Uttarakhand | ಬಜರಂಗದಳದ ಕಾರ್ಯಕರ್ತರೇ ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!
Photo Credit : PTI
ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವವಾದಿ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರನ್ನು 'ಬಾಬಾ' ಎಂಬುದರಿಂದ ಬದಲಾಯಿಸುವಂತೆ ಒತ್ತಾಯಿಸಿತ್ತು. 'ಬಾಬಾ' ಎಂಬುದು ಹಿಂದೂ ಹೆಸರಾಗಿದೆ ಎಂಬುದು ಆ ಗುಂಪಿನ ವಾದವಾಗಿತ್ತು. ಈ ಸಂದರ್ಭದಲ್ಲಿ 42 ವರ್ಷದ ಹಿಂದೂ ಜಿಮ್ ತರಬೇತುದಾರ ದೀಪಕ್ ಕುಮಾರ್ ಎಂಬುವವರು ಆ ಉದ್ರಿಕ್ತ ಗುಂಪನ್ನು ಧೈರ್ಯವಾಗಿ ಎದುರಿಸಿದ್ದರು. ಅವರ ಧಾರ್ಮಿಕ ಗುರುತಿನ ಬಗ್ಗೆ ಆ ಗುಂಪು ಪ್ರಶ್ನಿಸಿದಾಗ, ಕುಮಾರ್ ಅವರು "ನನ್ನ ಹೆಸರು ಮುಹಮ್ಮದ್ ದೀಪಕ್" ಎಂದು ಉತ್ತರಿಸಿದ್ದರು. ಜಾತ್ಯತೀತ ಸೌಹಾರ್ದತೆಯ ಈ ಹೃದಯಸ್ಪರ್ಶಿ ನಡೆ ಆ ಗುಂಪಿನ ಮನ ಕರಗಿಸಲಿಲ್ಲ. ಬದಲಿಗೆ ಅವರು ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಅವರ ಮೇಲೆ ದಾಳಿ ನಡೆಸಿದರು.
ಮುಸ್ಲಿಂ ವೃದ್ಧ ವ್ಯಕ್ತಿಯ ಪರವಾಗಿ ನಿಂತಿದ್ದಕ್ಕಾಗಿ ದೀಪಕ್ ಕುಮಾರ್ ಅವರ ಮೇಲೆಯೇ ದಾಳಿ ಮಾಡಲು ನಂತರದ ದಿನಗಳಲ್ಲಿ ದೊಡ್ಡ ಜನಸಮೂಹವೇ ಬಂದಿತ್ತು. ದೀಪಕ್ ಕುಮಾರ್ ಅವರು ನೀಡಿದ ದೂರಿನಲ್ಲಿ ಅಮನ್ ಸ್ವೇದಿಯಾ, ಸಿದ್ಧಾಂತ್ ಬದೋನಿ, ಭೂಪಿ ಚೌಧರಿ ಮತ್ತು ಇತರರ ಹೆಸರನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿದ್ದರೂ, ಉತ್ತರಾಖಂಡ ಪೊಲೀಸರು ಮಾತ್ರ ಕೇವಲ 'ಅಪರಿಚಿತ' ವ್ಯಕ್ತಿಗಳ ವಿರುದ್ಧ ಶಾಂತಿ ಭಂಗದ ಎಫ್‌ಐಆರ್ ದಾಖಲಿಸಿಕೊಂಡಿದ್ದರು.
ಇದೇ ವೇಳೆ, ತನ್ನ ಮುಸ್ಲಿಂ ನೆರೆಹೊರೆಯವನ ಪರವಾಗಿ ಧ್ವನಿ ಎತ್ತಿದ ದೀಪಕ್ ಅವರು ಅಂದಿನಿಂದ ತಮ್ಮ ಜಿಮ್ ವ್ಯವಹಾರದಲ್ಲಿ ಭಾರಿ ನಷ್ಟ ಅನುಭವಿಸುತ್ತಿದ್ದಾರೆ. ಅವರ ಏಕೈಕ ಆದಾಯದ ಮೂಲವಾಗಿದ್ದ ಜಿಮ್ ಅನ್ನು ಸ್ಥಳೀಯರು ಬಹಿಷ್ಕರಿಸಿದ್ದರಿಂದ, ಅವರು ತಮ್ಮ ಜಿಮ್ ಅನ್ನು ಖಾಲಿ ಮಾಡಿ ನಗರವನ್ನೇ ತೊರೆಯಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದು ವರದಿಗಳು ತಿಳಿಸಿವೆ.
ಆದರೆ, ದೀಪಕ್ ಅವರು ತಮ್ಮ ದೂರಿನಲ್ಲಿ ಹೆಸರಿಸಿದ್ದ ಆರೋಪಿಗಳ ಬದುಕು ಮಾತ್ರ ಇವರದ್ದಕ್ಕಿಂತ ಸಂಪೂರ್ಣ ಭಿನ್ನವಾಗಿದೆ ಎಂದು The Wire ವರದಿಯಲ್ಲಿ ಹೇಳಿದೆ.
ಮೈಕ್ರೋಫೋನ್ ಹಿಡಿದು ವಿಡಿಯೊ ರೆಕಾರ್ಡಿಂಗ್ ಸೆಟಪ್ ನೊಂದಿಗೆ ಅಂಗಡಿಯೊಂದಕ್ಕೆ ನುಗ್ಗುವ ವ್ಯಕ್ತಿಯೊಬ್ಬ, "ನೀವು ಈ ಅಂಗಡಿಯನ್ನು ಇವನಿಗೆ ಬಾಡಿಗೆಗೆ ಕೊಟ್ಟು 12 ವರ್ಷಗಳಾಗಿವೆ. ಅವರು ನಮ್ಮ ಸಹೋದರಿಯರನ್ನು ಅಪಹರಿಸಿ ಓಡಿಹೋಗುತ್ತಿದ್ದಾರೆ. ನೀವು ಅವರಿಗೆ ಶಕ್ತಿ ತುಂಬುತ್ತಿದ್ದೀರಿ" ಎಂದು ಅಂಗಡಿಯ ಮಾಲೀಕನಿಗೆ ಹೇಳುತ್ತಿರುವುದು ವಿಡಿಯೊದಲ್ಲಿ ಕೇಳಿಸುತ್ತದೆ.
ಇಲ್ಲಿ ಆ ವ್ಯಕ್ತಿ ಮಾತನಾಡಿಸುತ್ತಿರುವುದು ಕಟ್ಟಡದ ಮಾಲೀಕರಾದ ಒಬ್ಬ ಹಿಂದೂ ವ್ಯಕ್ತಿಯನ್ನು. ಆ ಕಟ್ಟಡದಲ್ಲಿ ಅಂಗಡಿ ಇಟ್ಟುಕೊಂಡಿರುವ ಬಾಡಿಗೆದಾರ ಒಬ್ಬ ಮುಸ್ಲಿಂ ವ್ಯಕ್ತಿ ಎಂಬುದು ಇಲ್ಲಿ ಗಮನಾರ್ಹ.
ಹಲವು ಕಟ್ ಗಳನ್ನು ಹೊಂದಿರುವ ಮೂರು ನಿಮಿಷ 15 ಸೆಕೆಂಡುಗಳ ಈ ವೀಡಿಯೊದಲ್ಲಿ, ಆ ವ್ಯಕ್ತಿಯು ಮುಸ್ಲಿಮರನ್ನು ಆರ್ಥಿಕವಾಗಿ ಬಹಿಷ್ಕರಿಸುವಂತೆ ಬಹಿರಂಗ ಕರೆ ನೀಡುತ್ತಾನೆ. ಅಷ್ಟೇ ಅಲ್ಲದೆ, ಮುಸ್ಲಿಂ ಪುರುಷರು ಹಿಂದೂ ಮಹಿಳೆಯರನ್ನು ಮದುವೆಯಾಗಿ ಮತಾಂತರ ಮಾಡುತ್ತಾರೆ ಎಂಬ ಹಿಂದುತ್ವ ರಾಜಕಾರಣದ ಸೃಷ್ಟಿಯಾದ 'ಲವ್ ಜಿಹಾದ್' ಆರೋಪವನ್ನು ಅವರ ಮೇಲೆ ಹೊರಿಸುತ್ತಾನೆ.
"ಯಾರಾದರೂ ಮುಸ್ಲಿಮರು ನಿಮ್ಮ ಬಳಿ ಬಂದು ಅಂಗಡಿಯನ್ನು ಬಾಡಿಗೆಗೆ ಕೇಳಿದರೆ, ಯಾವುದೇ ಕಾರಣಕ್ಕೂ ಕೊಡಬೇಡಿ. ಕಡಿಮೆ ಬಾಡಿಗೆಗಾದರೂ ಸರಿ, ಒಬ್ಬ ಹಿಂದೂ ವ್ಯಕ್ತಿಗೇ ಅಂಗಡಿಯನ್ನು ಬಾಡಿಗೆಗೆ ನೀಡಿ. ಅವರು ಅಂಗಡಿಗಳನ್ನು ಪಡೆದುಕೊಳ್ಳುವುದು ವ್ಯಾಪಾರಕ್ಕಲ್ಲ, ಜಿಹಾದ್ ಮಾಡಲು. ನೀವು ನೀಡುವ ಜಾಗದಿಂದ ಅವರಿಗೆ ಬರುವ ಹಣ 'ಲವ್ ಜಿಹಾದ್' ಮತ್ತು 'ಥೂಕ್ ಜಿಹಾದ್'ಗೆ ಬಳಕೆಯಾಗುತ್ತದೆ" ಎಂದು ಆ ವ್ಯಕ್ತಿ ವೀಡಿಯೊದಲ್ಲಿ ಹೇಳುತ್ತಿರುವುದು ಕೇಳಿಬರುತ್ತದೆ.
ಅಷ್ಟಕ್ಕೇ ನಿಲ್ಲದ ಆತ, ಈಗ ಮೂರನೇ ರೀತಿಯ ಜಿಹಾದ್ ಅಂದರೆ "ನೇಮ್ ಜಿಹಾದ್" ಎಂಬ ಹೊಸ ವಾದವನ್ನು ಮುನ್ನೆಲೆಗೆ ತರುತ್ತಾನೆ. ಅವರು ಈ ಅಂಗಡಿಗೆ 'ಆಸು' ಎಂದು ಹೆಸರಿಟ್ಟಿದ್ದಾರೆ. ಈ ಆಸು ಎಂಬುವವನು ಮುಸ್ಲಿಮನೋ ಅಲ್ವೋ ಎಂದು ನನಗೆ ತಿಳಿಯಬೇಕು ಎನ್ನುತ್ತಾ ಅಲ್ಲಿ ನಿಂತಿದ್ದ ಅಪ್ರಾಪ್ತ ವಯಸ್ಸಿನಂತೆ ಕಾಣುವ ಬಾಲಕನ ಬಳಿಗೆ ಹೋಗಿ, ಅಂಗಡಿಯ ಮಾಲೀಕನ ಹೆಸರನ್ನು ಕೇಳುತ್ತಾನೆ. ಅದಕ್ಕೆ ಆ ಬಾಲಕ, "ಮಾಲೀಕರ ಹೆಸರು ಇಹ್ಸಾನ್" ಎಂದು ಉತ್ತರಿಸುತ್ತಾನೆ.
ಈ ಫೇಸ್‌ಬುಕ್ ರೀಲ್ ಅನ್ನು ಈಗ ಸಾಮಾಜಿಕ ಜಾಲತಾಣದಿಂದ ತೆಗೆದುಹಾಕಲಾಗಿದೆ. ಆದರೆ ಮೇ 25ರವರೆಗೂ ಆ ವಿಡಿಯೊ ಫೇಸ್‌ಬುಕ್‌ನಲ್ಲಿ ಲಭ್ಯವಿತ್ತು. ಯಾರು ಬೇಕಾದರೂ ಅದನ್ನು ವೀಕ್ಷಿಸಬಹುದಾಗಿತ್ತು ಹಾಗೂ ಹಂಚಿಕೊಳ್ಳಬಹುದಾಗಿತ್ತು. ಈ ವೀಡಿಯೊ ಬರೋಬ್ಬರಿ 25 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು, 23,000 ಶೇರ್‌ಗಳು ಮತ್ತು 1.90 ಲಕ್ಷ ಲೈಕ್ ಗಳನ್ನು ಪಡೆದುಕೊಂಡಿತ್ತು.
ವೀಡಿಯೊದಲ್ಲಿ ನಿಂತು ದ್ವೇಷದ ಭಾಷಣ ಮಾಡುತ್ತಿರುವ ಈ ವ್ಯಕ್ತಿ ಮತ್ತ್ಯಾರೂ ಅಲ್ಲ, ಮುಹಮ್ಮದ್ ದೀಪಕ್ ಅವರ ಮೇಲೆ ಎರಡನೇ ಬಾರಿ ದಾಳಿ ಮಾಡಿದ ಗುಂಪಿನಲ್ಲಿದ್ದ ಎಂದು ದೂರಿನಲ್ಲಿ ಹೆಸರಿಸಲಾದ ಅದೇ ಅಮನ್ ಸ್ವೇದಿಯಾ.
ಸ್ವೇದಿಯಾ ಬಳಿ ವೀಡಿಯೊ ಚಿತ್ರೀಕರಣಕ್ಕೆ ಬೇಕಾದ ಲೈಟಿಂಗ್, ಮೈಕ್ರೋಫೋನ್‌ಗಳು ಮತ್ತು ಅತ್ಯುತ್ತಮ ಗುಣಮಟ್ಟದ ಕ್ಯಾಮೆರಾಗಳನ್ನು ಒಳಗೊಂಡ ಸಂಪೂರ್ಣ ವೃತ್ತಿಪರ ಶೂಟಿಂಗ್ ಸೆಟಪ್ ಇದೆ.
ಸ್ವೇದಿಯಾ the wire ಜತೆ ಮಾತನಾಡುವಾಗ, ತಮ್ಮ ತಂದೆ ಪತ್ರಕರ್ತರಾಗಿದ್ದು, ತಾವು ಡೆಹ್ರಾಡೂನ್‌ನ ಡಿಎವಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಪದವಿ ಮುಗಿಸಿದ ಬಳಿಕ ಕಂಪೆನಿಗಳು ಮತ್ತು ಮಳಿಗೆಗಳಿಗೆ ಬೌನ್ಸರ್‌ಗಳು ಹಾಗೂ ಭದ್ರತಾ ಸಿಬ್ಬಂದಿಯನ್ನು ಒದಗಿಸುವ ಏಜೆನ್ಸಿಯೊಂದನ್ನು ಆರಂಭಿಸಿದ್ದಾಗಿ ತಿಳಿಸಿದ್ದಾನೆ.
ಸ್ವೇದಿಯಾನ ಫೇಸ್‌ಬುಕ್ ಪ್ರೊಫೈಲ್ ನಲ್ಲಿ ‘ಡಿಜಿಟಲ್ ಕ್ರಿಯೇಟರ್’ ಎಂದು ಉಲ್ಲೇಖಿಸಲಾಗಿದೆ. ಆದರೆ, ತಮ್ಮ ಫೇಸ್‌ಬುಕ್ ವೀಡಿಯೊಗಳಿಂದ ಯಾವುದೇ ಆದಾಯ ಬರುವುದಿಲ್ಲ ಹಾಗೂ ಈ ಕೆಲಸದ ಮೂಲಕ ‘ಸಮಾಜ ಸೇವೆ’ ಮಾಡುತ್ತಿರುವುದಾಗಿ ಆತ ಸಮರ್ಥಿಸಿಕೊಂಡಿದ್ದಾನೆ. “ನಾನು ಇದನ್ನು ಹಣಕ್ಕಾಗಿ ಮಾಡುತ್ತಿಲ್ಲ” ಎಂದು ಹೇಳಿದ್ದಾನೆ.
ಈ ಪುಟದ ಮೂಲಕ ಸ್ವೇದಿಯಾ ಹಣ ಗಳಿಸುತ್ತಿಲ್ಲ ಎಂಬ ಆತನ ವಾದ ನಿಜವೇ ಎಂಬುದರ ಕುರಿತು the wire ಸಂಸ್ಥೆಯು ಫೇಸ್ ಬುಕ್ ನ ಮಾತೃಸಂಸ್ಥೆಯಾದ ಮೆಟಾವನ್ನು ಪ್ರಶ್ನಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಮೆಟಾ, ಆ ನಿರ್ದಿಷ್ಟ ಪ್ರಶ್ನೆಗೆ ನೇರ ಉತ್ತರ ನೀಡದಿದ್ದರೂ, ಇಂತಹ ಖಾತೆಗಳನ್ನು ಪರಿಶೀಲಿಸುತ್ತಿರುವುದಾಗಿ ತಿಳಿಸಿದೆ.
ಯಾವುದೇ ಆದಾಯ ಬಾರದಿದ್ದರೂ, ಉತ್ತಮ ಗುಣಮಟ್ಟದ ಧ್ವನಿ, ಕ್ಯಾಮೆರಾ ಕೆಲಸ ಮತ್ತು ಎಡಿಟಿಂಗ್ ಹೊಂದಿರುವ ವೀಡಿಯೊಗಳನ್ನು ಹೇಗೆ ನಿರ್ಮಿಸುತ್ತೀರಿ ಎಂದು ಕೇಳಿದಾಗ, “ನಮ್ಮ ಬಜರಂಗದಳದ ನಿಷ್ಠಾವಂತ ಕಾರ್ಯಕರ್ತರೇ ಈ ವೀಡಿಯೊಗಳನ್ನು ರೆಕಾರ್ಡ್ ಮತ್ತು ಎಡಿಟ್ ಮಾಡಿಕೊಡುತ್ತಾರೆ” ಎಂದು ಉತ್ತರಿಸಿದ್ದಾನೆ.
ತಮ್ಮ ಕೃತ್ಯಗಳು ದ್ವೇಷದ ಭಾಷಣದ ವ್ಯಾಪ್ತಿಗೆ ಬರುತ್ತವೆ ಎಂಬ ಆತಂಕ ಇಲ್ಲವೇ? ಇಡೀ ಮುಸ್ಲಿಂ ಸಮುದಾಯವನ್ನು ವ್ಯವಸ್ಥಿತವಾಗಿ ನಿಂದಿಸುತ್ತಿದ್ದೇವೆ ಎಂಬ ಅರಿವು ಇದೆಯೇ? ಎಂಬ ಪ್ರಶ್ನೆಗೆ ಆತ, “ಎಲ್ಲಾ ಮುಸ್ಲಿಮರೂ ಭಯೋತ್ಪಾದಕರಲ್ಲ. ಆದರೆ ಎಲ್ಲಾ ಭಯೋತ್ಪಾದಕರೂ ಮುಸ್ಲಿಮರೇ ಏಕೆ ಆಗಿರುತ್ತಾರೆ?” ಎಂದು ಮರುಪ್ರಶ್ನೆ ಹಾಕಿದ್ದಾನೆ.
“ಉತ್ತರಾಖಂಡದ ಇತಿಹಾಸವನ್ನು ಬದಲಾಯಿಸುವ ಪಿತೂರಿ ನಡೆಯುತ್ತಿದೆ.” ‘ಇತಿಹಾಸ’ ಎಂದರೆ ಜನಸಂಖ್ಯಾ ಸ್ವರೂಪದ ಬದಲಾವಣೆಯ ಬಗ್ಗೆ ಮಾತನಾಡುತ್ತಿದ್ದೀರಾ ಎಂದು ಕೇಳಿದಾಗ, “ಹೌದು, ಉತ್ತರಾಖಂಡದ ಜನಸಂಖ್ಯಾ ಸ್ವರೂಪದ ಬದಲಾವಣೆಯೇ” ಎಂದು ಆತ ಉತ್ತರಿಸಿದ್ದಾನೆ.
ಸ್ವೇದಿಯಾ ನ ವೈಯಕ್ತಿಕ ಫೇಸ್‌ಬುಕ್ ಖಾತೆಯು ‘ಡೆಹ್ರಾಡೂನ್ ಎಕ್ಸ್‌ಕ್ಲೂಸಿವ್ಸ್’ ಎಂಬ ಮತ್ತೊಂದು ಫೇಸ್‌ಬುಕ್ ಪುಟದ ಪೋಸ್ಟ್ ಗಳಿಂದ ತುಂಬಿದೆ. ಇದೇ ಪುಟದಲ್ಲಿ ಸ್ವೇದಿಯಾ ಮುಸ್ಲಿಮರಿಗೆ ಕಿರುಕುಳ ನೀಡುವ ಹಾಗೂ ದ್ವೇಷದ ಭಾಷಣ ಮಾಡುವ ವಿಡಿಯೊಗಳನ್ನು ಪೋಸ್ಟ್ ಮಾಡುತ್ತಾನೆ. ಈ ಪುಟಕ್ಕೆ 3.89 ಲಕ್ಷಕ್ಕೂ ಹೆಚ್ಚು ಫಾಲೋವರ್ ಗಳಿದ್ದಾರೆ.
ಈ ಪೇಜ್‌ನ ಪ್ರೊಫೈಲ್ ಚಿತ್ರವು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ಸೃಷ್ಟಿಸಿದಂತಿದ್ದು, ಅದರಲ್ಲಿ ಹನುಮಂತನು ಗದೆಯನ್ನು ಹಿಡಿದಿರುವ ಚಿತ್ರವಿದೆ. ಕವರ್ ಫೋಟೋದಲ್ಲಿ ವ್ಯಕ್ತಿಯೊಬ್ಬ ಹಸುವಿಗೆ ಮೇವು ಉಣಿಸುತ್ತಿರುವ ಚಿತ್ರವಿದ್ದು, “ಗೋ ಸೇವೆ. ಆಹಾರ ನೀಡಿ, ರಕ್ಷಿಸಿ, ಗೌರವಿಸಿ. ಗೋ ಕಲ್ಯಾಣಕ್ಕಾಗಿ ನಮ್ಮೊಂದಿಗೆ ಕೈಜೋಡಿಸಿ” ಎಂಬ ಬರಹವಿದೆ.
ಆ ಪೇಜ್‌ನ ಪರಿಚಯದಲ್ಲಿ, “ಬಜರಂಗಿ ಡೆಹ್ರಾಡೂನ್ ಕಾರ್ಯಪ್ರವೃತ್ತವಾಗಿದೆ. ಧರ್ಮ ರಕ್ಷಣೆಯ ಕಡೆಗಿನ ಭಕ್ತಿ, ಶಿಸ್ತು ಮತ್ತು ಸಮರ್ಪಣಾಭಾವದ ಪ್ರಭಾವಶಾಲಿ ಝಲಕ್” ಎಂದು ಬರೆಯಲಾಗಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಆಡಳಿತಾರೂಢ ಬಿಜೆಪಿಯೊಂದಿಗೆ ನಿಕಟ ಸಂಪರ್ಕ ಹೊಂದಿರುವ ವಿಶ್ವ ಹಿಂದೂ ಪರಿಷತ್ ನ ಯುವ ಘಟಕವಾದ ಬಜರಂಗದಳದ ಸದಸ್ಯ ತಾನು ಎಂದು ಹೇಳಿಕೊಳ್ಳಲು ಅಮನ್ ಸ್ವೇದಿಯಾಗೆ ಯಾವುದೇ ಹಿಂಜರಿಕೆಯಿಲ್ಲ. ಆದರೆ, ಸ್ವೇದಿಯಾ ನಂತಹ ವ್ಯಕ್ತಿಗಳ ಪಾತ್ರದ ಕುರಿತು the wire ಕೇಳಿದ ಪ್ರಶ್ನೆಗಳಿಗೆ ವಿಎಚ್‌ಪಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
“ನಮ್ಮ ಬಳಿ ಮಾಹಿತಿದಾರರಾಗಿ ಕೆಲಸ ಮಾಡುವ ಬಜರಂಗದಳದ ಸದಸ್ಯರ ದೊಡ್ಡ ಜಾಲವೇ ಇದೆ. ಅಷ್ಟೇ ಅಲ್ಲದೆ, ನಾವು ಪ್ರತಿ ಪ್ರಕರಣದಲ್ಲೂ ಪೊಲೀಸರೊಂದಿಗೆ ಸಮನ್ವಯ ಸಾಧಿಸುತ್ತೇವೆ” ಎಂದು ಸ್ವೇದಿಯಾ the wire ಗೆ ತಿಳಿಸಿದ್ದಾನೆ.
ಇಂತಹ ಪ್ರಕರಣಗಳತ್ತ ತಮಗೆ ದಾರಿ ತೋರಿಸಲು ಪೊಲೀಸರೇ ಸ್ವೇದಿಯಾ ಜೊತೆ ಸೇರಿ ಕೆಲಸ ಮಾಡುತ್ತಾರೆಯೇ ಎಂಬ ಪ್ರಶ್ನೆಗೆ ಡೆಹ್ರಾಡೂನ್ ಪೊಲೀಸರು ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಮುಹಮ್ಮದ್ ದೀಪಕ್ ಮೇಲಿನ ದಾಳಿ ಪ್ರಕರಣ
ಉತ್ತರಾಖಂಡದಲ್ಲಿ ಈಗಾಗಲೇ ಸಾಕಷ್ಟು ಪರಿಚಿತನಾಗಿದ್ದ ಸ್ವೇದಿಯಾ, ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದು ಮುಹಮ್ಮದ್ ದೀಪಕ್ ಮೇಲಿನ ದಾಳಿ ಪ್ರಕರಣದ ಮೂಲಕ.
ಈ ಘಟನೆಗೆ ಸಂಬಂಧಿಸಿದ ಎಫ್‌ಐಆರ್ ಪ್ರತಿಯನ್ನು the wire ಪರಿಶೀಲಿಸಿದ್ದು, ಅದರಲ್ಲಿ ಸ್ವೇದಿಯಾ ಅಥವಾ ದೀಪಕ್ ಹೆಸರಿಸಿದ್ದ ಯಾವುದೇ ವ್ಯಕ್ತಿಗಳ ಹೆಸರನ್ನು ಉಲ್ಲೇಖಿಸಲಾಗಿಲ್ಲ. ಆದರೆ, ದೂರಿನಲ್ಲಿ ಹೆಸರಿಸಲಾದ ಅದೇ ವ್ಯಕ್ತಿಗಳು ದೀಪಕ್ ಕುಮಾರ್ ಅವರ ಮೇಲೆ ದಾಳಿ ಮಾಡಲು ನುಗ್ಗಿದ್ದ ಉದ್ರಿಕ್ತ ಗುಂಪಿನಲ್ಲಿ ಇದ್ದದ್ದು ಹಲವು ವಿಡಿಯೊಗಳಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ.
ಪೊಲೀಸರು ಈ ಅಪರಿಚಿತ ವ್ಯಕ್ತಿಗಳ ವಿರುದ್ಧ, ಉದ್ಯೋಗ ಅಥವಾ ವ್ಯವಹಾರಕ್ಕೆ ಧಕ್ಕೆ ತರುವಂತೆ ವ್ಯಕ್ತಿಯೊಬ್ಬನಿಗೆ ಕಿರುಕುಳ ನೀಡಿದ್ದಕ್ಕಾಗಿ ಕ್ರಿಮಿನಲ್ ಕಾನೂನು ತಿದ್ದುಪಡಿ ಕಾಯ್ದೆ–1932ರ ಸೆಕ್ಷನ್ 7ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದರೊಂದಿಗೆ, ಕರ್ತವ್ಯ ನಿರತ ಸಾರ್ವಜನಿಕ ಸೇವಕನಿಗೆ ಉದ್ದೇಶಪೂರ್ವಕವಾಗಿ ತೀವ್ರ ಗಾಯಗೊಳಿಸಿದ್ದಕ್ಕಾಗಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 121(2), ಅಕ್ರಮ ತಡೆಗಾಗಿ ಸೆಕ್ಷನ್ 126(2), ದಂಗೆಗಾಗಿ ಸೆಕ್ಷನ್ 191(2), ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿದ್ದಕ್ಕಾಗಿ ಸೆಕ್ಷನ್ 196(2) ಮತ್ತು ಶಾಂತಿ ಭಂಗ ಉಂಟುಮಾಡುವ ಉದ್ದೇಶದಿಂದ ಸಾರ್ವಜನಿಕವಾಗಿ ನಿಂದಿಸಿದ್ದಕ್ಕಾಗಿ ಸೆಕ್ಷನ್ 352ರ ಅಡಿಯಲ್ಲಿಯೂ ಮೊಕದ್ದಮೆ ಹೂಡಲಾಗಿದೆ.
ದೀಪಕ್ ಕುಮಾರ್ ಅವರ ಮೇಲೆ ದಾಳಿ ನಡೆಸಿದ ಗುಂಪಿನಲ್ಲಿದ್ದ ಮತ್ತು ತಾವು ಬಜರಂಗದಳದೊಂದಿಗೆ ಗುರುತಿಸಿಕೊಂಡಿರುವುದಾಗಿ ಹೇಳಿಕೊಳ್ಳುವ ಕನಿಷ್ಠ ನಾಲ್ವರು ವ್ಯಕ್ತಿಗಳು ಇಂದಿಗೂ ‘ಡೆಹ್ರಾಡೂನ್ ಎಕ್ಸ್‌ಕ್ಲೂಸಿವ್ಸ್’ನಂತಹ ಫೇಸ್‌ಬುಕ್ ಪುಟಗಳಲ್ಲಿ ಮುಸ್ಲಿಂ ವಿರೋಧಿ ದ್ವೇಷದ ಭಾಷಣಗಳನ್ನು ಹರಡುವುದನ್ನು ಮುಂದುವರಿಸಿದ್ದಾರೆ.
ಈ ‘ಡೆಹ್ರಾಡೂನ್ ಎಕ್ಸ್‌ಕ್ಲೂಸಿವ್ಸ್’ ವಿಡಿಯೊಗಳಲ್ಲಿ ಪದೇ ಪದೇ ಕಾಣಿಸಿಕೊಳ್ಳುವವರಲ್ಲಿ ಸಿದ್ಧಾಂತ್ ಬದೋನಿ ಕೂಡ ಒಬ್ಬ.
ಬದೋನಿ ಮತ್ತು ‘ಡೆಹ್ರಾಡೂನ್ ಎಕ್ಸ್‌ಕ್ಲೂಸಿವ್ಸ್’ ಜಂಟಿಯಾಗಿ ಪೋಸ್ಟ್ ಮಾಡಿರುವ ವಿಡಿಯೊವೊಂದರಲ್ಲಿ, ಬದೋನಿ ಮತ್ತು ಅಮನ್ ಸ್ವೇದಿಯಾ ತಮ್ಮ ಉದ್ರಿಕ್ತ ಗುಂಪಿನೊಂದಿಗೆ ಮನೆಯೊಂದರ ಬಾಗಿಲು ತಟ್ಟುತ್ತಿರುವುದು ಕಾಣಿಸುತ್ತದೆ. ಆಗ ಮನೆಯಿಂದ ಒಬ್ಬ ವ್ಯಕ್ತಿ ಮತ್ತು ವೃದ್ಧ ಮಹಿಳೆಯೊಬ್ಬರು ಹೊರಬರುತ್ತಾರೆ. ತಕ್ಷಣ ಆ ಗುಂಪಿನಲ್ಲಿದ್ದವರು, “ನೀವು ಮುಸ್ಲಿಂ ವ್ಯಕ್ತಿಯೊಬ್ಬನಿಗೆ ಏಕೆ ಅಂಗಡಿಯನ್ನು ಬಾಡಿಗೆಗೆ ನೀಡಿದ್ದೀರಿ?” ಎಂದು ಪ್ರಶ್ನಿಸುತ್ತಾರೆ.
ಅದಕ್ಕೆ ಆ ಮನೆ ಮಾಲೀಕ, “ಇದು ನನ್ನ ಆಸ್ತಿ. ನಾನು ಯಾರಿಗೆ ಬೇಕಾದರೂ ಬಾಡಿಗೆಗೆ ಕೊಡುತ್ತೇನೆ” ಎಂದು ಉತ್ತರಿಸುತ್ತಾರೆ. ಇದನ್ನು ಕೇಳಿ ಕೆರಳುವ ಗುಂಪಿನ ಸದಸ್ಯರು, ಮುಸ್ಲಿಮರಿಗೆ ತಮ್ಮ ಆಸ್ತಿಯನ್ನು ಬಾಡಿಗೆಗೆ ನೀಡುವ ಹಿಂದೂಗಳು “ದೇಶದ್ರೋಹಿಗಳು” ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.
*ವ್ಯವಸ್ಥಿತ ಪ್ರವೃತ್ತಿಯ ಒಂದು ಭಾಗ
ಟಿ. ರಾಜಾ ಸಿಂಗ್ ಮತ್ತು ಮೋನು ಮಾನೇಸರ್ ಅವರಂತಹ ವ್ಯಕ್ತಿಗಳಿಗೆ ವ್ಯಾಪಕ ಪ್ರಚಾರ ಮತ್ತು ಖ್ಯಾತಿ ತಂದುಕೊಟ್ಟ ‘ಗೋ ರಕ್ಷಣೆ’ ಹೆಸರಿನ ಕಾನೂನು ಕೈಗೆತ್ತಿಕೊಳ್ಳುವ ಪ್ರವೃತ್ತಿ ಈಗ ಮತ್ತೊಂದು ಹಂತಕ್ಕೆ ತಲುಪಿದೆ. ಪ್ರಸ್ತುತ ಹಿಂದುತ್ವ ಸಂಘಟನೆಗಳ ಇಂತಹ ಹಸ್ತಕ್ಷೇಪಗಳು ಮುಸ್ಲಿಂ ಸಮುದಾಯದ ವ್ಯಾಪಾರ ಮುಂಗಟ್ಟುಗಳ ಮೇಲೆ ದಾಳಿ ಮಾಡುವುದು, ಹೋಟೆಲ್ ಗಳಲ್ಲಿ ತಂಗಿರುವ ಮುಸ್ಲಿಮರನ್ನು ಗುರಿಯಾಗಿಸುವುದು ಮತ್ತು ಮದರಸಾಗಳಿಗೆ ಹೋಗುವ ಮಕ್ಕಳನ್ನು ಬೆದರಿಸುವ ಮಟ್ಟಿಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿವೆ.
ಈ ರೀತಿಯ ಕೃತ್ಯಗಳನ್ನು ಎಸಗುವಾಗ ವಿಡಿಯೊ ಚಿತ್ರೀಕರಣ ಮಾಡುವುದು ಮತ್ತು ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಲಕ್ಷಾಂತರ ವೀಕ್ಷಣೆಗಳ ಮೂಲಕ ಹಣ ಗಳಿಸುವುದು, ಬಜರಂಗದಳದಂತಹ ಸಂಘಟನೆಗಳಲ್ಲಿ ವೇಗವಾಗಿ ಮೇಲಿನ ಹುದ್ದೆಗಳಿಗೆ ಏರಲು ಒಂದು ಸುಲಭ ಮಾರ್ಗವಾಗಿ ಮಾರ್ಪಟ್ಟಿದೆ.
ವಿಎಚ್‌ಪಿ ಸಂಘಟನೆಯು ಇಂತಹ ಕೃತ್ಯಗಳನ್ನು ಬೆಂಬಲಿಸುತ್ತದೆಯೇ ಎಂದು The Wire ಪ್ರಶ್ನಿಸಿದೆ. ಆದರೆ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ವರದಿ ಹೇಳಿದೆ.
ಇತ್ತೀಚಿನ ಕೆಲವು ಉದಾಹರಣೆಗಳು ಈ ವ್ಯವಸ್ಥಿತ ಪ್ರವೃತ್ತಿಗೆ ಸಾಕ್ಷ್ಯ ಒದಗಿಸುತ್ತವೆ. ಪೂರ್ಣಾವಧಿ ಉದ್ಯೋಗದಂತೆ ಇಂತಹ ದಾಳಿಗಳಲ್ಲಿ ತೊಡಗಿಸಿಕೊಂಡಿದ್ದ ರವೀಂದ್ರ ನೇಗಿ ಎಂಬವರು ಇಂದು ಬಿಜೆಪಿ ಶಾಸಕರಾಗಿದ್ದಾರೆ. ಮುಸ್ಲಿಂ ವ್ಯಾಪಾರಿಗಳು ತಮ್ಮ ಅಂಗಡಿಗಳ ಮೇಲೆ ಕಡ್ಡಾಯವಾಗಿ ಮಾಲೀಕರ ಹೆಸರುಗಳನ್ನು ಪ್ರದರ್ಶಿಸುವಂತೆ ಒತ್ತಾಯಿಸುವುದು ಮತ್ತು ನವರಾತ್ರಿಯ ಸಂದರ್ಭದಲ್ಲಿ ಮುಸ್ಲಿಂ ವ್ಯಾಪಾರಿಗಳ ಮಾಂಸದ ಅಂಗಡಿಗಳನ್ನು ಮುಚ್ಚಿಸುವಂತೆ ಬೆದರಿಸುವ ಮೂಲಕ ನೇಗಿ ಈ ಭಾಗದಲ್ಲಿ ಕುಖ್ಯಾತಿ ಗಳಿಸಿದ್ದರು.
ನೇಗಿ ಅವರ ಬಹುತೇಕ ವಿಡಿಯೊಗಳಲ್ಲಿ ಅವರು ಮೈಕ್ರೋಫೋನ್ ಹಿಡಿದು ಕ್ಯಾಮೆರಾದ ಮುಂಭಾಗದಲ್ಲಿ ಮುನ್ನಡೆಯುತ್ತಿರುವುದು ಕಾಣಿಸುತ್ತದೆ. ಅಂತಹ ಒಂದು ವಿಡಿಯೊದಲ್ಲಿ, ಅವರು ಮೋನು ಎಂಬ ಮುಸ್ಲಿಂ ವ್ಯಾಪಾರಿಗೆ ಕಿರುಕುಳ ನೀಡಿ, ಅಂಗಡಿಯ ನಾಮಫಲಕದ ಮೇಲೆ ತನ್ನ ಪೂರ್ಣ ಹೆಸರು ‘ಮೋನು ಖಾನ್’ ಎಂದು ಬರೆಯುವಂತೆ ಒತ್ತಾಯಿಸುತ್ತಾರೆ.
ಇದೇ ರವೀಂದ್ರ ನೇಗಿ 2025ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
2024ರಲ್ಲಿ ಪಶ್ಚಿಮ ಉತ್ತರ ಪ್ರದೇಶದಾದ್ಯಂತ ವ್ಯಾಪಾರಿಗಳು ತಮ್ಮ ಧಾರ್ಮಿಕ ಗುರುತನ್ನು ಬಹಿರಂಗಪಡಿಸಲು ಅಂಗಡಿಗಳ ಮೇಲೆ ತಮ್ಮ ಹೆಸರುಗಳನ್ನು ಕಡ್ಡಾಯವಾಗಿ ಬರೆಯಬೇಕು ಎಂದು ಉತ್ತರ ಪ್ರದೇಶ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ನಂತರ ಸುಪ್ರೀಂ ಕೋರ್ಟ್ ಈ ಆದೇಶಕ್ಕೆ ತಡೆಯಾಜ್ಞೆ ನೀಡಿತು.
ಇಂತಹ ಪೂರ್ವಾಗ್ರಹ ಪೀಡಿತ ಆಲೋಚನೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ‘ಮೀಮ್ಸ್’ಗಳು ಮತ್ತಷ್ಟು ಪುಷ್ಟಿ ನೀಡುತ್ತಿವೆ.
ಇಂದು ಇಂಟರ್ನೆಟ್ ಜಗತ್ತಿನಲ್ಲಿ ದ್ವೇಷದ ಕಂಟೆಂಟ್‌ಗಳನ್ನು ಅಪ್‌ಲೋಡ್ ಮಾಡುವ ಮೂಲಕವೇ ತಮ್ಮದೇ ಆದ ದೊಡ್ಡ ಫಾಲೋವರ್ ಬಳಗವನ್ನು ನಿರ್ಮಿಸಿಕೊಂಡಿರುವ ರವೀಂದ್ರ ನೇಗಿ ಅವರಂತಹ ಹತ್ತಾರು ವ್ಯಕ್ತಿಗಳು ಸಮಾಜದಲ್ಲಿ ಸಕ್ರಿಯರಾಗಿದ್ದಾರೆ.
ಇದಕ್ಕೆ ಮತ್ತೊಂದು ಉದಾಹರಣೆಯೆಂದರೆ, ಇನ್‌ಸ್ಟಾಗ್ರಾಮ್‌ನಲ್ಲಿ ಸಕ್ರಿಯನಾಗಿರುವ ಬಾಬಿ ಚೌಧರಿ ಎಂಬ ವ್ಯಕ್ತಿ. ಈತ ಮುಸ್ಲಿಂ ಜನರಿಗೆ ಕಿರುಕುಳ ನೀಡುವುದನ್ನು ತಾನೇ ಸ್ವತಃ ವಿಡಿಯೊ ರೆಕಾರ್ಡ್ ಮಾಡಿಕೊಳ್ಳುತ್ತಿರುತ್ತಾನೆ. ಉತ್ತರ ಪ್ರದೇಶದ ಫತೇಪುರ್ ಸಿಕ್ರಿಯಲ್ಲಿ ಚಿತ್ರೀಕರಿಸಲಾಗಿದೆ ಎನ್ನಲಾದ ಇಂತಹದ್ದೇ ಒಂದು ವಿಡಿಯೊದಲ್ಲಿ, ಹಿಂದೂಗಳ ಒಂದು ವರ್ಗವು ಪವಿತ್ರವೆಂದು ಭಾವಿಸುವ ಮಂಗಳವಾರದ ದಿನದಂದು ಬಿರಿಯಾನಿ ಮಾರಾಟ ಮಾಡುತ್ತಿದ್ದ ಮುಸ್ಲಿಂ ವ್ಯಾಪಾರಿಯೊಬ್ಬನಿಗೆ ಈತ ಬಹಿರಂಗವಾಗಿ ಬೆದರಿಕೆ ಹಾಕುತ್ತಿರುವುದು ಕಾಣಿಸುತ್ತದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಈತನಿಗೆ 50,000ಕ್ಕೂ ಹೆಚ್ಚು ಫಾಲೋವರ್ ಗಳಿದ್ದು, ಈಗಾಗಲೇ 573ಕ್ಕೂ ಹೆಚ್ಚು ಪೋಸ್ಟ್ ಗಳನ್ನು ಪ್ರಕಟಿಸಿದ್ದಾನೆ. ಆತನ ಪ್ರೊಫೈಲ್ ಪರಿಚಯದಲ್ಲಿ “ಗೋವು ಸೇವಾ ಪರಮೋ ಧರ್ಮಃ” (ಗೋ ಸೇವೆಯೇ ಅತ್ಯುನ್ನತ ಧರ್ಮ) ಮತ್ತು “ಪೇಯ್ಡ್ ಪ್ರಮೋಷನ್‌ಗಳಿಗಾಗಿ DM ಮಾಡಿ” ಎಂದು ಬರೆಯಲಾಗಿದೆ.
ದ್ವೇಷದ ಮೂಲಕವೇ ಜೀವನೋಪಾಯ ಕಂಡುಕೊಳ್ಳುವ ಬಾಬಿಯ ಈ ಮಾದರಿಯು, ಇನ್‌ಸ್ಟಾಗ್ರಾಮ್ ನಲ್ಲಿ 33 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ದಕ್ಷ್ ಚೌಧರಿ ಎಂಬಾತನ ವಿಷಯದಲ್ಲಿ ಭಾರಿ ಯಶಸ್ಸು ಕಂಡಿದೆ. ತನ್ನ ಖಾತೆ ರದ್ದಾಗುವುದನ್ನು ತಪ್ಪಿಸುವ ಮುನ್ನೆಚ್ಚರಿಕೆಯಾಗಿ, ಈತ ಹಿಂಸಾತ್ಮಕ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದ ಬಳಿಕ ಅವುಗಳನ್ನು ಅಳಿಸುತ್ತಿರುತ್ತಾನೆ.
ಆತನ ಖಾತೆಯಲ್ಲಿ ಇಂದಿಗೂ ಉಳಿದುಕೊಂಡಿರುವ ವೈರಲ್ ವಿಡಿಯೊವೊಂದರಲ್ಲಿ, ಅಪ್ರಾಪ್ತ ವಯಸ್ಸಿನ ಹಿಂದೂ ಹುಡುಗಿಯೊಂದಿಗೆ ಸಂಬಂಧ ಹೊಂದಿದ್ದ ಎನ್ನುವ ಕಾರಣಕ್ಕೆ ಇಮ್ರಾನ್ ಎಂಬ ಮುಸ್ಲಿಂ ವ್ಯಕ್ತಿಗೆ ಆತ ಮನಬಂದಂತೆ ಥಳಿಸುತ್ತಿರುವುದು ಕಾಣಿಸುತ್ತದೆ. ಈತನ ಪರಿಚಯದಲ್ಲಿಯೂ ‘ಡಿಜಿಟಲ್ ಕ್ರಿಯೇಟರ್’ ಎಂದೇ ಉಲ್ಲೇಖಿಸಲಾಗಿದೆ.
ಈ ಎಲ್ಲಾ ವಿಡಿಯೊಗಳು ಕೇವಲ ಅವುಗಳ ಉತ್ತಮ ಗುಣಮಟ್ಟ ಅಥವಾ ಅವುಗಳನ್ನು ಅಪ್‌ಲೋಡ್ ಮಾಡುವ ನಿರಂತರತೆಯಿಂದ ಮಾತ್ರವಲ್ಲ, ಇಂತಹ ಕೃತ್ಯಗಳನ್ನು ಎಸಗುವಾಗ ಅವರು ಪ್ರದರ್ಶಿಸುವ ಯಾವುದೇ ಕಾನೂನಿನ ಭಯವಿಲ್ಲದ ಧೋರಣೆಯಿಂದಾಗಿ ಗಮನ ಸೆಳೆಯುತ್ತವೆ. ಈ ವಿಡಿಯೊಗಳನ್ನು ಯಾವುದೇ ರಹಸ್ಯ ಟೆಲಿಗ್ರಾಮ್ ಗುಂಪುಗಳಲ್ಲಿ ಬಚ್ಚಿಡಲಾಗಿಲ್ಲ. ಬದಲಿಗೆ, ಫೇಸ್‌ಬುಕ್‌ನಂತಹ ಸಾರ್ವಜನಿಕ ವೇದಿಕೆಗಳಲ್ಲಿ ಮುಕ್ತವಾಗಿ ಪೋಸ್ಟ್ ಮಾಡಲಾಗುತ್ತಿದೆ.
ಇವು ಸಾರ್ವಜನಿಕರ ಸಮ್ಮುಖದಲ್ಲೇ ಹಾಗೂ ಪೊಲೀಸರ ಕಣ್ಣೆದುರೇ ಚಿತ್ರೀಕರಣಗೊಂಡು ಲಕ್ಷಾಂತರ ವೀಕ್ಷಣೆಗಳನ್ನು ಪಡೆಯುತ್ತಿವೆ. ಈ ಕುರಿತು the wire ಕೇಳಿದ ಪ್ರಶ್ನೆಗಳಿಗೆ ಡೆಹ್ರಾಡೂನ್ ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ಹಿಂದೆ ಸಮಾಜದಲ್ಲಿ ಅಕಸ್ಮಾತ್ತಾಗಿ ನಡೆಯುತ್ತಿದ್ದ ಹಿಂಸಾಚಾರಗಳನ್ನು ವಿಡಿಯೊ ಮಾಡಿ ಹರಡಲಾಗುತ್ತಿತ್ತು. ಆದರೆ ಇತ್ತೀಚಿನ ವಿಡಿಯೊಗಳಲ್ಲಿ ಕಂಡುಬರುತ್ತಿರುವ ಹಿಂಸಾಚಾರಗಳು ಮೊದಲೇ ಯೋಜಿತವಾಗಿರುತ್ತವೆ ಎಂಬುದು ಹಿಂದಿನ ಪ್ರವೃತ್ತಿ ಮತ್ತು ಇಂದಿನ ಪ್ರವೃತ್ತಿಯ ನಡುವಿನ ಪ್ರಮುಖ ವ್ಯತ್ಯಾಸವಾಗಿದೆ.
ಮೇ 14, 2026ರಂದು ಅಮನ್ ಸ್ವೇದಿಯಾ ಮತ್ತು ಆತನ ಸಹಚರರು ಮನೆಯೊಂದಕ್ಕೆ ನುಗ್ಗಿ, ಮುಹಮ್ಮದ್ ಜಾಫರ್ ಎಂಬ ಮುಸ್ಲಿಂ ವ್ಯಕ್ತಿಯು “ರಾಜ್ ಕುಮಾರ್ ಮಲಿಕ್” ಎಂಬ ಹೆಸರನ್ನು ಬಳಸಿಕೊಂಡು ತನ್ನ ಗುರುತನ್ನು ಮರೆಮಾಚುತ್ತಿದ್ದಾನೆ ಎಂದು ಆರೋಪಿಸುವ ವಿಡಿಯೊವನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ.
ಆ ಮನೆಯ ಮಾಲೀಕನನ್ನು ಪ್ರಶ್ನಿಸುವ ಸ್ವೇದಿಯಾ, “ಈತನ ಹೆಸರು ರಾಜ್ ಕುಮಾರ್ ಮಲಿಕ್ ಅಲ್ಲ, ಮುಹಮ್ಮದ್ ಜಾಫರ್ ಎಂಬುದು ನಿಮಗೆ ಗೊತ್ತೇ?” ಎಂದು ಕೇಳುತ್ತಾನೆ.
ಹಣೆಯ ಮೇಲಿನ ತಿಲಕದಿಂದ ಹಿಂದೂವಿನಂತೆ ಕಾಣುವ ಮನೆ ಮಾಲೀಕ, “ಅದಕ್ಕೇನಂತೆ? ಇದು ನನ್ನ ಮನೆ. ನಾನು ಯಾರಿಗೆ ಬಾಡಿಗೆ ಕೊಡಬೇಕು ಎಂಬುದನ್ನು ನಾನೇ ನಿರ್ಧರಿಸುತ್ತೇನೆ. ನನಗೆ ಹೇಳಲು ನೀನು ಯಾರು?” ಎಂದು ತಿರುಗೇಟು ನೀಡುತ್ತಾರೆ.
ಆಗ ಸ್ವೇದಿಯಾ ತಕ್ಷಣವೇ ತನ್ನ ವಾದವನ್ನು ಬದಲಾಯಿಸಿ, ಆ ವ್ಯಕ್ತಿ “ಬಾಂಗ್ಲಾದೇಶದಿಂದ ಬಂದಿದ್ದಾನೆ” ಎಂದು ಮತ್ತೊಂದು ಆರೋಪ ಹೊರಿಸುತ್ತಾನೆ. ಆಗಲೂ ಧೃತಿಗೆಡದ ಮನೆ ಮಾಲೀಕ, ಅದಕ್ಕೆ ಸೂಕ್ತ ಪುರಾವೆ ನೀಡುವಂತೆ ಸ್ವೇದಿಯಾನನ್ನು ಒತ್ತಾಯಿಸುತ್ತಾರೆ.
ಸಿದ್ಧಾಂತ್ ಬದೋನಿ ಕೂಡ ಕಾಣಿಸಿಕೊಂಡಿರುವ ಈ ವಿಡಿಯೊ ಈಗಾಗಲೇ 4.6 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.
ಮೇ 10ರಂದು ಸ್ವೇದಿಯಾ ಮತ್ತೊಂದು ವಿಡಿಯೊವನ್ನು ಅಪ್‌ಲೋಡ್ ಮಾಡಿದ್ದ. ಅದರಲ್ಲಿ ಆತ ಪೊಲೀಸರ ಸಮ್ಮುಖದಲ್ಲೇ ಹಿಂಸಾಚಾರ ನಡೆಸುವುದಾಗಿ ಬಹಿರಂಗ ಎಚ್ಚರಿಕೆ ನೀಡುತ್ತಿರುವುದು ಕಾಣಿಸುತ್ತದೆ.
ಮಾರುಕಟ್ಟೆ ಪ್ರದೇಶವೊಂದರಲ್ಲಿ ನಿಂತು, “ಇದು ಹಿಂದೂಗಳ ಪ್ರದೇಶ. ಈ ಅಂಗಡಿಗಳನ್ನು ನಾಳೆಯೊಳಗೆ ಖಾಲಿ ಮಾಡದಿದ್ದರೆ, ಬಜರಂಗದಳದ ಕಾರ್ಯಕರ್ತರು ಈ ಅಂಗಡಿಗಳನ್ನು ಧ್ವಂಸಗೊಳಿಸಲಿದ್ದಾರೆ” ಎಂದು ಬೆದರಿಕೆ ಹಾಕುತ್ತಾನೆ.
ಹಿಂಸಾಚಾರದ ಬೆದರಿಕೆ ಹಾಕುತ್ತಿದ್ದ ಗುಂಪಿನ ವಿರುದ್ಧ ಕ್ರಮ ಕೈಗೊಳ್ಳುವ ಬದಲಿಗೆ, ಅಲ್ಲಿದ್ದ ಪೊಲೀಸ್ ಸಿಬ್ಬಂದಿಯೇ ಸ್ವತಃ ಮುಂದಾಗಿ ಯುನಿಸೆಕ್ಸ್ ಸಲೂನ್ ಒಂದರ ಶಟರ್‌ಗಳನ್ನು ಕೆಳಗಿಳಿಸಿ ಮುಚ್ಚಿಸುತ್ತಿರುವುದು ವಿಡಿಯೊದಲ್ಲಿ ಕಂಡುಬರುತ್ತದೆ.
ಈ ವಿಡಿಯೊಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಕೋರಿ the wire ಸಂಸ್ಥೆಯು ಡೆಹ್ರಾಡೂನ್ ಪೊಲೀಸರನ್ನು ಸಂಪರ್ಕಿಸಿದ್ದರೂ ಉತ್ತರ ಬಂದಿಲ್ಲ.
‘ಡೆಹ್ರಾಡೂನ್ ಎಕ್ಸ್‌ಕ್ಲೂಸಿವ್ಸ್’ ಪುಟದಲ್ಲಿ ಅಪ್‌ಲೋಡ್ ಮಾಡಲಾಗಿರುವ ಇಂತಹ ಹತ್ತಾರು ವಿಡಿಯೊಗಳಲ್ಲಿ ಇದೇ ರೀತಿಯ ವ್ಯವಸ್ಥಿತ ಮಾದರಿಯು ಪದೇ ಪದೇ ಪುನರಾವರ್ತನೆಯಾಗುತ್ತಿರುವುದು ಕಂಡುಬರುತ್ತದೆ.
ಮೇ 8ರಂದು ಪೋಸ್ಟ್ ಮಾಡಲಾದ ಮತ್ತೊಂದು ವಿಡಿಯೊದಲ್ಲಿ, ಮುಸ್ಲಿಮರು ಹಿಂದೂ ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿದ್ದಾರೆ ಎಂದು ಅಮನ್ ಸ್ವೇದಿಯಾ ಮತ್ತು ಆತನ ಸಹಚರರು ಆರೋಪಿಸುತ್ತಾರೆ. ಈ ಘಟನೆಯನ್ನು ಬಳಸಿಕೊಂಡು ಮುಸ್ಲಿಮರ ವಿರುದ್ಧ ಆರ್ಥಿಕ ಬಹಿಷ್ಕಾರಕ್ಕೆ ಕರೆ ನೀಡುವ ಸ್ವೇದಿಯಾ, ಮುಸ್ಲಿಮರಿಗೆ ಅಂಗಡಿಗಳನ್ನು ಬಾಡಿಗೆಗೆ ನೀಡದಂತೆ ಹಿಂದೂ ಮನೆ ಮಾಲೀಕರಲ್ಲಿ ಮನವಿ ಮಾಡುತ್ತಾನೆ.
“ಒಬ್ಬ ಹಿಂದೂ ವ್ಯಕ್ತಿಗೆ 1,000 ರೂಪಾಯಿ ಕಡಿಮೆ ಬಾಡಿಗೆಗಾದರೂ ಸರಿ, ನಿಮ್ಮ ಅಂಗಡಿಯನ್ನು ಅವನಿಗೇ ಕೊಡಿ. ಒಂದು ವೇಳೆ ನೀವು ಮುಸ್ಲಿಮನಿಗೆ ಅಂಗಡಿ ನೀಡಿದರೆ, ಅವರು ಇಲ್ಲಿ ಜಿಹಾದ್ ಮಾಡುತ್ತಾರೆ” ಎಂದು ಹೇಳುತ್ತಾನೆ. ಈ ವಿಡಿಯೊ ಈಗಾಗಲೇ 5.2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.
ಅದೇ ರೀತಿ ಏಪ್ರಿಲ್ 30ರ ವಿಡಿಯೊವೊಂದರಲ್ಲಿ, ಅಮನ್ ಸ್ವೇದಿಯಾ ಮತ್ತು ಸಿದ್ಧಾಂತ್ ಬದೋನಿ ರಸ್ತೆಯಲ್ಲಿ ಹೋಗುತ್ತಿದ್ದ ಕಾರೊಂದನ್ನು ತಡೆದು, ಅದರಲ್ಲಿದ್ದ ಮುಸ್ಲಿಂ ವ್ಯಕ್ತಿ ಮತ್ತು ಆತನೊಂದಿಗೆ ಪ್ರಯಾಣಿಸುತ್ತಿದ್ದ ಮಹಿಳೆಯನ್ನು ಬಲವಂತವಾಗಿ ಹೊರಗೆ ಎಳೆಯುತ್ತಿರುವುದು ಕಾಣಿಸುತ್ತದೆ. ಆ ವ್ಯಕ್ತಿ ‘ಎಸ್ಕಾರ್ಟ್ ಸರ್ವಿಸ್’ ದಂಧೆಯಲ್ಲಿ ತೊಡಗಿದ್ದಾನೆ ಎಂದು ಆರೋಪಿಸುವ ಈ ಬಜರಂಗದಳದ ಸದಸ್ಯರು, ಹತ್ತಿರದಲ್ಲೇ ಪೊಲೀಸರು ನಿಂತಿದ್ದರೂ ಆತನನ್ನು ಸಾರ್ವಜನಿಕವಾಗಿ ಅಪಮಾನಿಸುತ್ತಾರೆ.
ವಿಡಿಯೊದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಅಮನ್ ಬಳಿ, “ಎಸ್ಕಾರ್ಟ್ ಸರ್ವಿಸ್ ಎಲ್ಲಿ ನಡೆಯುತ್ತಿದೆ?” ಎಂದು ಕೇಳುತ್ತಿರುವುದು ಕೇಳಿಸುತ್ತದೆ. ಈ ಘಟನೆಯ ಸಂದರ್ಭದಲ್ಲಿ ಕಾನೂನು ಕೈಗೆತ್ತಿಕೊಂಡ ಗುಂಪು ಮತ್ತು ಪೊಲೀಸರ ನಡುವೆ ತಳ್ಳಾಟ ನಡೆದಿರುವುದು ಕೂಡ ವಿಡಿಯೊದಲ್ಲಿ ಗೋಚರಿಸುತ್ತದೆ. ಈ ವಿಡಿಯೊ 1.6 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ.
ಇದಕ್ಕಿಂತ ಐದು ದಿನಗಳ ಮುಂಚೆ, ಅಂದರೆ ಏಪ್ರಿಲ್ 25ರಂದು, ಮುಸ್ಲಿಂ ವ್ಯಕ್ತಿಯೊಬ್ಬ ಅಪ್ರಾಪ್ತ ವಯಸ್ಸಿನ ಹಿಂದೂ ಹುಡುಗಿಯನ್ನು ಕರೆದುಕೊಂಡು ಓಡಿಹೋಗಿದ್ದಾನೆ ಎಂದು ಆರೋಪಿಸಿ ಅಮನ್ ಸ್ವೇದಿಯಾ ಮತ್ತು ಸಿದ್ಧಾಂತ್ ಬದೋನಿ ನೇತೃತ್ವದ ಬಜರಂಗದಳದ ಕಾರ್ಯಕರ್ತರು ಆತನ ಮನೆಯನ್ನು ಸುತ್ತುವರಿದಿದ್ದರು.
ಆ ಮನೆಯ ಹೊರಗೆ ನಿಂತು ಮಾತನಾಡುವ ಸ್ವೇದಿಯಾ, ಪೊಲೀಸರು ಮುಸ್ಲಿಮರಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸುತ್ತಾನೆ. ಈ ವೇಳೆ ಮಾತುಗಳನ್ನು ಮತ್ತಷ್ಟು ಉಗ್ರಗೊಳಿಸುವ ಸಿದ್ಧಾಂತ್ ಬದೋನಿ, “ದೇವಭೂಮಿಯಲ್ಲಿ ಇಂತಹ ಜನರಿಗೆ ಮಸೀದಿಗಳನ್ನು ನಿರ್ಮಿಸಲು ಬಿಡುತ್ತಿರುವವರಿಗೆ ನಾಚಿಕೆಯಾಗಬೇಕು. ಈ ಜನರು ನಮ್ಮ ಸಹೋದರಿಯರನ್ನು ಅಪಹರಿಸಿ ತಮ್ಮ ಮಸೀದಿಗಳಲ್ಲಿ ಬಚ್ಚಿಡುತ್ತಾರೆ” ಎಂದು ಆಕ್ರೋಶ ವ್ಯಕ್ತಪಡಿಸುತ್ತಾನೆ.
ಅಷ್ಟಕ್ಕೇ ನಿಲ್ಲದ ಆತ, ಅತ್ಯಾಚಾರದ ಬೆದರಿಕೆಯ ಧಾಟಿಯಲ್ಲಿ “ನಮ್ಮ ಸಹೋದರಿ ಸಿಗುವವರೆಗೂ, ಅವರ ಸಹೋದರಿಯರನ್ನು ನಮ್ಮ ಮನೆಗೆ ಕಳುಹಿಸಿಕೊಡಿ” ಎಂಬ ಅತ್ಯಂತ ಆಕ್ಷೇಪಾರ್ಹ ಹೇಳಿಕೆಯನ್ನು ನೀಡುತ್ತಾನೆ.
ಈ ಇಡೀ ವಿಡಿಯೊಗಳ ಸರಣಿಯ ಉದ್ದಕ್ಕೂ ಮುಸ್ಲಿಂ ಪುರುಷರನ್ನು ಬೇಟೆಯಾಡುವ ಕ್ರೂರಿಗಳಂತೆ, ಹಿಂದೂ ಮಹಿಳೆಯರನ್ನು ರಕ್ಷಣೆಯ ಅಗತ್ಯವಿರುವ ಸಂತ್ರಸ್ತರಂತೆ ಚಿತ್ರಿಸಲಾಗುತ್ತಿದೆ. ಅದರೊಂದಿಗೆ ಮುಸ್ಲಿಮರ ಮನೆಗಳು, ಹೋಟೆಲ್‌ಗಳು, ಅಂಗಡಿಗಳು ಮತ್ತು ಮಸೀದಿಗಳನ್ನು ಅತ್ಯಂತ ಅನುಮಾನಾಸ್ಪದ ಸ್ಥಳಗಳಂತೆ ಬಿಂಬಿಸಲಾಗುತ್ತಿದೆ.
ಎಪ್ರಿಲ್ 23ರಂದು ಡೆಹ್ರಾಡೂನ್ ನ ಹೋಟೆಲೊಂದಕ್ಕೆ ನುಗ್ಗಿದ ಬಜರಂಗದಳದ ಕಾರ್ಯಕರ್ತರು, ಮುಸ್ಲಿಂ ಯುವಕನೊಬ್ಬ ತನ್ನ ಧಾರ್ಮಿಕ ಗುರುತನ್ನು ಮರೆಮಾಚಿ ಹಿಂದೂ ಮಹಿಳೆಯೊಂದಿಗೆ ತಂಗಿದ್ದಾನೆ ಎಂದು ಆರೋಪಿಸಿದ್ದರು. ಈ ಉದ್ರಿಕ್ತ ಗುಂಪು ಕೋಣೆಗೆ ನುಗ್ಗಿದಾಗ ಆ ಯುವಕ ಮತ್ತು ಮಹಿಳೆ ಇಬ್ಬರೂ ಅಲ್ಲಿದ್ದರು.
ವಿಡಿಯೊದಲ್ಲಿ ಕೇಳಿಸುವಂತೆ ಅಮನ್ ಸ್ವೇದಿಯಾ, “ಇವನ ಹೆಸರು ಖಾದಿರ್ ಖಾನ್. ಲವ್ ಜಿಹಾದ್ ಮಾಡುವುದೇ ಇವನ ಕೆಲಸ. ಹಿಂದೂ ಮಹಿಳೆಯರನ್ನು ಬಲೆಗೆ ಬೀಳಿಸಲು ಮೌಲಾನಾಗಳು ಇವರಿಗೆ ಇಂತಹ ಕೆಲಸಗಳನ್ನು ಕೊಡುತ್ತಾರೆ. ಮಸೀದಿಗಳು ಮತ್ತು ಮದರಸಾಗಳು ಇವರಿಗೆ ಧನಸಹಾಯ ಮಾಡುತ್ತವೆ” ಎಂದು ಆರೋಪಿಸುತ್ತಾನೆ.
ವಿಡಿಯೊದ ಕೊನೆಯಲ್ಲಿ ಪೊಲೀಸರು ಆ ಮುಸ್ಲಿಂ ಯುವಕನನ್ನು ಕರೆದೊಯ್ಯುತ್ತಿರುವುದು ಕಾಣಿಸುತ್ತದೆ. ಈ ವಿಡಿಯೊ 20 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.
ಇನ್ನು ಎಪ್ರಿಲ್ 19ರಂದು ಪೋಸ್ಟ್ ಮಾಡಲಾದ ಮತ್ತೊಂದು ವಿಡಿಯೊದಲ್ಲಿ, ಅಮನ್ ಸ್ವೇದಿಯಾ ಮತ್ತು ಆತನ ಸಹಚರರು ಡೆಹ್ರಾಡೂನ್‌ನಲ್ಲಿರುವ ಹಲವು ಲೆನ್ಸ್‌ಕಾರ್ಟ್ ಶೋರೂಮ್‌ಗಳಿಗೆ ಭೇಟಿ ನೀಡುತ್ತಾರೆ. ಅಲ್ಲಿನ ಸಿಬ್ಬಂದಿಯನ್ನು ಉದ್ದೇಶಿಸಿ, “ನನ್ನ ಸಹೋದರರೆಲ್ಲರೂ ಹಿಂದೂಗಳೇ ತಾನೇ?” ಎಂದು ಪ್ರಶ್ನಿಸುತ್ತಾ, ಕ್ಯಾಮೆರಾದ ಮುಂಭಾಗದಲ್ಲೇ ಅವರ ಹಣೆಗೆ ಬಲವಂತವಾಗಿ ತಿಲಕ ಇಡುತ್ತಾನೆ. ಈ ವಿಡಿಯೊ ಬರೋಬ್ಬರಿ 10.8 ದಶಲಕ್ಷ ವೀಕ್ಷಣೆಗಳನ್ನು ಗಳಿಸಿದೆ.
ಕೆಲವು ವಿಡಿಯೊಗಳಲ್ಲಿ ಮಕ್ಕಳನ್ನು ಕೂಡ ಗುರಿಯಾಗಿಸಿಕೊಂಡಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಏಪ್ರಿಲ್ 18ರಂದು ಅಪ್‌ಲೋಡ್ ಮಾಡಲಾದ ವಿಡಿಯೊವೊಂದರಲ್ಲಿ ಅಮನ್ ಸ್ವೇದಿಯಾ, ಬಿಹಾರದ ಮುಸ್ಲಿಂ ಮಕ್ಕಳು ಡೆಹ್ರಾಡೂನ್ ಗೆ ಬಂದು ಇಲ್ಲಿನ ಮದರಸಾಗಳಿಗೆ ಸೇರುತ್ತಿದ್ದಾರೆ ಎಂದು ಆರೋಪಿಸುತ್ತಾನೆ.
ಆ ಅಪ್ರಾಪ್ತ ಮುಸ್ಲಿಂ ಬಾಲಕರನ್ನು ಮದರಸಾಗಳಲ್ಲಿ ಏನು ಕಲಿಯುತ್ತಿದ್ದೀರಿ ಎಂದು ಪ್ರಶ್ನಿಸುವ ಆತ, ನಂತರ “ಮದರಸಾ ಜಿಹಾದ್ ನಿಲ್ಲಿಸಿ” ಎಂದು ಘೋಷಣೆಗಳನ್ನು ಕೂಗುತ್ತಾ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯುತ್ತಾನೆ. ಈ ವಿಡಿಯೊ 14 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.
ಎಪ್ರಿಲ್ 10ರ ಮತ್ತೊಂದು ವಿಡಿಯೊದಲ್ಲಿ, ಬಜರಂಗದಳದ ಕಾರ್ಯಕರ್ತರು ಫ್ಲಾಟ್ ಒಂದಕ್ಕೆ ನುಗ್ಗಿ, ಅಲ್ಲಿದ್ದ ಮುಸ್ಲಿಂ ಪುರುಷರು ಹಿಂದೂ ಮಹಿಳೆಯರನ್ನು ಬಲೆಗೆ ಬೀಳಿಸುತ್ತಿದ್ದಾರೆ ಎಂದು ಆರೋಪಿಸಿ ಅವರಿಗೆ ಕಿರುಕುಳ ನೀಡುತ್ತಿರುವುದು ಕಾಣಿಸುತ್ತದೆ.
ಈ ವೇಳೆ ರಿಯಲ್ ಎಸ್ಟೇಟ್ ಏಜೆಂಟರಿಗೆ ಮುಸ್ಲಿಮರಿಗೆ ಫ್ಲಾಟ್‌ಗಳನ್ನು ಬಾಡಿಗೆಗೆ ನೀಡದಂತೆ ಬೆದರಿಕೆ ಹಾಕುವ ಸಿದ್ಧಾಂತ್ ಬದೋನಿ, “ನಾವು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ” ಎಂದು ಎಚ್ಚರಿಸುತ್ತಾನೆ.
ಇನ್ನು ಹೋಟೆಲ್‌ಗಳಲ್ಲಿ ತಂಗಿರುವ ಮುಸ್ಲಿಮರನ್ನು ಗುರಿಯಾಗಿಸುವುದು ಈ ಕಂಟೆಂಟ್ ಕ್ರಿಯೇಟರ್‌ಗಳ ಜಾಲದಲ್ಲಿ ಪದೇ ಪದೇ ಪುನರಾವರ್ತನೆಯಾಗುವ ಮತ್ತೊಂದು ಪ್ರವೃತ್ತಿಯಾಗಿದೆ.
ಎಪ್ರಿಲ್ 3ರಂದು, ಬಜರಂಗದಳದ ಕಾರ್ಯಕರ್ತರು ಹೋಟೆಲ್ ಕೋಣೆಯೊಂದಕ್ಕೆ ನುಗ್ಗಿ ಮೊಹಮ್ಮದ್ ಸಾಹಿಲ್ ಎಂಬ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದರು. ಆತ ಹಿಂದೂ ಮಹಿಳೆಯೊಬ್ಬಳನ್ನು ಬಲವಂತವಾಗಿ ಅಲ್ಲಿಗೆ ಕರೆತಂದಿದ್ದಾನೆ ಎಂಬುದು ಅವರ ಆರೋಪವಾಗಿತ್ತು. ಈ ವಿಡಿಯೊದ ವೀಕ್ಷಣೆಗಳ ಸಂಖ್ಯೆ 68 ಲಕ್ಷ ದಾಟಿದೆ.
ಈ ಎಲ್ಲಾ ವಿಡಿಯೊಗಳನ್ನು ಗಮನಿಸಿದರೆ, ಇಂತಹ ಕಾನೂನುಬಾಹಿರ ಕೃತ್ಯಗಳು ಕೇವಲ ಒಂದು ನಿರ್ದಿಷ್ಟ ಸಿದ್ಧಾಂತವನ್ನು ಪ್ರಚಾರ ಮಾಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಇದು ಭಾರಿ ಲಾಭ ತಂದುಕೊಡುವ ಮತ್ತು ಸಾಮಾಜಿಕ ಜಾಲತಾಣಗಳ ಅಲ್ಗಾರಿದಮ್ ಗಳಿಂದ ಪ್ರೋತ್ಸಾಹಿಸಲ್ಪಡುವ ಒಂದು ಹೊಸ ಮಾದರಿಯ ‘ಕಂಟೆಂಟ್ ಕ್ರಿಯೇಷನ್’ ಆಗಿ ಬದಲಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ.
ಮೈಕ್ರೋಫೋನ್, ಕ್ಯಾಮೆರಾ, ನಾಟಕೀಯ ಮುಖಾಮುಖಿಗಳು, ಉದ್ರೇಕಕಾರಿ ಘೋಷಣೆಗಳು ಮತ್ತು ಕೋಮು ಪ್ರಚೋದಿತ ಆರೋಪಗಳು ಇವೆಲ್ಲವೂ ಭಾರಿ ಜನಪ್ರಿಯತೆ ಹಾಗೂ ಲಾಭ ತಂದುಕೊಡುವ ಯಶಸ್ವಿ ಸೂತ್ರದ ಭಾಗಗಳಾಗಿ ಬಳಕೆಯಾಗುತ್ತಿವೆ.
ಒಟ್ಟಾರೆಯಾಗಿ 3.25 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಕನಿಷ್ಠ ಆರು ಇನ್‌ಸ್ಟಾಗ್ರಾಮ್ ಖಾತೆಗಳು ಮತ್ತು 3.83 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ‘ಡೆಹ್ರಾಡೂನ್ ಎಕ್ಸ್‌ಕ್ಲೂಸಿವ್ಸ್’ ಫೇಸ್‌ಬುಕ್ ಪುಟವನ್ನು ಗುರುತಿಸಲಾಗಿದೆ. ಇವೆಲ್ಲವೂ ದ್ವೇಷದ ಭಾಷಣ ಮತ್ತು ಸುಳ್ಳು ಸುದ್ದಿ ಹರಡುವಿಕೆಗೆ ಸಂಬಂಧಿಸಿದ ಮೆಟಾ ಸಂಸ್ಥೆಯ ನಿಯಮಾವಳಿಗಳನ್ನು ಮೇಲ್ನೋಟಕ್ಕೆ ಉಲ್ಲಂಘಿಸಿರುವುದು ಕಂಡುಬರುತ್ತದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮೆಟಾ, ಜಾತಿ, ಜನಾಂಗ ಅಥವಾ ಧರ್ಮದಂತಹ ಸಂರಕ್ಷಿತ ಗುಣಲಕ್ಷಣಗಳ ಆಧಾರದ ಮೇಲೆ ಜನರ ಮೇಲೆ ದಾಳಿ ಮಾಡುವ ಕಂಟೆಂಟ್‌ಗಳನ್ನು ನಿಷೇಧಿಸುವ ಕಟ್ಟುನಿಟ್ಟಾದ ನಿಯಮಗಳನ್ನು ನಮ್ಮ ಸಂಸ್ಥೆ ಹೊಂದಿದೆ. ಗಂಭೀರ ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಯಾವುದೇ ಭಾಷೆ ಅಥವಾ ಬರಹಗಳನ್ನು ನಾವು ತಕ್ಷಣವೇ ತೆಗೆದುಹಾಕುತ್ತೇವೆ. ಸಾರ್ವಜನಿಕ ಸುರಕ್ಷತೆಗೆ ನೇರ ಬೆದರಿಕೆ ಇದೆ ಅಥವಾ ದೈಹಿಕ ಹಾನಿಯ ನಿಜವಾದ ಅಪಾಯವಿದೆ ಎಂದು ಮನವರಿಕೆಯಾದಾಗ, ಅಂತಹ ಖಾತೆಗಳನ್ನು ಅಮಾನತುಗೊಳಿಸುತ್ತೇವೆ ಮತ್ತು ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಹಕರಿಸುತ್ತೇವೆ. ನಮ್ಮ ಗಮನಕ್ಕೆ ತರಲಾಗಿರುವ ಖಾತೆಗಳನ್ನು ಪರಿಶೀಲಿಸುತ್ತಿದ್ದು, ನಿಯಮ ಉಲ್ಲಂಘಿಸುವ ಯಾವುದೇ ಕಂಟೆಂಟ್ ಕಂಡುಬಂದಲ್ಲಿ ಅದನ್ನು ತೆಗೆದುಹಾಕಲಿದ್ದೇವೆ ಎಂದು ಹೇಳಿದೆ.
ಆದರೆ, ಈ ವಿಡಿಯೊಗಳ ಪೈಕಿ ಹಲವಾರು ವಿಡಿಯೊಗಳ ವಿರುದ್ಧ ಹಿಂಸಾತ್ಮಕ, ದ್ವೇಷಪೂರಿತ ಹಾಗೂ ಸಮಾಜದ ಶಾಂತಿ ಕದಡುವ ಕಂಟೆಂಟ್ ಎಂದು ಸಾರ್ವಜನಿಕರು ದೂರು ನೀಡಿದ್ದರೂ, ಅವು ಇಂದಿಗೂ ಸಾಮಾಜಿಕ ಜಾಲತಾಣಗಳಲ್ಲಿ ಮುಕ್ತವಾಗಿ ಲಭ್ಯವಿವೆ.
ಸೌಜನ್ಯ: thewire.in