Lucknow ಅಗ್ನಿ ದುರಂತ: 15 ಮೃತ್ಯು, ನಾಲ್ವರು ಅಧಿಕಾರಿಗಳು ಅಮಾನತು; ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಹೇಗೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ
Photo Credit : PTI
ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತ 15 ಜೀವಗಳನ್ನು ಬಲಿಪಡೆದ ಬೆನ್ನಲ್ಲೇ ಸರ್ಕಾರ ಕಠಿಣ ಕ್ರಮಗಳಿಗೆ ಮುಂದಾಗಿದೆ. ಘಟನೆ ನಡೆದ ಮರುದಿನವೇ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಅಲಿಗಂಜ್ ದುರಂತಕ್ಕೆ ಸಂಬಂಧಿಸಿದಂತೆ ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ. ಇತ್ತ ಪೊಲೀಸರು ಕಟ್ಟಡದ ಮಾಲೀಕ ಸೇರಿದಂತೆ ನಾಲ್ವರನ್ನು ಬಂಧಿಸಿದ್ದು, ಆರು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಕರಣದ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ಕೂಡ ರಚನೆಯಾಗಿದೆ. ಇಷ್ಟೆಲ್ಲ ಸರಣಿ ಬೆಳವಣಿಗೆಗಳ ನಡುವೆಯೂ, "ಆ ಬಹುಮಹಡಿ ಕಟ್ಟಡದಲ್ಲಿ ಮೊದಲು ಬೆಂಕಿ ಹೊತ್ತಿಕೊಂಡಿದ್ದು ಹೇಗೆ?" ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.
ರಕ್ಷಣಾ ಕಾರ್ಯಾಚರಣೆ ಮುಗಿದ ಕೆಲವೇ ಗಂಟೆಗಳಲ್ಲಿ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆರೋಪಿಗಳನ್ನು ರಾಮಕೃಷ್ಣ ಉಪಾಧ್ಯಾಯ, ವೀರೇಂದ್ರ ಪ್ರಸಾದ್ ಶುಕ್ಲಾ ಮತ್ತು ತುಷಾರ್ ಕೃಷ್ಣ ಜೈಸ್ವಾಲ್ ಎಂದು ಗುರುತಿಸಲಾಗಿದೆ. ನಾಲ್ಕನೇ ಆರೋಪಿಯನ್ನು ಇನ್ನೂ ಗುರುತಿಸಬೇಕಾಗಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ. ಆಸ್ತಿಯ ನಿಜವಾದ ಮಾಲೀಕ ಯಾರು ಎಂಬ ವಿವರವನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ.
ಮತ್ತೊಂದೆಡೆ, ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಗೌರವ್ ಕುಮಾರ್, ಕಾರ್ಯಪಾಲಕ ಇಂಜಿನಿಯರ್ (ವಸೂಲಾತಿ), ಕಮಲೇಂದ್ರ ಕುಮಾರ್ ಸಿಂಗ್, ಎಫ್‌ಎಸ್‌ಎಸ್‌ಒ (ಅಗ್ನಿಶಾಮಕ ಇಲಾಖೆ), ಅನಿಲ್ ಕುಮಾರ್, ಸಹಾಯಕ ಇಂಜಿನಿಯರ್ ಹಾಗೂ ಪ್ರಮೋದ್ ಪಾಂಡೆ, ಲಕ್ನೋ ನಗರಾಭಿವೃದ್ಧಿ ಪ್ರಾಧಿಕಾರದ ಕಿರಿಯ ಇಂಜಿನಿಯರ್ ಅವರನ್ನು ಅಮಾನತುಗೊಳಿಸಲಾಗಿದೆ. ಯಾವುದೇ ಹಿರಿಯ ಅಧಿಕಾರಿಯ ವಿರುದ್ಧ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ರಾಜ್ಯ ಸರ್ಕಾರದ ಮೂಲಗಳು ತಿಳಿಸಿವೆ.
ಲಕ್ನೋದ ಅಲಿಗಂಜ್ ಪ್ರದೇಶದಲ್ಲಿರುವ ಈ ಬಹುಮಹಡಿ ಕಟ್ಟಡದ ನೆಲಮಹಡಿಯಲ್ಲಿ ಸಾಕುಪ್ರಾಣಿಗಳ ಅಂಗಡಿ ಇತ್ತು. ಮೇಲಿನ ಮಹಡಿಯನ್ನು ಗೇಮಿಂಗ್ ಝೋನ್ ಮತ್ತು ಅನಿಮೇಷನ್ ತರಬೇತಿ ಸಂಸ್ಥೆಯಾಗಿ ಬಳಸಲಾಗುತ್ತಿತ್ತು. ಅಲ್ಲಿ ತರಬೇತಿದಾರರು ಹಾಗೂ ವಿದ್ಯಾರ್ಥಿಗಳು ಗೇಮಿಂಗ್ ಮತ್ತು ಸಾಫ್ಟ್‌ವೇರ್ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು the print ವರದಿ ಮಾಡಿದೆ.
ಬೇಸಿಗೆ ರಜೆಯ ಅವಧಿಯಲ್ಲಿ ಅನಿಮೇಷನ್ ಕಲಿಯಲು ಬಂದಿದ್ದ ವಿದ್ಯಾರ್ಥಿಗಳೇ ಬೆಂಕಿ ಅವಘಡದಲ್ಲಿ ಸಾವಿಗೀಡಾದವರಲ್ಲಿ ಹೆಚ್ಚಿನವರಾಗಿದ್ದರು.
"ಪ್ರಾಥಮಿಕ ತನಿಖೆಯ ಪ್ರಕಾರ, ಕಟ್ಟಡದ ಎಸಿ ಡಕ್ಟ್ ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿರಬಹುದು. ಕಟ್ಟಡದಿಂದ ಹೊರಹೋಗಲು ಸರಿಯಾದ ತುರ್ತು ನಿರ್ಗಮನ ದಾರಿ ಇಲ್ಲದ ಕಾರಣ, ದಟ್ಟ ಹೊಗೆಯಿಂದ ಉಸಿರುಗಟ್ಟಿ ಸಾವುಗಳು ಸಂಭವಿಸಿವೆ" ಎಂದು ಉತ್ತರ ಪ್ರದೇಶದ ನಗರಾಭಿವೃದ್ಧಿ ಮತ್ತು ಇಂಧನ ಸಚಿವ ಎ.ಕೆ. ಶರ್ಮಾ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಹೇಳಿರುವುದಾಗಿ The Print ವರದಿ ಉಲ್ಲೇಖಿಸಿದೆ.
ಕಟ್ಟಡದ ಸುರಕ್ಷತಾ ನಿಯಮಗಳ ಉಲ್ಲಂಘನೆಯಾಗಿರುವ ಸಾಧ್ಯತೆಯ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಶರ್ಮಾ ಹೇಳಿದ್ದಾರೆ. ಈ ಮಧ್ಯೆ, ಸಚಿವ ಶರ್ಮಾ ಅವರನ್ನು ಹೊರತುಪಡಿಸಿ ಬೇರೆ ಯಾವುದೇ ಹಿರಿಯ ಅಧಿಕಾರಿಗಳು ದುರಂತದ ಕಾರಣದ ಬಗ್ಗೆ ಬಹಿರಂಗವಾಗಿ ಪ್ರತಿಕ್ರಿಯೆ ನೀಡದ ಕಾರಣ, ಹಲವಾರು ಪ್ರಶ್ನೆಗಳು ಇನ್ನೂ ಉತ್ತರವಿಲ್ಲದೇ ಉಳಿದಿವೆ.
ಘಟನಾ ಸ್ಥಳದಲ್ಲಿದ್ದ ಸ್ಥಳೀಯ ನಿವಾಸಿ ವೀರೇಂದ್ರ ಕುಮಾರ್ ಮಾತನಾಡಿ, "ರಕ್ಷಣಾ ತಂಡಗಳು ಬದುಕುಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾಗ ಕಟ್ಟಡದ ಒಳಗಿನಿಂದ ಸಹಾಯಕ್ಕಾಗಿ ಕಿರುಚುತ್ತಿದ್ದವರ ಧ್ವನಿಗಳು ಕೇಳಿಸುತ್ತಿದ್ದವು" ಎಂದರು. ಅಲಿಗಂಜ್‌ನಂತಹ ವಸತಿ ಪ್ರದೇಶಗಳಲ್ಲಿರುವ ಹಲವಾರು ಬಹುಮಹಡಿ ವಾಣಿಜ್ಯ ಕಟ್ಟಡಗಳು ಯಾವುದೇ ಸೂಕ್ತ ಅಗ್ನಿಶಾಮಕ ಸುರಕ್ಷತಾ ಕ್ರಮಗಳಿಲ್ಲದೆ ಕಾರ್ಯನಿರ್ವಹಿಸುತ್ತಿವೆ ಎಂದು ಆರೋಪಿಸಿದ ಅವರು, ಇಂತಹ ನಿಯಮ ಉಲ್ಲಂಘನೆಗಳಿಗೆ ಅಧಿಕಾರಿಗಳು ಹೇಗೆ ಅವಕಾಶ ನೀಡಿದ್ದಾರೆ ಎಂದು ಪ್ರಶ್ನಿಸಿದರು.
ಈ ದುರಂತದಲ್ಲಿ ಪ್ರಾಣ ಕಳೆದುಕೊಂಡವರಲ್ಲಿ ಸುಖ್ಮನಿ ಕೂಡ ಒಬ್ಬರು. The print ಜೊತೆ ಮಾತನಾಡಿದ ಅವರ ಸ್ನೇಹಿತ ಯಶ್, "ಸುಖ್ಮನಿ ಕಳೆದ ನಾಲ್ಕು ವರ್ಷಗಳಿಂದ 3D ಅನಿಮೇಷನ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಆ ಕಚೇರಿಯಲ್ಲಿ ಸುಮಾರು 40 ಜನರು ಕೆಲಸ ಮಾಡುತ್ತಿದ್ದರು. ಅಲ್ಲಿನ ಮುಖ್ಯ ದ್ವಾರವು ಹೆಬ್ಬೆರಳಿನ ಗುರುತಿನ ಮೂಲಕ ಮಾತ್ರ ತೆರೆಯುವ ಸ್ವಯಂಚಾಲಿತ ವ್ಯವಸ್ಥೆಯನ್ನು ಹೊಂದಿತ್ತು" ಎಂದು ತಿಳಿಸಿದ್ದಾರೆ.
ಬೆಂಕಿ ಹರಡಿದ ಬಳಿಕ ಆ ಮುಖ್ಯ ಗೇಟ್ ಸ್ವಯಂಚಾಲಿತವಾಗಿ ಲಾಕ್ ಆಗಿಯೇ ಉಳಿಯಿತು. ಇದರಿಂದ ಅದನ್ನು ತೆರೆಯಲು ತಡವಾಯಿತು ಎನ್ನಲಾಗಿದೆ. ಈ ವಿಳಂಬವೇ ದುರಂತದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ನಂಬಲಾಗಿದೆ. ಇದರೊಂದಿಗೆ, ಆ ಮಹಡಿಯಲ್ಲಿ ಯಾವುದೇ ತುರ್ತು ನಿರ್ಗಮನ ದಾರಿ ಇಲ್ಲದಿರುವ ಬಗ್ಗೆಯೂ ಈಗ ಪ್ರಶ್ನೆಗಳು ಎದ್ದಿವೆ.
ದುರಂತದಲ್ಲಿ ಮೃತಪಟ್ಟ ಆದಿತ್ಯ ಶ್ರೀವಾಸ್ತವ ಅವರ ತಾಯಿ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟು, "ಮುಖ್ಯಮಂತ್ರಿಗಳ ಭೇಟಿಗಾಗಿ ಸಿದ್ಧತೆಗಳು ನಡೆಯುತ್ತಿದ್ದಾಗ ಅಧಿಕಾರಿಗಳು ತುಂಬಾ ಸಕ್ರಿಯವಾಗಿ ಕೆಲಸ ಮಾಡಿದರು. ಇದೇ ರೀತಿಯ ಜಾಗರೂಕತೆಯನ್ನು ಮೊದಲೇ ಕಾಯ್ದುಕೊಂಡಿದ್ದರೆ, ಬಹುಶಃ ಯುವ ಜೀವಗಳನ್ನು ಉಳಿಸಬಹುದಿತ್ತೋ ಏನೋ. ನನ್ನ ಮಗ ಅನಿಮೇಷನ್ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದ. ಅವನಿಗೆ ಕೇವಲ 25 ವರ್ಷ ವಯಸ್ಸಾಗಿತ್ತು. ಅಧಿಕಾರಿಗಳು ಸ್ವಲ್ಪ ಕಾಳಜಿ ವಹಿಸಿದ್ದರೂ ನನ್ನ ಮಗ ಇಂದು ಬದುಕಿರುತ್ತಿದ್ದ. ನನ್ನ ಇಡೀ ಪ್ರಪಂಚವೇ ಈಗ ಉರಿದು ಬೂದಿಯಾಗಿದೆ" ಎಂದು ತಮ್ಮ ಆಕ್ರೋಶ ಮತ್ತು ದುಃಖವನ್ನು ಹೊರಹಾಕಿದ್ದಾರೆ.
ಬೆಂಕಿಗೆ ಕಾರಣವೇನು ಎಂಬುದರ ಕುರಿತು ಇನ್ನೂ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ಹೊತ್ತಿಕೊಂಡ ಆ ನಿರ್ಣಾಯಕ ನಿಮಿಷಗಳಲ್ಲಿ ಏನೇನು ಸಂಭವಿಸಿತು ಎಂಬ ಘಟನೆಗಳ ಸರಣಿಯನ್ನು ಮರುಸೃಷ್ಟಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಆದಿತ್ಯನಾಥ್ ಅವರು, ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ ತಲಾ 50,000 ರೂ. ಪರಿಹಾರ ಘೋಷಿಸಿದ್ದಾರೆ. ಇದರೊಂದಿಗೆ, ಅಗ್ನಿ ದುರಂತದ ಸಮಗ್ರ ತನಿಖೆಗಾಗಿ ಇಬ್ಬರು ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ.
ಘಟನೆಯ ಬಳಿಕ ಲಕ್ನೋ ಆಡಳಿತವು ಮೃತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ದುರಂತದಲ್ಲಿ ಪ್ರಾಣ ಕಳೆದುಕೊಂಡವರನ್ನು ಸಾಗರ್, ಅನಾಮಿಕಾ, ಸಂಯಮ್, ಅನುಚ್ಚಾ, ಸುಖ್ಮನಿ, ಆದಿತ್ಯ ಶ್ರೀವಾಸ್ತವ, ಜ್ಯೋತಿ, ಭವಿಷ್ಯ, ನೀಲೇಶ್, ಅಬ್ದುಲ್ ರೆಹಮಾನ್, ಸೂರಜ್ ಭಾನ್, ಭಜನ್, ಜಯ್ನಿಲ್ ಚಕ್ರವರ್ತಿ, ಮೊಹಮ್ಮದ್ ಅಮ್ಮರ್ ಮತ್ತು ಸುಮಲ್ಯ ಎಂದು ಗುರುತಿಸಲಾಗಿದೆ. ಮೃತಪಟ್ಟವರೆಲ್ಲರೂ 20ರಿಂದ 25 ವರ್ಷ ವಯಸ್ಸಿನ ಯುವಕರು ಎಂದು ವರದಿಯಾಗಿದೆ.
ಗಾಯಗೊಂಡವರನ್ನು ಜಯಂತ್, ಲವ್‌ಪ್ರೀತ್, ಮೊಹಮ್ಮದ್ ಆಸಿಫ್, ಭುವನ್ ಶ್ರೀವಾಸ್ತವ, ಪಂಕಜ್, ಶೈಲೇಂದ್ರ, ಅಭಿಷೇಕ್ ಮತ್ತು ಪಂಕಜ್ ಜೋಶಿ ಎಂದು ಗುರುತಿಸಲಾಗಿದೆ.
ಲಕ್ನೋ ಅಗ್ನಿ ದುರಂತ ಪ್ರಕರಣ: ಇಲ್ಲಿವರೆಗಿನ ಬೆಳವಣಿಗೆಗಳು
ಫೈರ್ NOC ಇಲ್ಲದಿರುವುದು: ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, ವಸತಿ ಉದ್ದೇಶಕ್ಕಾಗಿ ಮೀಸಲಾಗಿದ್ದ ನಿವೇಶನದಲ್ಲಿ ಈ ಮೂರು ಮಹಡಿಯ ಕಟ್ಟಡವನ್ನು ನಿರ್ಮಿಸಲಾಗಿತ್ತು ಮತ್ತು ಇದಕ್ಕೆ ಅಗ್ನಿಶಾಮಕ ಇಲಾಖೆಯಿಂದ ಯಾವುದೇ ನಿರಾಕ್ಷೇಪಣಾ ಪತ್ರ (NOC) ಪಡೆದಿರಲಿಲ್ಲ. ಕಟ್ಟಡದ ಬೈಲಾಗಳ ಪ್ರಕಾರ, 15 ಮೀಟರ್‌ಗಿಂತ ಎತ್ತರವಿರುವ ಕಟ್ಟಡಗಳಿಗೆ ಮಾತ್ರ ಇಂತಹ ಪ್ರಮಾಣಪತ್ರಗಳು ಕಡ್ಡಾಯವಾಗಿವೆ. ಆದರೆ ಈ ಸಂಕೀರ್ಣವು ಅದಕ್ಕಿಂತ ಕಡಿಮೆ ಎತ್ತರ ಹೊಂದಿತ್ತು ಎಂದು ಲಕ್ನೋದ ಮುಖ್ಯ ಅಗ್ನಿಶಾಮಕ ಅಧಿಕಾರಿ ಅಂಕುಶ್ ಮಿತ್ತಲ್ ತಿಳಿಸಿದ್ದಾರೆ. "ಕಟ್ಟಡದ ನಿರ್ವಾಹಕರು ಎನ್‌ಒಸಿಗಾಗಿ ನಮ್ಮನ್ನು ಎಂದಿಗೂ ಸಂಪರ್ಕಿಸಿರಲಿಲ್ಲ" ಎಂದಿದ್ದಾರೆ.
ಕಟ್ಟಡಕ್ಕೆ ಬೀಗಮುದ್ರೆ: ಭೀಕರ ಅಗ್ನಿ ಅವಘಡದ ಬಳಿಕ, ಲಕ್ನೋ ಪೊಲೀಸರು ಅಲಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಆ ಕಟ್ಟಡಕ್ಕೆ ಬೀಗಮುದ್ರೆ ಹಾಕಿದ್ದು, ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾರೆ. ವಿಧಿವಿಜ್ಞಾನ ಮತ್ತು ಅಗ್ನಿಶಾಮಕ ಇಲಾಖೆಗಳು ಘಟನಾ ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಲು ಸಿದ್ಧತೆ ನಡೆಸುತ್ತಿವೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಎಫ್‌ಐಆರ್ ದಾಖಲು, ಎಸ್‌ಐಟಿ ತನಿಖೆ ಆರಂಭ: ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 110, 105, 125 ಮತ್ತು 3(5)ರ ಅಡಿಯಲ್ಲಿ ಹಾಗೂ ಉತ್ತರ ಪ್ರದೇಶ ಅಗ್ನಿಶಾಮಕ ಸೇವಾ ಕಾಯ್ದೆಯ ಸೆಕ್ಷನ್ 6 ಮತ್ತು 10ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಈ ನಡುವೆ, ಉತ್ತರ ಪ್ರದೇಶ ಸರ್ಕಾರವು ಘಟನೆಯ ತನಿಖೆಗಾಗಿ ಇಬ್ಬರು ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಿದೆ.
ಬಯೋಮೆಟ್ರಿಕ್ ಲಾಕ್ ನಿಂದಾಗಿ ತಪ್ಪಿಸಿಕೊಳ್ಳಲು ವಿಳಂಬ: ಬೆಂಕಿ ನಂದಿಸುತ್ತಿದ್ದ ಅಗ್ನಿಶಾಮಕ ಸಿಬ್ಬಂದಿಗೆ ಕಟ್ಟಡದ ಏಕೈಕ ಪ್ರವೇಶ ದ್ವಾರದ ಮೂಲಕ ಒಳಗೆ ಹೋಗಲು ಸಾಧ್ಯವಾಗಲಿಲ್ಲ. ಪ್ರವೇಶ ದ್ವಾರದಲ್ಲಿದ್ದ ಬಯೋಮೆಟ್ರಿಕ್ ಲಾಕಿಂಗ್ ವ್ಯವಸ್ಥೆಯೇ ಒಳಗೆ ಸಿಲುಕಿಕೊಂಡಿದ್ದವರು ತಕ್ಷಣ ಹೊರಬರಲು ಅಡ್ಡಿಯಾಯಿತು ಮತ್ತು ವಿಳಂಬಕ್ಕೆ ಕಾರಣವಾಯಿತು ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಎಲ್‌ಡಿಎ ನಿಗಾ ವಹಿಸುವಲ್ಲಿ ವೈಫಲ್ಯ: ವಸತಿ ನಿವೇಶನವೊಂದು ವರ್ಷಗಳಿಂದ ವಾಣಿಜ್ಯ ಸಂಕೀರ್ಣವಾಗಿ ಹೇಗೆ ಕಾರ್ಯನಿರ್ವಹಿಸುತ್ತಿತ್ತು ಎಂಬ ಪ್ರಶ್ನೆಗಳು ಎದ್ದಿದ್ದು, ಈ ಬೆಂಕಿ ಅವಘಡವು ಲಕ್ನೋ ನಗರಾಭಿವೃದ್ಧಿ ಪ್ರಾಧಿಕಾರದ ಕಣ್ಗಾವಲು ಮತ್ತು ನಿಯಮ ಜಾರಿಯಲ್ಲಿದ್ದ ಘೋರ ನಿರ್ಲಕ್ಷ್ಯವನ್ನು ಎತ್ತಿ ತೋರಿಸಿದೆ. ಅಧಿಕೃತ ದಾಖಲೆಗಳ ಪ್ರಕಾರ, 1,992 ಚದರ ಅಡಿಯ ಈ ಆಸ್ತಿಯನ್ನು 2013ರಲ್ಲಿ ವೀರೇಂದ್ರ ಮತ್ತು ಸುರೇಂದ್ರ ಎಂಬ ಸಹೋದರರು ಖರೀದಿಸಿದ್ದರು. 2014ರಲ್ಲಿ ಇದಕ್ಕೆ ಕೇವಲ ವಸತಿ ಬಳಕೆಗೆ ಮಾತ್ರ ಅನುಮೋದನೆ ನೀಡಲಾಗಿತ್ತು.
ಕಟ್ಟಡ ಧ್ವಂಸಕ್ಕೆ ನಿರ್ಧಾರ: ಅಲಿಗಂಜ್ ಕಟ್ಟಡವನ್ನು ಧ್ವಂಸಗೊಳಿಸಲು ಲಕ್ನೋ ನಗರಾಭಿವೃದ್ಧಿ ಪ್ರಾಧಿಕಾರವು ಮಂಗಳವಾರ ನೋಟಿಸ್ ಜಾರಿ ಮಾಡಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅನಧಿಕೃತ ನಿರ್ಮಾಣದ ಕಾರಣಕ್ಕಾಗಿ ಈ ಮೂರು ಮಹಡಿಯ ಕಟ್ಟಡಕ್ಕೆ 2016ರಲ್ಲೇ ಧ್ವಂಸ ಆದೇಶ ನೀಡಲಾಗಿತ್ತು. ಆದರೆ ಆ ನಿರ್ಧಾರವನ್ನು ಕೇವಲ ಎರಡು ತಿಂಗಳಲ್ಲೇ ರದ್ದುಗೊಳಿಸಲಾಗಿತ್ತು.
ಪಿಟಿಐ ವರದಿಯ ಪ್ರಕಾರ, ಈ ಕಟ್ಟಡವನ್ನು ಮೂಲತಃ 1980ರ ಜುಲೈ 11ರಂದು ಲಾಟರಿ ವ್ಯವಸ್ಥೆಯ ಮೂಲಕ ಬಾಡಿಗೆ-ಖರೀದಿ ಯೋಜನೆಯಡಿ ರಾಮೇಶ್ವರ್ ಸಹಾಯ್ ಅವರ ಪುತ್ರ ವಿಜಯ್ ಕುಮಾರ್ ಅವರಿಗೆ ಹಂಚಿಕೆ ಮಾಡಲಾಗಿತ್ತು.
2005ರಲ್ಲಿ ಈ ಆಸ್ತಿಯನ್ನು ಮಾರಾಟ ಪತ್ರದ ಮೂಲಕ ವಿಜಯ್ ಕುಮಾರ್ ಮತ್ತು ಅವರ ಪತ್ನಿ ಉಷಾ ಅವರ ಹೆಸರಿಗೆ ನೋಂದಾಯಿಸಲಾಯಿತು. ಬಳಿಕ 2013ರಲ್ಲಿ ವೀರೇಂದ್ರ ಪ್ರತಾಪ್ ಶುಕ್ಲಾ ಮತ್ತು ಸುರೇಂದ್ರ ಪ್ರತಾಪ್ ಶುಕ್ಲಾ ಅವರಿಗೆ ಮಾರಾಟ ಮಾಡಲಾಯಿತು. ಕಟ್ಟಡಕ್ಕೆ ಕೇವಲ ವಸತಿ ಬಳಕೆಗೆ ಮಾತ್ರ ಅನುಮೋದನೆ ಇದ್ದರೂ, ನಂತರ ಅಲ್ಲಿ ಕಾನೂನುಬಾಹಿರವಾಗಿ ಅನಧಿಕೃತ ನಿರ್ಮಾಣಗಳನ್ನು ಮಾಡಲಾಗಿತ್ತು. ಈ ಕುರಿತು ತನಿಖೆ ನಡೆಸಿದ ಬಳಿಕ, ಮೇ 2016ರಲ್ಲಿ ಈ ಅನಧಿಕೃತ ನಿರ್ಮಾಣದ ವಿರುದ್ಧ ಧ್ವಂಸ ಆದೇಶ ಹೊರಡಿಸಲಾಗಿತ್ತು.
ಎಲ್‌ಇಡಿ ಬಿಲ್‌ಬೋರ್ಡ್ ಅಥವಾ ಎಸಿ ಡಕ್ಟ್: ಬೆಂಕಿಯ ನಿಖರ ಕಾರಣ ಇನ್ನೂ ಅಸ್ಪಷ್ಟ
ಬೇಸ್‌ಮೆಂಟ್‌ನಲ್ಲಿ ಅಳವಡಿಸಲಾಗಿದ್ದ ಎಲ್‌ಇಡಿ ಬಿಲ್‌ಬೋರ್ಡ್ ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಆದರೆ ಉತ್ತರ ಪ್ರದೇಶದ ನಗರಾಭಿವೃದ್ಧಿ ಮತ್ತು ಇಂಧನ ಸಚಿವರು ಪಿಟಿಐಗೆ ನೀಡಿರುವ ಹೇಳಿಕೆಯಲ್ಲಿ, ಕಟ್ಟಡದ ಎಸಿ ಡಕ್ಟ್‌ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿರಬಹುದು ಎಂದು ತಿಳಿಸಿದ್ದಾರೆ.
ಈ ಮಧ್ಯೆ, ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರು, ಅಗ್ನಿ ಅವಘಡದ ನಿಖರ ಕಾರಣವನ್ನು ಪತ್ತೆಹಚ್ಚಲು ಹಾಗೂ ಇದು ಹೇಗೆ ಸಂಭವಿಸಿತು ಎಂಬುದನ್ನು ತಿಳಿಯಲು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.