ಸೈಬರ್ ಲೋಕದಲ್ಲಿ ಹೊಸ ಸಂಚಲನ; ‘ಕ್ರಿಟಿಕಲ್’ ರೇಟಿಂಗ್ ನೊಂದಿಗೆ GPT-6 Cyber ಬಿಡುಗಡೆ ಮಾಡಿದ OpenAI
ಸಾಂದರ್ಭಿಕ ಚಿತ್ರ (Photo: Reuters)
GPT-6 Cyber ಅತ್ಯಂತ ಶಕ್ತಿಶಾಲಿ ಮತ್ತು ದುರುಪಯೋಗವಾಗುವ ಸಾಧ್ಯತೆ ಇರುವುದರಿಂದ ಮುಕ್ತವಾಗಿ ನೀಡಲಾಗಿಲ್ಲ. ಕೇವಲ ಸೂಕ್ತವಾಗಿ ಪರಿಶೀಲಿಸಲಾದ ಮತ್ತು ವಿಶ್ವಾಸಾರ್ಹ ಸಣ್ಣ ಗ್ರಾಹಕರ ಗುಂಪಿಗೆ ಮಾತ್ರ ಸದ್ಯಕ್ಕೆ ನೀಡಲಾಗಿದೆ.
OpenAI ಸಂಸ್ಥೆಯು ಸೈಬರ್ ಭದ್ರತೆಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾದ GPT-6 Cyber ಎಂಬ ಹೊಸ AI ಮಾಡೆಲ್ ಅನ್ನು ಬಿಡುಗಡೆ ಮಾಡಿದೆ. ಈ ಮಾಡೆಲ್ ಕಂಪ್ಯೂಟರ್ ಸಿಸ್ಟಂಗಳು, ನೆಟ್ ವರ್ಕ್ ಗಳು ಅಥವಾ ಸಾಫ್ಟ್ ವೇರ್ ಗಳಲ್ಲಿರುವ ಭದ್ರತಾ ಲೋಪಗಳನ್ನು ಪತ್ತೆಹಚ್ಚಬಲ್ಲದು ಮತ್ತು ಆ ಲೋಪಗಳನ್ನು ಬಳಸಿಕೊಂಡು ಸಿಸ್ಟಂ ಒಳಗೆ ಹೇಗೆ ನುಗ್ಗಬಹುದು ಎಂಬುದನ್ನು ತೋರಿಸಿಕೊಡಬಲ್ಲದು. ಇದು ಅತ್ಯಂತ ಶಕ್ತಿಶಾಲಿ ಮತ್ತು ದುರುಪಯೋಗವಾಗುವ ಸಾಧ್ಯತೆ ಇರುವುದರಿಂದ ಮುಕ್ತವಾಗಿ ನೀಡಲಾಗಿಲ್ಲ. ಕೇವಲ ಸೂಕ್ತವಾಗಿ ಪರಿಶೀಲಿಸಲಾದ ಮತ್ತು ವಿಶ್ವಾಸಾರ್ಹ ಸಣ್ಣ ಗ್ರಾಹಕರ ಗುಂಪಿಗೆ ಮಾತ್ರ ಸದ್ಯಕ್ಕೆ ನೀಡಲಾಗಿದೆ.
OpenAI ತನ್ನದೇ ಆದ ಸುರಕ್ಷತಾ ನಿಯಮಾವಳಿಗಳ ಅಡಿಯಲ್ಲಿ ಈ ಮಾಡೆಲ್ಗೆ ‘ಕ್ರಿಟಿಕಲ್’ ರೇಟಿಂಗ್ ನೀಡಿದೆ. ಅಂದರೆ, ಸೈಬರ್ ದಾಳಿಗಳನ್ನು ನಡೆಸಲು ಅಥವಾ ತಡೆಯಲು ಇದು ಹೆಚ್ಚಿನ ಸಾಮರ್ಥ್ಯ ಹೊಂದಿದ್ದು, ತಪ್ಪು ಕೈಗಳಿಗೆ ಸಿಕ್ಕರೆ ಅಪಾಯ ಉಂಟುಮಾಡುವ ಸಾಧ್ಯತೆ ಇದೆ.
ಈ ಹೊಸ AI ಮಾಡೆಲ್ ಜಗತ್ತಿನ ಅತಿದೊಡ್ಡ ಸಾಫ್ಟ್ವೇರ್ ವ್ಯವಸ್ಥೆಗಳಲ್ಲಿನ ರಹಸ್ಯ ದೋಷಗಳನ್ನು ಅತ್ಯಂತ ವೇಗವಾಗಿ ಪತ್ತೆಹಚ್ಚಿ, ಅವುಗಳನ್ನು ಬಳಸಿಕೊಂಡು ಹ್ಯಾಕ್ ಮಾಡಲು ಅಗತ್ಯವಾದ ಕೋಡ್ ಸಿದ್ಧಪಡಿಸಿದೆ. ಇದು ಸದುದ್ದೇಶದಿಂದ ಬಳಕೆಯಾದರೆ ಸಾಫ್ಟ್ವೇರ್ ಗಳನ್ನು ಇನ್ನಷ್ಟು ಸುರಕ್ಷಿತಗೊಳಿಸಬಹುದು. ಆದರೆ, ತಪ್ಪು ಕೈಗಳಿಗೆ ಸಿಕ್ಕರೆ ಜಾಗತಿಕವಾಗಿ ಸೈಬರ್ ದಾಳಿ ನಡೆಸಲು ಹ್ಯಾಕರ್ಗಳಿಗೆ ಭಾರಿ ಅಸ್ತ್ರ ಸಿಕ್ಕಂತಾಗುತ್ತದೆ.
ಅಂದರೆ, ನಾವು ಅಂತರ್ಜಾಲ ಬಳಸಲು ಉಪಯೋಗಿಸುವ ಪ್ರಸಿದ್ಧ ಫೈರ್ಫಾಕ್ಸ್ ಬ್ರೌಸರ್ನಲ್ಲಿ ಈವರೆಗೆ ಯಾರಿಗೂ ತಿಳಿದಿರದ 81 ಗಂಭೀರ ತಾಂತ್ರಿಕ ದೋಷಗಳನ್ನು ಈ AI ಪತ್ತೆಹಚ್ಚಿದೆ. ಹ್ಯಾಕರ್ ಗಳು ಅವುಗಳನ್ನು ಬಳಸುವ ಮೊದಲೇ ದೋಷಗಳನ್ನು ಪತ್ತೆಹಚ್ಚಿರುವುದರಿಂದ, ಮೊಝಿಲ್ಲಾ ಸಂಸ್ಥೆಗೆ ತನ್ನ ಬ್ರೌಸರ್ ಅನ್ನು ಅಪ್ಡೇಟ್ ಮಾಡಿ ಸುರಕ್ಷಿತಗೊಳಿಸಲು ಸಾಧ್ಯವಾಗಿದೆ.
ಲಿನಕ್ಸ್ ಕರ್ನಲ್ ಎನ್ನುವುದು ವಿಶ್ವದ ಬಹುತೇಕ ಸರ್ವರ್ ಗಳು, ಸೂಪರ್ ಕಂಪ್ಯೂಟರ್ ಗಳು ಮತ್ತು ಆಂಡ್ರಾಯ್ಡ್ ಫೋನ್ ಗಳ ತಳಹದಿಯಾಗಿದೆ. ಅಂತಹ ವ್ಯವಸ್ಥೆಯಲ್ಲಿ ಇದು 948 ದೋಷಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ. ಇವುಗಳಲ್ಲಿ 588 ದೋಷಗಳು ಹೊಸದಾಗಿದ್ದು, ಈವರೆಗೆ ಯಾರಿಗೂ ತಿಳಿದಿರಲಿಲ್ಲ. AI ಕೇವಲ ಲೋಪದೋಷಗಳನ್ನು ಹುಡುಕುವುದು ಮಾತ್ರವಲ್ಲದೆ, ಸಿಸ್ಟಂ ಒಳಗೆ ನುಗ್ಗಲು ನೆರವಾಗುವ ಕೋಡ್ ಅನ್ನೂ ಸ್ವತಃ ಸೃಷ್ಟಿಸಿದೆ. ಕಂಪನಿಯು ಪ್ರಸ್ತಾವಿತ ಪ್ಯಾಚ್ ಗಳ ಜೊತೆಗೆ 304 ನಿರ್ಣಾಯಕ ಲಿನಕ್ಸ್ ಸಂಶೋಧನೆಗಳನ್ನು ನಿರ್ವಹಣಾಕಾರರಿಗೆ ಬಹಿರಂಗಪಡಿಸಿದೆ.
OpenAI ತನ್ನ GPT-6 Cyber ಅನ್ನು ಸೈಬರ್ ಭದ್ರತಾ ವರ್ಗೀಕರಣದಡಿ ‘ಕ್ರಿಟಿಕಲ್’ (Critical) ಎಂಬ ಸುರಕ್ಷತಾ ಶ್ರೇಣಿಯಲ್ಲಿ ಇರಿಸಿದೆ. ಇದಕ್ಕೂ ಮೊದಲು GPT-5.6 ಅನ್ನು ಸೈಬರ್ ಭದ್ರತೆಯ ದೃಷ್ಟಿಯಿಂದ ‘ಹೈ’ (High) ಶ್ರೇಣಿಯಲ್ಲಿ ಇರಿಸಲಾಗಿತ್ತು.
AI ಅನ್ನು ದುರುಪಯೋಗಪಡಿಸಿಕೊಳ್ಳಲು ಹೆಚ್ಚಿನ ಪ್ರಯತ್ನಗಳು ನಡೆಯುತ್ತಿವೆ. ಇದರಲ್ಲಿ ದುರುದ್ದೇಶಪೂರಿತ ಸೈಬರ್ ಬಳಕೆದಾರರು ಮತ್ತು ತನ್ನ ಮಾಡೆಲ್ ಗಳನ್ನು ನಕಲಿಸಲು (distill) ಪ್ರಯತ್ನಿಸುವ ಗುಂಪುಗಳು ಸೇರಿವೆ ಎಂದು ಕಂಪನಿ ಹೇಳಿದೆ. ಹೀಗಾಗಿ, GPT-6 Cyber ಅನ್ನು ಡೇಬ್ರೇಕ್ ರೆಡ್ನ ಆಯ್ದ ಗ್ರಾಹಕರಿಗೆ ಮಾತ್ರ ಲಭ್ಯವಾಗುವಂತೆ ಮಾಡಲಾಗಿದೆ. ಇದು ಪೆನೆಟ್ರೇಶನ್ ಟೆಸ್ಟಿಂಗ್ ಮತ್ತು ಎಕ್ಸ್ಪ್ಲಾಯ್ಟ್ ಡೆವಲಪ್ಮೆಂಟ್ ನಂತಹ ಮುಂದುವರಿದ ಹಾಗೂ ಅಧಿಕೃತ ಭದ್ರತಾ ಕಾರ್ಯಗಳಿಗಾಗಿ ರೂಪಿಸಲಾದ OpenAI ಕಂಪನಿಯ ವಿಶೇಷ ಪ್ರವೇಶ ಶ್ರೇಣಿಯಾಗಿದೆ.
OpenAI ತನ್ನ ಸೈಬರ್ ಭದ್ರತಾ ವ್ಯವಸ್ಥೆಯನ್ನು ಎರಡು ಭಾಗಗಳಾಗಿ ವಿಂಗಡಿಸಿದೆ. ಅವುಗಳೆಂದರೆ ಡೇಬ್ರೇಕ್ ಬ್ಲೂ ಮತ್ತು ಡೇಬ್ರೇಕ್ ರೆಡ್. ಇವುಗಳಲ್ಲಿ ರೆಡ್ ಶ್ರೇಣಿಯಲ್ಲಿ ಅತ್ಯಂತ ಶಕ್ತಿಶಾಲಿ ಮತ್ತು ಅಪಾಯಕಾರಿ GPT-6 Cyber ಮಾಡೆಲ್ ಸೇರಿದೆ. ಈ ಮಾಡೆಲ್ ಗಳು ಎಲ್ಲರಿಗೂ ಮುಕ್ತವಾಗಿ ಲಭ್ಯವಿರುವುದಿಲ್ಲ. ಕೇವಲ ಕಟ್ಟುನಿಟ್ಟಿನ ಹಿನ್ನೆಲೆ ಪರಿಶೀಲನೆಗೆ ಒಳಪಟ್ಟ ಸೈಬರ್ ಭದ್ರತಾ ಕಂಪನಿಗಳು, ಸರ್ಕಾರಿ ರಕ್ಷಣಾ ಗುತ್ತಿಗೆದಾರರು ಮತ್ತು ದೊಡ್ಡ ತಂತ್ರಜ್ಞಾನ ಸಂಸ್ಥೆಗಳು ಮಾತ್ರ ಇದರ ಗ್ರಾಹಕರಾಗಲು ಸಾಧ್ಯವಿದೆ.
ಮುಂದಿನ ವಾರಗಳಲ್ಲಿ GPT-6 Cyber ಪ್ರವೇಶವನ್ನು ಎಲ್ಲ ಅನುಮೋದಿತ ಡೇಬ್ರೇಕ್ ರೆಡ್ ಗ್ರಾಹಕರಿಗೂ ವಿಸ್ತರಿಸಲಾಗುವುದು ಎಂದು ಕಂಪನಿ ಹೇಳಿದೆ. OpenAI ನಿನ್ನೆಯಿಂದ ತನ್ನ ಹಿಂದಿನ GPT-5.6 Cyber ಮಾಡೆಲ್ ಅನ್ನು ಎಲ್ಲ ಡೇಬ್ರೇಕ್ ರೆಡ್ ಗ್ರಾಹಕರಿಗೆ ಲಭ್ಯವಾಗುವಂತೆ ಮಾಡಿದೆ.