ಗದಗ: ಜಿಲ್ಲೆಯ ಹಲವು ಗ್ರಾಮಗಳಲ್ಲಿ ಅಕ್ರಮವಾಗಿ ಡೀಸೆಲ್‌ ಮಾರಾಟ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಪೆಟ್ರೋಲ್‌ ಬಂಕ್‌ನಲ್ಲಿ ಸಿಗುವ ದರಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಡೀಸೆಲ್‌ ದೊರೆಯುತ್ತಿರುವುದರಿಂದ ಗ್ರಾಮಸ್ಥರು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಆದರೆ ಈ ತೈಲ ಎಷ್ಟು ಪ್ರಮಾಣದಲ್ಲಿ ಶುದ್ಧತೆ ಹೊಂದಿದೆ ಎನ್ನುವ ವಿಚಾರ ಚರ್ಚೆಗೆ ಗ್ರಾಸವಾಗಿದೆ.

ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಮಾಡಳ್ಳಿ, ಯತ್ನಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಟ್ಯಾಂಕರ್‌ನಲ್ಲಿ ಡೀಸೆಲ್‌ ಸರಬರಾಜು ಮಾಡಲಾಗುತ್ತಿದೆ. ಈ ಟ್ಯಾಂಕರ್‌ ಮೇಲೆ ಯಾವುದೇ ತೈಲ ಕಂಪನಿಯ ಲೋಗೋ, ಹೆಸರು ಗೋಚರಿಸುತ್ತಿಲ್ಲ. ಈ ದಂಧೆ ಬರೋಬ್ಬರಿ ಎಂಟರಿಂದ ಹತ್ತು ತಿಂಗಳು ನಿರಂತರವಾಗಿ ನಡೆಯುತ್ತಿದೆ. ದಂಧೆಕೋರರು ನಿರಾತಂಕವಾಗಿ ರೈತರಿಗೆ ತೈಲ ಮಾರುತ್ತಿದ್ದಾರೆ. ಇಷ್ಟು ದೀರ್ಘ ಸಮಯದಿಂದ ಅಕ್ರಮವಾಗಿ ತೈಲ ಮಾರಾಟ ಮಾಡುತ್ತಿದ್ದರೂ ಸಂಬಂಧಪಟ್ಟ ಯಾವ ಇಲಾಖೆಯ ಅಧಿಕಾರಿಗಳಿಗೂ ಈ ಬಗ್ಗೆ ಮಾಹಿತಿಯೇ ಇಲ್ಲದಿರುವುದು ಸಂಶಯಕ್ಕೆ ಪುಷ್ಠಿ ನೀಡಿದೆ.

ಕೃಷಿ ಚಟುವಟಿಕೆಗಾಗಿ ರೈತರು ಬಂಕ್‌ಗಳಿಗೇ ತೆರಳಿ ಡೀಸೆಲ್‌ ಖರೀದಿಸುವುದು ಕಷ್ಟಸಾಧ್ಯ. ಸಾಮಾನ್ಯವಾಗಿ ದೊಡ್ಡ ಕ್ಯಾನ್‌ಗಳಲ್ಲಿ ಸಂಗ್ರಹಿಸಿ ತರುತ್ತಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಪೆಟ್ರೋಲ್‌ ಬಂಕಲ್ಲಿ ಕ್ಯಾನ್‌ಗಳಲ್ಲಿ ಡೀಸೆಲ್‌ ಲಭ್ಯವಾಗುವುದಿಲ್ಲ. ಇಲ್ಲಿ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಮನೆ ಎದುರೇ ಟ್ಯಾಂಕರ್‌ನಲ್ಲಿ ಇಂಧನ ಸಿಗುತ್ತಿದೆ. ಮಾರುಕಟ್ಟೆ ದರಕ್ಕಿಂತ ಸುಮಾರು 10 ರೂಪಾಯಿ ಅಗ್ಗಕ್ಕೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ರೈತರು‌ ದೊಡ್ಡ ಕ್ಯಾನ್, ಡ್ರಮ್‌ಗಳಲ್ಲಿ ಹೆಚ್ಚಿನ ಪ್ರಮಾಣದ ಡೀಸೆಲ್‌ ಖರೀದಿಸುತ್ತಿದ್ದಾರೆ. ಆದರೆ ತೈಲದ ಗುಣಮಟ್ಟದ ಬಗ್ಗೆ ಯಾವುದೇ ಖಾತರಿ ಇಲ್ಲ. ಇಂಧನದಲ್ಲಿ ಬೇರೆ ದ್ರವ್ಯ ಮಿಶ್ರಣವಾಗಿದ್ದರೆ ವಾಹನಗಳ ಎಂಜಿನ್‌ಗಳಿಗೆ ಖಂಡಿತ ಅಪಾಯಕಾರಿಯಾಗಿದೆ. ಇನ್ನು ಜನವಸತಿ ಪ್ರದೇಶದಲ್ಲಿ, ಯಾವುದೇ ಸುರಕ್ಷತೆ ಇಲ್ಲದೆಯೇ ತೈಲ ಮಾರಾಟ ಮಾಡುತ್ತಿದ್ದಾರೆ. ಇಲ್ಲಿ ನಾಗರಿಕರು ಎಷ್ಟು ಸುರಕ್ಷಿತ ಎನ್ನುವ ವಿಚಾರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಶಿರಹಟ್ಟಿಯಿಂದ ಬರುವ ತೈಲ?

ಮೇಲ್ನೋಟಕ್ಕೆ ಜಿಲ್ಲೆಯ ಒಳಗಿನಿಂದಲೇ ಈ ತೈಲ ದಂಧೆ ನಡೆಯುತ್ತಿದೆ ಎನ್ನುವ ಶಂಕೆ ವ್ಯಕ್ತವಾಗುತ್ತಿದೆ. ಡೀಸೆಲ್‌ ಎಲ್ಲಿಂದ ಬರುತ್ತದೆ ಎಂದು ಗ್ರಾಮಸ್ಥರು ಟ್ಯಾಂಕರ್‌ನವರನ್ನು ಪ್ರಶ್ನಿಸಿದರೆ ಶಿರಹಟ್ಟಿಯಿಂದ ಎಂಟು ಕಿ.ಮೀ. ದೂರದಲ್ಲಿರುವ ಮಾಗಡಿಯಿಂದ ಬರುತ್ತದೆ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ಕಳೆದ ಎಂಟು-ಹತ್ತು ತಿಂಗಳಿಂದ ಮಾಡಳ್ಳಿ, ಯತ್ನಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಟ್ಯಾಂಕರ್‌ನಲ್ಲಿ ಡೀಸೆಲ್‌ ಮಾರಾಟ ಮಾಡಲಾಗುತ್ತಿದೆ. ಕೃಷಿ ಕೆಲಸಕ್ಕಾಗಿ ಕ್ಯಾನ್‌ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೈಲ ಖರೀದಿಸುತ್ತಿದ್ದಾರೆ. ಇಲ್ಲಿ ತೈಲ ಖರೀದಿಸಿದಾಗ ಯಾವುದೇ ರಸೀದಿ ನೀಡುವುದಿಲ್ಲ. ಡೀಸೆಲ್ ಎಷ್ಟು ಪ್ರಮಾಣದಲ್ಲಿ ಶುದ್ಧತೆ ಇದೆ ಎನ್ನುವುದು ತಿಳಿದಿಲ್ಲ.

-ಹೆಸರು ಬಹಿರಂಗಪಡಿಸಲು ಇಚ್ಚಿಸದ ಮಾಡಳ್ಳಿ, ಯತ್ನಳ್ಳಿ ಗ್ರಾಮಸ್ಥರು

ಹಳ್ಳಿಗಳಿಗೆ ಬಂದು ಟ್ಯಾಂಕರ್‌ನಲ್ಲಿ ಡೀಸೆಲ್‌ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಇಲ್ಲ. ಈ ಕುರಿತು ತಕ್ಷಣವೇ ಪರಿಶೀಲನೆ ನಡೆಸುತ್ತೇವೆ. ನಿಯಮ ಉಲ್ಲಂಘನೆಯಾಗಿರುವುದು ಕಂಡು ಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ.

-ಟಿ.ಕೆ. ರಾಠೋಡ್‌, ಲಕ್ಷ್ಮೇಶ್ವರ ಠಾಣೆಯ ಪಿಎಸ್‌ಐ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor