ಸರಕಾರಿ ಶಿಕ್ಷಕರ ದಕ್ಷತೆ ಕುರಿತ ಸಿಎಂ ಪುತ್ರಿ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ‘ಕ್ಲಾಸ್’!
“40 ಸಾವಿರ ಶಿಕ್ಷಕರ ಖಾಲಿ ಹುದ್ದೆ ಭರ್ತಿ ಮಾಡಲಿ, ಚುನಾವಣೆ, ಜನಗಣತಿ ಕೆಲಸಗಳಿಗೆ ಬಳಕೆ ನಿಲ್ಲಲಿ”
ಐಶ್ವರ್ಯಾ ಹೆಗ್ಡೆ
ಬೆಂಗಳೂರು: ಸರ್ಕಾರಿ ಶಾಲೆಗಳ ಗುಣಮಟ್ಟ ಕುಸಿಯಲು ಶಿಕ್ಷಕರಲ್ಲಿನ ದಕ್ಷತೆಯ ಕೊರತೆಯೇ ಕಾರಣ ಎಂಬ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಹೆಗ್ಡೆ ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ. ಶಿಕ್ಷಕರ ಕಾರ್ಯಕ್ಷಮತೆಯನ್ನು ಪ್ರಶ್ನಿಸುವ ಮೊದಲು ಸರ್ಕಾರಿ ಶಾಲೆಗಳ ಇಂದಿನ ಸ್ಥಿತಿಗೆ ಸರ್ಕಾರದ ಜವಾಬ್ದಾರಿಯನ್ನು ಪರಿಶೀಲಿಸಬೇಕು ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ 'ನಮ್ಮ ಶಾಲೆ ನಮ್ಮ ಜವಾಬ್ದಾರಿ' ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಹೆಗ್ಡೆ, ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಲಕ್ಷಕ್ಕೂ ಅಧಿಕ ಸಂಬಳ ನೀಡುತ್ತಿದ್ದರೂ ಕೆಲವರು ಐದು ದಿನ ಸರಿಯಾಗಿ ಶಾಲೆಗೆ ಬರುತ್ತಿಲ್ಲ ಎಂದು ಹೇಳಿದ್ದರಲ್ಲದೆ, ಇದರಿಂದ ಶಿಕ್ಷಣದ ದಕ್ಷತೆ ಕಡಿಮೆಯಾಗುತ್ತಿದೆ ಎಂಬರ್ಥದಲ್ಲಿ ಟೀಕಿಸಿದ್ದರು.
ಐಶ್ವರ್ಯಾ ಮಾತನಾಡುವ ವೀಡಿಯೊವನ್ನು ಹಂಚಿಕೊಂಡು ಹಲವು ನೆಟ್ಟಿಗರು ಸಿಎಂ ಪುತ್ರಿಯ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಖಾತೆಗಳಿಂದ ವ್ಯಕ್ತವಾಗಿರುವ ಪ್ರತಿಕ್ರಿಯೆಗಳಲ್ಲಿ ಶಿಕ್ಷಕರ ಕೊರತೆ, ಬೋಧನೆಯೇತರ ಕೆಲಸಗಳ ಹೊರೆ, ಅತಿಥಿ ಶಿಕ್ಷಕರಿಗೆ ನೀಡಲಾಗುತ್ತಿರುವ ಗೌರವಧನ, ಸರ್ಕಾರಿ ಶಾಲೆಗಳ ಮೂಲಸೌಕರ್ಯ ಮತ್ತು ಖಾಸಗೀಕರಣದ ಆತಂಕಗಳು ಪ್ರಮುಖವಾಗಿ ಪ್ರಸ್ತಾಪವಾಗಿವೆ.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಗಳ ಪ್ರಕಾರ ಸರ್ಕಾರಿ ಶಾಲೆಗಳು ಅದ್ವಾನ ಆಗಿರೋದಿಕ್ಕೆ ಕಾರಣ ರಾಜಕಾರಣಿಗಳಲ್ಲ, ಶಿಕ್ಷಕರು. ಸರ್ಕಾರಿ ಶಿಕ್ಷಕರಿಗೆ ದಕ್ಷತೆ ಇಲ್ಲವಂತೆ!
ಅಪ್ಪ ಸರ್ಕಾರಿ ಶಾಲೆಗಳನ್ನು ಖಾಸಗಿಯವರ ಕೈಗೆ ಕೊಡೋಕೆ ರೆಡಿ. ಮಗಳು ಖಾಸಗಿಯವರು ಹೇಗೆ ಅದನ್ನು ನಡೆಸಬೇಕು ಅನ್ನೋದನ್ನು ಹೇಳೋಕೊಡುತ್ತಾರೆ.
ಸರ್ಕಾರಿ ಶಾಲೆಗಳನ್ನು ನೋಡಿಕೊಳ್ಳಲು ಖಾಸಗಿ ಶಾಲೆಗಳಿಗೆ ವಹಿಸುವುದು, ಕುರಿಮಂದೆ ಕಾಯಲು ತೊಳಗಳನ್ನು ನೇಮಿಸಿದಂತೆ.
ರಿಯಲ್ ಎಸ್ಟೇಟ್ ವ್ಯಾಪಾರಿಗಳು ರಾಜಕಾರಣಿಗಳಾದರೆ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ ಕನ್ನಡ ಜನತೆ?
— Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ | (@ShyamSPrasad) November 5, 2026
ಇವಮ್ಮ MLA ಅಲ್ಲ, MP ಅಲ್ಲ, MLC ಅಲ್ಲ ಯಾಕೆ ಹಿಂಗೆ ಮಾತಾಡ್ತಾ ಇದಾಳೆ.
ಯಾವುದಾದರೂ ಸಂಘದ ಅಧ್ಯಕ್ಷರಾ ಹ್ಯಾಂಗೆ??
— ಸಂಗಮ (@Rakkasa007) November 5, 2026
'ದಶಕಗಳಿಂದ ಅಧಿಕಾರದಲ್ಲಿರುವವರು ಜವಾಬ್ದಾರಿ ಹೊರುವುದಿಲ್ಲವೇ?'
'ಶಿಕ್ಷಕರಿಗೆ ದಕ್ಷತೆ ಇಲ್ಲ ಎಂದು ಮುಖ್ಯಮಂತ್ರಿ ಪುತ್ರಿ ಹೇಳುತ್ತಿದ್ದಾರೆ. ಅವರ ತಂದೆ ದಶಕಗಳಿಂದ ಅಧಿಕಾರದಲ್ಲಿದ್ದಾರೆ. ಸರ್ಕಾರಿ ಶಾಲೆಗಳನ್ನು ನಿರ್ಲಕ್ಷಿಸಿ ಖಾಸಗಿ ಶಾಲೆಗಳಿಗೆ ಜಮೀನು ಮಾರುವ ಯೋಜನೆ ರೂಪಿಸುತ್ತಿರುವಾಗ ಈಗ ಶಿಕ್ಷಕರ ಮೇಲೆ ತಪ್ಪು ಹೊರಿಸುವುದು ಎಷ್ಟು ಸರಿ? ಇಷ್ಟು ವರ್ಷ ಅಧಿಕಾರದಲ್ಲಿದ್ದು ಸರ್ಕಾರಿ ಶಾಲೆಗಳನ್ನು ಈ ಸ್ಥಿತಿಗೆ ತಂದವರು ಯಾರು? ಶಿಕ್ಷಕರಿಗೆ ಲಕ್ಷಾಂತರ ರೂಪಾಯಿ ಸಂಬಳ ನೀಡುತ್ತೇವೆ ಎಂದು ಹೇಳುವವರು, ಅದೇ ಶಿಕ್ಷಕರನ್ನು ಜನಗಣತಿ, ಚುನಾವಣೆ ಕರ್ತವ್ಯ, ದತ್ತಾಂಶ ನಮೂದು ಮತ್ತು ಪೋಲಿಯೊ ಅಭಿಯಾನ ಸೇರಿದಂತೆ ಹಲವು ಕೆಲಸಗಳಿಗೆ ನಿಯೋಜಿಸುತ್ತಾರೆ. ತರಗತಿಯಲ್ಲಿ ಪಾಠ ಮಾಡಲು ಸಮಯವೇ ಇಲ್ಲದಂತೆ ಮಾಡುತ್ತಾರೆ. ಬಳಿಕ ಶಿಕ್ಷಕರಲ್ಲಿ ದಕ್ಷತೆ ಇಲ್ಲ ಎಂದು ಆರೋಪಿಸುವುದು ಸರಿಯಲ್ಲ' ಎಂದು ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಆಕ್ಷೇಪಿಸಿದ್ದಾರೆ.
ಶಿಕ್ಷಕರನ್ನು ಚುನಾವಣೆ, ಜನಗಣತಿ, ಡೇಟಾ ಎಂಟ್ರಿ ಸೇರಿದಂತೆ ವಿವಿಧ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಇಷ್ಟೆಲ್ಲ ಕೆಲಸಗಳ ನಡುವೆ ತರಗತಿಯಲ್ಲಿ ಪಾಠ ಮಾಡಲು ಸಮಯವೇ ಉಳಿಯುವುದಿಲ್ಲ. ಈ ಸಮಸ್ಯೆಗಳನ್ನು ಬಗೆಹರಿಸದೆ ಶಿಕ್ಷಕರನ್ನು ಅಸಮರ್ಥರೆಂದು ಕರೆಯುವುದು ಅನ್ಯಾಯ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
ರಾಜ್ಯದಲ್ಲಿ 40 ಸಾವಿರ ಶಿಕ್ಷಕರ ಕೊರತೆ ಇದೆ. ಅತಿಥಿ ಶಿಕ್ಷಕರಿಗೆ 11 ಸಾವಿರ ರೂ. ಗೌರವಧನ ನೀಡಲಾಗುತ್ತಿದೆ. ಖಾಯಂ ಶಿಕ್ಷಕರಿಗೆ 1ರಿಂದ 1.5 ಲಕ್ಷ ರೂ.ವರೆಗೆ ವೇತನ ಸಿಗುತ್ತದೆ. ಈ ವ್ಯವಸ್ಥೆಯಲ್ಲಿನ ಅಸಮಾನತೆ ಮತ್ತು ಶಿಕ್ಷಕರ ಕೊರತೆಯ ಬಗ್ಗೆ ಮಾತನಾಡದೆ ಶಿಕ್ಷಕರನ್ನೇ ಗುರಿಯಾಗಿಸುವುದು ಏಕೆ? ಎಂದೂ ಹಲವರು ಪ್ರಶ್ನಿಸಿದ್ದಾರೆ.
ಖಾಸಗಿ ಶಾಲೆಗಳ ಮಾಲೀಕರು, ರಿಯಲ್ ಎಸ್ಟೇಟ್ ಲಾಬಿ ಮತ್ತು ರಾಜಕಾರಣಿಗಳ ಹಿತಾಸಕ್ತಿಗಳ ನಡುವೆ ಸರ್ಕಾರಿ ಶಾಲೆಗಳು ನಿಧಾನವಾಗಿ ದುರ್ಬಲವಾಗುತ್ತಿವೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಪುತ್ರಿಯೇ ಸರ್ಕಾರಿ ಶಿಕ್ಷಕರನ್ನು ಹೊಣೆಗಾರರನ್ನಾಗಿ ಮಾಡುತ್ತಿರುವುದು ಸರಿಯಲ್ಲ. ಬಡವರ ಮಕ್ಕಳು ಓದುವ ಸರ್ಕಾರಿ ಶಾಲೆಗಳನ್ನು ಉದ್ದೇಶಪೂರ್ವಕವಾಗಿ ದುರ್ಬಲಗೊಳಿಸಿ ಖಾಸಗಿ ಶಾಲೆಗಳತ್ತ ವಿದ್ಯಾರ್ಥಿಗಳನ್ನು ತಳ್ಳುವ ಪ್ರಯತ್ನ ನಡೆಯುತ್ತಿದೆ. ಈಗ ಶಿಕ್ಷಕರ ಮೇಲೆ ತಪ್ಪು ಹೊರಿಸುವ ಮೂಲಕ ಜನರ ಗಮನ ಬೇರೆಡೆ ಸೆಳೆಯಲಾಗುತ್ತಿದೆ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಕನ್ನಡ ಚಲನಚಿತ್ರ ನಿರ್ದೇಶಕ ಗಿರಿರಾಜ್ ಬಿ.ಎಂ. ಅವರು ಈ ಕುರಿತು ಫೇಸ್ಬುಕ್ ನಲ್ಲಿ ಪ್ರತಿಕ್ರಿಯಿಸಿದ್ದು, “ನನ್ನ ಮಗ ಸರ್ಕಾರಿ ಕನ್ನಡ ಮಾಧ್ಯಮದ ಶಾಲೆಯಲ್ಲೇ ಓದುತ್ತಿರುವುದು. ಅಲ್ಲಿನ ಶಿಕ್ಷಕರ ದಕ್ಷತೆ ಬಗ್ಗೆ ಎರಡು ಮಾತಿಲ್ಲ. ಈ ನಡುವೆ ಸೆನ್ಸಸ್, ಎಲೆಕ್ಷನ್, ಪೋಲಿಯೊ ಎಲ್ಲ ಕೆಲಸಕ್ಕೂ ಅವರನ್ನೇ ಬಳಸಿಕೊಳ್ಳುತ್ತಾರೆ. ಹಾಗಿದ್ದರೂ ಅಲ್ಲಿನ ಮಕ್ಕಳು ಪ್ರತಿ ಸಲ ಪಠ್ಯಕ್ರಮವನ್ನು ಪೂರ್ಣಗೊಳಿಸುತ್ತಾರೆ. ಅಲ್ಲಿನ ಮಕ್ಕಳ ಪ್ರಪಂಚ ಜ್ಞಾನ, ಕನ್ನಡತನ ಮತ್ತು ಚರ್ಚಿಸುವ ಪ್ರಬುದ್ಧತೆ ಖಾಸಗಿ ಶಾಲೆಯ ಫಾರ್ಮ್ ಕೋಳಿಗಳಿಗಿಂತ ಹೆಚ್ಚಿನದು.
ಆದರೆ ಎಷ್ಟೋ ಶಾಲೆಗಳಲ್ಲಿ ಶಿಕ್ಷಣದ ಸ್ಥಿತಿ ಅದ್ವಾನ ಆಗಿರುವುದು ನಿಜ. ಈಗ ಇದನ್ನು ಸರಿಪಡಿಸಬೇಕಾದದ್ದು ಯಾರು? ಸರ್ಕಾರಿ ಶಾಲೆಯ ಜಮೀನನ್ನು ಖಾಸಗಿಯವರಿಗೆ ಮಾರುವ ಒಂದೇ ರಿಯಲ್ ಎಸ್ಟೇಟ್ ಗುರಿಗಾಗಿ ದಶಕಗಳಿಂದ ವ್ಯವಸ್ಥಿತವಾಗಿ ಬಡವರ ಮಕ್ಕಳ ಬಾಳನ್ನು ಹಾಳು ಮಾಡುತ್ತಿರುವವರು ರಾಜಕಾರಣಿಗಳೇ. ಎಲ್ಲರೂ ಶಿಕ್ಷಣ ಸಂಸ್ಥೆಯ ಹೆಸರಲ್ಲಿ ಎಜುಕೇಶನ್ ಕಂಪನಿ ತೆಗೆದು, ಅಪರಿಚಿತ ಶಕ್ತಿ ಇದ್ದರೂ ಬರೀ ಇಂಗ್ಲಿಷ್ ಮಾತ್ರ ಬರುವ, ಇನ್ನೊಂದು ಜೀವಕ್ಕೆ ಸ್ಪಂದಿಸುವ ಎಲ್ಲ ಮನುಷ್ಯ ಅಂತಃಕರಣವನ್ನು ಕಳೆದುಕೊಳ್ಳುವ ಅರೆಬೆಂದ ಪ್ರಜೆಗಳನ್ನು ತಯಾರಿಸುತ್ತಿದ್ದಾರೆ.
ಇವರಿಗೆ ಸರ್ಕಾರಿ ಶಾಲೆಯಲ್ಲಿ ಬಡವರ ಮಕ್ಕಳು ಗೆದ್ದುಬಿಟ್ಟರೆ ಎಲ್ಲಿ ತಮ್ಮ ಹುನ್ನಾರ ನಡೆಯುವುದಿಲ್ಲವೋ ಅನ್ನುವ ಆತಂಕ. ಅದಕ್ಕಾಗಿ ಅವರಿಂದ ಬದುಕುವ ಎಲ್ಲ ಅವಕಾಶಗಳನ್ನು ಹಂತ ಹಂತವಾಗಿ ಕಸಿದುಕೊಳ್ಳುವ ದ್ರೋಹದ ಕೆಲಸಕ್ಕೆ ಕೈಹಾಕಿ ದಶಕಗಳೇ ಆಗಿಹೋಗಿವೆ. ಈಗ ಈ ಮಾತುಗಳೆಲ್ಲವೂ ವ್ಯವಸ್ಥಿತವಾಗಿ ತಮ್ಮ ದುರಾಸೆಯನ್ನು ಕೊನೆಯ ಹಂತಕ್ಕೆ ತೆಗೆದುಕೊಂಡು ಹೋಗುವ ಹುನ್ನಾರದ ಮುಂದುವರಿದ ಭಾಗವೇ. ಜನರು ಸರ್ಕಾರಿ ಶಾಲೆ ಮುಚ್ಚಿದಾಗ ಅವರ ಮನಸ್ಸಲ್ಲಿ ಯಾವುದೇ ಸಿಟ್ಟು ಬರದಿರಲಿ ಅನ್ನೋ ಕಾರಣಕ್ಕೆ ಇಂತಹ ಮಾತುಗಳನ್ನು ಹೇಳಿ ಹೇಳಿ ನಮ್ಮನ್ನು ನಂಬ್ (numb) ಮಾಡಲಾಗುತ್ತಿದೆ” ಎಂದು ಹೇಳಿದ್ದಾರೆ.