ಕನಿಷ್ಠ 3 ವರ್ಷಗಳ ಅನುಭವ ಕಡ್ಡಾಯ, ಆದರೆ ವಕೀಲ ವೃತ್ತಿಯಲ್ಲೇ ಇರಬೇಕಿಲ್ಲ: ನ್ಯಾಯಾಧೀಶರ ಆಯ್ಕೆ ನಿಯಮ ಬದಲಿಸಿದ ಸುಪ್ರೀಂ ಕೋರ್ಟ್
►ಅಮಲ್ ಶೇಖ್ - indianexpress. com ವರದಿ
ಸುಪ್ರೀಂ ಕೋರ್ಟ್ | Photo Credit : PTI
ಕೆಳಹಂತದ ನ್ಯಾಯಾಂಗ ಸೇವೆಗೆ ಪ್ರವೇಶಿಸುವ ಮೊದಲು ವೃತ್ತಿಪರ ಅನುಭವ ಹೊಂದಿರಬೇಕು ಎಂಬ ತನ್ನ 2025ರ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಶುಕ್ರವಾರ (ಆಗಸ್ಟ್ 21) ಎತ್ತಿಹಿಡಿದಿದೆ. ಆದರೆ, 2:1 ಬಹುಮತದ ಈ ತೀರ್ಪಿನಲ್ಲಿ ಆ ಅನುಭವದ ನಿಯಮಗಳು ಹೇಗೆ ಅನ್ವಯಿಸಬೇಕು ಎಂಬುದರಲ್ಲಿ ಪ್ರಮುಖ ಬದಲಾವಣೆ ಮಾಡಿದೆ.
ಭವಿಷ್ಯದ ನ್ಯಾಯಾಧೀಶರಿಗೆ ನ್ಯಾಯಾಲಯಗಳ ಕಾರ್ಯನಿರ್ವಹಣೆಯ ಬಗ್ಗೆ ಮುಂಚಿತವಾಗಿಯೇ ಪರಿಚಯವಿರಬೇಕು ಎಂಬ ತನ್ನ ಮೂಲ ತೀರ್ಮಾನವನ್ನು ಬದಲಿಸಲು ನ್ಯಾಯಾಲಯ ನಿರಾಕರಿಸಿದೆ. ಆದರೆ, ಈ ಅನುಭವವು ವಕೀಲ ವೃತ್ತಿಯಿಂದಲೇ ಬರಬೇಕಿಲ್ಲ ಎಂದು ಸ್ಪಷ್ಟಪಡಿಸಿದೆ. ಬದಲಿಗೆ, ಒಂದು ವರ್ಷದ ನ್ಯಾಯಾಂಗ ಶೈಕ್ಷಣಿಕ ತರಬೇತಿ ಮತ್ತು ಒಂದು ವರ್ಷದ ಮೇಲ್ವಿಚಾರಣೆಯ ಕ್ಲರ್ಕ್ಶಿಪ್ ಅನುಭವವನ್ನೂ ಇದಕ್ಕೆ ಸೇರ್ಪಡಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಎ.ಜಿ. ಮಸೀಹ್ ಅವರನ್ನೊಳಗೊಂಡ ಪೀಠವು ಬಹುಮತದ ತೀರ್ಪು ನೀಡಿದೆ. "ಸೂಕ್ತ ಪರಿಪಕ್ವತೆ ಮತ್ತು ಪ್ರಾಯೋಗಿಕ ಅನುಭವವನ್ನು ಬಯಸುವ ನ್ಯಾಯಾಂಗ ಸೇವೆಯು ಅತ್ಯಂತ ಸಾಮರ್ಥ್ಯವಿರುವ ಯುವ ವಕೀಲರನ್ನು ಆಕರ್ಷಿಸುವಂತಿರಬೇಕು. ಪ್ರವೇಶಕ್ಕೆ ಕಠಿಣ ನಿಯಮಗಳನ್ನು ವಿಧಿಸಿದರೆ, ನಾವು ಆಕರ್ಷಿಸಲು ಬಯಸುವ ಅರ್ಹ ಅಭ್ಯರ್ಥಿಗಳೇ ದೂರವಾಗುವ ಅಪಾಯವಿದೆ" ಎಂದು ಪೀಠ ಎಚ್ಚರಿಸಿದೆ.
ತಮ್ಮ ಭಿನ್ನಾಭಿಪ್ರಾಯದ ತೀರ್ಪಿನಲ್ಲಿ ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರು, ವಕೀಲ ವೃತ್ತಿಯಲ್ಲಿ ಕನಿಷ್ಠ ಮೂರು ವರ್ಷಗಳ ಅನುಭವ ಇರಬೇಕು ಎಂಬ ಮೂಲ ನಿಯಮದಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. ಅವರ ಪ್ರಕಾರ, "ಕೇವಲ ಶೈಕ್ಷಣಿಕ ಜ್ಞಾನ ಹೊಂದಿರುವ ಕಾನೂನು ಪದವೀಧರರು ಕಕ್ಷಿದಾರರ ವಿಧಿಬರಹವನ್ನು ನಿರ್ಣಯಿಸುವ ಮೊದಲು, ಸಮಾಜದ ವಾಸ್ತವಗಳು ಮತ್ತು ಕಕ್ಷಿದಾರರ ಕಷ್ಟಗಳನ್ನು ಪ್ರತ್ಯಕ್ಷವಾಗಿ ತಿಳಿದುಕೊಳ್ಳುವುದು ಅಗತ್ಯವಾಗಿದೆ."
►2002ಕ್ಕೂ ಮುನ್ನ ಇದ್ದ ನಿಯಮ
ಜಿಲ್ಲಾ ನ್ಯಾಯಾಂಗದ ಆರಂಭಿಕ ಹಂತದ ‘ಸಿವಿಲ್ ಜಡ್ಜ್ (ಕಿರಿಯ ವಿಭಾಗ)’ ಪರೀಕ್ಷೆಗೆ ಕುಳಿತುಕೊಳ್ಳಲು ಹೆಚ್ಚಿನ ರಾಜ್ಯಗಳಲ್ಲಿ ವಕೀಲರಾಗಿ ಕನಿಷ್ಠ ಮೂರು ವರ್ಷಗಳ ವೃತ್ತಿ ಅನುಭವ ಕಡ್ಡಾಯವಾಗಿತ್ತು.
1993ರಲ್ಲಿ ಸುಪ್ರೀಂ ಕೋರ್ಟ್ ಈ ನಿಯಮವನ್ನು ಇಡೀ ದೇಶಕ್ಕೆ ಅನ್ವಯವಾಗುವಂತೆ ಜಾರಿಗೊಳಿಸಿತು. "ಯಾವುದೇ ವಕೀಲ ವೃತ್ತಿಯ ಹಿನ್ನೆಲೆ ಅಥವಾ ತರಬೇತಿ ಇಲ್ಲದೆ ಕಾನೂನು ಪದವೀಧರರನ್ನು ನ್ಯಾಯಾಂಗ ಅಧಿಕಾರಿಗಳಾಗಿ ನೇಮಕ ಮಾಡಿಕೊಳ್ಳುವ ಪ್ರಯೋಗ ಯಶಸ್ವಿಯಾಗಿಲ್ಲ. ಪುಸ್ತಕಗಳಿಂದ ಸಿಗುವ ಜ್ಞಾನವಾಗಲಿ ಅಥವಾ ನೇಮಕಾತಿ ಪೂರ್ವ ತರಬೇತಿಯಾಗಲಿ ನ್ಯಾಯಾಲಯದ ಪ್ರತ್ಯಕ್ಷ ಕಾರ್ಯನಿರ್ವಹಣೆಯ ಅನುಭವಕ್ಕೆ ಪರ್ಯಾಯವಾಗಲು ಸಾಧ್ಯವಿಲ್ಲ" ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
►ಶೆಟ್ಟಿ ಕಮಿಷನ್ ವರದಿ
ಕೆಳಹಂತದ ನ್ಯಾಯಾಂಗದ ವೇತನ ಮತ್ತು ಸೇವಾ ಷರತ್ತುಗಳನ್ನು ಪರಿಶೀಲಿಸಲು ನ್ಯಾಯಮೂರ್ತಿ ಕೆ.ಜೆ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ‘ಶೆಟ್ಟಿ ಕಮಿಷನ್’ ರಚಿಸಲಾಯಿತು. ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆ ಮತ್ತು ಅದಕ್ಕೆ ಬೇಕಾದ ಅರ್ಹತೆಗಳನ್ನು ಪರಿಶೀಲಿಸುವ ಹೊಣೆಯನ್ನೂ ಈ ಆಯೋಗಕ್ಕೆ ನೀಡಲಾಗಿತ್ತು. ಆ ನಂತರ ಈ ನಿಯಮ ಬದಲಾಯಿತು.
ಕಾನೂನು ಕಾಲೇಜುಗಳಿಂದ ಹೊರಬರುವ ವಿದ್ಯಾರ್ಥಿಗಳು ಈಗಾಗಲೇ ಇಂಟರ್ನ್ಶಿಪ್ ಮತ್ತು ಪ್ರಾಯೋಗಿಕ ತರಬೇತಿಯ ಮೂಲಕ ನ್ಯಾಯಾಲಯದ ಅನುಭವ ಪಡೆದಿರುತ್ತಾರೆ ಎಂದು ಆಯೋಗ ವರದಿ ನೀಡಿತು. "ಹೀಗಾಗಿ, ನ್ಯಾಯಾಲಯದ ಕೆಲಸಗಳ ನಿಕಟ ಜ್ಞಾನ ಪಡೆಯಲು ಮೂರು ವರ್ಷಗಳ ವಕೀಲ ವೃತ್ತಿ ಅನುಭವವನ್ನು ಕಡ್ಡಾಯಗೊಳಿಸುವುದು ಅನಗತ್ಯ" ಎಂದು ಆಯೋಗ ಸ್ಪಷ್ಟಪಡಿಸಿತು.
2002ರಲ್ಲಿ ಸುಪ್ರೀಂ ಕೋರ್ಟ್ ಈ ಶಿಫಾರಸನ್ನು ಸ್ವೀಕರಿಸಿತು. ಮೂರು ವರ್ಷಗಳ ವೃತ್ತಿ ಅನುಭವದ ನಿಯಮವನ್ನು ರದ್ದುಗೊಳಿಸಿ, ಕಾನೂನು ಪದವಿ ಮುಗಿಸಿದ ತಕ್ಷಣವೇ ಅಭ್ಯರ್ಥಿಗಳು ನ್ಯಾಯಾಂಗ ಸೇವಾ ಪರೀಕ್ಷೆ ಬರೆಯಲು ಅವಕಾಶ ನೀಡಿತು.
►2025ರ ಆದೇಶ
2025ರ ಮೇನಲ್ಲಿ ಸುಪ್ರೀಂ ಕೋರ್ಟ್ ತನ್ನ ನಿರ್ಧಾರವನ್ನು ಬದಲಿಸಿ, "ವಕೀಲ ವೃತ್ತಿಯ ಒಂದೇ ಒಂದು ದಿನದ ಅನುಭವವೂ ಇಲ್ಲದ ಹೊಸ ಕಾನೂನು ಪದವೀಧರರನ್ನು ನ್ಯಾಯಾಂಗ ಅಧಿಕಾರಿಗಳಾಗಿ ನೇಮಕ ಮಾಡಿಕೊಳ್ಳಲು ಅವಕಾಶ ನೀಡಿದ ಕಳೆದ 20 ವರ್ಷಗಳ ಪ್ರಯೋಗವು ಯಶಸ್ವಿಯಾಗಿಲ್ಲ" ಎಂದು ಹೇಳಿತು.
ಮೂರು ವರ್ಷಗಳ ಅನುಭವದ ನಿಯಮವನ್ನು ಮರುಸ್ಥಾಪಿಸಿದ ನ್ಯಾಯಾಲಯ, ನ್ಯಾಯಾಂಗ ಸೇವಾ ಪರೀಕ್ಷೆಗೆ ಕುಳಿತುಕೊಳ್ಳುವ ಮುನ್ನ ಅಭ್ಯರ್ಥಿಗಳು ಮೂರು ವರ್ಷಗಳ ವೃತ್ತಿ ಅನುಭವ ಹೊಂದಿರಬೇಕು ಎಂದು ತಿಳಿಸಿತು. ರಾಜ್ಯ ಬಾರ್ ಕೌನ್ಸಿಲ್ನಲ್ಲಿ ನೋಂದಾಯಿಸಿಕೊಂಡ ದಿನಾಂಕದಿಂದ ಈ ಅವಧಿಯನ್ನು ಪರಿಗಣಿಸಲಾಗುತ್ತದೆ. ನ್ಯಾಯಾಧೀಶರ ಬಳಿ ಲಾ ಕ್ಲರ್ಕ್ ಆಗಿ ಕೆಲಸ ಮಾಡಿದ ಅವಧಿಯನ್ನೂ ಈ ಅನುಭವಕ್ಕೆ ಸೇರಿಸಬಹುದು ಎಂದು ಸ್ಪಷ್ಟಪಡಿಸಿತು. ಆಯ್ಕೆಯಾದ ಅಭ್ಯರ್ಥಿಗಳು ನಿಯಮಿತವಾಗಿ ನ್ಯಾಯಾಧೀಶರಾಗಿ ಅಧಿಕಾರ ಸ್ವೀಕರಿಸುವ ಮೊದಲು ಕನಿಷ್ಠ ಒಂದು ವರ್ಷದ ತರಬೇತಿ ಪಡೆಯಬೇಕು ಎಂದು ನಿರ್ದೇಶಿಸಿತು.
ಈ ತೀರ್ಪಿನ ವಿರುದ್ಧ ತಕ್ಷಣವೇ ಮರುಪರಿಶೀಲನಾ ಅರ್ಜಿಗಳು ಸಲ್ಲಿಕೆಯಾದವು. ನಿಯಮವನ್ನು ಬೆಂಬಲಿಸಿದ ರಾಜ್ಯಗಳ ಅಫಿಡವಿಟ್ಗಳಿಗೆ ಮಾತ್ರ ಆದ್ಯತೆ ನೀಡಿ, ವಿರೋಧಿಸಿದ ರಾಜ್ಯಗಳ ಅಭಿಪ್ರಾಯಕ್ಕೆ ಹೆಚ್ಚಿನ ಮಹತ್ವ ನೀಡಿಲ್ಲ ಹಾಗೂ ಹೊಸ ಪದವೀಧರರು ನ್ಯಾಯಾಧೀಶರಾಗಿ ಕಳಪೆ ಸಾಧನೆ ಮಾಡುತ್ತಿದ್ದಾರೆ ಎಂಬುದಕ್ಕೆ ಯಾವುದೇ ಪ್ರತ್ಯಕ್ಷ ಆಧಾರಗಳಿಲ್ಲ ಎಂದು ಅರ್ಜಿದಾರರು ವಾದಿಸಿದರು.
ಕಳೆದ ಎರಡು ದಶಕಗಳಿಂದ ಕಾನೂನು ವಿದ್ಯಾರ್ಥಿಗಳು ಪದವಿ ಮುಗಿದ ತಕ್ಷಣ ಪರೀಕ್ಷೆ ಬರೆಯಬಹುದು ಎಂಬ ಭರವಸೆಯಲ್ಲೇ ತಮ್ಮ ಭವಿಷ್ಯವನ್ನು ಯೋಜಿಸಿಕೊಂಡಿದ್ದರು. ಇದ್ದಕ್ಕಿದ್ದಂತೆ ಕಾಯುವ ಅವಧಿಯನ್ನು ಜಾರಿಗೆ ತಂದಿರುವುದು ಅವರ ಯೋಜನೆಗಳನ್ನು ಬುಡಮೇಲು ಮಾಡಿದೆ ಎಂದು ಸಮಾನತೆಯ ಆಧಾರದ ಮೇಲೆ ವಾದಿಸಲಾಯಿತು.
►2026ರ ಆದೇಶ
ನ್ಯಾಯಾಂಗ ಸೇವೆಗೆ ಸೇರ್ಪಡೆಯಾಗುವ ಮುನ್ನ ಕಾನೂನು ಪದವೀಧರರು ನ್ಯಾಯಾಲಯಗಳ ಕಾರ್ಯನಿರ್ವಹಣೆಯ ಅನುಭವ ಹೊಂದಿರಬೇಕು ಎಂಬ ತನ್ನ ಮುಖ್ಯ ತೀರ್ಮಾನವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಸಿವಿಲ್ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನದಿಂದಲೇ ವ್ಯಕ್ತಿಯ "ಜೀವನ, ಸ್ವಾತಂತ್ರ್ಯ, ಆಸ್ತಿ ಮತ್ತು ವೈಯಕ್ತಿಕ ಹಕ್ಕುಗಳಿಗೆ" ಸಂಬಂಧಿಸಿದ ವಿಷಯಗಳನ್ನು ನಿರ್ವಹಿಸಬೇಕಾಗುತ್ತದೆ. ಅಧಿಕಾರ ಸ್ವೀಕರಿಸುವ ಮುನ್ನ ನ್ಯಾಯಾಲಯದ ಅನುಭವ ಹೊಂದುವುದರಿಂದ "ನ್ಯಾಯಾಂಗ ಮನೋಭಾವ, ತಾಳ್ಮೆ, ಅನುಕಂಪ, ನ್ಯಾಯಾಲಯದ ಶಿಸ್ತು ಮತ್ತು ಪೀಠ ಹಾಗೂ ವಕೀಲ ವೃತ್ತಿಯ ನಡುವಿನ ಪರಸ್ಪರ ಸಂಬಂಧದ ಅರಿವು" ಮೂಡುತ್ತದೆ ಎಂದು ನ್ಯಾಯಾಲಯ ಹೇಳಿದೆ.
ವಕೀಲ ವೃತ್ತಿಯಲ್ಲಿ ನೆಲೆ ಕಂಡುಕೊಳ್ಳುವ ಹಾದಿ ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ ಎಂಬುದನ್ನೂ ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ಈ ಅವಧಿಯಲ್ಲಿ ಮಹಿಳಾ ಅಭ್ಯರ್ಥಿಗಳು ಸಾಮಾಜಿಕ ಮತ್ತು ಕೌಟುಂಬಿಕ ಅಡೆತಡೆಗಳನ್ನು ಎದುರಿಸಬೇಕಾಗಬಹುದು. ಅದೇ ರೀತಿ ವಿಕಲಚೇತನ ಅಭ್ಯರ್ಥಿಗಳಿಗೆ ಸೂಕ್ತ ವೃತ್ತಿ ಅವಕಾಶಗಳು ಸಿಗುವುದು ಕಷ್ಟವಾಗಬಹುದು ಎಂದು ಅಭಿಪ್ರಾಯಪಟ್ಟಿದೆ. ಆದರೆ, ವಿವಿಧ ವರ್ಗದ ಅಭ್ಯರ್ಥಿಗಳಿಗೆ ಪ್ರತ್ಯೇಕ ಅರ್ಹತಾ ಮಾನದಂಡಗಳನ್ನು ರೂಪಿಸುವುದರಿಂದ ನ್ಯಾಯಾಲಯ ಹಿಂದೆ ಸರಿದಿದೆ.
ನ್ಯಾಯಾಂಗ ತರಬೇತಿ ಮತ್ತು ಮೇಲ್ವಿಚಾರಣೆಯ ಕ್ಲರ್ಕ್ಶಿಪ್ ಒಳಗೊಂಡಂತೆ "ವೃತ್ತಿಪರ ಹಾಗೂ ಸಾಂಸ್ಥಿಕ ಅನುಭವದ ಸಮ್ಮಿಶ್ರಣದ" ಮೂಲಕ ಪ್ರಾಯೋಗಿಕ ಜ್ಞಾನ ಪಡೆಯಬಹುದು ಎಂದು ಹೇಳಿದ ನ್ಯಾಯಾಲಯ, ಅನುಭವದ ನಿಯಮಗಳು ಹೇಗೆ ಅನ್ವಯಿಸಬೇಕು ಎಂಬುದರಲ್ಲಿ ಬದಲಾವಣೆ ಮಾಡಿದೆ.
2025ರ ಮೇ 20ರಿಂದ 2027ರ ಮಾರ್ಚ್ 31ರವರೆಗಿನ ಮಧ್ಯಂತರ ಅವಧಿಯ ಪದವೀಧರರು ಯಾವುದೇ ಪ್ರಮಾಣಪತ್ರವಿಲ್ಲದೆ ಒಂದು ವರ್ಷದ ವೃತ್ತಿ ಅನುಭವ ಪೂರ್ಣಗೊಳಿಸಿದ್ದಾರೆ ಎಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳು ರಾಜ್ಯ ನ್ಯಾಯಾಂಗ ಅಕಾಡೆಮಿಯಲ್ಲಿ ‘ತರಬೇತಿ ಪಡೆಯುವ ನ್ಯಾಯಾಂಗ ಅಧಿಕಾರಿ’ಯಾಗಿ ಒಂದು ವರ್ಷದ ತರಬೇತಿ ಹಾಗೂ ಒಂದು ವರ್ಷದ ಮೇಲ್ವಿಚಾರಣೆಯ ಕ್ಲರ್ಕ್ಶಿಪ್ ಪೂರ್ಣಗೊಳಿಸಬೇಕು. ಈ ಎರಡೂ ಅವಧಿಗಳನ್ನು ಮೂರು ವರ್ಷಗಳ ಕಡ್ಡಾಯ ಅನುಭವದ ಲೆಕ್ಕಾಚಾರಕ್ಕೆ ಸೇರಿಸಲಾಗುತ್ತದೆ.
2027ರ ಏಪ್ರಿಲ್ನಿಂದ ಪರೀಕ್ಷೆಗೆ ಕುಳಿತುಕೊಳ್ಳುವ ಅಭ್ಯರ್ಥಿಗಳು ಕನಿಷ್ಠ ಒಂದು ವರ್ಷದ ನೈಜ ವಕೀಲ ವೃತ್ತಿ ಅನುಭವ ಹೊಂದಿರಬೇಕು. ಇದನ್ನು ಹೈಕೋರ್ಟ್ಗಳು ನಿಗದಿಪಡಿಸುವ ವ್ಯವಸ್ಥೆಯಡಿ ದೃಢೀಕರಿಸಬೇಕಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ನಿಯಮಿತ ನ್ಯಾಯಾಂಗ ಹೊಣೆಗಾರಿಕೆ ವಹಿಸಿಕೊಳ್ಳುವ ಮುನ್ನ ಒಂದು ವರ್ಷದ ಅಕಾಡೆಮಿ ತರಬೇತಿ ಮತ್ತು ಒಂದು ವರ್ಷದ ಕ್ಲರ್ಕ್ಶಿಪ್ ಕಾರ್ಯಕ್ರಮವನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು.
ಸ್ನಾತಕೋತ್ತರ ಶಿಕ್ಷಣವನ್ನು ಈ ಅನುಭವದ ಲೆಕ್ಕಾಚಾರಕ್ಕೆ ಸೇರಿಸುವುದನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಶೈಕ್ಷಣಿಕ ಅಧ್ಯಯನವು ನ್ಯಾಯಾಲಯದ ಪ್ರತ್ಯಕ್ಷ ಕಾರ್ಯನಿರ್ವಹಣೆಯ ಅನುಭವಕ್ಕೆ ಪರ್ಯಾಯವಾಗಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಹೊಸ ವ್ಯವಸ್ಥೆಯು ಐದು ವರ್ಷಗಳ ಕಾಲ ಜಾರಿಯಲ್ಲಿರಲಿದ್ದು, ಆ ನಂತರ ಇದರ ಪರಿಣಾಮಕಾರಿತ್ವವನ್ನು ಮರುಪರಿಶೀಲಿಸಲಾಗುವುದು ಎಂದು ನಿರ್ದೇಶಿಸಿದೆ.
►ಭಿನ್ನಾಭಿಪ್ರಾಯದ ತೀರ್ಪು
"ಒಂದು ಬಲವಾದ ನ್ಯಾಯಾಂಗ ವ್ಯವಸ್ಥೆಯನ್ನು ಸಮೃದ್ಧಗೊಳಿಸುವ ಸಾಮರ್ಥ್ಯವಿರುವ ಕಾನೂನು ಪಂಡಿತರಿಗಿಂತ ಕೇವಲ ವೃತ್ತಿಪರರ ಪಡೆಯನ್ನು ಸೃಷ್ಟಿಸುವುದು ಸರಿಯಲ್ಲ" ಎಂದು ಎಚ್ಚರಿಸಿದ ನ್ಯಾಯಮೂರ್ತಿ ಚಂದ್ರನ್, ಅಕಾಡೆಮಿ ತರಬೇತಿ ಮತ್ತು ಕ್ಲರ್ಕ್ಶಿಪ್ ಅನ್ನು ವಕೀಲ ವೃತ್ತಿ ಅನುಭವಕ್ಕೆ ಪರ್ಯಾಯವಾಗಿ ಸೇರಿಸುವ ಬಹುಮತದ ನಿರ್ಧಾರವನ್ನು ಒಪ್ಪಲಿಲ್ಲ. ನ್ಯಾಯಾಂಗ ಸೇರ್ಪಡೆಗೆ ಮುನ್ನ ನ್ಯಾಯಾಲಯದ ಅನುಭವ ಅಗತ್ಯ ಎಂಬುದನ್ನು ಒಪ್ಪಿದರೂ, 2025ರ ಆದೇಶದಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂದು ಅವರು ಅಭಿಪ್ರಾಯಪಟ್ಟರು.
ಇತರ ಸರ್ಕಾರಿ ಸೇವೆಗಳೊಂದಿಗೆ ನ್ಯಾಯಾಂಗವನ್ನು ಹೋಲಿಸುವುದನ್ನು ತಿರಸ್ಕರಿಸಿದ ಅವರು, ನ್ಯಾಯಾಂಗ ಅಧಿಕಾರಿಗಳು ಅಧಿಕಾರ ಸ್ವೀಕರಿಸಿದ ಮೊದಲ ದಿನದಿಂದಲೇ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಅವರ ಸ್ಥಾನ ವಿಶಿಷ್ಟವಾದದ್ದು ಎಂದು ಹೇಳಿದರು. "ನ್ಯಾಯಾಂಗ ತೀರ್ಪುಗಳು ಆಡಳಿತಾತ್ಮಕ ಮೇಲ್ವಿಚಾರಣೆಯಿಂದ ಮುಕ್ತವಾಗಿರುತ್ತವೆ ಮತ್ತು ಮೇಲ್ಮನವಿ ಅಥವಾ ಮರುಪರಿಶೀಲನೆಯ ಮೂಲಕ ಮಾತ್ರ ಅವುಗಳನ್ನು ತಿದ್ದುಪಡಿ ಮಾಡಬಹುದು. ಹೀಗಾಗಿ ಇತರ ಸಾರ್ವಜನಿಕ ಸೇವೆಗಳಿಗೆ ಇದನ್ನು ಹೋಲಿಸಲು ಸಾಧ್ಯವಿಲ್ಲ" ಎಂದು ಅವರು ಸ್ಪಷ್ಟಪಡಿಸಿದರು.
ಕಾಲೇಜಿನಿಂದ ಹೊಸದಾಗಿ ಹೊರಬಂದ ಯುವ ವಕೀಲರಿಗೆ ಆರಂಭಿಕ ವರ್ಷಗಳಲ್ಲಿ ವಾದ ಮಂಡಿಸಲು ಅವಕಾಶಗಳು ಸಿಗದ ಕಾರಣ ಅವರಿಗೆ ಅನುಭವ ಸಿಗುವುದಿಲ್ಲ ಎಂಬ ವಾದವನ್ನೂ ಅವರು ತಳ್ಳಿಹಾಕಿದರು. "ಹಿರಿಯ ವಕೀಲರಾಗಲಿ ಅಥವಾ ಕಕ್ಷಿದಾರರಾಗಲಿ ಕಾಲೇಜಿನಿಂದ ಹೊಸದಾಗಿ ಬಂದ ವಕೀಲರಿಗೆ ಪ್ರಕರಣವನ್ನು ವಹಿಸಲು ಸಿದ್ಧರಿಲ್ಲದಿರುವಾಗ, ಅಂತಹ ವ್ಯಕ್ತಿಗಳಿಗೆ ಪ್ರಕರಣದ ತೀರ್ಪು ನೀಡುವ ಜವಾಬ್ದಾರಿಯನ್ನು ಹಸ್ತಾಂತರಿಸುವುದು ಸುರಕ್ಷಿತವೇ?" ಎಂದು ಪ್ರಶ್ನಿಸಿದ ಅವರು, ವೃತ್ತಿಪರ ತೀರ್ಪು ನೀಡುವ ಸಾಮರ್ಥ್ಯವು ನೇರ ಅನುಭವಗಳಿಂದ ಬೆಳೆಯುತ್ತದೆ. ಕೇವಲ "ತರಬೇತಿ ಕಾರ್ಯಕ್ರಮಗಳು" ಕಕ್ಷಿದಾರನ ಪ್ರತಿಯೊಂದು ಸವಾಲುಗಳು ಮತ್ತು ಜೀವನದ ನೈಜ ಕಷ್ಟಗಳನ್ನು ಒಬ್ಬ ನ್ಯಾಯಾಧೀಶನಿಗೆ ಅರ್ಥೈಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸೌಜನ್ಯ: indianexpress.com