ನಿಮಗಾಗಿ ಕರೆ ಮಾಡಲಿದೆ ಗೂಗಲ್ ಜೆಮಿನಿ; ಗೂಗಲ್ ಬಿಡುಗಡೆ ಮಾಡಿದೆ ಹೊಸ ಫೀಚರ್!
Photo Credit : blog.google
ಹೊಸದಾಗಿ ಪರಿಚಯಿಸಲಾದ ‘ಕಾಲ್ ಫಾರ್ ಮಿ’ ಫೀಚರ್ ನಿಂದ ಬಳಕೆದಾರರು ಜೆಮಿನಿಗೆ ನಿರ್ದಿಷ್ಟ ಸೂಚನೆಗಳನ್ನು ನೀಡಬಹುದು.
ಮೆಟಾದ ‘ಮ್ಯೂಸ್’ ಬಿಡುಗಡೆಯಾದ ಬಳಿಕ ಗೂಗಲ್ ಇದೀಗ ಹೊಸ ಫೀಚರ್ ಒಂದನ್ನು ಘೋಷಿಸಿದೆ. ಹೊಸ ಫೀಚರ್ ಬಳಕೆದಾರರಿಗೆ ತಮ್ಮ ‘ಜೆಮಿನಿ ಎಐ ಅಸಿಸ್ಟಂಟ್’ ಮೂಲಕ ನೈಜ-ಪ್ರಪಂಚದ ವ್ಯವಹಾರಗಳಿಗೆ ಕರೆ ಮಾಡಲು ಅನುವು ಮಾಡಿಕೊಡುತ್ತದೆ.
ಹೊಸದಾಗಿ ಪರಿಚಯಿಸಲಾದ ‘ಕಾಲ್ ಫಾರ್ ಮಿ’ ಫೀಚರ್ ನಿಂದ ಬಳಕೆದಾರರು ಜೆಮಿನಿಗೆ ನಿರ್ದಿಷ್ಟ ಸೂಚನೆಗಳನ್ನು ನೀಡಬಹುದು. ಉದಾಹರಣೆಗೆ, ಯಾವುದಾದರೂ ಉತ್ಪನ್ನ ದಾಸ್ತಾನಿನಲ್ಲಿದೆಯೇ ಎಂದು ತಿಳಿಯಲು ಶಾಪ್ ಗೆ ಕರೆ ಮಾಡುವುದು, ರೆಸ್ಟೊರೆಂಟ್ ನಲ್ಲಿ ಟೇಬಲ್ ಕಾಯ್ದಿರಿಸುವುದು ಅಥವಾ ವೈದ್ಯರ ಭೇಟಿಗೆ ಸಮಯ ನಿಗದಿಪಡಿಸಲು ಅವರ ಕಚೇರಿಗೆ ಕರೆ ಮಾಡುವುದು ಇತ್ಯಾದಿ. ಆದರೆ, ಈ ವೈಶಿಷ್ಟ್ಯ ಸದ್ಯ ಪ್ರಾಯೋಗಿಕ ಹಂತದಲ್ಲಿದ್ದು, ಅಮೆರಿಕದಲ್ಲಿ ಜೆಮಿನಿ ಚಂದಾದಾರಿಕೆ ಹೊಂದಿರುವ ‘ಪಿಕ್ಸೆಲ್ 11’ ಬಳಕೆದಾರರಿಗೆ ಮಾತ್ರ ಬಿಡುಗಡೆ ಮಾಡಲಾಗಿದೆ.
ಇದಕ್ಕಾಗಿ ಅರ್ಹ ಬಳಕೆದಾರರು ಆಂಡ್ರಾಯ್ಡ್ ಗಾಗಿ ಗೂಗಲ್ ನ ‘ಫೋನ್ ಆ್ಯಪ್’ನ ಬೀಟಾ ಆವೃತ್ತಿಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಬಳಕೆದಾರರ ಅನುಮತಿ ಮೇರೆಗೆ ಜೆಮಿನಿ ಅವರ ವೈಯಕ್ತಿಕ ಮಾಹಿತಿಯನ್ನು ಕರೆ ಸ್ವೀಕರಿಸುವವರ ಜೊತೆಗೆ ಹಂಚಿಕೊಳ್ಳಲು ಸಾಧ್ಯವಾಗಲಿದೆ. ಹೆಚ್ಚುವರಿಯಾಗಿ, ಸಂಭಾಷಣೆಯ ಲೈವ್ ಲಿಖಿತ ರೂಪದ ಮೂಲಕ ಬಳಕೆದಾರರು ಕರೆಯನ್ನು ಗಮನಿಸಬಹುದು ಮತ್ತು ಯಾವುದೇ ಸಮಯದಲ್ಲಿ ತಾವೇ ನೇರವಾಗಿ ಮಾತನಾಡಲು ಪ್ರಾರಂಭಿಸಬಹುದು ಎಂದು ಕಂಪೆನಿ ಹೇಳಿದೆ.
ಈ ಫೀಚರ್ನ ಭಾಗವಾಗಿ ಕರೆ ಮಾಡಲು AI ಅಸಿಸ್ಟಂಟ್ ಬಳಕೆದಾರರ ಸ್ವಂತ ವೈಯಕ್ತಿಕ ಫೋನ್ ಸಂಖ್ಯೆಯನ್ನು ಬಳಸುತ್ತದೆ ಮತ್ತು ಜೆಮಿನಿ ನೇರವಾಗಿ ಅವರ ಫೋನ್ ನಿಂದಲೇ ಕರೆ ಮಾಡುತ್ತದೆ. ಕರೆಯ ಮತ್ತೊಂದು ತುದಿಯಲ್ಲಿರುವ ವ್ಯಕ್ತಿ ಅಥವಾ ಬಾಟ್ ಕರೆಗೆ ಉತ್ತರಿಸಿದಾಗ ಜೆಮಿನಿ ಸ್ವತಃ ಪರಿಚಯಿಸಿಕೊಳ್ಳುತ್ತದೆ. ಅಲ್ಲದೆ, ಸ್ವಯಂಚಾಲಿತ ಫೋನ್ ಮೆನುಗಳನ್ನು ನಿರ್ವಹಿಸುವುದು ಮತ್ತು ಕರೆಯಲ್ಲಿ ‘ಹೋಲ್ಡ್’ನಲ್ಲಿ ಕಾಯುವ ಸಾಮರ್ಥ್ಯವನ್ನೂ ಹೊಂದಿದೆ ಎಂದು ಗೂಗಲ್ ಹೇಳಿದೆ.
ಸ್ಮಾರ್ಟ್ಫೋನ್ ಗಳು ಕೇವಲ ಆ್ಯಪ್-ಕೇಂದ್ರಿತ ಸಾಧನಗಳಿಂದ ಹೊರಬಂದು, ಬಳಕೆದಾರರ ಉದ್ದೇಶ ಮತ್ತು ಸಂದರ್ಭವನ್ನು ಅರ್ಥಮಾಡಿಕೊಂಡು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬಲ್ಲ AI-ಏಜೆಂಟ್ ಕೇಂದ್ರಿತ ವೇದಿಕೆಗಳಾಗಿ ಬದಲಾಗುತ್ತಿರುವ ಸಮಯದಲ್ಲಿ ಜೆಮಿನಿಯ ಅಪ್ಡೇಟ್ ಬಂದಿದೆ. ಮೆಟಾದ ‘ಮ್ಯೂಸ್’ ಮತ್ತು ‘ಇನ್ಸ್ಟಿಂಕ್ಟ್’ನಂತಹ AI-ಏಜೆಂಟ್ ಗಳು ಕೂಡ ಬಳಕೆದಾರರ ಪರವಾಗಿ ಕರೆ ಮಾಡುವ ಸಾಮರ್ಥ್ಯವನ್ನು ಹೊಂದಿವೆ.
ಕಳೆದ ಕೆಲವು ವರ್ಷಗಳಲ್ಲಿ ಗೂಗಲ್ ಅನೇಕ AI ಚಾಲಿತ ಕರೆ ಮಾಡುವ ಫೀಚರ್ ಗಳನ್ನು ಪರಿಚಯಿಸಿದ್ದರೂ, ಅವುಗಳ ಕಾರ್ಯವ್ಯಾಪ್ತಿ ಸೀಮಿತವಾಗಿತ್ತು. ಈ ಫೀಚರ್ ಅನ್ನು ಸಣ್ಣ ಪ್ರಮಾಣದಲ್ಲಿ ಪ್ರಾಯೋಗಿಕವಾಗಿ ಬಿಡುಗಡೆ ಮಾಡಲಾಗುತ್ತಿದೆ. ಏಕೆಂದರೆ, ನೈಜ ಪ್ರಪಂಚದ ಸಂಭಾಷಣೆಗಳು ಸೂಕ್ಷ್ಮವಾಗಿರುತ್ತವೆ ಮತ್ತು ಸಂಕೀರ್ಣ ಅಂಶಗಳನ್ನು ಒಳಗೊಂಡಿರುತ್ತವೆ. ಹೀಗಾಗಿ, ವ್ಯಾಪಕವಾಗಿ ಬಿಡುಗಡೆ ಮಾಡುವ ಮೊದಲು ಅದನ್ನು ಸರಿಯಾಗಿ ರೂಪಿಸುವ ಅಗತ್ಯವಿದೆ ಎಂದು ಗೂಗಲ್ ಅಭಿಪ್ರಾಯಪಟ್ಟಿದೆ.
ಜೆಮಿನಿ AI ನ ಇತರ ಕರೆ ಮಾಡುವ ಫೀಚರ್ಗಳೂ ಇವೆ. ‘ಕಾಲ್ ಫಾರ್ ಮಿ’ ಬಿಡುಗಡೆಗೆ ಮೊದಲು ಗೂಗಲ್ AI ಸಹಾಯದ ಸ್ವಯಂಚಾಲಿತ ಕರೆ ಮಾಡುವ ಫೀಚರ್ಗಳನ್ನು ಪ್ರಯೋಗಿಸಿದೆ. ಅನೇಕ ವರ್ಷಗಳ ಹಿಂದೆ ಕಂಪೆನಿ ತನ್ನ ವಾರ್ಷಿಕ I/O ಡೆವಲಪರ್ ಸಮ್ಮೇಳನದಲ್ಲಿ AI ಏಜೆಂಟ್ ಸಲೂನ್ ಗೆ ಕರೆ ಮಾಡಿ ಬುಕ್ ಮಾಡುವುದನ್ನು ನೀಡಿದ ಫೀಚರ್ ಅನ್ನು ಪ್ರದರ್ಶಿಸಿತ್ತು.
AI ಏಜೆಂಟ್ ಮಾತನಾಡಿದ ‘ಉಮ್’ ಅಥವಾ ‘ಆಹ್’ ಮೊದಲಾದ ಸ್ವಾಭಾವಿಕ ಧ್ವನಿಯ ಸಂಭಾಷಣೆಗೆ ಪ್ರೇಕ್ಷಕರು ವಿಶೇಷವಾಗಿ ಮಂತ್ರಮುಗ್ಧರಾದಂತೆ ಕಂಡುಬಂದಿದ್ದರು. ಕಳೆದ ವರ್ಷ ಗೂಗಲ್ ‘ಆಸ್ಕ್ ಫಾರ್ ಮಿ’ ಫೀಚರ್ ಪರಿಚಯಿಸಿತ್ತು. ಆ ಫೀಚರ್ ಬಳಕೆದಾರರ ಪರವಾಗಿ ಜೆಮಿನಿ AI ತಂತ್ರಜ್ಞಾನಕ್ಕೆ ಕರೆ ಮಾಡಿ ವ್ಯವಹಾರಗಳ ಬೆಲೆ ಅಥವಾ ಸೇವೆಗಳ ಬಗ್ಗೆ ವಿಚಾರಿಸಲು ಅವಕಾಶ ನೀಡುತ್ತದೆ.
ಪಿಕ್ಸೆಲ್ ಸ್ಮಾರ್ಟ್ಫೋನ್ ಮಾಲೀಕರಿಗೆ ನೀಡಲಾಗಿರುವ ಇತರ ಫೀಚರ್ ಗಳಲ್ಲಿ ‘ಹೋಲ್ಡ್ ಫಾರ್ ಮಿ’ ಅಥವಾ ‘ಟಾಕ್ ಟು ಎ ಲೈವ್ ರೆಪ್’ ಸೇರಿವೆ. ಇವುಗಳು ನಿಜವಾದ ವ್ಯಕ್ತಿ ಲೈನ್ ಗೆ ಬರುವವರೆಗೆ ಸ್ವಯಂಚಾಲಿತವಾಗಿ ಹೋಲ್ಡ್ನಲ್ಲಿ ಕಾಯಬಹುದು. ಅಂದರೆ, ಯಾವುದೇ ಕಸ್ಟಮರ್ ಕೇರ್ಗೆ ಕರೆ ಮಾಡಿದಾಗ ಕಂಪ್ಯೂಟರ್ ಧ್ವನಿ ಸೂಚನೆಗಳನ್ನು ನೀಡುತ್ತಾ ದೀರ್ಘಕಾಲ ಹೋಲ್ಡ್ನಲ್ಲಿ ಇರಿಸುತ್ತದೆ. ಈ ವೈಶಿಷ್ಟ್ಯವು ಚಾಲನೆಯಲ್ಲಿದ್ದಾಗ ಫೋನ್ ಅನ್ನು ಕಿವಿಗೆ ಹಿಡಿದು ಕಾಯುವ ಅಗತ್ಯವಿಲ್ಲ. AI ತಾನೇ ಹೋಲ್ಡ್ ನಲ್ಲಿ ಕಾಯುತ್ತದೆ ಮತ್ತು ಆ ಕಡೆಯಿಂದ ‘ಲೈವ್ ಏಜೆಂಟ್’ ಮಾತನಾಡಲು ಬಂದ ತಕ್ಷಣ ಅಲರ್ಟ್ ಮಾಡುತ್ತದೆ.
‘ಡೈರೆಕ್ಟ್ ಮೈ ಕಾಲ್’ IVR ವ್ಯವಸ್ಥೆಗಳನ್ನು (‘ಕನ್ನಡಕ್ಕಾಗಿ ಒತ್ತಿ’ ಎಂದು ಹೇಳುವಂತಹ) ನೇವಿಗೇಟ್ ಮಾಡಲು ಸಂಖ್ಯೆಗಳನ್ನು ಮತ್ತಷ್ಟು ಪ್ರದರ್ಶಿಸಬಹುದು. ಅಂದರೆ, ಕಸ್ಟಮರ್ ಕೇರ್ನ ಆ ಧ್ವನಿಯ ಮೆನುವನ್ನು ಮುಂಚಿತವಾಗಿಯೇ ಗ್ರಹಿಸಿ, ನಾವು ಯಾವ ಸಂಖ್ಯೆಯನ್ನು ಒತ್ತಬೇಕು ಎಂಬುದನ್ನು ಸ್ಕ್ರೀನ್ ಮೇಲೆ ಬರೆದು ತೋರಿಸುತ್ತದೆ. ಇದರಿಂದ ಧ್ವನಿ ಸಂದೇಶವನ್ನು ಪೂರ್ತಿ ಕೇಳುವ ಸಮಯ ಉಳಿಯುತ್ತದೆ.