ವಯಸ್ಸು 45 ದಾಟಿದರೆ ಕೆಲಸಕ್ಕೆ ಕುತ್ತು; ಕಾರ್ಪೋರೇಟ್ ವಲಯದ ಆತಂಕ ನಿಜವೆ?
ಸಾಂದರ್ಭಿಕ ಚಿತ್ರ (AI)
40-45ರ ವಯಸ್ಸು ಹೊಸ ನಿವೃತ್ತಿ ಅಥವಾ ವಜಾದ ವಯಸ್ಸಾಗುತ್ತಿದೆಯೆ? ತಲ್ಲಣಗೊಳಿಸುತ್ತಿರುವ ಹೊಸ ಟ್ರೆಂಡ್ ಕುರಿತಾಗಿ ಕಾರ್ಪೋರೇಟ್ ಕಂಪನಿಗಳಲ್ಲಿ ಆಡಳಿತ, ವ್ಯವಸ್ಥಾಪಕರು ಮತ್ತು ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರ ಅಭಿಪ್ರಾಯವೇನು?
ಗುರುಗ್ರಾಂನ ವ್ಯಕ್ತಿಯೊಬ್ಬರು ಕೆಲಸ ಕಳೆದುಕೊಂಡಿರುವ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಇತ್ತೀಚೆಗೆ ವೈರಲ್ ಆಗಿತ್ತು. ಕಂಪನಿಯಿಂದ ಕೆಲಸ ಕಳೆದುಕೊಂಡ ವಿಷಯ ಪೋಷಕರಿಗೆ ಹೇಳುವ ಧೈರ್ಯವಿಲ್ಲದೆ ಪ್ರತಿದಿನ ಕೆಲಸಕ್ಕೆ ಹೋಗುವಂತೆ ನಟಿಸಿ ಮನೆಯಿಂದ ಹೊರಹೋಗುತ್ತಿರುವುದಾಗಿ ಅವರು ತಮ್ಮ ಪೋಸ್ಟ್ ನಲ್ಲಿ ವಿವರಿಸಿದ್ದರು. ಅವರ ಪೋಸ್ಟ್ ಅನೇಕರ ಜೀವನದ ಕತೆಯಾಗಿತ್ತು. ಬಹಳಷ್ಟು ಮಂದಿ ಅವರಿಗೆ ಉತ್ತರಿಸಿ ತಮ್ಮ ಜೀವನದಲ್ಲೂ 2024ರಲ್ಲಿ ಮತ್ತು 2025ರಲ್ಲಿ ಮತ್ತೆ ಮತ್ತೆ ಅಂತಹ ದಿನಗಳನ್ನು ಕಂಡಿದ್ದಾಗಿ ಹೇಳುತ್ತಿದ್ದಾರೆ.
ಮತ್ತೊಂದೆಡೆ ಬಹಳಷ್ಟು ಮಂದಿ ಹೋಂ ಸ್ಟೇ, ಸ್ವಂತ ದುಡಿಮೆ ಅಥವಾ ಇತರ ಉದ್ಯಮಗಳಿಗಾಗಿ ಲಕ್ಷಾಂತರ ವೇತನ ಸಿಗುವ ಕಾರ್ಪೋರೇಟ್ ಜೀವನವನ್ನು ತೊರೆಯುತ್ತಿದ್ದಾರೆ. ಹಾಗಿದ್ದರೆ 40-45ರ ವಯಸ್ಸು ಹೊಸ ನಿವೃತ್ತಿ ಅಥವಾ ವಜಾದ ವಯಸ್ಸಾಗುತ್ತಿದೆಯೆ? ಅಡ್ಮಿನ್ ಮತ್ತು ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರ ಅಭಿಪ್ರಾಯವೇನು?
‘40 ಪ್ಲಸ್ ಲೇಆಫ್ ರೂಲ್’ ಎನ್ನುವುದು ಇಲ್ಲ!
iRekrut ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಅಕ್ಷತಾ ಶೆಟ್ಟಿ ಪಣಿಮಜಲ್ ಅವರು ಹೇಳಿರುವ ಪ್ರಕಾರ, ಮಧ್ಯವಯಸ್ಕರದಲ್ಲಿ ಉದ್ಯೋಗ ಕಡಿತದ ನಿರ್ದಿಷ್ಟ ಪುರಾವೆಗಳಿಲ್ಲ. ವಯಸ್ಸಿನ ಮಿತಿಯ ಜೊತೆಗೆ ಸಂಭಾವನೆ, ಉದ್ಯೋಗದ ಅವಧಿ, ಅನುಭವ ಮತ್ತು ಪ್ರಸ್ತುತ ಕೌಶಲ್ಯದ ಮಾನದಂಡದೊಂದಿಗೆ ಸಂಸ್ಥೆಗಳು ಉದ್ಯೋಗ ಕಡಿತಗೊಳಿಸುತ್ತಿದೆ. ಯಾವುದೇ ಸಂಸ್ಥೆಗಳು 40ರ ಆಸುಪಾಸನ್ನು ಉದ್ಯೋಗ ಕಡಿತದ ‘40 ಪ್ಲಸ್ ಲೇಆಫ್ ರೂಲ್’ ಅಂತ ಪರಿಗಣಿಸುವುದಿಲ್ಲ. ವಯಸ್ಸಿನ ಜೊತೆಗೆ ಹಲವಾರು ಸ್ಕಿಲ್ ಮ್ಯಾಟ್ರಿಕ್ಸ್, ಸಂಭಾವನೆಯ ಅಂಶವೂ ಆದ್ಯತೆಯ ಕೆಲವು ಮೂಲ ಮಾನದಂಡಗಳಾಗಿವೆ. ಕೇವಲ ವಯಸ್ಸಿನ ಕಾರಣದಿಂದ ಕೆಲಸದಿಂದ ತೆಗೆಯುವ ಹಾಗಿಲ್ಲ. ಅದರ ಜೊತೆಗೆ ವ್ಯಕ್ತಿಯ ಕೌಶಲ್ಯ ಆಯಾ ಯೋಜನೆಗಳಿಗೆ ಬೇಕಾಗುವ ಅನುಭವ, ತಂಡದಲ್ಲಿ ಅವರ ಆಸಕ್ತಿ, ಹೊಸ ವಿಚಾರಗಳ ಬಗ್ಗೆ ಒಲವು, ಪ್ರಸ್ತುತ ಕಾಲಘಟ್ಟಕ್ಕೆ ತಂತ್ರಜ್ಞಾನಕ್ಕೆ ಸರಿಯಾಗಿ ಹೊಂದಿಕೊಳ್ಳುವ ಅವರ ಗುಣವಿಶೇಷತೆ ಹಾಗೂ ಅವರ ಸಂಭಾವನೆಯ ಮೌಲ್ಯ ಹೀಗೆ ಹಲವಾರು ಅಂಶಗಳನ್ನು ಗಣನೆಗೆ ತೆಗೆದುಕೊಂಡು ಕೆಲಸದ ಆದ್ಯತೆ ಹಾಗೂ ಭಾದ್ಯತೆಗಳು ನಿರ್ಧಾರವಾಗುತ್ತವೆ.
ಅರ್ಥಪೂರ್ಣ ಪರಿವರ್ತನೆಗೆ ಬೆಂಬಲ ಸಿಗಬೇಕು
ಇತ್ತೀಚೆಗಿನ ವರ್ಷಗಳಲ್ಲಿ ಕಾರ್ಪೋರೇಟ್ ಭಾರತದದಲ್ಲಿ ಉದ್ಯೋಗ ಭದ್ರತೆಯ ಕಲ್ಪನೆ ಬದಲಾಗಿದೆ. ಒಂದು ಕಾಲದಲ್ಲಿ ವರ್ಷಗಳ ಸ್ಥಿರತೆಗೆ ಹೆಸರಾಗಿದ್ದ ಕಾರ್ಪೋರೇಟ್ ಉದ್ಯೋಗ ಬೆಳಗಿನ ಜಾವದ ಒಂದು ಇಮೇಲ್ನೊಂದಿಗೆ ಕೊನೆಯಾಗಬಹುದು ಎನ್ನುವ ಸ್ಥಿತಿ ಇದೆ. ಅನೇಕ ಬಹುರಾಷ್ಟ್ರೀಯ ಕಂಪನಿಗಳು ವಾಸ್ತವವನ್ನು ನಿರ್ಲಕ್ಷಿಸಿ ಉದ್ಯೋಗ ಕಡಿತಗೊಳಿಸುತ್ತಿವೆ.
ಇಂತಹ ಸ್ಥಿತಿಯ ಬಗ್ಗೆ SASMOS HET ಟೆಕ್ನಾಲಜೀಸ್ ಲಿಮಿಟೆಡ್ ನ ಹ್ಯೂಮನ್ ರಿಸೋರ್ಸಸ್ ಮತ್ತು ಬ್ಯುಸಿನೆಸ್ ಹೆಡ್ ಆಗಿರುವ ರಾಜಶೇಖರ್ ರೈ ಹೇಳುವುದೇನೆಂದರೆ, “40-45ರ ವಯಸ್ಸಿನ ವಜಾಗೊಳಿಸುವಿಕೆಯು ಕೇವಲ ಉದ್ಯೋಗ ನಷ್ಟವಲ್ಲ. ಅವು ವ್ಯಕ್ತಿಯ ಆರ್ಥಿಕ ಭದ್ರತೆ, ಕುಟುಂಬದ ಜವಾಬ್ದಾರಿಗಳಿಗೆ ಧಕ್ಕೆ ತರಬಹುದು. ವೃತ್ತಿಪರವಾಗಿ ಆತ್ಮವಿಶ್ವಾಸ ಕುಂಠಿತವಾಗಬಹುದು. ಮಾನವ ಸಂಪನ್ಮೂಲ ದೃಷ್ಟಿಕೋನದಿಂದ ಹೇಳುವುದಾದಲ್ಲಿ, ಸಂಸ್ಥೆಗಳು ಅನುಭವವನ್ನು ಆಸ್ತಿ ಎಂದು ಗುರುತಿಸಬೇಕೇ ವಿನಾ ವೆಚ್ಚದ ದೃಷ್ಟಿಕೋನದಿಂದ ನೋಡಬಾರದು. ಅದೇ ಸಂದರ್ಭದಲ್ಲಿ ವೃತ್ತಿಪರರು ನಿರಂತರವಾಗಿ ಮರುಕೌಶಲ್ಯ ಪಡೆಯುತ್ತಿರಬೇಕು. ಬದಲಾಗುತ್ತಿರುವ ತಂತ್ರಜ್ಞಾನ ಮತ್ತು ವ್ಯವಹಾರ ಅಗತ್ಯಗಳಿಗೆ ಪ್ರಸ್ತುತವಾಗಿರಬೇಕು. ಪುನರ್ರಚನೆ ಅನಿವಾರ್ಯವಾದಾಗ ಕಂಪನಿಗಳು ಅದನ್ನು ಪಾರದರ್ಶಕವಾಗಿ, ಘನತೆ, ಸಹಾನುಭೂತಿ ಮತ್ತು ಅರ್ಥಪೂರ್ಣ ಪರಿವರ್ತನೆಗೆ ಬೆಂಬಲ ನೀಡುವ ಮೂಲಕ ಕೈಗೊಳ್ಳಬೇಕು. ಉದ್ಯೋಗದ ಭವಿಷ್ಯವು ವಯಸ್ಸು ವರ್ಸಸ್ ಯವ್ವನ ಎನ್ನುವ ದೃಷ್ಟಿಕೋನವಾಗಬಾರದು. ಹೊಂದಿಕೊಳ್ಳುವಿಕೆ ಮತ್ತು ನಿರಂತರ ಕಲಿಕೆಯೊಂದಿಗೆ ಸಂಯೋಜಿಸಲಾಗುವ ಅನುಭವ ಮುಖ್ಯವಾಗಬೇಕು.”
40-45ರ ವಯಸ್ಸಿನಲ್ಲಿ ಸ್ವತಂತ್ರ ದುಡಿಮೆಗೆ ಇಳಿಯುವುದು ಏಕೆ?
ಕಾನೂನು ಸಲಹೆಗಾರರಾಗಿರುವ ಅಲ್ವಿನ್ ಮೆಂಡೋನ್ಸಾ ಅವರು ಬಹಳ ಹಿಂದೆಯೇ ಕಾರ್ಪೋರೇಟ್ ವ್ಯವಸ್ಥೆಯ ನೀರಿನ ಗುಳ್ಳೆಯಿಂದ ಹೊರಬಂದವರು. ಅವರು ಹೇಳುವ ಪ್ರಕಾರ, “ಪ್ರತಿಭೆ, ಸಾಮರ್ಥ್ಯ ಮತ್ತು ಬಹು ಆಯ್ಕೆಗಳು ಬೇಕಾಗುತ್ತವೆ. ನಾವು ಎಲ್ಲಿ ಹೊಂದಿಕೊಳ್ಳುತ್ತೇವೆ ಎನ್ನುವುದು ನೋಡಬೇಕು. ನನ್ನ ಸಾಮರ್ಥ್ಯ ಏನಿದೆ ಎಂದು ಕಂಡುಕೊಳ್ಳುವುದೂ ಮುಖ್ಯವಾಗಿತ್ತು. ನಾನು ಪತ್ರಿಕೋದ್ಯಮದಲ್ಲಿ ಮಾಡುತ್ತಿರುವುದನ್ನೇ ಕಾನೂನು ವೃತ್ತಿಯಲ್ಲೂ ಮಾಡುತ್ತಿದ್ದೇನೆ. ನನ್ನ ಸಾಮರ್ಥ್ಯ ಪತ್ರಿಕೋದ್ಯಮ ಮಾತ್ರವಲ್ಲ, ಬೇರೆ ಕಡೆ ಇದೆ ಎನ್ನುವುದು ಬೇಗನೇ ಅರಿತುಕೊಂಡೆ. ಹೀಗಾಗಿ ನಾನು ಕಾರ್ಪೋರೇಟ್ ಉದ್ಯಮದ ಗುಲಾಮಗಿರಿ ಮಾಡುವ ಬದಲು ಸ್ವತಂತ್ರವಾಗಿ ದುಡಿಮೆ ಮಾಡಬಹುದಾದ ವೃತ್ತಿಯನ್ನು ಹುಡುಕಿದಾಗ ನನ್ನ ಮುಂದೆ ಇದ್ದುದು ಕಾನೂನು ವೃತ್ತಿ. ಹೀಗಾಗಿ ತಕ್ಷಣ ಬದಲಾವಣೆ ಮಾಡಿಕೊಂಡೆ. ಇಲ್ಲಿ ನಾನೇ ನನಗೆ ಬಾಸ್ ಮತ್ತು ದುಡಿದ ಹಣ ಮನೆಗೆ ಬರುತ್ತದೆ. ಆದರೆ ಕಾರ್ಪೋರೇಟ್ ವೃತ್ತಿಯಲ್ಲಿ ಒಂದೇ ಕೆಲಸದಲ್ಲಿ ಸಾಯೋವರೆಗೂ ಕೆಲಸ ಮಾಡಬೇಕಾಗುತ್ತದೆ. ಇಲ್ಲಿ ನಮ್ಮ ಕೌಶಲ್ಯ ಮತ್ತು ಅನುಭವಕ್ಕೆ ತಕ್ಕಂತೆ ದುಡಿಮೆ ಮಾಡಬಹುದು. ನಾನು ಎಷ್ಟು ಓದು, ಅಪ್ಡೇಟ್ ಮಾಡ್ತೀನಿ ಎನ್ನುವುದರ ಮೇಲೆ ನನ್ನ ಬೆಳವಣಿಗೆ ನಿಂತಿದೆ. ನನ್ನ ಬೆಳವಣಿಗೆ ವ್ಯಕ್ತಿಗತವಾಗಿದೆಯೇ ವಿನಾ ಇನ್ನೊಬ್ಬರ ಕಂಪನಿಗಾಗಿ ಶ್ರಮ ಹಾಕುತ್ತಿಲ್ಲ. ಸ್ವತಂತ್ರವಾಗಿ ದುಡಿಮೆ ಆರಂಭಿಸಿದ ನಂತರ ನನಗೆ ವೈಯಕ್ತಿಕ ಸಮಯವೂ ಸಿಗುತ್ತಿದೆ. ಕಾರ್ಪೋರೇಟ್ ಕ್ಷೇತ್ರದಲ್ಲಿ 8-24 ಗಂಟೆ ಕೆಲಸ ಮಾಡಿದರೂ ಮನಶ್ಶಾಂತಿ ಇರುವುದಿಲ್ಲ. ಅಲ್ಲಿ ಕೆಲಸ ಮತ್ತು ಜೀವನದ ನಡುವೆ ಸಮತೋಲನವಿಲ್ಲ.”
ವೇಗದ ಬೆಳವಣಿಗೆ 40ರಲ್ಲಿ ನಿವೃತ್ತಿಯ ಬೇರು!
ಕಂಪನಿಯೊಂದರಲ್ಲಿ ಹಿರಿಯ ಸ್ಥಾನದಲ್ಲಿರುವ ಜ್ಯೋತಿ ಹೇಳುವ ಪ್ರಕಾರ, “ನನ್ನ ವೈಯಕ್ತಿಕ ಅಭಿಪ್ರಾಯವೇನೆಂದರೆ ಇತ್ತೀಚೆಗಿನ ದಿನಗಳಲ್ಲಿ ವೇಗವಾಗಿ ಉದ್ಯೋಗದಲ್ಲಿ ಬೆಳೆಯುತ್ತಾರೆ. ಹೀಗಾಗಿ 45ರ ವಯಸ್ಸಿನಲ್ಲಿ ಒಂದು ನೆಲೆಗೆ ಬಂದಿರುತ್ತಾರೆ. ಒತ್ತಡವೂ ಅದಾಗಲೇ ಬಂದಿರುತ್ತದೆ. ಹೀಗಾಗಿ ಉದ್ಯೋಗ ತೊರೆದು ಹೊಸದನ್ನು ಮಾಡುವ ಉತ್ಸಾಹ ಬೆಳೆಯುತ್ತದೆ. ಯಶಸ್ಸು ಕಂಡವರಲ್ಲಿ ಗರಿಷ್ಠ ಮಂದಿ 45 ವರ್ಷಕ್ಕೆ ಕೆಲಸ ತೊರೆಯುತ್ತಿದ್ದಾರೆ. ಹೊಸದನ್ನು ಕಂಡುಕೊಳ್ಳುತ್ತಿದ್ದಾರೆ. ಹೀಗಾಗಿ ಅದು ಹೊಸ ನಿವೃತ್ತಿ ವಯಸ್ಸಾಗುತ್ತಿದೆ. ಆದರೆ ಉದ್ಯೋಗದಲ್ಲಿ ಲೋ ಪರ್ಫಾರ್ಮೆನ್ಸ್ ಹೊಂದಿರುವವರಿಗೆ ಸಮಸ್ಯೆ ಆಗುವುದು ಇದೆ. ಈಗಿನ 40-45 ಮೊದಲಿನ ರೀತಿಯಲ್ಲ. ಒಂದು ರೀತಿ 60ರ ವಯಸ್ಸು ಎನ್ನಬಹುದು. ಅವರ ಸಾಮರ್ಥ್ಯ ಕಡಿಮೆಯಾಗಿರುತ್ತದೆ. ಉದ್ಯೋಗ ಬೇಡ ಎಂದು ಅನಿಸುತ್ತದೆ. ಖಾಸಗಿ ಕಂಪನಿಗಳಲ್ಲಿ ಅಂತಹ ಪ್ರವೃತ್ತಿ ಕಂಡ ತಕ್ಷಣ ವಜಾಗೆ ಅವರೇ ಮೊದಲ ಗುರಿಯಾಗಿ ಬಿಡುತ್ತಾರೆ. ಈಗಿನ ಹೊಸ ತಲೆಮಾರಿನ ಕೆಲಸದ ರೀತಿಯೇ ಬೇರೆ ಇರುತ್ತದೆ. ಕೆಲಸವನ್ನು ಆನಂದಿಸಿಕೊಂಡು ಆರಾಮವಾಗಿ ಉತ್ತಮ ಪ್ರದರ್ಶನ ತೋರುತ್ತಾರೆ. ತಂತ್ರಜ್ಞಾನವೂ ಅವರಿಗೆ ನೆರವಾಗುತ್ತದೆ. ಇವರ ಜೊತೆಗೆ ಸ್ಪರ್ಧಿಸುವುದು 40-45ರ ವಯಸ್ಸಿನವರಿಗೆ ಕಷ್ಟವಾಗಬಹುದು.”
AI ತಂತ್ರಜ್ಞಾನದಿಂದ ಉದ್ಯೋಗ ಕಡಿತ ಹೆಚ್ಚಾಗಿದೆಯೆ?
“ಉದ್ಯೋಗ ಕಡಿತಕ್ಕೂ AIಗೂ ಸಂಬಂಧವಿಲ್ಲ. ಮುಂದೆ AI ನಿಂದ ಉದ್ಯೋಗಗಳಲ್ಲಿ ಸಮಸ್ಯೆ ಬರಬಹುದು. ಆದರೆ ಈಗ AI ಸಮಸ್ಯೆ ಒಡ್ಡಿಲ್ಲ. ಉದಾಹರಣೆಗೆ “ಅಡ್ಮಿನ್ಗಳ ಅಗತ್ಯವಿಲ್ಲ, AI ಎಲ್ಲಾ ಸಂದೇಶಗಳನ್ನು ಕಳುಹಿಸುತ್ತದೆ” ಎನ್ನುವ ವಾದವಿದೆ. ಆದರೆ ಕ್ಲೈಂಟ್ಗಳು AI ಸಂದೇಶಗಳನ್ನು ತೆರೆದೂ ನೋಡುವುದಿಲ್ಲ. ಹೀಗಾಗಿ ಸದ್ಯದ ಮಟ್ಟಿಗೆ AI ಗಳಿಂದ ಬಹುತೇಕ ಉದ್ಯೋಗಗಳಿಗೆ ಸಮಸ್ಯೆ ಬಂದಿಲ್ಲ” ಎನ್ನುತ್ತಾರೆ ಜ್ಯೋತಿ.
AI ತಂತ್ರಜ್ಞಾನವು ಉದ್ಯೋಗ ಕಡಿತಕ್ಕೆ ನಿರ್ದಿಷ್ಟ ಮಾಪನವಲ್ಲ
AI ಮಧ್ಯಮ ವಯಸ್ಸಿನವರ ವೃತ್ತಿಜೀವನದಲ್ಲಿ ಸ್ವಲ್ಪ ಮಟ್ಟಿಗೆ ಸವಾಲುಗಳನ್ನು ಹೆಚ್ಚಿಸುತ್ತಿದೆ. ಆದರೆ AI ತಂತ್ರಜ್ಞಾನವು ಉದ್ಯೋಗ ಕಡಿತಕ್ಕೆ ನಿರ್ದಿಷ್ಟವಾದ ಮಾಪನವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ ಅಕ್ಷತಾ ಶೆಟ್ಟಿ.
ಅವರ ಪ್ರಕಾರ, “ಉದ್ಯೋಗ ಕಳೆದುಕೊಳ್ಳಲು AI ಕಾರಣ ಎಂದು ಹೇಳಲಾಗುವುದಿಲ್ಲ. ಒಬ್ಬ ವ್ಯಕ್ತಿಯ ಸಾಮರ್ಥ್ಯ, ಕೌಶಲ್ಯ, ಯೋಗ್ಯತೆ ಹಾಗೂ ದಕ್ಷತೆ ಹಾಗೂ ಕೆಲಸದ ಬಗ್ಗೆ ವೈಯಕ್ತಿಕ ಬದ್ಧತೆ ಆತನನ್ನು ಇತರರಿಗಿಂತ ಹೆಚ್ಚು ಸೂಕ್ತವಾದ ಆಯ್ಕೆಯನ್ನಾಗಿ ಮಾಡುತ್ತದೆ. ಯಾವುದೇ ಸಂಸ್ಥೆ ಉತ್ತಮವಾಗಿ ನಡೆಯಬೇಕಾದರೆ ಅಲ್ಲಿರುವ ಪ್ರತಿ ಸದಸ್ಯನ ಉತ್ಪಾದನಾ ಸಾಮರ್ಥ್ಯ, ಕಾರ್ಯಕ್ಷಮತೆ, ಉತ್ಪಾದಕತೆ ಹೆಚ್ಚಾಗಬೇಕು. ಅದಕ್ಕೆ ಬೇಕಾಗುವ ಮೂಲ ಕೌಶಲ್ಯ, ಮತ್ತು ಸುಧಾರಿತ ಕೌಶಲ್ಯ ಎರಡನ್ನೂ ಪರಿಗಣಿಸಲಾಗುತ್ತದೆ. ಸಾಮರ್ಥ್ಯ, ವ್ಯವಹಾರದ ಮೇಲೆ ಪರಿಣಾಮ, ಸಮಸ್ಯೆ ಪರಿಹರಿಸುವ ಸಾಮರ್ಥ್ಯ. ವಿಶ್ವಾಸಾರ್ಹತೆ, ಜವಾಬ್ದಾರಿತನ ಹೊಂದಿಕೊಳ್ಳುವ ಸಾಮರ್ಥ್ಯ, ಉತ್ತಮ ಮಾತುಗಾರಿಕೆ. ತಂಡದಲ್ಲಿ ಸಕ್ರಿಯತೆ, ನಾಯಕತ್ವ, ಆಳವಾದ ಕ್ಷೇತ್ರಜ್ಞಾನ, ಸ್ವಯಂಪ್ರೇರಣೆ, ನಿರಂತರ ಕಲಿಕೆ, ವೃತ್ತಿಪರ ಮನೋಭಾವ ಮತ್ತು AI ಮತ್ತು ಡಿಜಿಟಲ್ ತಂತ್ರಜ್ಞಾನ ಹೀಗೆ ಹತ್ತು ಹಲವಾರು ಅಂಶಗಳು ಒಬ್ಬ ಉದ್ಯೋಗಿಯನ್ನು ಸಂಸ್ಥೆಗೆ ಅಗತ್ಯವಾಗಿ ಮಾರ್ಪಡಿಸುತ್ತದೆ. ವಯಸ್ಸು ಕನಿಷ್ಠ ಮಾನದಂಡವೇ ಹೊರತು ಎಂದಿಗೂ ಮುಖ್ಯವಾಗುವುದಿಲ್ಲ” ಎನ್ನುತ್ತಾರೆ ಅಕ್ಷತಾ ಶೆಟ್ಟಿ.