×
Ad

ಒಂದು ಸುಳ್ಳು ‘ಮಾನವ ಕಳ್ಳಸಾಗಣೆ’ ಆರೋಪ: ಮದರಸಾಗಳಿಗೆ ಹೊರಟಿದ್ದ ಬಿಹಾರದ ನೂರಾರು ಮಕ್ಕಳ ಬಂಧನಕ್ಕೆ ಕಾರಣವಾಗಿದ್ದು ಹೇಗೆ?

ಭಯೋತ್ಪಾದಕನಾಗಲು ಹೋಗುತ್ತಿದ್ದೀಯಾ ಎಂದು ಮಕ್ಕಳನ್ನು ಪ್ರಶ್ನಿಸಿದ್ದ ಕಲ್ಯಾಣ ಸಮಿತಿ!

Update: 2026-05-29 23:00 IST

Photo Credit : scroll.in

ತಮ್ಮ 15 ವರ್ಷದ ಮಗ ಇರ್ಫಾನ್ ಶೇಖ್‌ನನ್ನು ಮಹಾರಾಷ್ಟ್ರದ ಮದರಸಾವೊಂದಕ್ಕೆ ಕಳುಹಿಸಿಕೊಟ್ಟ ಕೇವಲ ಎರಡೇ ದಿನಗಳಲ್ಲಿ ಕಿಶ್ವಾರ್ ಜಹಾನ್ ಅವರಿಗೆ ಆಘಾತಕಾರಿ ಸುದ್ದಿಯೊಂದು ಸಿಕ್ಕಿತು. ಆಕೆಯ ಮಗನನ್ನು ಮಧ್ಯಪ್ರದೇಶದ ರೈಲ್ವೇ ನಿಲ್ದಾಣವೊಂದರಲ್ಲಿ ತಡೆದು, ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿಯಾಗಿತ್ತು ಅದು.

ಲಾತೂರ್ ಜಿಲ್ಲೆಯ ಮದರಸಾಗೆ ಹೊರಟಿದ್ದ ಬಾಗ್ದಹರಾ ಗ್ರಾಮದ ಸುಮಾರು 100 ಮಕ್ಕಳ ಗುಂಪಿನಲ್ಲಿ ಶೇಖ್ ಕೂಡ ಒಬ್ಬನಾಗಿದ್ದ. ಈ ದೀರ್ಘ ರೈಲು ಪ್ರಯಾಣದಲ್ಲಿ ಮಕ್ಕಳು ಒಬ್ಬರೇ ಇರಲಿಲ್ಲ; ಅವರೊಂದಿಗೆ ಅದೇ ಮದರಸಾದ ಶಿಕ್ಷಕರೊಬ್ಬರೂ ಇದ್ದರು. ಆದರೆ, ಕಟ್ನಿ ರೈಲ್ವೇ ನಿಲ್ದಾಣದಲ್ಲಿ ರೈಲ್ವೇ ಪೊಲೀಸ್ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳ ಜಂಟಿ ತಂಡವು ರೈಲನ್ನು ತಡೆದು ನಿಲ್ಲಿಸಿತು. ಬೇರೆ ಬೇರೆ ಗುಂಪುಗಳಲ್ಲಿ ಬಿಹಾರದ ಅರಾರಿಯಾದಿಂದ ಮದರಸಾಗಳಿಗೆ ಪ್ರಯಾಣಿಸುತ್ತಿದ್ದ ಒಟ್ಟು 163 ಮಕ್ಕಳನ್ನು ಮಾನವ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಶಂಕೆಯ ಮೇಲೆ ಅಧಿಕಾರಿಗಳು ವಶಕ್ಕೆ ಪಡೆದು, ಅವರನ್ನು "ರಕ್ಷಿಸಲಾಗಿದೆ" ಎಂದು ಘೋಷಿಸಿದರು.

ಮಕ್ಕಳನ್ನು ವಶಕ್ಕೆ ಪಡೆದ ಸುದ್ದಿ ಕೇಳಿ ಕಂಗಾಲಾಗಿದ್ದ ಬಹುತೇಕ ಪೋಷಕರಿಗೆ ತಕ್ಷಣವೇ ಮಧ್ಯಪ್ರದೇಶಕ್ಕೆ ಪ್ರಯಾಣಿಸುವಷ್ಟು ಆರ್ಥಿಕ ಶಕ್ತಿ ಇರಲಿಲ್ಲ. ವಿಧವೆಯಾಗಿರುವ ಜಹಾನ್ ಕೂಡ ಅತ್ಯಂತ ಬಡತನದಲ್ಲಿದ್ದರೂ, ತಮ್ಮ ಅಲ್ಪಸ್ವಲ್ಪ ಉಳಿತಾಯದ ಹಣವನ್ನೇ ಬಳಸಿ ರೈಲು ಟಿಕೆಟ್ ಖರೀದಿಸಿದರು.

ಎಪ್ರಿಲ್ 13ರಂದು ಜಹಾನ್ ಸೇರಿದಂತೆ ಸುಮಾರು 40 ಪೋಷಕರು ಮಧ್ಯಪ್ರದೇಶಕ್ಕೆ ಪ್ರಯಾಣ ಬೆಳೆಸಿದರು. ತಮ್ಮ ಮಕ್ಕಳನ್ನು ಯಾವುದೇ ಬಲವಂತದ ದುಡಿಮೆಗೆ ಕೊಂಡೊಯ್ಯುತ್ತಿಲ್ಲ ಎಂದು ಅಲ್ಲಿನ ಅಧಿಕಾರಿಗಳಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರು.

"ಅವನು ನನ್ನದೇ ಮಗ ಎಂದು ಸಾಬೀತುಪಡಿಸಲು ನಾನು ಎಲ್ಲಾ ದಾಖಲೆಗಳನ್ನು ತೋರಿಸಿದೆ. ಆದರೆ ಅವರು ನನ್ನ ಮಗನನ್ನು ಬಿಡುಗಡೆ ಮಾಡಲಿಲ್ಲ. ಬದಲಿಗೆ, ಮನೆಗೆ ವಾಪಸ್ ಹೋಗಿ, ನಿಮ್ಮ ಮಗನನ್ನು ಆಮೇಲೆ ಕಳುಹಿಸಿಕೊಡುತ್ತೇವೆ ಎಂದು ಹೇಳಿ ಕಳುಹಿಸಿದರು" ಎಂದು scroll.in ಜತೆ ಮಾತನಾಡಿದ ಜಹಾನ್ ಹೇಳಿದ್ದಾರೆ.

ಅಂತಿಮವಾಗಿ ಇರ್ಫಾನ್ ಶೇಖ್ ಜಬಲ್‌ಪುರದ ಸರ್ಕಾರಿ ಬಾಲಮಂದಿರದಲ್ಲಿ ಬರೋಬ್ಬರಿ 13 ದಿನಗಳನ್ನು ಕಳೆಯಬೇಕಾಯಿತು. ಅಲ್ಲಿ ಎದುರಿಸಿದ ವಿಚಾರಣೆಯನ್ನು ನೆನಪಿಸಿಕೊಂಡ ಆತ, ತನಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಲಾಗಿತ್ತು ಎಂದಿದ್ದಾನೆ.

 

"ಅವರು ನನ್ನ ಪೋಷಕರ ಬಗ್ಗೆ ಕೇಳಿದರು, ಓದಲಿಕ್ಕಾಗಿ ಅಷ್ಟು ದೂರದ ಮದರಸಾಗೆ ಏಕೆ ಹೋಗುತ್ತಿದ್ದೀಯಾ ಎಂದು ಪ್ರಶ್ನಿಸಿದರು. ಅಷ್ಟೇ ಅಲ್ಲದೆ, ‘ಔರ್ ಪೂಛಾ ಕಿ ಆತಂಕವಾದಿ ಬನ್ ನೇ ಜಾ ರಹೇ ಹೋ ಕ್ಯಾ ವಹಾಂ’ (ಅಲ್ಲಿಗೆ ನೀನು ಉಗ್ರಗಾಮಿ ಆಗಲು ಹೋಗುತ್ತಿದ್ದೀಯಾ ಎಂದು ಕೇಳಿದರು)" ಎಂದು ಬಾಲಕ ತನ್ನ ಕಹಿ ಅನುಭವವನ್ನು ಹಂಚಿಕೊಂಡಿದ್ದಾನೆ.

ಜಬಲ್‌ಪುರದ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಮನೀಶ್ ತಿವಾರಿ ಈ ರೀತಿಯ ವಿಚಾರಣೆಯನ್ನು ಸಮರ್ಥಿಸಿಕೊಂಡಿದ್ದಾರೆ.

"ಅದರಲ್ಲಿ ತಪ್ಪೇನಿದೆ? ಪೊಲೀಸರು ಕೂಡ ಅವರಿಗೆ ಇದೇ ಪ್ರಶ್ನೆ ಕೇಳಿದ್ದಾರೆ. ಇಂದಿನ ಪರಿಸ್ಥಿತಿಯನ್ನು ನೋಡಿದರೆ ಇದು ತೀರಾ ಸಹಜ. ಮದರಸಾಗೆ ಪ್ರಯಾಣಿಸುತ್ತಿರುವುದು ಸಣ್ಣ ಮಕ್ಕಳಾದ್ದರಿಂದ ನಾವು ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಬೇಕಾಗುತ್ತದೆ" ಎಂದು ಅವರು ಹೇಳಿದ್ದಾರೆ.

ಆದರೆ, ಮಧ್ಯಪ್ರದೇಶದ ಮಕ್ಕಳ ಕಲ್ಯಾಣಾಧಿಕಾರಿಗಳು ಮತ್ತು ಪೊಲೀಸರಿಗೆ ಮಾನವ ಕಳ್ಳಸಾಗಣೆಗೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳು ಸಿಗದ ಹಿನ್ನೆಲೆಯಲ್ಲಿ, ಅಂತಿಮವಾಗಿ ಅರಾರಿಯಾದ ಎಲ್ಲಾ 163 ಮಕ್ಕಳನ್ನು ಬಿಡುಗಡೆ ಮಾಡಲಾಯಿತು.

Scroll.in ವರದಿ ಪ್ರಕಾರ, ಇದು ಯಾವುದೇ ಒಂದು ಪ್ರತ್ಯೇಕ ಘಟನೆಯಲ್ಲ. ಈ ವರ್ಷವೊಂದರಲ್ಲೇ ಒಟ್ಟು ಒಂಬತ್ತು ವಿವಿಧ ಘಟನೆಗಳಲ್ಲಿ, ಮಾನವ ಕಳ್ಳಸಾಗಣೆಯ ಶಂಕೆಯ ಮೇಲೆ ರೈಲುಗಳಲ್ಲಿದ್ದ 375 ಮಕ್ಕಳನ್ನು ಅಧಿಕಾರಿಗಳು ತಡೆದು ವಶಕ್ಕೆ ಪಡೆದಿದ್ದಾರೆ. ಈ ಒಂಬತ್ತರ ಪೈಕಿ ಎಂಟು ಪ್ರಕರಣಗಳಲ್ಲಿ ವಶಕ್ಕೆ ಪಡೆಯಲಾದ ಎಲ್ಲಾ ಮಕ್ಕಳು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹಾಗೆಯೇ, ಒಂಭತ್ತರಲ್ಲಿ ಏಳು ಪ್ರಕರಣಗಳಲ್ಲಿ ಮಕ್ಕಳು ಮದರಸಾಗಳಿಗೆ ಕಲಿಯಲು ಹೊರಟಿದ್ದರು.

ಆದರೆ, ಈ ಒಂಬತ್ತೂ ಪ್ರಕರಣಗಳಲ್ಲಿ ಕೇಳಿಬಂದಿದ್ದ ಮಾನವ ಕಳ್ಳಸಾಗಣೆಯ ಶಂಕೆ ಸಂಪೂರ್ಣ ಸುಳ್ಳು ಎಂಬುದು ಸಾಬೀತಾಗಿದೆ. ಸ್ಥಳೀಯ ಪೊಲೀಸರು, ಮಕ್ಕಳ ಕಲ್ಯಾಣ ಸಮಿತಿಗಳು, ಪೋಷಕರು ಮತ್ತು ಮದರಸಾ ಆಡಳಿತ ಮಂಡಳಿಗಳ ಜೊತೆ ಮಾತನಾಡಿ scroll.in ಇದನ್ನು ಖಚಿತಪಡಿಸಿಕೊಂಡಿದೆ.

ವಿಶೇಷವೆಂದರೆ, ಈ ಒಂಭತ್ತು ಪ್ರಕರಣಗಳ ಪೈಕಿ ಎಂಟು ಪ್ರಕರಣಗಳು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೇ ನಡೆದಿವೆ. ಇಂಥದ್ದು ಒಡಿಶಾದಲ್ಲಿ ಆರು, ಮಧ್ಯಪ್ರದೇಶದಲ್ಲಿ ಎರಡು ಮತ್ತು ಕರ್ನಾಟಕದಲ್ಲಿ ಒಂದು ಪ್ರಕರಣ ವರದಿಯಾಗಿದೆ.

 

ಎಪ್ರಿಲ್ 27ರಂದು ಅರಾರಿಯಾದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಾಮಾಜಿಕ ಕಾರ್ಯಕರ್ತರ ಗುಂಪೊಂದು, ಮದರಸಾಗಳಿಗೆ ತೆರಳುವ ಮಕ್ಕಳನ್ನು ಈ ರೀತಿ ಹಠಾತ್ ಆಗಿ ವಶಕ್ಕೆ ಪಡೆಯುತ್ತಿರುವುದು ಒಂದು ನಿರ್ದಿಷ್ಟ ಸಮುದಾಯವನ್ನು ಗುರಿ ಮಾಡಿ ನಡೆಸುತ್ತಿರುವ ವ್ಯವಸ್ಥಿತ ಸಂಚು ಎಂದು ಆರೋಪಿಸಿದೆ.

"ಇದರ ಹಿಂದೆ ಒಂದು ನಿರ್ದಿಷ್ಟ ನಿರೂಪಣೆಯನ್ನು ಸೃಷ್ಟಿಸಲಾಗುತ್ತಿದೆ ಎಂದು ನಾವು ನಂಬುತ್ತೇವೆ. ಈಗ ಮುಸ್ಲಿಂ ಮಕ್ಕಳನ್ನು ಹೊಸ ದಾಳವಾಗಿ ಬಳಸಿಕೊಳ್ಳಲಾಗುತ್ತಿದೆ" ಎಂದು ‘ಜನ್ ಜಾಗರಣ್ ಶಕ್ತಿ ಸಂಘಟನ್’ ಸಂಸ್ಥೆಯ ಆಶಿಶ್ ರಂಜನ್ ಕಳವಳ ವ್ಯಕ್ತಪಡಿಸಿದ್ದಾರೆ.

ಅದೇ ಸಂಘಟನೆಯ ಕಾಮಾಯನಿ ಸ್ವಾಮಿ ಮಾತನಾಡಿ, ಮುಸ್ಲಿಂ ಮಕ್ಕಳು ಶಿಕ್ಷಣಕ್ಕಾಗಿ ಮದರಸಾಗಳಿಗೆ ಹೋಗುವ ಪದ್ಧತಿ ಇಂದು ನಿನ್ನೆಯದಲ್ಲ; ಅದು ದಶಕಗಳಿಂದ ನಡೆದುಕೊಂಡು ಬಂದಿದೆ.

"ಹಾಗಿದ್ದಾಗ ಇತ್ತೀಚಿನ ದಿನಗಳಲ್ಲಿ ಇಂತಹ ಬಂಧನಗಳು ದಿಢೀರನೆ ಹೆಚ್ಚಾಗುತ್ತಿರುವುದು ಏಕೆ?" ಎಂದು ಅವರು ಪ್ರಶ್ನಿಸಿದ್ದಾರೆ.

Scroll ವರದಿಗಾರರು ಮಾತನಾಡಿಸಿದ ಕೆಲವು ಮದರಸಾ ಮುಖ್ಯಸ್ಥರು ಸಹ, ಮದರಸಾ ಶಿಕ್ಷಣ ವ್ಯವಸ್ಥೆಯನ್ನು ಕಡ್ಡಾಯವಾಗಿ ಹಳಿತಪ್ಪಿಸುವ ಆಲೋಚನೆ ಇದರ ಹಿಂದಿದೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.

ಆದರೆ, ಅರಾರಿಯಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ದೀಪಕ್ ಕುಮಾರ್ ವರ್ಮಾ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ.

ಮುಸ್ಲಿಂ ಮಕ್ಕಳು ತಮ್ಮ ಪೋಷಕರಿಲ್ಲದೆ ಸುದೀರ್ಘ ಪ್ರಯಾಣ ಮಾಡುವುದರಿಂದ, "ಬಾಲನ್ಯಾಯ ಕಾಯ್ದೆಯ ಪ್ರಕಾರ ಅವರಿಗೆ ವಿಶೇಷ ಕಾಳಜಿ ಮತ್ತು ರಕ್ಷಣೆಯ ಅಗತ್ಯವಿರುತ್ತದೆ. ಹೀಗಾಗಿ, ಈ ಬಂಧನಗಳು ಸಂಪೂರ್ಣವಾಗಿ ಕಾನೂನು ಚೌಕಟ್ಟಿನಡಿಯಲ್ಲೇ ನಡೆದಿವೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅರಾರಿಯಾದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶಂಭು ಕುಮಾರ್ ಮಾತನಾಡಿ, ಈ ಮಕ್ಕಳು ಗುರುತಿನ ಚೀಟಿಗಳನ್ನು ಧರಿಸಿ, ದೊಡ್ಡ ದೊಡ್ಡ ಗುಂಪುಗಳಲ್ಲಿ ಪ್ರಯಾಣಿಸುವ ಅಭ್ಯಾಸ ಹೊಂದಿರುತ್ತಾರೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮಕ್ಕಳು ಒಟ್ಟಿಗೆ ಪ್ರಯಾಣಿಸುವಾಗ ಸಹಜವಾಗಿಯೇ ಅದು ಅಧಿಕಾರಿಗಳ ಗಮನ ಸೆಳೆಯುತ್ತದೆ ಎಂದು ವಿವರಿಸಿದ್ದಾರೆ.

*ನಮ್ಮಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ

ಇರ್ಫಾನ್ ಶೇಖ್ ಮತ್ತು ಇತರ ಮಕ್ಕಳನ್ನು ಕಟ್ನಿಯಲ್ಲಿ ವಶಕ್ಕೆ ಪಡೆದ ನಂತರ, ಮಧ್ಯಪ್ರದೇಶ ಪೊಲೀಸರು ಒಂದು ಹೆಜ್ಜೆ ಮುಂದೆ ಹೋಗಿ, ಆ ಮಕ್ಕಳು ಕಲಿಯಲು ಹೊರಟಿದ್ದ ಮಹಾರಾಷ್ಟ್ರದ ಎರಡು ಮತ್ತು ಕರ್ನಾಟಕದ ಒಂದು ಮದರಸಾಗೆ ತಮ್ಮ ತನಿಖಾ ತಂಡವನ್ನು ಕಳುಹಿಸಿದ್ದರು.

"ನಾವು ಪರಿಶೀಲನೆಗಾಗಿ ಪ್ರತಿ ಮದರಸಾಗೂ ಒಬ್ಬೊಬ್ಬ ಅಧಿಕಾರಿಯನ್ನು ಕಳುಹಿಸಿದ್ದೆವು" ಎಂದು ಕಟ್ನಿ ರೈಲ್ವೇ ಪೊಲೀಸ್ ಇನ್‌ಸ್ಪೆಕ್ಟರ್ ಲಾಲ್ತಾ ಕಶ್ಯಪ್ ತಿಳಿಸಿದ್ದಾರೆ.

ಅಲ್ಲಿನ ಸ್ಥಳೀಯ ಪೊಲೀಸರೊಂದಿಗೆ ನಮ್ಮ ಅಧಿಕಾರಿಗಳು ವಿಚಾರಣೆ ನಡೆಸಿದಾಗ, ಆ ಮದರಸಾಗಳ ವಿರುದ್ಧ ಬಾಲಕಾರ್ಮಿಕ ಪದ್ಧತಿಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ದೂರು ದಾಖಲಾಗಿಲ್ಲ ಎಂಬುದು ದೃಢಪಟ್ಟಿದೆ ಎಂದು ಅವರು ಹೇಳಿದ್ದಾರೆ.

ಪೊಲೀಸ್ ತಂಡವು ಭೇಟಿ ನೀಡಿದ ಮದರಸಾಗಳಲ್ಲಿ ಬಿಹಾರದ 30 ಮಕ್ಕಳು ಕಲಿಯಲು ಯೋಜಿಸಿದ್ದ ಕರ್ನಾಟಕದ ಬೀದರ್‌ನಲ್ಲಿರುವ ‘ದಾರುಲ್ ಉಲೂಮ್ ಇಮಾಮ್ದಿಯಾ’ ಮದರಸಾ ಕೂಡ ಒಂದಾಗಿತ್ತು.

ಈ ಕುರಿತು ಪ್ರತಿಕ್ರಿಯಿಸಿದ ಮದರಸಾದ ಮುಖ್ಯಸ್ಥ ಮುಹಮ್ಮದ್ ಜಾಖಿರ್, "ಪೊಲೀಸರು ಬಂದು ನಮ್ಮ ದಾಖಲಾತಿ ಪುಸ್ತಕವನ್ನು ಪರಿಶೀಲಿಸಿದರು. ತರಗತಿಗಳು ಎಲ್ಲಿ ನಡೆಯುತ್ತವೆ, ಮಕ್ಕಳು ಎಲ್ಲಿ ವಾಸಿಸುತ್ತಾರೆ, ಅವರು ಏನು ಆಹಾರ ಸೇವಿಸುತ್ತಾರೆ ಎಂಬುದನ್ನೆಲ್ಲ ಖುದ್ದಾಗಿ ವೀಕ್ಷಿಸಿ ನಂತರ ಹೊರಟು ಹೋದರು. ನಮ್ಮಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ. ಇಲ್ಲಿ ಯಾವುದೇ ಮಗುವನ್ನು ಯಾವುದೇ ರೀತಿಯ ಬಲವಂತದ ದುಡಿಮೆಗೆ ತಳ್ಳಲಾಗುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ರೀತಿ ಮಹಾರಾಷ್ಟ್ರದ ಉದ್ಗೀರ್‌ನಲ್ಲಿರುವ ‘ಅಶ್ರಫಿಯಾ ಅಂಜುಮನ್-ಎ-ಇಸ್ಲಾಮಿಯಾ’ ಮದರಸಾದ ಮೌಲಾನಾ ಅಜೀಜುರ್ ರೆಹಮಾನ್ ಮಾತನಾಡಿ, ಮಧ್ಯಪ್ರದೇಶ ಪೊಲೀಸರು ತಮ್ಮ ಹೇಳಿಕೆಯನ್ನು ದಾಖಲಿಸಿಕೊಂಡರು, ಕ್ಯಾಂಪಸ್‌ಗೆ ಭೇಟಿ ನೀಡಿ ಹಲವು ಪ್ರಶ್ನೆಗಳನ್ನು ಕೇಳಿ ಹಿಂತಿರುಗಿದರು ಎಂದು ತಿಳಿಸಿದ್ದಾರೆ.

ಕಟಕ್, ಬೀದರ್, ಉದ್ಗೀರ್ ಮತ್ತು ಜಗತ್‌ಸಿಂಗ್‌ಪುರದಲ್ಲಿ ತಪಾಸಣೆಗೆ ಒಳಪಟ್ಟ ನಾಲ್ಕೂ ಮದರಸಾಗಳಲ್ಲಿ ಧಾರ್ಮಿಕ ಶಿಕ್ಷಣದ ಜೊತೆಗೆ ಗಣಿತ, ಇಂಗ್ಲಿಷ್, ಹಿಂದಿ ಅಥವಾ ಒಡಿಯಾ ಭಾಷೆಗಳನ್ನು ಕಲಿಸಲಾಗುತ್ತಿತ್ತು. ಅಷ್ಟೇ ಅಲ್ಲದೆ, ಇವುಗಳ ಪೈಕಿ ಎರಡು ಮದರಸಾಗಳು ಧಾರ್ಮಿಕೇತರ ವಿಷಯಗಳಲ್ಲಿ ಮಕ್ಕಳಿಗೆ ಹೆಚ್ಚಿನ ಶಿಕ್ಷಣ ನೀಡಲು ಹತ್ತಿರದ ಸರ್ಕಾರಿ ಶಾಲೆಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವುದು ತನಿಖೆಯಲ್ಲಿ ಕಂಡುಬಂದಿದೆ.

ಒಡಿಶಾದಲ್ಲಿ ಮಕ್ಕಳ ಬಂಧನ ಮತ್ತು ಪೋಷಕರ ಅಳಲು

ಎಪ್ರಿಲ್ 1 ಮತ್ತು ಎಪ್ರಿಲ್ 14ರ ನಡುವೆ, ಒಡಿಶಾದ ಮದರಸಾಗಳಿಗೆ ಪ್ರಯಾಣಿಸುತ್ತಿದ್ದ 85 ಮಕ್ಕಳನ್ನು ಕಟಕ್ ರೈಲ್ವೇ ನಿಲ್ದಾಣದಲ್ಲಿ ಮೂರು ಪ್ರತ್ಯೇಕ ಸಂದರ್ಭಗಳಲ್ಲಿ ವಶಕ್ಕೆ ಪಡೆಯಲಾಗಿತ್ತು.

ಕಟಕ್ ರೈಲ್ವೇ ಪೊಲೀಸ್ ಪಡೆಯ ಠಾಣಾಧಿಕಾರಿ ರಾಜ್ ಸಿಂಗ್ ಮಲ್ಲಿಕ್, "ಮಕ್ಕಳನ್ನು ಮಾನವ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಶಂಕೆಯ ಮೇಲೆ ನಾವು ಅವರನ್ನು ವಶಕ್ಕೆ ಪಡೆದಿದ್ದೆವು" ಎಂದಿದ್ದಾರೆ.

ಎಪ್ರಿಲ್ 1ರಂದು ವಶಕ್ಕೆ ಪಡೆದ ಮಕ್ಕಳು ತಮ್ಮ ಪೋಷಕರ ಒಪ್ಪಿಗೆ ಪತ್ರದ ಪುರಾವೆಗಳನ್ನು ತೋರಿಸಿದ ನಂತರ ಅವರಿಗೆ ಪ್ರಯಾಣ ಮುಂದುವರಿಸಲು ಅನುಮತಿ ನೀಡಲಾಯಿತು ಎಂದು ಮಲ್ಲಿಕ್ ಹೇಳಿದ್ದಾರೆ. ಆದರೆ, ಉಳಿದ ಎರಡು ಸಂದರ್ಭಗಳಲ್ಲಿ ವಶಕ್ಕೆ ಪಡೆಯಲಾದ ಮಕ್ಕಳನ್ನು ಸ್ಥಳೀಯ ಬಾಲಮಂದಿರದಲ್ಲಿ ಇರಿಸಲಾಗಿತ್ತು.

ಅರಾರಿಯಾ ಜಿಲ್ಲೆಯ ರಾಜೋಖರ್ ಗ್ರಾಮದ ನಿವಾಸಿ ಆಬಿದ್ ಹುಸೇನ್ ಅವರು ತಮ್ಮ 12 ವರ್ಷದ ಮಗನೂ ಸೇರಿದಂತೆ ಮಕ್ಕಳ ಗುಂಪೊಂದರ ಜೊತೆ ಪ್ರಯಾಣಿಸುತ್ತಿದ್ದಾಗ, ಏಪ್ರಿಲ್ 14ರಂದು ಕಟಕ್ ನಿಲ್ದಾಣದಲ್ಲಿ ಅವರನ್ನು ತಡೆಯಲಾಯಿತು.

"ನಾನು ನನ್ನ ಮಗನ ಜೊತೆಯಲ್ಲೇ ಇದ್ದರೂ ಸಹ ನನ್ನ ಮಗನನ್ನು ನನ್ನಿಂದ ದೂರ ಕರೆದೊಯ್ದರು. ಆದರೆ ಪೊಲೀಸರು ನನ್ನ ಮಾತನ್ನು ಕೇಳಲೇ ಇಲ್ಲ" ಎಂದು ಹುಸೇನ್ ಅಳಲು ತೋಡಿಕೊಂಡಿದ್ದಾರೆ.

ಕಟಕ್‌ನಲ್ಲಿ ಹೋಟೆಲ್ ವಾಸ ಮತ್ತು ಊಟದ ವೆಚ್ಚವನ್ನು ಭರಿಸಲು ಸಾಧ್ಯವಾಗದ ಕಾರಣ, ಅವರು ಕೆಲವು ದಿನಗಳ ಕಾಲ ಕಾದು ನಂತರ ಬರಿಗೈಲಿ ಮನೆಗೆ ಮರಳಬೇಕಾಯಿತು.

ಅಂತಿಮವಾಗಿ, ಅಧಿಕಾರಿಗಳಿಗೆ ಮಾನವ ಕಳ್ಳಸಾಗಣೆಗೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳು ಸಿಗದ ಕಾರಣ, ಒಂದು ತಿಂಗಳ ನಂತರ ಎಲ್ಲಾ ಮಕ್ಕಳನ್ನು ಮರಳಿ ಬಿಹಾರಕ್ಕೆ ಕಳುಹಿಸಿಕೊಡಲಾಯಿತು ಎಂದು ಕಟಕ್ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಮಾನಸ್ ರಂಜನ್ ಬಿಸ್ವಾಲ್ ಹೇಳಿದ್ದಾರೆ.

2024ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಒಡಿಶಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಇಂತಹ ತಡೆಹಿಡಿಯುವಿಕೆ ಮತ್ತು ಬಂಧನಗಳ ಪ್ರಕರಣಗಳು ತೀವ್ರವಾಗಿ ಹೆಚ್ಚಾಗಿವೆ ಎಂದು ಹಲವು ಮದರಸಾ ಮುಖ್ಯಸ್ಥರು ಹೇಳಿದ್ದಾರೆ ಎಂದು scroll.in ವರದಿ ಉಲ್ಲೇಖಿಸಿದೆ.

ಜಗತ್‌ಸಿಂಗ್‌ಪುರದಲ್ಲಿರುವ ‘ಜಾಮಿಯಾ ಇಸ್ಲಾಮಿಯಾ ರಿಯಾಜ್ತುಲ್ ಉಲೂಮ್’ ಮದರಸಾದ ಮುಖ್ಯಸ್ಥ ಖಾಜಿ ಶೇಖ್ ಶರೀಫ್ ಮಾತನಾಡಿ, ತಮ್ಮ ಸಂಸ್ಥೆಗೆ ಬರುತ್ತಿದ್ದ 59 ಮಕ್ಕಳನ್ನು ಕಟಕ್‌ನಲ್ಲಿ ವಶಕ್ಕೆ ಪಡೆಯಲಾಗಿತ್ತು ಎಂದು ಹೇಳಿದ್ದಾರೆ.

"ನಮ್ಮ ವಿರುದ್ಧ ಇದುವರೆಗೆ ಬಾಲಕಾರ್ಮಿಕ ಪದ್ಧತಿಯ ಯಾವುದೇ ಒಂದು ಪ್ರಕರಣವೂ ದಾಖಲಾಗಿಲ್ಲ. ಪೊಲೀಸರು ಮತ್ತು ಮಕ್ಕಳ ಕಲ್ಯಾಣ ಸಮಿತಿಯು ಕೇವಲ ಒಂದು ಪ್ರಾಥಮಿಕ ತಪಾಸಣೆ ನಡೆಸಿದ್ದರೂ ನಮ್ಮ ವಿಶ್ವಾಸಾರ್ಹತೆ ಅವರಿಗೆ ತಿಳಿಯುತ್ತಿತ್ತು. ಆದರೆ, ಮದರಸಾ ಶಿಕ್ಷಣವನ್ನು ವ್ಯವಸ್ಥಿತವಾಗಿ ಹಳಿತಪ್ಪಿಸುವ ಪ್ರೇರಿತ ಪ್ರಯತ್ನವೊಂದು ಇಲ್ಲಿ ನಡೆಯುತ್ತಿರುವಂತೆ ತೋರುತ್ತಿದೆ" ಎಂದು ಶರೀಫ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಪ್ರಿಲ್ 18ರ ಮುಂಜಾನೆ, ಕರ್ನಾಟಕದ ತುಮಕೂರಿನ ಮದರಸಾವೊಂದರಿಂದ 24 ಮಕ್ಕಳು ಯಾರಿಗೂ ತಿಳಿಸದೆ ಓಡಿಹೋಗಿದ್ದರು. ರೈಲು ಹತ್ತಿ ಬೆಂಗಳೂರು ತಲುಪಿದ್ದ ಈ ಮಕ್ಕಳನ್ನು ಅಲ್ಲಿನ ರೈಲ್ವೇ ಪೊಲೀಸ್ ಪಡೆಯ ಕಾನ್‌ಸ್ಟೆಬಲ್ ಒಬ್ಬರು ಗುರುತಿಸಿ ವಶಕ್ಕೆ ಪಡೆದರು.

"ಆರ್‌ಪಿಎಫ್ ಸಿಬ್ಬಂದಿ ಮಕ್ಕಳನ್ನು ನಮಗೆ ಒಪ್ಪಿಸಿದರು. ನಮ್ಮ ಬಳಿಗೆ ಬಂದಾಗ ಮಕ್ಕಳೆಲ್ಲರೂ ಹರಿದ ಬಟ್ಟೆ ಧರಿಸಿದ್ದರು. ಅವರಿಗೆ ಸಿಕ್ಕಾಪಟ್ಟೆ ಹಸಿವಾಗಿತ್ತು" ಎಂದು ಬೆಂಗಳೂರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಆಶಾ ಎಚ್.ಕೆ. ತಿಳಿಸಿದ್ದಾರೆ.

ಮಕ್ಕಳ ಹೇಳಿಕೆಗಳನ್ನು ದಾಖಲಿಸಿಕೊಂಡ ಆಶಾ, "ತುಮಕೂರಿನ ‘ಜಾಮಿಯಾ ಅರೇಬಿಯಾ ಹಸೀನಿಯಾ ಟ್ರಸ್ಟ್’ ಮದರಸಾದಲ್ಲಿ ತಮಗೆ ರುಚಿಯಿಲ್ಲದ ಆಹಾರ ನೀಡಲಾಗುತ್ತಿತ್ತು ಮತ್ತು ದೈಹಿಕವಾಗಿ ಹಿಂಸಿಸಲಾಗುತ್ತಿತ್ತು ಎಂದು ಮಕ್ಕಳು ದೂರಿದ್ದಾರೆ" ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಆಶಾ ಅವರು ರೈಲ್ವೇ ಪೊಲೀಸರಿಗೆ ಪ್ರಥಮ ಮಾಹಿತಿ ವರದಿ ದಾಖಲಿಸಿದರು.

ಘಟನೆ ನಡೆದ ಒಂಭತ್ತು ದಿನಗಳ ನಂತರ, ಬಿಹಾರದ ಅರಾರಿಯಾ ಜಿಲ್ಲೆಯ ಪಲಾಸಿ ಬ್ಲಾಕ್‌ನಿಂದ ಈ 24 ಮಕ್ಕಳ ಪೋಷಕರು ಬೆಂಗಳೂರಿಗೆ ಧಾವಿಸಿದರು.

ಅವರಲ್ಲಿ ಹಲವರು scroll.in ಜತೆ ಮಾತನಾಡಿದ್ದು, ಪೊಲೀಸರು ಹಿಡಿದಾಗ ತಮಗೆ ಅಲ್ಲಿ ಹೊಡೆಯಲಾಗುತ್ತಿತ್ತು ಎಂದು ಮಕ್ಕಳು ಸುಳ್ಳು ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಆಟೋ ರಿಕ್ಷಾ ಚಾಲಕರಾಗಿರುವ ಮುಹಮ್ಮದ್ ಮೋಜಿಮ್ ಮಾತನಾಡಿ, "ಮದರಸಾದ ಮೇಲೆ ತಪ್ಪು ಹೊರಿಸಿದರೆ ತಮನ್ನು ಮನೆಗೆ ಕಳುಹಿಸಿಕೊಡುತ್ತಾರೆ ಎಂದು ಮಕ್ಕಳು ಭಾವಿಸಿದ್ದರು. ಆದರೆ ನಾನು ನನ್ನ ಮಗ ನಜ್ಮುದ್ದೀನ್‌ನನ್ನು ಖುದ್ದಾಗಿ ವಿಚಾರಿಸಿದಾಗ, ತನಗೆ ಮನೆ ನೆನಪಾಗುತ್ತಿತ್ತು, ಹಾಗಾಗಿ ಓಡಿ ಬಂದೆ ಎಂದು ಒಪ್ಪಿಕೊಂಡಿದ್ದಾನೆ" ಎಂದಿದ್ದಾರೆ.

ಅರಾರಿಯಾದ ಕೂಲಿ ಕಾರ್ಮಿಕ ಹಾಗೂ ಮದರಸಾದಿಂದ ಓಡಿಹೋಗಿದ್ದ 14 ವರ್ಷದ ಬಾಲಕನ ತಂದೆ ರಯೀಸ್ ಅವರದ್ದೂ ಇದೇ ಕಥೆ.

"ಅವನು ಯಾಕೆ ಓಡಿಬಂದ ಎಂದು ಕೇಳಿದಾಗ, ಅಲ್ಲಿನ ಊಟ ಇಷ್ಟವಾಗಲಿಲ್ಲ. ಮನೆ ನೆನಪಾಗುತ್ತಿತ್ತು ಎಂದು ಹೇಳಿದ" ಎಂದಿದ್ದಾರೆ.

ಮದರಸಾದ ಮುಖ್ಯಸ್ಥರಾದ ಹಝರತ್ ಉಸ್ಮಾನ್ ಮಾತನಾಡಿ, ಓಡಿಹೋದ 24 ಮಕ್ಕಳೂ ಮದರಸಾಗೆ ತೀರಾ ಹೊಸಬರಾಗಿದ್ದರು ಮತ್ತು ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಒದ್ದಾಡುತ್ತಿದ್ದರು.

"ನಾವು ನಮ್ಮ ಮದರಸಾದ ಗೇಟ್‌ಗಳನ್ನು ಎಂದಿಗೂ ಲಾಕ್ ಮಾಡುವುದಿಲ್ಲ. ಅವರು ರಾತ್ರಿ ವೇಳೆಯಲ್ಲಿ ಓಡಿಹೋಗಿದ್ದಾರೆ. ಮುಂಜಾನೆ 5.30ಕ್ಕೆ ಉಳಿದ ಮಕ್ಕಳನ್ನು ಎಬ್ಬಿಸಿದಾಗ ಇವರು ನಾಪತ್ತೆಯಾಗಿರುವುದು ನಮಗೆ ತಿಳಿಯಿತು" ಎಂದು ವಿವರಿಸಿದ್ದಾರೆ.

ಮಕ್ಕಳಿಗೆ ಹೊಡೆಯಲಾಗುತ್ತಿತ್ತು ಮತ್ತು ಬಾಲಕಾರ್ಮಿಕರಾಗಿ ದುಡಿಸಿಕೊಳ್ಳಲಾಗುತ್ತಿತ್ತು ಎಂಬ ಆರೋಪಗಳು "ಸಂಪೂರ್ಣ ಸುಳ್ಳು" ಎಂದು ಅವರು ಹೇಳಿದ್ದಾರೆ.

ಮದರಸಾದಲ್ಲಿ ನಡೆಸಿದ ಜಂಟಿ ತನಿಖೆಯು ಮುಖ್ಯಸ್ಥ ಉಸ್ಮಾನ್ ಅವರ ವಾದವನ್ನು ಪುಷ್ಟೀಕರಿಸಿದೆ. ಸ್ಥಳೀಯ ಪೊಲೀಸರೊಂದಿಗೆ ಮೇ 17ರಂದು ಮದರಸಾಗೆ ಭೇಟಿ ನೀಡಿದ್ದ ತುಮಕೂರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪವಿತ್ರಾ ಜಿ., ಅಲ್ಲಿ ಯಾವುದೇ ಬಾಲಕಾರ್ಮಿಕ ಪದ್ಧತಿ ಅಥವಾ ಕಿರುಕುಳದ ಪುರಾವೆಗಳು ಪತ್ತೆಯಾಗಿಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ.

"ನಾವು ಮದರಸಾದಲ್ಲಿದ್ದ ಉಳಿದ ಮಕ್ಕಳೊಂದಿಗೆ ಮಾತನಾಡಿದ್ದೇವೆ. ಆವರಣವು ಅತ್ಯಂತ ಸ್ವಚ್ಛ ಹಾಗೂ ಸುಸ್ಥಿತಿಯಲ್ಲಿದೆ. ಈ ಹಿಂದೆ ಎಂದೂ ಇಲ್ಲಿ ಯಾವುದೇ ದೂರುಗಳು ದಾಖಲಾಗಿಲ್ಲ" ಎಂದು ಅವರು ಹೇಳಿದ್ದಾರೆ.

ಆದರೆ, ಈ ಮದರಸಾಗೆ ಯಾವುದೇ ನಿಯಮಿತ ಶಾಲೆಗಳೊಂದಿಗೆ ಒಪ್ಪಂದವಿಲ್ಲ ಎಂಬುದನ್ನೂ ಅವರು ಗಮನಿಸಿದ್ದಾರೆ. ಅಲ್ಲಿ ಧಾರ್ಮಿಕ ಪಠ್ಯಗಳೊಂದಿಗೆ ಸ್ವಲ್ಪ ಮಟ್ಟಿಗೆ ಇಂಗ್ಲಿಷ್ ಮತ್ತು ಗಣಿತವನ್ನು ಕಲಿಸಲಾಗುತ್ತಿತ್ತು.

ಓಡಿಹೋಗಿದ್ದ 24 ಮಕ್ಕಳು ನಂತರ ತಾವೇ ಸ್ವತಃ ಮುಂದೆ ಬಂದು, ಆರಂಭದಲ್ಲಿ ನೀಡಿದ್ದ ತಮ್ಮ ಹೇಳಿಕೆಯನ್ನು ಬದಲಾಯಿಸಲು ವಿನಂತಿಸಿಕೊಂಡಿದ್ದಾರೆ ಎಂದು ಪವಿತ್ರಾ ಹೇಳಿದ್ದಾರೆ.

ಮದರಸಾಗಳ ವಿರುದ್ಧ ವ್ಯವಸ್ಥಿತ ಅಭಿಯಾನ?

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗವು ಮದರಸಾಗಳ ವಿರುದ್ಧ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಅಭಿಯಾನದ ಹಿನ್ನೆಲೆಯಲ್ಲೇ ಈ ಸರಣಿ ಬಂಧನಗಳು ನಡೆಯುತ್ತಿವೆ.

2024ರ ಮೇ ತಿಂಗಳಲ್ಲಿ ಎನ್‌ಸಿಪಿಸಿಆರ್ ಅಧ್ಯಕ್ಷ ಪ್ರಿಯಾಂಕ್ ಕಾನೂಂಗೋ ಅವರು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು, ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಮಕ್ಕಳನ್ನು ಕಾನೂನುಬಾಹಿರವಾಗಿ ಸಾಗಿಸುವುದರ ವಿರುದ್ಧ ಜಾಗರೂಕರಾಗಿರಬೇಕು ಎಂದು ಸೂಚಿಸಿದ್ದರು.

ಆ ಪತ್ರದಲ್ಲಿ, ಅದೇ ವರ್ಷದ ಏಪ್ರಿಲ್ 26ರಂದು ಬಿಹಾರದ ಅರಾರಿಯಾದಿಂದ ಉತ್ತರ ಪ್ರದೇಶದ ಮದರಸಾವೊಂದಕ್ಕೆ ಕಲಿಯಲು ಹೊರಟಿದ್ದ 95 ಮಕ್ಕಳನ್ನು ಅಯೋಧ್ಯೆಯಲ್ಲಿ "ರಕ್ಷಿಸಿದ" ಘಟನೆಯನ್ನು ಪ್ರಮುಖವಾಗಿ ಉಲ್ಲೇಖಿಸಲಾಗಿತ್ತು.

ಇಂತಹ ಪ್ರಕರಣಗಳಲ್ಲಿ ಬಾಲನ್ಯಾಯ ಕಾಯ್ದೆ–2015 ಮತ್ತು ಮಕ್ಕಳ ಕಳ್ಳಸಾಗಣೆಗೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಯೋಗವು ಸೂಚಿಸಿತ್ತು.

ಅದೇ ವರ್ಷ ಜೂನ್ 7 ಮತ್ತು ಜೂನ್ 25ರಂದು ಹೊರಡಿಸಿದ ಎರಡು ಪ್ರತ್ಯೇಕ ಆದೇಶಗಳಲ್ಲಿ, ಎನ್‌ಸಿಪಿಸಿಆರ್ ಉತ್ತರ ಪ್ರದೇಶ ಸರ್ಕಾರಕ್ಕೆ ಮದರಸಾಗಳ ಧನಸಹಾಯ ಮತ್ತು ಮಾನ್ಯತೆಯನ್ನು ರದ್ದುಗೊಳಿಸುವಂತೆ ಕೇಳಿಕೊಂಡಿತ್ತು. ಅಷ್ಟೇ ಅಲ್ಲದೆ, ಅಲ್ಲಿನ ವಿದ್ಯಾರ್ಥಿಗಳನ್ನು ಸಾಮಾನ್ಯ ಶಾಲೆಗಳಿಗೆ ಸೇರಿಸುವಂತೆ ಸೂಚಿಸಿತ್ತು. ಆದರೆ, ಈ ಆದೇಶಗಳಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತ್ತು.

ಸುಪ್ರೀಂ ಕೋರ್ಟ್ ತಡೆಯಾಜ್ಞೆಯ ಹೊರತಾಗಿಯೂ ಆಯೋಗವು ತನ್ನ ಪಟ್ಟನ್ನು ಸಡಿಲಿಸಲಿಲ್ಲ. ಅಕ್ಟೋಬರ್ 2024ರಲ್ಲಿ, ಆಯೋಗವು ‘Guardians of Faith or Oppressors of Rights?: Constitutional Rights of Children vs. Madrasas’ (ಧರ್ಮದ ರಕ್ಷಕರು ಅಥವಾ ಹಕ್ಕುಗಳ ಶೋಷಕರು?: ಮಕ್ಕಳ ಸಾಂವಿಧಾನಿಕ ಹಕ್ಕುಗಳು ಮತ್ತು ಮದರಸಾಗಳು) ಎಂಬ ಶೀರ್ಷಿಕೆಯ ವರದಿಯೊಂದನ್ನು ಬಿಡುಗಡೆ ಮಾಡಿತು.

ಮದರಸಾಗಳಲ್ಲಿ ಜಾತ್ಯತೀತ ಹಾಗೂ ಆಧುನಿಕ ಶಿಕ್ಷಣದ ಕೊರತೆಯಿದೆ ಎಂದು ಪ್ರತಿಪಾದಿಸಿದ ಆಯೋಗವು, ಮದರಸಾಗಳಿಗೆ ನೀಡಲಾಗುವ ಸರ್ಕಾರಿ ಅನುದಾನವನ್ನು ನಿಲ್ಲಿಸಲು ಮತ್ತು ಮದರಸಾ ಮಂಡಳಿಗಳನ್ನು ಮುಚ್ಚಲು ಶಿಫಾರಸು ಮಾಡಿತು. ಈ ವರದಿಯನ್ನು ಸಿದ್ಧಪಡಿಸಲು ಬರೋಬ್ಬರಿ ಒಂಬತ್ತು ವರ್ಷಗಳು ಹಿಡಿಸಿತು ಎಂದು ಕಾನೂಂಗೋ ಹೇಳಿದ್ದಾರೆ.

ಎನ್‌ಸಿಪಿಸಿಆರ್ ಮದರಸಾಗಳ ವಿರುದ್ಧ ಇಂತಹ ನಿಲುವು ತಳೆದಿರುವುದು ಇದೇ ಮೊದಲೇನಲ್ಲ.

ಮುಸ್ಲಿಮೇತರ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಸರ್ಕಾರಿ ಅನುದಾನಿತ ಮದರಸಾಗಳ ಬಗ್ಗೆ ವಿವರವಾದ ತನಿಖೆ ನಡೆಸಿ, ಆ ಮಕ್ಕಳನ್ನು ಸಾಮಾನ್ಯ ಶಾಲೆಗಳಿಗೆ ವರ್ಗಾಯಿಸುವಂತೆ ಮತ್ತು ಮಾನ್ಯತೆ ಪಡೆಯದ ಎಲ್ಲಾ ಮದರಸಾಗಳ ಸಮೀಕ್ಷೆ ನಡೆಸುವಂತೆ ಆಯೋಗವು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿತ್ತು.

ಮದರಸಾಗಳ ವಿರುದ್ಧ ತಮಗೆ ಬಂದಿರುವ "ಹಲವಾರು ದೂರುಗಳನ್ನು" ಆಧರಿಸಿ ಈ ನಿರ್ದೇಶನ ನೀಡಲಾಗಿದ್ದು, ರಾಜ್ಯ ಸರ್ಕಾರಗಳು ಇಂತಹ ಸಂಸ್ಥೆಗಳಿಗೆ ಧನಸಹಾಯ ನೀಡುತ್ತಿರುವುದನ್ನು ಆಯೋಗವು ತನ್ನ ಆದೇಶದಲ್ಲಿ ಪ್ರಸ್ತಾಪಿಸಿತ್ತು.

ಮಕ್ಕಳ ಪ್ರಯಾಣಕ್ಕೊಂದು ಪ್ರತ್ಯೇಕ ನಿಯಮ ಅಗತ್ಯವೇ?

ಮಕ್ಕಳನ್ನು "ರಕ್ಷಿಸಿದ" ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಮಕ್ಕಳ ಕಲ್ಯಾಣಾಧಿಕಾರಿಗಳು, ಅರಾರಿಯಾದಿಂದ ಬಂದ ಈ ಮಕ್ಕಳು ಶಿಕ್ಷಣಕ್ಕಾಗಿ ಪ್ರಯಾಣಿಸುತ್ತಿದ್ದಾರೆ ಎಂಬುದನ್ನು ಖಚಿತಪಡಿಸಲು ಅವರ ಬಳಿ ಯಾವುದೇ ನಂಬಲರ್ಹ ದಾಖಲೆಗಳಿರಲಿಲ್ಲ ಎಂದು ವಾದಿಸಿದ್ದಾರೆ.

ಆದರೆ, ಕನಿಷ್ಠ ಮೂರು ಪ್ರಕರಣಗಳಲ್ಲಿ ಸ್ಕ್ರಾಲ್ ನಡೆಸಿದ ತನಿಖೆಯಿಂದ ವಿಭಿನ್ನ ಸತ್ಯಾಂಶ ಹೊರಬಂದಿದೆ. ಮಕ್ಕಳೊಂದಿಗೆ ಇದ್ದ ಶಿಕ್ಷಕರು ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರಿಂದ ಪಡೆದ ಪತ್ರವನ್ನು ಹೊಂದಿದ್ದರು. ಅದರಲ್ಲಿ ಮಗುವಿನ ಹೆಸರು, ಆತ ಎಲ್ಲಿಗೆ ಪ್ರಯಾಣಿಸುತ್ತಿದ್ದಾನೆ ಮತ್ತು ಯಾವ ಉದ್ದೇಶಕ್ಕಾಗಿ ಹೋಗುತ್ತಿದ್ದಾನೆ ಎಂಬ ವಿವರಗಳಿದ್ದವು.

ಇದರೊಂದಿಗೆ ಪೋಷಕರು ಮತ್ತು ಮಕ್ಕಳ ಗುರುತಿನ ಚೀಟಿಗಳ ನಕಲು ಪ್ರತಿಗಳು ಹಾಗೂ ಮದರಸಾದಿಂದ ನೀಡಲಾಗಿದ್ದ ಪ್ರವೇಶಾತಿ ಪತ್ರಗಳೂ ಅವರ ಬಳಿ ಇದ್ದವು.

"ಮಕ್ಕಳ ಸುಗಮ ಪ್ರಯಾಣಕ್ಕೆ ಈ ದಾಖಲೆಗಳು ಸಂಪೂರ್ಣವಾಗಿ ಸಾಕಾಗುತ್ತವೆ" ಎಂದು ಕಟ್ನಿ ಘಟನೆಯಲ್ಲಿ ಸಂತ್ರಸ್ತ ಕುಟುಂಬಗಳಿಗೆ ಸಹಾಯ ಮಾಡಿದ ವಕೀಲ ರಮೀಜ್ ರೇಜಾ ಹೇಳಿದ್ದಾರೆ.

ಆದರೆ, ಮಕ್ಕಳ ಹಕ್ಕುಗಳ ತಜ್ಞರಲ್ಲಿ ಈ ಕುರಿತು ಭಿನ್ನಾಭಿಪ್ರಾಯಗಳಿವೆ.

ಮಕ್ಕಳ ಕಲ್ಯಾಣ ಇಲಾಖೆಯ ಮಾಜಿ ಅಧಿಕಾರಿ ಹಾಗೂ ಪ್ರಸ್ತುತ ‘ವಿಧಾಯಕ್ ಭಾರತಿ’ ಎಂಬ ಮಕ್ಕಳ ಹಕ್ಕುಗಳ ಎನ್‌ಜಿಒ ನಿರ್ದೇಶಕರಾಗಿರುವ ಸಂತೋಷ್ ಶಿಂದೆ ಅವರ ಪ್ರಕಾರ, "ಈ ದಾಖಲೆಗಳು ಬಾಲನ್ಯಾಯ ಕಾಯ್ದೆಯಡಿ ಕಾನೂನುಬದ್ಧ ಮಾನ್ಯತೆ ಪಡೆದಿಲ್ಲ. ಪೋಷಕರಿಲ್ಲದೆ ಕಂಡುಬರುವ ಯಾವುದೇ ಮಗುವನ್ನು ‘ರಕ್ಷಣೆ ಮತ್ತು ಕಾಳಜಿಯ ಅಗತ್ಯವಿರುವ ಮಗು’ ಎಂದೇ ಪರಿಗಣಿಸಲಾಗುತ್ತದೆ."

ಆದರೆ, ಇಂತಹ ದಿಢೀರ್ ಬಂಧನ ಹಾಗೂ ರಕ್ಷಣಾ ಕಾರ್ಯಾಚರಣೆಗಳು ಮಕ್ಕಳು ಮತ್ತು ಪೋಷಕರಿಗೆ ತೀವ್ರ ಸಂಕಷ್ಟ ತಂದೊಡ್ಡುತ್ತವೆ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ.

"ಸಂಬಂಧಪಟ್ಟ ರಾಜ್ಯಗಳ ಅಲ್ಪಸಂಖ್ಯಾತ ಆಯೋಗಗಳು ಈ ವಲಸೆಯ ಸ್ವರೂಪವನ್ನು ಅಧ್ಯಯನ ಮಾಡಬೇಕು. ಮಕ್ಕಳ ಸುರಕ್ಷಿತ ಪ್ರಯಾಣಕ್ಕೆ ಅನುಕೂಲವಾಗುವಂತೆ ನಿರ್ದಿಷ್ಟ ನಿಯಮಗಳನ್ನು ರೂಪಿಸಬೇಕು. ದುರದೃಷ್ಟವಶಾತ್ ಪ್ರಸ್ತುತ ಅಂತಹ ಯಾವುದೇ ವ್ಯವಸ್ಥೆ ಇಲ್ಲ" ಎಂದು ಅವರು ಹೇಳಿದ್ದಾರೆ.

ಒಡಿಶಾ ಮತ್ತು ಮಹಾರಾಷ್ಟ್ರ ಎರಡೂ ರಾಜ್ಯಗಳ ಮದರಸಾ ಮುಖ್ಯಸ್ಥರು ಸ್ಕ್ರಾಲ್ ಜೊತೆ ಮಾತನಾಡಿ, ಇತ್ತೀಚಿನ ಈ ಕಠಿಣ ತಪಾಸಣೆ ಮತ್ತು ನಿರಂತರ ನಿಗಾ ತಮಗೆ ತೀವ್ರ ಮುಜುಗರ ಹಾಗೂ ಅಸಮಾಧಾನ ಉಂಟುಮಾಡಿದೆ ಎಂದು ತಿಳಿಸಿದ್ದಾರೆ.

"ಬಿಹಾರದ ಈ ಮಕ್ಕಳು ಅತ್ಯಂತ ಬಡವರಾಗಿದ್ದರಿಂದ ಮತ್ತು ಉಚಿತ ಶಿಕ್ಷಣದ ಅಗತ್ಯವಿದ್ದರಿಂದ ನಾವು ಅವರಿಗೆ ಇಲ್ಲಿ ಪ್ರವೇಶ ನೀಡಿದ್ದೆವು. ಆದರೆ, ನಾವು ಇಷ್ಟೊಂದು ಸಾಲು ಸಾಲು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದಾದರೆ, ಮುಂಬರುವ ದಿನಗಳಲ್ಲಿ ಬಿಹಾರದ ಮಕ್ಕಳ ದಾಖಲಾತಿಯನ್ನೇ ನಿಲ್ಲಿಸುವುದು ಒಳಿತು" ಎಂದು ಉದ್ಗೀರ್ ಮದರಸಾದ ಮುಖ್ಯಸ್ಥ ಮೌಲಾನಾ ಅಝೀಝುರ್ ರೆಹಮಾನ್ ಬೇಸರದಿಂದ ನುಡಿದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News