ಹಳೆಯ ಫೋನ್ ಮಾರಾಟ ಮಾಡುವಾಗ ಫ್ಯಾಕ್ಟರಿ ರಿಸೆಟ್ ಮಾಡಿದ್ದರೂ ಡೇಟಾ ಸುರಕ್ಷತೆಗೆ ಕುತ್ತು!
ಸಾಂದರ್ಭಿಕ ಚಿತ್ರ | Photo Credit : magnific
ರಿಕಾಮರ್ಸ್ ಉದ್ಯಮವಾಗಿರುವ ಕ್ಯಾಶಿಫೈ ನಡೆಸಿರುವ ಸಮೀಕ್ಷೆಯಲ್ಲಿ ಫ್ಯಾಕ್ಟರಿ ರಿಸೆಟ್ ಮಾಡಿದ ಹೊರತಾಗಿಯೂ ಸೂಕ್ಷ್ಮ ವೈಯಕ್ತಿಕ ಡೇಟಾವನ್ನು ಮರುಮಾರಾಟ ಮಾಡಿದ ಸಾಧನದಿಂದ ಮರುಪಡೆಯಬಹುದು ಎಂಬ ಕಳವಳವನ್ನು ಅನೇಕ ಗ್ರಾಹಕರು ಮುಂದಿಟ್ಟಿದ್ದಾರೆ.
ಭಾರತದಲ್ಲಿ ಹಳೆಯ ಸ್ಮಾರ್ಟ್ಫೋನ್ಗಳ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ಬಳಸಿದ ಸಾಧನಗಳನ್ನು ಮರು ಮಾರಾಟ ಮಾಡುವುದು ಸಾಮಾನ್ಯವಾಗುತ್ತಿದೆ. ಆದರೆ ಫ್ಯಾಕ್ಟರಿ ರಿಸೆಟ್ ಮಾಡಿದ ಹೊರತಾಗಿಯೂ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೂ ಸೂಕ್ಷ್ಮ ವೈಯಕ್ತಿಕ ಡೇಟಾವನ್ನು ಮರುಮಾರಾಟ ಮಾಡಿದ ಸಾಧನದಿಂದ ಮರುಪಡೆಯಬಹುದು ಎಂಬ ಕಳವಳವನ್ನು ಅನೇಕ ಗ್ರಾಹಕರು ಮುಂದಿಟ್ಟಿದ್ದಾರೆ.
ಕ್ಯಾಶಿಫೈ ಪ್ರಕಟಿಸಿರುವ ಗ್ರಾಹಕ ಸಮೀಕ್ಷೆಯಲ್ಲಿ ಶೇ 83.3 ಕ್ಕಿಂತ ಹೆಚ್ಚು ಪ್ರತಿಕ್ರಿಯೆ ನೀಡಿದವರು ತಾವು ಸ್ಮಾರ್ಟ್ಫೋನ್ ಮಾರಾಟ ಮಾಡುವ ಮೊದಲು ಫ್ಯಾಕ್ಟರಿ ರಿಸೆಟ್ ಮಾಡಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ ಜೂನ್ 18 ಗುರುವಾರ ಭಾರತೀಯ ರಿಕಾಮರ್ಸ್ ವೇದಿಕೆಯಾಗಿರುವ ಕ್ಯಾಶಿಫೈ ಪ್ರಕಟಿಸಿರುವ ಗ್ರಾಹಕ ಸಮೀಕ್ಷೆಯ ಪ್ರಕಾರ ಶೇ 31ರಷ್ಟು ಮಂದಿ ಫೋನ್ನಿಂದ ಅಳಿಸಲಾದ ಡೇಟಾವನ್ನು ಯಶಸ್ವಿಯಾಗಿ ಮರುಪಡೆಯಲಾಗುತ್ತಿದೆ ಎಂದು ವರದಿ ಮಾಡಿದ್ದಾರೆ.
ಸುಮಾರು 8000 ಮಂದಿಯನ್ನು ಸಮೀಕ್ಷೆಯಲ್ಲಿ ಪ್ರಶ್ನಿಸಲಾಗಿತ್ತು. ಸ್ಮಾರ್ಟ್ಫೋನ್ ಮರುಮಾರಾಟ ಮತ್ತು ಡೇಟಾ ಗೌಪ್ಯತೆಯ ಮೇಲೆ ಈ ಸಮೀಕ್ಷೆ ಕೇಂದ್ರೀಕೃತವಾಗಿತ್ತು. ಸಮೀಕ್ಷೆಯ ಪ್ರಕಾರ ಸ್ಮಾರ್ಟ್ಫೋನ್ ಮರುಮಾರಾಟವು ಮುಖ್ಯವಾಹಿನಿಯ ಉದ್ಯಮವಾಗಿರುವಾಗ ಡೇಟಾ ಸುರಕ್ಷತೆಯ ಗ್ರಾಹಕರ ಆತಂಕವೂ ಏರುತ್ತಿದೆ.
ಫ್ಯಾಕ್ಟರಿ ರಿಸೆಟ್ ಹೊರತಾಗಿಯೂ ಎಲ್ಲಾ ಡೇಟಾವನ್ನು ಶಾಶ್ವತವಾಗಿ ಅಳಿಸಲು ಸಾಧ್ಯವಾಗಿರಲಿಲ್ಲ ಎಂದು ಶೇ 41.1ರಷ್ಟು ಪ್ರತಿಕ್ರಿಯಿಸಿದವರು ತಿಳಿಸಿದ್ದಾರೆ. ಶೇ 74ಕ್ಕಿಂತ ಹೆಚ್ಚು ಮಂದಿ ತಮ್ಮ ಸ್ಮಾರ್ಟ್ಫೋನ್ ಮರುಮಾರಾಟದ ನಂತರ ವೈಯಕ್ತಿಕ ಡೇಟಾದ ದುರುಪಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಕ್ಯಾಶಿಫೈನ ಗ್ರಾಹಕ ಸಮೀಕ್ಷೆಯು ಮರುಮಾರಾಟ ಮಾರುಕಟ್ಟೆಯಲ್ಲಿ ಡೇಟಾ ಸುರಕ್ಷತೆ ನಿರ್ಣಾಯಕ ನಂಬಿಕೆಯ ಸಮಸ್ಯೆಯಾಗಿರುವುದನ್ನು ಎತ್ತಿ ತೋರಿಸಿದೆ. ಸ್ಮಾರ್ಟ್ಫೋನ್ ಮರುಮಾರಾಟದ ಉದ್ಯಮ ದಿನೇದಿನೇ ಬೆಳೆಯುತ್ತಿರುವ ಸಂದರ್ಭದಲ್ಲಿ ಈ ಕಳವಳ ವ್ಯಕ್ತವಾಗಿದೆ. ಶೇ 56.6ರಷ್ಟು ಪ್ರತಿಕ್ರಿಯಿಸಿದವರು ತಾವು ಸಾಧನವನ್ನು ಮಾರಾಟ ಮಾಡಿದ್ದೇವೆ ಅಥವಾ ವಿನಿಮಯ ಮಾಡಿದ್ದೇವೆ ಎಂದು ಹೇಳಿದ್ದಾರೆ.
“ಇಂದು ಸಾಧನಗಳು ವೈಯಕ್ತಿಕ, ಹಣಕಾಸು ಮತ್ತು ಗುರುತಿನ ಡೇಟಾವನ್ನು ಹೊತ್ತೊಯ್ಯುತ್ತವೆ. ಹೀಗಾಗಿ ಮರುಮಾರಾಟ ಉದ್ಯಮ ಬೆಳೆಯುತ್ತಿರುವಾಗ ಡೇಟಾ ಸುರಕ್ಷತೆಯನ್ನು ವೈಯಕ್ತಿಕ ಹೊರೆಯಾಗಿ ನೀಡಲು ಸಾಧ್ಯವಿಲ್ಲ. ಸ್ಪಷ್ಟವಾದ ನೀತಿ ಚೌಕಟ್ಟುಗಳಿಂದ ಬೆಂಬಲಿತವಾದ ರಿಕಾಮರ್ಸ್ ಸಾಧ್ಯವಾಗುವ ವ್ಯವಸ್ಥೆ ಮತ್ತು ಸಂಘಟಿತ ಪ್ಲಾಟ್ಫಾರ್ಮ್ಗಳ ಡಿಫಾಲ್ಟ್ ಹೊಣೆಗಾರಿಕೆಯಾಗಬೇಕು” ಎಂದು ಕ್ಯಾಶಿಫೈನ ಸಹಸಂಸ್ಥಾಪಕ ನಕುಲ್ ಕುಮಾರ್ ಹೇಳಿದ್ದಾರೆ.
ಸಾಮಾನ್ಯವಾಗಿ ಫ್ಯಾಕ್ಟರಿ ರಿಸೆಟ್ನಂತಹ ಕ್ರಮವನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳಲಾಗಿದೆ. ಆದರೆ ಸಾಮಾನ್ಯವಾಗಿ ಬಳಸುವ ವಿಧಾನಗಳು ಸಂಪೂರ್ಣ ಅಳಿಸುವಿಕೆ ಖಾತರಿಪಡಿಸುವುದಿಲ್ಲ. ಡೇಟಾ ರಿಸೆಟ್ ಅಪಾಯಗಳ ಅರಿವು ಹೆಚ್ಚಾದಂತೆ ಸುರಕ್ಷತಾ ಕ್ರಮಗಳ ಕೊರತೆಯು ಗ್ರಾಹಕರ ಅಭಿಪ್ರಾಯವನ್ನು ರೂಪಿಸಲಿದೆ ಎಂದು ಸಮೀಕ್ಷೆಯ ವರದಿ ಹೇಳಿದೆ.
ಶೇ 45.3ರಷ್ಟು ಮಂದಿ ತಮ್ಮ ಸ್ಮಾರ್ಟ್ಫೋನ್ ಮರುಮಾರಾಟ ಮಾಡಲು ಆರಿಸಿಕೊಂಡಾಗ ಡೇಟಾ ಗೌಪ್ಯತೆ ಮತ್ತು ಸುರಕ್ಷತೆಯನ್ನು ಪ್ರಮುಖ ಅಂಶವೆಂದು ಪರಿಗಣಿಸುತ್ತಾರೆ. ಶೇ 29.5ರಷ್ಟು ಮಂದಿ ಬೆಲೆ ಮುಖ್ಯವೆಂದು ಅಭಿಪ್ರಾಯಪಟ್ಟಿದ್ದಾರೆ.
ಶೇ 68.6ರಷ್ಟು ಮಂದಿ ರಿಸೇಲ್ ಪ್ಲಾಟ್ಫಾರ್ಮ್ ಅನ್ನು ಹೆಚ್ಚು ವಿಶ್ವಾಸಾರ್ಹವೆಂದು ನಂಬುತ್ತಿರುವುದಾಗಿ ಹೇಳಿದ್ದಾರೆ. ಆದರೆ ಶೇ 83.3ರಷ್ಟು ಮಂದಿ ತಮ್ಮ ಸ್ಮಾರ್ಟ್ಫೋನ್ ಮಾರುವಾಗ ಡೇಟಾ ಅಳಿಸುವಿಕೆ ಪ್ರಮಾಣಪತ್ರ ಬಹಳ ಮುಖ್ಯ ಎಂದು ಹೇಳಿದ್ದಾರೆ. ಶೇ 87.2ರಷ್ಟು ಮಂದಿ ಸ್ಮಾರ್ಟ್ಫೋನ್ ಮಾರುವಾಗ ಡೇಟಾ ಅಳಿಸುವುದಕ್ಕೆ ಸಂಬಂಧಿಸಿ ಕಠಿಣ ಕಾನೂನುಗಳ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೃಪೆ: indianexpress.com