ʼವೆಚ್ಚ ಹೆಚ್ಚುತ್ತಿದ್ದರೂ ಲಾಭ ಕಾಣುತ್ತಿಲ್ಲʼ: AI ಬಳಕೆ ಬಗ್ಗೆ ಮರುಚಿಂತನೆ ನಡೆಸುತ್ತಿವೆ ಮೈಕ್ರೋಸಾಫ್ಟ್ ಮತ್ತು ಇತರ ಕಂಪನಿಗಳು!
Photo Credit :Microsoft
2025ರ ಆರಂಭದಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಜಗತ್ತಿಗೆ ಕಾಲಿಟ್ಟಾಗ ಕಾರ್ಪೊರೇಟ್ ವಲಯದಲ್ಲೊಂದು ಸರಳ ಲೆಕ್ಕಾಚಾರವಿತ್ತು. ಅದೇನೆಂದರೆ, ಎಐ ಬಳಸುವುದರಿಂದ ಕಂಪನಿಗಳ ಕಾರ್ಯನಿರ್ವಹಣಾ ವೆಚ್ಚ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಲಿದೆ. ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳಿದ್ದವು. ಮೊದಲನೆಯದಾಗಿ, ಒಬ್ಬ ಉದ್ಯೋಗಿಗೆ ನೀಡುವ ಸಂಬಳಕ್ಕಿಂತ ಎಐ ಬಳಕೆಯ ವೆಚ್ಚ ತೀರಾ ಕಡಿಮೆ ಇರಲಿದೆ. ಎರಡನೆಯದಾಗಿ, ಇದು ಕಂಪನಿಯ ಕೆಲಸದ ವೇಗ ಹಾಗೂ ಉತ್ಪಾದಕತೆಯನ್ನ ಹತ್ತು ಪಟ್ಟು ಹೆಚ್ಚಿಸಲಿದೆ ಎಂಬುದು. ಆದರೆ 2026ರ ಇಂದಿನ ವಾಸ್ತವವೇ ಬೇರೆಯಾಗಿದೆ. ಕಂಪನಿಗಳ ಉತ್ಪಾದಕತೆ 10 ಪಟ್ಟು ಹೆಚ್ಚಾಗುವ ಬದಲು, ಎಐ ತಂತ್ರಜ್ಞಾನದ ಬಳಕೆಯ ವೆಚ್ಚವೇ ಗಗನಕ್ಕೇರಿದೆ. ಪರಿಸ್ಥಿತಿ ಎಷ್ಟು ಗಂಭೀರವಾಗಿದೆಯೆಂದರೆ, ಆಂಥ್ರೋಪಿಕಲ್ ಸಂಸ್ಥೆಯ 'ಕ್ಲಾಡ್' ನಂತಹ ಎಐ ಸಾಧನಗಳನ್ನು ಬಳಸುವುದಕ್ಕಿಂತ, ಅದೇ ಕೆಲಸಕ್ಕೆ ಒಬ್ಬ ಸಮರ್ಥ ಉದ್ಯೋಗಿಗೆ ಸಂಬಳ ನೀಡುವುದು ಎಷ್ಟೋ ಅಗ್ಗ ಎಂದು ಉದ್ಯಮದ ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. ಎಐ ತಂತ್ರಜ್ಞಾನದ ಮೇಲಾಗುತ್ತಿರುವ ಭಾರಿ ಖರ್ಚನ್ನು ಸಮರ್ಥಿಸಿಕೊಳ್ಳಲು ಮೈಕ್ರೋಸಾಫ್ಟ್ ಮತ್ತು ಉಬರ್‌ನಂತಹ ಜಾಗತಿಕ ದೈತ್ಯ ಕಂಪನಿಗಳೇ ಈಗ ತಡಕಾಡುತ್ತಿವೆ.
►ವೆಚ್ಚ ಮತ್ತು ಲಾಭದ ನಡುವೆ ಇಲ್ಲದ ಹೊಂದಾಣಿಕೆ
ಕಳೆದ ವಾರ ಹೊರಬಿದ್ದ ಕೆಲವು ವರದಿಗಳು ಎಐ ತಂತ್ರಜ್ಞಾನದಿಂದ ಸಿಗುತ್ತಿರುವ ಲಾಭ ಮತ್ತು ಅದಕ್ಕೆ ತಗಲುತ್ತಿರುವ ವೆಚ್ಚದ ನಡುವೆ ಯಾವುದೇ ಹೊಂದಾಣಿಕೆ ಇಲ್ಲದಿರುವುದನ್ನು ಎತ್ತಿ ತೋರಿಸಿವೆ. ಇದರ ಬೆನ್ನಲ್ಲೇ ಮೈಕ್ರೋಸಾಫ್ಟ್ ಸಂಸ್ಥೆಯು ತನ್ನ ಸಾವಿರಾರು ಇಂಜಿನಿಯರ್‌ಗಳಿಗೆ 'ಕ್ಲಾಡ್ ಕೋಡ್' ಬಳಸುವುದನ್ನು ತಕ್ಷಣ ನಿಲ್ಲಿಸಿ, ಕಂಪನಿಯ ಆಂತರಿಕ ಎಐ ಟೂಲ್ ಕಡೆಗೆ ಮುಖ ಮಾಡುವಂತೆ ಸೂಚಿಸಿದೆ. ಇದಕ್ಕೆ ಜೂನ್ 30ರ ಕೊನೆಯ ಗಡುವು ನೀಡಲಾಗಿದೆ.
ಕೆಲವೇ ತಿಂಗಳುಗಳ ಹಿಂದೆ ತನ್ನದೇ ಉದ್ಯೋಗಿಗಳಿಗೆ ಕ್ಲಾಡ್ ಕೋಡ್ ಬಳಸುವಂತೆ ಉತ್ತೇಜಿಸಿದ್ದ ಮೈಕ್ರೋಸಾಫ್ಟ್, ಈಗ ಇದ್ದಕ್ಕಿದ್ದಂತೆ ಆಂಥ್ರೋಪಿಕಲ್ ಸಂಸ್ಥೆಯ ಈ ಸಾಧನದಿಂದ ದೂರ ಸರಿಯುತ್ತಿರುವುದಕ್ಕೆ ಅಧಿಕೃತ ಕಾರಣವನ್ನೇನೂ ನೀಡಿಲ್ಲ. ಆದರೆ, ಆಂತರಿಕ ಮೂಲಗಳ ಪ್ರಕಾರ, ಉದ್ಯೋಗಿಗಳು ಈ ಎಐ ಟೂಲ್ ಬಳಸುವಾಗ ಸೃಷ್ಟಿಯಾಗುವ 'ಟೋಕನ್'ಗಳಿಗೆ ಕಂಪನಿ ಭಾರಿ ಹಣ ತೆರಬೇಕಾಗುತ್ತಿದೆ. ಅತ್ತ ಹಣ ನೀರಿನಂತೆ ಖರ್ಚಾಗುತ್ತಿದ್ದರೂ, ಇಂಜಿನಿಯರ್‌ಗಳ ಕೆಲಸದ ಉತ್ಪಾದಕತೆಯಲ್ಲಿ ಮಾತ್ರ ಯಾವುದೇ ಗಣನೀಯ ಪ್ರಗತಿ ಕಾಣಿಸುತ್ತಿಲ್ಲ. ಇದೇ ಕಾರಣಕ್ಕೆ ಮೈಕ್ರೋಸಾಫ್ಟ್ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
►ಐದೇ ತಿಂಗಳಲ್ಲಿ ವರ್ಷದ ಬಜೆಟ್ ಖಾಲಿ ಮಾಡಿದ ಉಬರ್
ಮೈಕ್ರೋಸಾಫ್ಟ್ ಮಾತ್ರವಲ್ಲದೆ, ಜಾಗತಿಕ ಸಾರಿಗೆ ದೈತ್ಯ 'ಉಬರ್'ಸಂಸ್ಥೆಯ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಕಂಪನಿಯು ತನ್ನ ಎಐ ತಂತ್ರಜ್ಞಾನದ ವೆಚ್ಚಗಳಿಗಾಗಿ ಪ್ರತ್ಯೇಕ ಬಜೆಟ್ ಒಂದನ್ನು ಕಾಯ್ದಿರಿಸಿತ್ತು. ಅದರಂತೆ, ಈ ವರ್ಷದ ಜನವರಿಯಲ್ಲಿ ಕಂಪನಿಯು ತನ್ನ 5,000 ಇಂಜಿನಿಯರ್‌ಗಳಿಗೆ ಕ್ಲಾಡ್ ಕೋಡ್ ಬಳಸಲು ಅನುಮತಿ ನೀಡಿತ್ತು. ಆದರೆ, ಇತ್ತೀಚೆಗೆ ಮಾತನಾಡಿದ್ದ ಉಬರ್ ಸಂಸ್ಥೆಯ ಸಿಟಿಒ ಪ್ರವೀಣ್ ನಾಗಾ, ಎಐಗಾಗಿ ಮೀಸಲಿಟ್ಟಿದ್ದ ಇಡೀ ವರ್ಷದ ಬಜೆಟ್ ಕೇವಲ 5 ತಿಂಗಳಲ್ಲೇ ಸಂಪೂರ್ಣವಾಗಿ ಖಾಲಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು.
ಸೋಮವಾರ ಉಬರ್ ಸಂಸ್ಥೆಯ ಸಿಒಒ ಆಂಡ್ರ್ಯೂ ಮ್ಯಾಕ್‌ಡೊನಾಲ್ಡ್ ಕೂಡ ಇದೇ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಎಐ ಬಳಕೆಯಿಂದ ಕಂಪನಿಗೆ ಸದ್ಯಕ್ಕೆ ಯಾವುದೇ ಉತ್ಪಾದಕತೆಯ ಲಾಭವಾಗಿಲ್ಲ ಎಂಬುದನ್ನು ಒಪ್ಪಿಕೊಂಡಿರುವ ಅವರು, "ನಾವು ಇನ್ಮುಂದೆ ಎಐ ಟೋಕನ್ ಬಳಕೆಗಾಗಿ ಆಗುತ್ತಿರುವ ವೆಚ್ಚ ಹಾಗೂ ಉದ್ಯೋಗಿಗಳ ಸಂಬಳದ ನಡುವಿನ ವ್ಯತ್ಯಾಸದ ಬಗ್ಗೆ ಗಂಭೀರವಾಗಿ ಚರ್ಚಿಸಬೇಕಾಗಿದೆ. ಎಐ ಬಳಕೆಯಿಂದ ಬಳಕೆದಾರರಿಗೆ ಯಾವುದೇ ನೇರವಾದ ಅಥವಾ ಉಪಯುಕ್ತವಾದ ಸೌಲಭ್ಯಗಳನ್ನು ನೀಡಲು ಸಾಧ್ಯವಾಗದಿದ್ದರೆ, ಎಐಗಾಗಿ ಆಗುತ್ತಿರುವ ಈ ಭಾರಿ ಖರ್ಚನ್ನು ಸಮರ್ಥಿಸಿಕೊಳ್ಳುವುದು ಕಷ್ಟವಾಗುತ್ತದೆ" ಎಂದು ಹೇಳಿದ್ದಾರೆ.
ಮೈಕ್ರೋಸಾಫ್ಟ್ ಮತ್ತು ಉಬರ್ ಸಂಸ್ಥೆಗಳ ಒಳಗಿನಿಂದ ಬರುತ್ತಿರುವ ಈ ಮಾಹಿತಿಗಳು ಇಡೀ ತಂತ್ರಜ್ಞಾನ ವಲಯವೇ ತಿರುಗಿ ನೋಡುವಂತೆ ಮಾಡಿದೆ. ಪ್ರಸ್ತುತ ತಮ್ಮದೇ ಆದ ಎಐ ಸ್ಟಾರ್ಟ್‌ಅಪ್ ನಡೆಸುತ್ತಿರುವ, ಇನ್ಫೋಸಿಸ್‌ನ ಮಾಜಿ ಮುಖ್ಯಸ್ಥ ವಿಶಾಲ್ ಸಿಕ್ಕಾ ಅವರು ಈ ಕುರಿತು 'X' ನಲ್ಲಿ ಪ್ರತಿಕ್ರಿಯಿಸಿದ್ದಾರೆ. "ಎಐ ಟೋಕನ್‌ಗಳ ವೆಚ್ಚವು ಈಗ ನಿಜವಾದ ಸಮಸ್ಯೆಯಾಗಿ ಮಾರ್ಪಡುತ್ತಿದೆ. ಭವಿಷ್ಯದಲ್ಲಿ ಕಂಪನಿಗಳು ಎಐ ಬಳಕೆಯ ಬಗ್ಗೆ ಮತ್ತಷ್ಟು ಕಠಿಣ ನಿಗಾ ವಹಿಸಲಿವೆ" ಎಂದು ಅವರು ಹೇಳಿದ್ದಾರೆ.
ಇಲ್ಲಿಯವರೆಗೆ, ದೇಹದ ತೂಕ ಇಳಿಸಿಕೊಳ್ಳಲು ಜನರು 'ಓಜೆಂಪಿಕ್'ಮಾತ್ರೆ ನೆಚ್ಚಿಕೊಳ್ಳುವಂತೆ, ಕಂಪನಿಗಳು ಕೂಡ ತಮ್ಮ ಖರ್ಚು ವೆಚ್ಚಗಳನ್ನು ಕಡಿಮೆ ಮಾಡಿಕೊಳ್ಳಲು ಎಐ ಎಂಬ 'ಮಾಯದ ಮಾತ್ರೆ'ಯನ್ನು ನಂಬಿಕೊಂಡಿದ್ದವು. ಆದರೆ 2026ರ ಈ ವರ್ಷ ಕಾರ್ಪೊರೇಟ್ ಜಗತ್ತಿಗೆ ಒಂದು ಕಹಿ ಸತ್ಯವನ್ನು ಮನವರಿಕೆ ಮಾಡಿಕೊಟ್ಟಿದೆ. ಎಐ ವೆಚ್ಚಗಳು ರಾಕೆಟ್ ವೇಗದಲ್ಲಿ ಹೆಚ್ಚುತ್ತಿದ್ದರೂ, ಅದಕ್ಕೆ ತಕ್ಕಂತೆ ಕೆಲಸದ ಉತ್ಪಾದಕತೆ ಮಾತ್ರ ಇನ್ನು ಹೆಚ್ಚಾಗಿಲ್ಲ ಎಂಬುದನ್ನು ಈ ವರ್ಷ ಸಾಬೀತುಪಡಿಸುತ್ತಿದೆ.
"ಮೈಕ್ರೋಸಾಫ್ಟ್ ಮತ್ತು ಉಬರ್‌ನಂತಹ ದೈತ್ಯ ಕಂಪನಿಗಳ ಬಜೆಟ್ ಕೈಮೀರಿ ಹೋಗಿರುವುದು ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆಯ ಮುನ್ಸೂಚನೆಯಾಗಿದೆ" ಎಂದು ಫೆಕ್ಸೋ ಜೆನ್ ಎಐ ಸ್ಟಾರ್ಟ್‌ಅಪ್‌ನ ಸಂಸ್ಥಾಪಕ ಮತ್ತು ಸಿಇಒ ಕೌಸ್ತುಭ್ ಕಶ್ಯಪ್ 'ಇಂಡಿಯಾ ಟುಡೇ ಟೆಕ್'ಗೆ ತಿಳಿಸಿದ್ದಾರೆ. ಎಐ ತಂತ್ರಜ್ಞಾನದೊಂದಿಗಿನ ಪ್ರಯೋಗಗಳ ದಿನಗಳು ಈಗ ಮುಗಿದಿವೆ, ವಾಸ್ತವ ಏನೆಂಬುದು ಕಣ್ಣಮುಂದಿದೆ. ಎಐನ 'ಹನಿಮೂನ್' ಅವಧಿ ಮುಗಿದಿದ್ದು, ಇನ್ಮುಂದೆ ಅದಕ್ಕಾಗಿ ಮಾಡುವ ಹೂಡಿಕೆಯಿಂದ ಕಂಪನಿಗೆ ಎಷ್ಟು ಲಾಭ ಸಿಗುತ್ತದೆ ಎಂಬುದನ್ನು ಕಟ್ಟುನಿಟ್ಟಾಗಿ ಮೌಲ್ಯಮಾಪನ ಮಾಡಬೇಕಾದ ಸಮಯ ಬಂದಿದೆ" ಎಂದಿದ್ದಾರೆ.
ಏನಿದು ಟೋಕನ್:
ಎಐ ತಂತ್ರಜ್ಞಾನಕ್ಕೆ ತಗಲುತ್ತಿರುವ ಭಾರಿ ವೆಚ್ಚದ ಬಗ್ಗೆ ಕಂಪನಿಗಳು ಈಗಷ್ಟೇ ಎಚ್ಚರಗೊಳ್ಳುತ್ತಿವೆ. ಕ್ಲಾಡ್ (Claude), ಜೆಮಿನೈ (Gemini) ಮತ್ತು ಚಾಟ್‌ಜಿಪಿಟಿ (ChatGPT) ನಂತಹ ಸಾಧನಗಳು ವಿಧಿಸುತ್ತಿರುವ ದುಬಾರಿ ದರಗಳನ್ನು ನೋಡಿದಾಗ, ಉದ್ಯಮ ವಲಯದಲ್ಲಿ ಈಗ ಒಂದು ಪದ ಪದೇ ಪದೇ ಕೇಳಿಬರುತ್ತಿದೆ. ಅದೇ ‘ಟೋಕನ್’.
ಟೋಕನ್’ ಎನ್ನುವುದು ಎಐ ಸಾಧನಗಳು ನಾವು ನೀಡುವ ಮಾಹಿತಿ ಮತ್ತು ಅವು ನೀಡುವ ಉತ್ತರವನ್ನು ಅಳೆಯುವ ಒಂದು ಮೂಲ ಮಾನದಂಡವಾಗಿದೆ. ಇದನ್ನು ನಾವು ಮನೆಯಲ್ಲಿ ಬಳಸುವ ವಿದ್ಯುತ್ ಯೂನಿಟ್‌ಗೆ ಹೋಲಿಸಬಹುದು. ವಿದ್ಯುತ್ ಬಳಸಿದಷ್ಟೂ ಮೀಟರ್ ರೀಡಿಂಗ್ ಹೆಚ್ಚಾಗುವಂತೆ, ಎಐ ಬಳಸಿದಷ್ಟೂ ಟೋಕನ್‌ಗಳ ಸಂಖ್ಯೆ ಹೆಚ್ಚಾಗುತ್ತದೆ. 2026ರ ಪ್ರಸ್ತುತ ಪರಿಸ್ಥಿತಿಯಲ್ಲಿ ಗೂಗಲ್, ಆಂಥ್ರೋಪಿಕಲ್ ಮತ್ತು ಓಪನ್‌ಎಐ ಕಂಪನಿಗಳ ಮೇಲೆ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವಂತೆ ಹೂಡಿಕೆದಾರರಿಂದ ಭಾರಿ ಒತ್ತಡವಿದೆ. ಹೀಗಾಗಿ, ಈ ಕಂಪನಿಗಳು ತಮ್ಮ ಗ್ರಾಹಕರಿಗೆ ‘ಟೋಕನ್ ಆಧಾರಿತ ದರ’ವನ್ನು ಕಡ್ಡಾಯಗೊಳಿಸುತ್ತಿವೆ.
ಆರಂಭದ ದಿನಗಳಲ್ಲಿ ಈ ಎಐ ಕಂಪನಿಗಳು ಗ್ರಾಹಕರಿಗೆ ಭಾರಿ ರಿಯಾಯಿತಿ ನೀಡುತ್ತಿದ್ದವು. ಒಂದು ಅಂದಾಜಿನ ಪ್ರಕಾರ, ತಿಂಗಳಿಗೆ ಕೇವಲ 200 ಡಾಲರ್ (ಅಂದಾಜು ರೂ 16,500) ಪಾವತಿಸುವ ಒಬ್ಬ ಉದ್ಯೋಗಿ ಬಳಸುವ ಕ್ಲಾಡ್ ಅಥವಾ ಚಾಟ್‌ಜಿಪಿಟಿಯ ನೈಜ ನಿರ್ವಹಣಾ ವೆಚ್ಚ ಎಐ ಕಂಪನಿಗಳಿಗೆ ಸುಮಾರು 1500 ರಿಂದ 5000 ಡಾಲರ್ (ಅಂದಾಜು ರೂ1.2 ಲಕ್ಷದಿಂದ ರೂ 4 ಲಕ್ಷದವರೆಗೆ) ಆಗುತ್ತಿತ್ತು. ಆದರೆ ಈಗ ಎಐ ಕಂಪನಿಗಳು ಲಾಭ ಗಳಿಸಲೇಬೇಕಾದ ಅನಿವಾರ್ಯತೆಗೆ ಸಿಲುಕಿರುವುದರಿಂದ, ಈ ರಿಯಾಯಿತಿ ದಿನಗಳು ಮುಗಿಯುತ್ತಿವೆ. ಕ್ಲಾಡ್‌ನಿಂದ ಜೆಮಿನೈವರೆಗೆ ಪ್ರತಿಯೊಂದು ಎಐ ಸಂಸ್ಥೆಯೂ ಈಗ ನಿಗದಿತ ಮಾಸಿಕ ಅಥವಾ ವಾರ್ಷಿಕ ಚಂದಾದಾರಿಕೆಯ ಬದಲಾಗಿ, ಬಳಸಿದ ಟೋಕನ್‌ಗಳಿಗೆ ತಕ್ಕಂತೆ ಹಣ ವಸೂಲಿ ಮಾಡಲು ಆರಂಭಿಸಿವೆ.
ಇತ್ತೀಚೆಗೆ ಮೇ 20 ರಂದು ಗೂಗಲ್ ತನ್ನ Gemini AI ಬಳಕೆದಾರರಿಗೆ ಪ್ರಮುಖ ಸಂದೇಶವೊಂದನ್ನು ರವಾನಿಸಿದೆ. "ನಾವು ಇನ್ಮುಂದೆ ಕಂಪ್ಯೂಟ್ ಆಧಾರಿತ ಬಳಕೆಯ ಮಿತಿಗಳನ್ನು ಜಾರಿಗೆ ತರುತ್ತಿದ್ದೇವೆ. ಇದು ನೀವು ಕೇಳುವ ಪ್ರಶ್ನೆಯ ಜಟಿಲತೆ, ನೀವು ಬಳಸುವ ಫೀಚರ್‌ಗಳು ಮತ್ತು ನಿಮ್ಮ ಚಾಟ್‌ನ ಉದ್ದವನ್ನು ಆಧರಿಸಿ ನಿರ್ಧಾರವಾಗುತ್ತದೆ" ಎಂದು ಗೂಗಲ್ ಹೇಳಿದೆ. ಕ್ಲಾಡ್ ಮತ್ತು ಚಾಟ್‌ಜಿಪಿಟಿ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ.
ಈ ಟೋಕನ್ ಆಧಾರಿತ ದರ ಪದ್ಧತಿಯು ಬಹುತೇಕ ಕಂಪನಿಗಳು ಮತ್ತು ಸಾಮಾನ್ಯ ಬಳಕೆದಾರರ ಜೇಬಿಗೆ ಕತ್ತರಿ ಹಾಕುವುದರಲ್ಲಿ ಸಂಶಯವಿಲ್ಲ. ಬಿಲಿಯನ್ ಗಟ್ಟಲೆ ಲಾಭ ಗಳಿಸುವ ಮೈಕ್ರೋಸಾಫ್ಟ್‌ನಂತಹ ಶ್ರೀಮಂತ ಕಂಪನಿಗಳಿಗೂ ಈಗ ಈ ವೆಚ್ಚದ ಬಿಸಿ ತಟ್ಟುತ್ತಿದೆ. "ಪ್ರಾಯೋಗಿಕವಾಗಿ ನೋಡಿದಾಗ ಟೋಕನ್ ಆಧಾರಿತ ದರ ಸರಿ ಎನಿಸಬಹುದು. ಆದರೆ ಸಾವಿರಾರು ಉದ್ಯೋಗಿಗಳು ಪ್ರತಿದಿನ ಎಐ ಸಾಧನಗಳನ್ನು ಬಳಸಲು ಆರಂಭಿಸಿದಾಗ, ಈ ವೆಚ್ಚವನ್ನು ಭರಿಸುವುದು ಕಂಪನಿಗಳಿಗೆ ಅಸಾಧ್ಯವಾಗುತ್ತದೆ" ಅಂತಾರೆ ಫೆಕ್ಸೋ ಜೆನ್ ಎಐನ ಸಿಇಒ ಕೌಸ್ತುಭ್ ಕಶ್ಯಪ್.
ಈ ಟೋಕನ್ ವೆಚ್ಚ ಎಷ್ಟು ದುಬಾರಿಯಾಗಿದೆ ಎಂದರೆ, ತಂತ್ರಜ್ಞಾನ ವಲಯದ ಕೆಲವು ತಜ್ಞರು ಈಗ "ಎಐ ಬಳಸುವುದಕ್ಕಿಂತ ಮನುಷ್ಯರನ್ನು ಕೆಲಸಕ್ಕೆ ಇಟ್ಟುಕೊಳ್ಳುವುದೇ ಅಗ್ಗ" ಎನ್ನಲಾರಂಭಿಸಿದ್ದಾರೆ. ಎಐ ಅಲೆಯಲ್ಲಿ ತೇಲಿ ಜಗತ್ತಿನ ಅತ್ಯಂತ ದೊಡ್ಡ ಕಂಪನಿಯಾಗಿ ಹೊರಹೊಮ್ಮಿರುವ 'ಎನ್ವಿಡಿಯಾ' ಕೂಡ ಈ ಸತ್ಯವನ್ನು ಒಪ್ಪಿಕೊಂಡಿದೆ. ಎನ್ವಿಡಿಯಾ ಸಂಸ್ಥೆಯ ವೈಸ್ ಪ್ರೆಸಿಡೆಂಟ್ ಬ್ರಿಯಾನ್ ಕ್ಯಾಟನ್ಜಾರೊ ಇತ್ತೀಚೆಗೆ ತಮ್ಮ ತಂಡದ ಪರಿಸ್ಥಿತಿಯನ್ನು ಹಂಚಿಕೊಳ್ಳುತ್ತಾ, "ನಮಗೆ ಎಐ ಕಂಪ್ಯೂಟಿಂಗ್‌ಗೆ ಆಗುತ್ತಿರುವ ವೆಚ್ಚವು ನಮ್ಮ ಉದ್ಯೋಗಿಗಳಿಗೆ ನೀಡುವ ಸಂಬಳಕ್ಕಿಂತಲೂ ಎಷ್ಟೋ ಪಟ್ಟು ಹೆಚ್ಚಾಗಿದೆ" ಎಂಬ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಅಂದರೆ, ಅವರ ಲೆಕ್ಕಾಚಾರದ ಪ್ರಕಾರವೂ ಕ್ಲಾಡ್ ಕೋಡ್ ಟೋಕನ್‌ಗಳ ಬೆಲೆ ತೆರುವುದಕ್ಕಿಂತ, ಒಬ್ಬ ಸಮರ್ಥ ಉದ್ಯೋಗಿಯನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಇಂದಿನ ದಿನಗಳಲ್ಲಿ ಲಾಭದಾಯಕವಾಗಿದೆ.
►ಕಾರ್ಯತಂತ್ರದ ಮರುಪರಿಶೀಲನೆ ಅಗತ್ಯ
ಎಐ ತಂತ್ರಜ್ಞಾನದ ವೆಚ್ಚ ಹೆಚ್ಚಾಗುತ್ತಿದೆ ಎಂದಮಾತ್ರಕ್ಕೆ ಇದರ ಕ್ರೇಜ್ ಅಥವಾ ಉದ್ಯಮ ಸಂಪೂರ್ಣವಾಗಿ ಕುಸಿದುಬೀಳುತ್ತದೆ ಎಂದು ಅರ್ಥವಲ್ಲ ಎನ್ನುತ್ತಾರೆ ಉದ್ಯಮದ ತಜ್ಞರು. ಆದರೆ, ಇದು ಕಂಪನಿಗಳು ತಮ್ಮ ಎಐ ಕಾರ್ಯತಂತ್ರಗಳನ್ನು ಮರುಪರಿಶೀಲಿಸುವಂತೆ ಖಂಡಿತಾ ಮಾಡುತ್ತದೆ.
ಇಂಗ್ರಾಮ್ ಮೈಕ್ರೋ ಸಂಸ್ಥೆಯ ಕ್ಲೌಡ್ ಸಲ್ಯೂಷನ್ಸ್ ಮುಖ್ಯಸ್ಥ ಸುನಿಲ್ ಗೋಲಾನಿ ಅವರ ಪ್ರಕಾರ, "ಉದ್ಯಮಗಳು ಎಐ ತಂತ್ರಜ್ಞಾನವನ್ನು ಕೇವಲ ಶಾರ್ಟ್-ಟರ್ಮ್‌ನಲ್ಲಿ ಖರ್ಚು ಕಡಿಮೆ ಮಾಡುವ ಸಾಧನವಾಗಿ ನೋಡಬಾರದು. ಬದಲಿಗೆ ಅದನ್ನೊಂದು ದೀರ್ಘಾವಧಿಯ ಕಾರ್ಯತಂತ್ರದ ಹೂಡಿಕೆಯಾಗಿ ನೋಡಬೇಕು. ಚರ್ಚೆಗಳು ವೆಚ್ಚದ ಬದಲು ಅದರಿಂದ ಸಿಗುವ ಮೌಲ್ಯದ ಕಡೆಗೆ ತಿರುಗಬೇಕಿದೆ. ಎಐಗೆ ಎಷ್ಟು ಖರ್ಚಾಗುತ್ತದೆ ಎನ್ನುವುದಕ್ಕಿಂತ, ಅದು ಕಂಪನಿಯ ಮೌಲ್ಯವನ್ನು ಎಷ್ಟು ಹೆಚ್ಚಿಸುತ್ತದೆ ಎನ್ನುವುದು ಮುಖ್ಯ ಎಂದು ಹೇಳಿರುವುದಾಗಿ 'ಇಂಡಿಯಾ ಟುಡೇ' ವರದಿ ಉಲ್ಲೇಖಿಸಿದೆ
ಎಐ ಬಳಕೆಯಲ್ಲಿ ಕಂಪನಿಗಳು ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಅದರ ಬಳಕೆಯ ಪ್ರಮಾಣ. ಸದ್ಯ ಮೈಕ್ರೋಸಾಫ್ಟ್ ಸಂಸ್ಥೆಯು ಇದೇ ಸಮಸ್ಯೆಯಿಂದ ತತ್ತರಿಸುತ್ತಿದೆ. ವರದಿಗಳ ಪ್ರಕಾರ, ಮೈಕ್ರೋಸಾಫ್ಟ್ ಉದ್ಯೋಗಿಗಳು 'ಕ್ಲಾಡ್ ಕೋಡ್' ಅನ್ನು ಎಷ್ಟು ಅತಿಯಾಗಿ ಬಳಸುತ್ತಿದ್ದಾರೆ ಎಂದರೆ, ತೀರಾ ಸರಳವಾದ ಕೋಡಿಂಗ್ ಕೆಲಸಗಳಿಗೂ ಸಹ ಈ ಎಐ ಸಾಧನವು ಎರಡರಿಂದ ಮೂರು ಪಟ್ಟು ಹೆಚ್ಚು ಟೋಕನ್‌ಗಳನ್ನು ಬಳಸಿಕೊಳ್ಳುತ್ತಿದೆ.
ಇ-ಕಾಮರ್ಸ್ ಕಂಪನಿಯಾದ ‘ಮೊಗ್ಲಿಕ್ಸ್’ ಸಂಸ್ಥಾಪಕ ಮತ್ತು ಸಿಇಒ ರಾಹುಲ್ ಗಾರ್ಗ್ ಕೂಡ ಇದೇ ವಿಷಯವನ್ನು ಒತ್ತಿ ಹೇಳಿದ್ದಾರೆ. "ಖರ್ಚು ಹೆಚ್ಚಾಗುತ್ತಿರುವುದಕ್ಕೆ ಟೋಕನ್ ಬೆಲೆ ಕಾರಣವಲ್ಲ, ಬದಲಿಗೆ ನಾವು ಬಳಸುತ್ತಿರುವ ಪ್ರಮಾಣ ಕಾರಣ. ಕಳೆದ ಒಂದು ವರ್ಷದಲ್ಲಿ ಟೋಕನ್ ಬೆಲೆಗಳು ಶೇಕಡಾ 80 ರಷ್ಟು ಮತ್ತು ಮೂರು ವರ್ಷಗಳಲ್ಲಿ ಸುಮಾರು ಶೇಕಡಾ 99 ರಷ್ಟು ಕಡಿಮೆಯಾಗಿವೆ. ಇದೇ ಅವಧಿಯಲ್ಲಿ ಕಂಪನಿಗಳು ಎಐಗಾಗಿ ಮಾಡುತ್ತಿರುವ ಒಟ್ಟಾರೆ ಖರ್ಚು ಮೂರು ಪಟ್ಟು ಹೆಚ್ಚಾಗಿದೆ
ಗಾರ್ಗ್ ಅವರ ಪ್ರಕಾರ, ಸ್ವಯಂಚಾಲಿತವಾಗಿ ಕೆಲಸ ಮಾಡುವ 'ಏಜೆಂಟಿಕ್ ಎಐ ಪ್ರಕ್ರಿಯೆಗಳು ಸಾಮಾನ್ಯ ಚಾಟ್‌ಬಾಟ್‌ಗಳಿಗಿಂತ 5 ರಿಂದ 30 ಪಟ್ಟು ಹೆಚ್ಚು ಟೋಕನ್‌ಗಳನ್ನು ಬಳಸಿಕೊಳ್ಳುತ್ತವೆ. ಅಂದರೆ, ಬಿಡಿಬಿಡಿಯಾಗಿ ನೋಡಿದಾಗ ಎಐ ಬಳಕೆ ಅಗ್ಗ ಎನಿಸಿದರೂ, ಕಂಪನಿಗಳು ತಮ್ಮ ಎಲ್ಲಾ ವಿಭಾಗಗಳಲ್ಲೂ ಎಐ ಅನ್ನು ಅಳವಡಿಸುತ್ತಿರುವುದರಿಂದ ಒಟ್ಟಾರೆ ವೆಚ್ಚ ಗಗನಕ್ಕೇರುತ್ತಿದೆ.
ಅತಿಯಾದ ಬಳಕೆಗೆ ಬೀಳಬೇಕಿದೆ ಬ್ರೇಕ್:
ಝೈಸ್ ಇಂಡಿಯಾ ಸಂಸ್ಥೆಯ ಸಿಎಫ್‌ಒ ಧವಲ್ ರಾಡಿಯಾ ಅವರ ಪ್ರಕಾರ, ಹೆಚ್ಚುತ್ತಿರುವ ಈ ವೆಚ್ಚವು ಕಂಪನಿಗಳು ಕಣ್ಣುಮುಚ್ಚಿ ಎಐ ಅಳವಡಿಸಿಕೊಳ್ಳುವುದನ್ನು ತಡೆಯಲಿದೆ. "ಎಐ ತಂತ್ರಜ್ಞಾನವೇನೂ ದುಬಾರಿಯಾಗುತ್ತಿಲ್ಲ. ಬದಲಿಗೆ, ಯಾವುದೇ ಯೋಜನೆಯಿಲ್ಲದೆ ಅತಿಯಾಗಿ ಬಳಸಲ್ಪಡುತ್ತಿರುವ ಎಐ ಕಂಪನಿಗಳಿಗೆ ಹೊರೆಯಾಗುತ್ತಿದೆ.
ಉದ್ಯಮವು ಈಗ ಎಐನ ಬರೀ ‘ಪ್ರಾಯೋಗಿಕ ಹಂತ’ವನ್ನು ದಾಟಿ ಮುನ್ನಡೆಯುತ್ತಿದೆ. ಎಐ ಅಳವಡಿಕೆಯ ಮೊದಲ ಅಲೆಯು ಕೇವಲ ಕುತೂಹಲ ಮತ್ತು ಉತ್ಸಾಹದಿಂದ ಕೂಡಿತ್ತು. ಆದರೆ ಮುಂದಿನ ಅಲೆಯು ಹೊಣೆಗಾರಿಕೆಯಿಂದ ಕೂಡಿರಲಿದೆ. "ನಾವು ಈಗ ಇಂತಹದ್ದೊಂದು ಹಂತಕ್ಕೆ ಕಾಲಿಡುತ್ತಿದ್ದೇವೆ. ಇನ್ಮುಂದೆ ಕಂಪನಿಯ ಮುಖ್ಯಸ್ಥರು ಈ ಎಐ ಬಳಕೆಯಿಂದ ನಿಜವಾಗಿಯೂ ಎಷ್ಟು ಕೆಲಸ ಸುಲಭವಾಯಿತು? ನಾವು ಖರ್ಚು ಮಾಡುವ ಪ್ರತಿ ಟೋಕನ್‌ನಿಂದ ಕಂಪನಿಗೆ ಸಿಕ್ಕ ಲಾಭವೇನು?" ಎಂದು ಕೇಳಲಿದ್ದಾರೆ,
‘ಅವಾಲಿ ಸೊಲ್ಯೂಷನ್ಸ್’ ಸಂಸ್ಥಾಪಕಿ ಮತ್ತು ಸಿಇಒ ಶ್ರೀವಿದ್ಯಾ ಕಣ್ಣನ್ ಕೂಡ ರಾಡಿಯಾ ಅವರ ಅಭಿಪ್ರಾಯವನ್ನೇ ವ್ಯಕ್ತಪಡಿಸಿದ್ದಾರೆ. "ಹಲವು ಕಂಪನಿಗಳು ಎಐ ಅನ್ನು ಎಷ್ಟು ಜನ ಬಳಸುತ್ತಿದ್ದಾರೆ, ಎಷ್ಟು ಉದ್ಯೋಗಿಗಳಿಗೆ ತರಬೇತಿ ನೀಡಲಾಗಿದೆ ಎಂಬುದನ್ನು ಲೆಕ್ಕ ಹಾಕುವುದರಲ್ಲೇ ಕಾಲ ಕಳೆದವೇ ಹೊರತು, ಅದರಿಂದ ಆದ ಲಾಭವನ್ನು ಲೆಕ್ಕ ಹಾಕಲಿಲ್ಲ. ಮುಂದಿನ ದಿನಗಳಲ್ಲಿ ಎಐ ವೆಚ್ಚವನ್ನು ಕಂಪನಿಯ ನಿಜವಾದ ಬೆಳವಣಿಗೆಯೊಂದಿಗೆ ಹೋಲಿಸಿ ನೋಡಬೇಕಾಗುತ್ತದೆ" ಎಂದಿದ್ದಾರೆ.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಐ ಅಳವಡಿಸಿಕೊಳ್ಳದೇ ಇರಲು ಸಾಧ್ಯವೇ ಇಲ್ಲ. ಆದರೆ, ಅದನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವುದು ಮುಖ್ಯ. ಡೆಲಾಯ್ಟ್ ಇಂಡಿಯಾ ಸಂಸ್ಥೆಯ ಪಾಲುದಾರರಾದ ವಿಜಯ್ ಗೋಪಾಲಕೃಷ್ಣನ್ ಅವರು ಕಂಪನಿಗಳ ಮುಂದಿರುವ ಈ ಗೊಂದಲಕ್ಕೆ ಒಂದು ಪರಿಹಾರ ಸೂಚಿಸಿದ್ದಾರೆ. ಕಂಪನಿಗಳು ಸಿಕ್ಕ ಸಿಕ್ಕ ಕಡೆಯಲ್ಲೆಲ್ಲಾ ಎಐ ಬಳಸುವ ಬದಲು , ತಮ್ಮ ಬಿಸಿನೆಸ್‌ಗೆ ಎಲ್ಲಿ ನಿಜವಾಗಿ ಎಐ ಅಗತ್ಯವಿದೆಯೋ ಅಂತಹ ಜಾಗಗಳನ್ನು ಮಾತ್ರ ಗುರುತಿಸಿ ಬಳಸಬೇಕು. "ಎಐ ತಂತ್ರಜ್ಞಾನವು ಕಂಪನಿಗಳಿಗೆ ದುಬಾರಿಯಾಗಬೇಕಿಲ್ಲ. ಎಐ ಪರಿಹಾರಗಳನ್ನು ಸರಿಯಾದ ಯೋಜನೆ ಮತ್ತು ಪರಿಣಾಮಕಾರಿ ನಿರ್ವಹಣೆಯೊಂದಿಗೆ ಬಳಸಿದರೆ ವೆಚ್ಚವನ್ನು ಸುಲಭವಾಗಿ ನಿಯಂತ್ರಿಸಬಹುದು" ಎಂದು ಅವರು ಸಲಹೆ ನೀಡಿದ್ದಾರೆ.