾ) ಎಂದು ಕರೆಯಲಾಯಿತು. ಇತಿಹಾಸವನ್ನು ನೋಡಿದರೆ, ಯುರೋಪಿಯನ್ನರು ಈ ದೇಶಕ್ಕೆ ಬರುವ ಮೊದಲು ‘ಇಂಡಿಯಾ’ ಎಂಬ ಹೆಸರು ಎಲ್ಲೂ ಕಾಣಿಸುವುದಿಲ್ಲ. ಬ್ರಿಟಿಷ್ ಸಾಮ್ರಾಜ್ಯದ ಅವಧಿಯಲ್ಲಿ, ವಿದೇಶಿ ಆಡಳಿತಗಾರರು ನಮ್ಮ ದೇಶಕ್ಕೆ ‘ಇಂಡಿಯಾ’ ಎಂಬ ಪದವನ್ನು ಬಳಸಿದರು. ಸ್ವಾತಂತ್ರ್ಯದ ನಂತರವೂ ವಿದೇಶಿ ಪ್ರಭುತ್ವ ಮತ್ತು ಪರಾಧೀನತೆಯ ಕಾರಣದಿಂದಾಗಿ, ಸಂವಿಧಾನವನ್ನು ರಚಿಸುವಾಗ ವೈಭವಯುತವಾದ ‘ಭಾರತ್’ ಎಂಬ ಹೆಸರಿನ ಮೊದಲು ಮತ್ತು ಅದರ ಜೊತೆಯಲ್ಲೇ ‘ಇಂಡಿಯಾ’ ಎಂಬ ಪದವನ್ನು ಬಳಸಲಾಯಿತು.”

ತಮ್ಮ ಪುಸ್ತಕದಲ್ಲಿ ಗುಪ್ತಾ ಅವರು, ಮಧ್ಯಪ್ರದೇಶ, ಹರಿಯಾಣ, ರಾಜಸ್ಥಾನ, ಛತ್ತೀಸ್‌ಗಢ, ಗುಜರಾತ್ ಮತ್ತು ಮಹಾರಾಷ್ಟ್ರದಾದ್ಯಂತ 17 ವಿವಿಧ ವಿಶ್ವವಿದ್ಯಾಲಯಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳು ತಮ್ಮ ಎಲ್ಲಾ ಅಧಿಕೃತ ಉದ್ದೇಶಗಳಿಗಾಗಿ ಕೇವಲ ‘ಭಾರತ್’ ಎಂಬ ಪದವನ್ನು ಮಾತ್ರ ಬಳಸುವುದಾಗಿ ಸೂಕ್ತ ನಿರ್ಣಯಗಳನ್ನು ಅಂಗೀಕರಿಸಿವೆ ಎಂದು ಪ್ರತಿಪಾದಿಸಿದ್ದಾರೆ.

ಹಿಂದಿ ‘ರಾಷ್ಟ್ರಭಾಷೆ’ ಎಂದ ವಿಶ್ವವಿದ್ಯಾಲಯದ ಕುಲಪತಿ!

ಗ್ವಾಲಿಯರ್‌ನ ರಾಜಾ ಮಾನ್‌ಸಿಂಗ್ ತೋಮರ್ ಸಂಗೀತ ಮತ್ತು ಕಲಾ ವಿಶ್ವವಿದ್ಯಾಲಯದ ಕುಲಪತಿ ಸ್ಮಿತಾ ಸಹಸ್ರಬುದ್ಧೆ ಅವರು, ನ್ಯಾಸ್ ನಿಯೋಗವು ಮಂಡಿಸಿದ ವಾದಗಳಿಂದ ತಮಗೆ “ಮನವರಿಕೆಯಾದ” ಕಾರಣ, ತಮ್ಮ ವಿಶ್ವವಿದ್ಯಾಲಯದ ಕಾರ್ಯಕಾರಿ ಮಂಡಳಿಯೂ ದಾಖಲೆಗಳಲ್ಲಿ ‘ಇಂಡಿಯಾ’ ಬದಲಿಗೆ ‘ಭಾರತ್’ ಎಂದು ಬಳಸಲು ನಿರ್ಧರಿಸಿದೆ ಎಂದು ಖಚಿತಪಡಿಸಿದ್ದಾರೆ.

“ಹಿಂದಿಯನ್ನು ರಾಷ್ಟ್ರಭಾಷೆ ಎಂದು ಕರೆಯಲಾಗುತ್ತದೆ. ಆದ್ದರಿಂದ ‘ಇಂಡಿಯಾ’ ಬದಲಿಗೆ ‘ಭಾರತ್’ ಎಂದೇ ಬಳಸಬೇಕು. ನಮ್ಮ ಹಳೆಯ ಅಂಕಪಟ್ಟಿಗಳ ಸಂಗ್ರಹ ಮುಗಿದ ತಕ್ಷಣವೇ, ಹೊಸ ಅಂಕಪಟ್ಟಿಗಳು ಮತ್ತು ಪದವಿ ಪ್ರಮಾಣಪತ್ರಗಳಲ್ಲಿ ‘ಇಂಡಿಯಾ’ ಬದಲಿಗೆ ‘ಭಾರತ್’ ಎಂದು ಬದಲಾಯಿಸಲಾಗುವುದು” ಎಂದು ಅವರು ಹೇಳಿದರು.

2025ರಲ್ಲಿ ಕೊಚ್ಚಿಯಲ್ಲಿ ನ್ಯಾಸ್ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ಸಮ್ಮೇಳನವಾದ ‘ಜ್ಞಾನ ಸಭಾ’ವನ್ನು ಉದ್ದೇಶಿಸಿ ಮಾತನಾಡಿದ್ದ RSS ಮುಖ್ಯಸ್ಥ ಮೋಹನ್ ಭಾಗವತ್, “ಭಾರತ್ ಎಂಬುದು ಒಂದು ಅನ್ವರ್ಥನಾಮ. ಅದನ್ನು ‘ಇಂಡಿಯಾ ಈಸ್ ಭಾರತ್’ ಎಂದು ಭಾಷಾಂತರಿಸಬಾರದು. ಅದು ನಿಜ. ಆದರೆ ಭಾರತ್ ಎಂದರೆ ಭಾರತವೇ. ಅದಕ್ಕಾಗಿಯೇ, ವೈಯಕ್ತಿಕವಾಗಿರಲಿ ಅಥವಾ ಸಾರ್ವಜನಿಕವಾಗಿರಲಿ, ಮಾತನಾಡುವಾಗ, ಬರೆಯುವಾಗ ಮತ್ತು ಸಂವಹನ ನಡೆಸುವಾಗ ನಾವು ಭಾರತವನ್ನು ‘ಭಾರತ್’ ಎಂದೇ ಉಳಿಸಿಕೊಳ್ಳಬೇಕು” ಎಂದು ಹೇಳಿದ್ದರು.

ಸಂವಿಧಾನವು ದೇಶಕ್ಕಾಗಿ ‘ಇಂಡಿಯಾ’ ಮತ್ತು ‘ಭಾರತ್’ ಎಂಬ ಎರಡೂ ಹೆಸರುಗಳನ್ನು ಬಳಸುತ್ತದೆ. ಇದರಿಂದಾಗಿ ಇಂಗ್ಲಿಷ್‌ ನಲ್ಲಿ ‘ಇಂಡಿಯಾ’ ಮತ್ತು ಹಿಂದಿಯಲ್ಲಿ ‘ಭಾರತ್’ ಎಂದು ಕರೆಯಲಾಗುತ್ತದೆ.

2023ರಲ್ಲಿ ಜಿ–20 ಔತಣಕೂಟದ ಆಮಂತ್ರಣ ಪತ್ರಿಕೆಯಲ್ಲಿ ದ್ರೌಪದಿ ಮುರ್ಮು ಅವರನ್ನು ‘ಪ್ರೆಸಿಡೆಂಟ್ ಆಫ್ ಭಾರತ್’ (ಭಾರತದ ರಾಷ್ಟ್ರಪತಿ) ಎಂದು ಉಲ್ಲೇಖಿಸಲಾಗಿತ್ತು. 2026ರ ಗಣರಾಜ್ಯೋತ್ಸವದ ಅಧಿಕೃತ ಜ್ಞಾಪನ ಪತ್ರವು ದ್ವಿಭಾಷೆಯಲ್ಲಿದ್ದು, ಅದರಲ್ಲಿ ಸರ್ಕಾರವನ್ನು ‘ಗವರ್ಮೆಂಟ್ ಆಫ್ ಇಂಡಿಯಾ/ಭಾರತ ಸರ್ಕಾರ’ ಎಂದು ಉಲ್ಲೇಖಿಸಲಾಗಿತ್ತು.

ನರೇಂದ್ರ ಮೋದಿ ಸರ್ಕಾರವು ಅಧಿಕೃತ ಉದ್ದೇಶಗಳಿಗಾಗಿ ‘ಭಾರತ್’ ಮತ್ತು ‘ಇಂಡಿಯಾ’ ಎರಡನ್ನೂ ಬಳಸುವುದನ್ನು ಮುಂದುವರಿಸಿದೆ. ಸರ್ಕಾರದ ಪ್ರಮುಖ ಯೋಜನೆಗಳಾದ ಮೇಕ್ ಇನ್ ಇಂಡಿಯಾ, ಸ್ಟಾರ್ಟ್‌ಅಪ್ ಇಂಡಿಯಾ ಮತ್ತು ಸ್ಟ್ಯಾಂಡ್–ಅಪ್ ಇಂಡಿಯಾ ಸೇರಿದಂತೆ ಹಲವು ಯೋಜನೆಗಳಲ್ಲಿ ‘ಇಂಡಿಯಾ’ ಎಂಬ ಪದವು ಇಂದಿಗೂ ಮುಂದುವರಿದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News