ಭಾರತದ ಜಿಲ್ಲಾಸ್ಪತ್ರೆಗಳಲ್ಲಿ ನೆಫ್ರಾಲಜಿಸ್ಟ್ ಗಳೇ ಇಲ್ಲ: ಸಂಸದೀಯ ಸಮಿತಿ ವರದಿಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ!
ಬಂಜೋತ್ ಕೌರ್ – thewire. in ವರದಿ
Photo Credit : PTI
ಭಾರತದಲ್ಲಿ ಮೂತ್ರಪಿಂಡ (ಕಿಡ್ನಿ) ಸಂಬಂಧಿತ ಕಾಯಿಲೆಗಳ ನಿರ್ವಹಣೆಯು ಸಿಬ್ಬಂದಿಯ ತೀವ್ರ ಅಭಾವದಿಂದ ಕಷ್ಟಕರವಾಗಿದೆ. ಭಾರತದ ಕನಿಷ್ಠ 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಯಾವುದೇ ಜಿಲ್ಲಾಸ್ಪತ್ರೆಯಲ್ಲಿ ಒಬ್ಬನೇ ಒಬ್ಬ ಮೂತ್ರಪಿಂಡ ರೋಗ ತಜ್ಞ (ನೆಫ್ರಾಲಜಿಸ್ಟ್) ಇಲ್ಲ. ಅದೇ ರೀತಿ ದೇಶದ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜಿಲ್ಲಾಸ್ಪತ್ರೆಗಳಲ್ಲಿ ಒಬ್ಬನೇ ಒಬ್ಬ ಡಯಾಲಿಸಿಸ್ ತಂತ್ರಜ್ಞ ಕೂಡ ಇಲ್ಲ ಎಂಬ ಆಘಾತಕಾರಿ ಮಾಹಿತಿ ಈ ತಿಂಗಳು ಬಿಡುಗಡೆಯಾದ ಸಂಸದೀಯ ಕಾಯಂ ಸಮಿತಿಯ ವರದಿಯಿಂದ ತಿಳಿದುಬಂದಿದೆ.
ಇನ್ನೂ ಅಚ್ಚರಿಯ ವಿಷಯವೆಂದರೆ, ಹಲವು ರಾಜ್ಯಗಳು ತಮ್ಮ ಜಿಲ್ಲಾಸ್ಪತ್ರೆಗಳಲ್ಲಿ ಮೂತ್ರಪಿಂಡ ಕಾಯಿಲೆಗಳ ನಿರ್ವಹಣೆಗೆ ಅಗತ್ಯವಿರುವ ಹುದ್ದೆಗಳನ್ನೇ ಮಂಜೂರು ಮಾಡಿಲ್ಲ. ಇನ್ನು ಹುದ್ದೆಗಳಲ್ಲಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವುದು ದೂರದ ಮಾತಾಗಿದೆ.
ಜಿಲ್ಲಾಸ್ಪತ್ರೆಗಳನ್ನು ರಾಜ್ಯ ಸರಕಾರಗಳು ನಡೆಸುತ್ತವೆ. ಇವುಗಳ ನಿರ್ವಹಣೆ ಮತ್ತು ಸಿಬ್ಬಂದಿ ವೆಚ್ಚದ ಹೆಚ್ಚಿನ ಭಾಗವನ್ನು ರಾಜ್ಯ ಸರಕಾರಗಳೇ ಭರಿಸುತ್ತವೆ ಹಾಗೂ ಉಳಿದ ಭಾಗವನ್ನು ಕೇಂದ್ರ ಸರಕಾರ ಭರಿಸುತ್ತದೆ.
ಅಗತ್ಯ ಸಿಬ್ಬಂದಿಯ ಈ ಅಭಾವವು ಜಿಲ್ಲಾ ಮಟ್ಟದಲ್ಲಿ ಮತ್ತು ಗ್ರಾಮೀಣ ಮಟ್ಟದಲ್ಲಿ ದೀರ್ಘಕಾಲದ ಮೂತ್ರಪಿಂಡ ರೋಗಿಗಳ ಚಿಕಿತ್ಸೆಯು ಸಂಪೂರ್ಣವಾಗಿ ಕುಸಿದಿರುವುದನ್ನು ತೋರಿಸುತ್ತದೆ.
ರಾಜ್ಯ ಸರಕಾರಗಳಿಂದ ನಡೆಸಲ್ಪಡುವ ವೈದ್ಯಕೀಯ ಕಾಲೇಜುಗಳಲ್ಲಿ ಈ ತಜ್ಞ ವೈದ್ಯರು ಲಭ್ಯವಿದ್ದರೂ, ರೋಗಿಗಳ ಸಂಖ್ಯೆಗೆ ಹೋಲಿಸಿದರೆ ಅವರ ಮೇಲಿನ ಕೆಲಸದ ಒತ್ತಡ ಹೆಚ್ಚಾಗಿದೆ ಮತ್ತು ಅಗತ್ಯ ಸಿಬ್ಬಂದಿಯ ಕೊರತೆಯಿದೆ.
ನೆಫ್ರಾಲಜಿಸ್ಟ್ ಗಳು ದೀರ್ಘಕಾಲದ ಕಿಡ್ನಿ ಕಾಯಿಲೆಗಳ ಚಿಕಿತ್ಸೆಯಲ್ಲಿ ಪರಿಣತಿ ಹೊಂದಿರುತ್ತಾರೆ, ಆದರೆ ಶಸ್ತ್ರಚಿಕಿತ್ಸೆಗಳನ್ನು ಮಾಡುವುದಿಲ್ಲ. ಕಿಡ್ನಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳಿಗೆ ಯುರಾಲಜಿಸ್ಟ್ ಗಳು ಶಸ್ತ್ರಚಿಕಿತ್ಸೆ ಮಾಡುತ್ತಾರೆ. ಇನ್ನು ಮತ್ತೊಂದು ಪ್ರಮುಖ ಭಾಗವೆಂದರೆ ಡಯಾಲಿಸಿಸ್ ತಂತ್ರಜ್ಞರು. ಪ್ರಸ್ತುತ ಈ ಎಲ್ಲಾ ವಿಭಾಗಗಳಲ್ಲೂ ಸಿಬ್ಬಂದಿಯ ತೀವ್ರ ಕೊರತೆಯಿದೆ.
29 ರಾಜ್ಯಗಳ ಯಾವುದೇ ಜಿಲ್ಲಾಸ್ಪತ್ರೆಯಲ್ಲಿ ನೆಫ್ರಾಲಜಿಸ್ಟ್ ಗಳಿಲ್ಲದಿದ್ದರೆ, ಮೇಘಾಲಯ, ಗುಜರಾತ್ ಮತ್ತು ಪುದುಚೇರಿಯ ಜಿಲ್ಲಾಸ್ಪತ್ರೆಗಳಲ್ಲಿ ತಲಾ ಒಬ್ಬರು ಮಾತ್ರ ಲಭ್ಯವಿದ್ದಾರೆ. 29 ರಾಜ್ಯಗಳ ಯಾವುದೇ ಜಿಲ್ಲಾಸ್ಪತ್ರೆಗಳಲ್ಲಿ ಯುರಾಲಜಿಸ್ಟ್ ಹುದ್ದೆಯೂ ಇಲ್ಲ. ಇಡೀ ಪಶ್ಚಿಮ ಬಂಗಾಳ ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಒಟ್ಟು 31 ಯುರಾಲಜಿಸ್ಟ್ ಗಳು ಮಾತ್ರ ಇದ್ದಾರೆ.
ದೀರ್ಘಕಾಲದ ಕಿಡ್ನಿ ಕಾಯಿಲೆ ನಿರ್ವಹಣೆಯಲ್ಲಿ ಡಯಾಲಿಸಿಸ್ ಪ್ರಮುಖ ಪ್ರಕ್ರಿಯೆಯಾಗಿದೆ. ಆದರೆ ಅದಕ್ಕೂ ದೇಶಾದ್ಯಂತ ಆರೋಗ್ಯ ಸಿಬ್ಬಂದಿಯ ತೀವ್ರ ಅಭಾವವಿದೆ. 20 ರಾಜ್ಯಗಳ ಯಾವುದೇ ಜಿಲ್ಲಾಸ್ಪತ್ರೆಗಳಲ್ಲಿ ಡಯಾಲಿಸಿಸ್ ತಂತ್ರಜ್ಞರಿಲ್ಲ.
“ಜಿಲ್ಲಾಸ್ಪತ್ರೆಗಳಲ್ಲಿ ಮೂತ್ರಪಿಂಡ ರೋಗ ತಜ್ಞರ ಅಭಾವವು ಆಸ್ಪತ್ರೆ ಮೂಲಸೌಕರ್ಯಗಳ ನಿರ್ಮಾಣ ಮತ್ತು ತಜ್ಞ ವೈದ್ಯರ ಲಭ್ಯತೆಯ ನಡುವೆ ಇರುವ ತೀವ್ರ ವ್ಯತ್ಯಾಸವನ್ನು ತೋರಿಸುತ್ತದೆ ಎಂಬುದನ್ನು ಸಮಿತಿಯು ಗಮನಿಸಿದೆ” ಎಂದು ಸಂಸದೀಯ ಸಮಿತಿ ವರದಿಯಲ್ಲಿ ಹೇಳಿದೆ.
ಇದು “ಕಿಡ್ನಿ ಕಾಯಿಲೆ ಚಿಕಿತ್ಸೆಯ ಗುಣಮಟ್ಟ, ಸುರಕ್ಷತೆ ಮತ್ತು ಸತತ ಆರೈಕೆಯಲ್ಲಿ ಹಿನ್ನಡೆಗೆ ಕಾರಣವಾಗುತ್ತದೆ. ಜೊತೆಗೆ ಕ್ಲಿನಿಕಲ್ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ವಿಳಂಬ ಉಂಟುಮಾಡುತ್ತದೆ, ತೊಡಕುಗಳ ನಿರ್ವಹಣೆಯನ್ನು ಮಿತಿಗೊಳಿಸುತ್ತದೆ ಹಾಗೂ ಮುಖ್ಯವಾಗಿ ಗ್ರಾಮೀಣ ಮತ್ತು ಸೌಲಭ್ಯ ವಂಚಿತ ಪ್ರದೇಶಗಳಲ್ಲಿ ಡಯಾಲಿಸಿಸ್ ಸೇವೆಯ ಪರಿಣಾಮಕಾರಿತ್ವವನ್ನು ಕುಗ್ಗಿಸುತ್ತದೆ” ಎಂದು ವರದಿ ಹೇಳಿದೆ.
ಈ ಪರಿಸ್ಥಿತಿಯನ್ನು ಸುಧಾರಿಸುವ ಹೊಣೆಗಾರಿಕೆ ಹೆಚ್ಚಾಗಿ ರಾಜ್ಯ ಸರಕಾರಗಳ ಮೇಲಿದೆ. ಹೀಗಾಗಿ ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯ ಸರಕಾರಗಳೊಂದಿಗೆ ಸಮನ್ವಯ ಸಾಧಿಸಿ, ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲು ನಿರ್ದಿಷ್ಟ ಸಮಯದ ಕಾರ್ಯಯೋಜನೆ ಹಮ್ಮಿಕೊಳ್ಳಬೇಕು. “ವಿಶೇಷವಾಗಿ ಬಿಹಾರ, ರಾಜಸ್ಥಾನ, ಒಡಿಶಾ, ಅಸ್ಸಾಂ, ಛತ್ತೀಸ್ಗಢ ಮುಂತಾದ ತಜ್ಞರ ಅಭಾವವಿರುವ ಅಥವಾ ಸಂಪೂರ್ಣ ಕೊರತೆಯಿರುವ ರಾಜ್ಯಗಳಿಗೆ ಆದ್ಯತೆ ನೀಡಬೇಕು” ಎಂದು ಸಮಿತಿ ಶಿಫಾರಸು ಮಾಡಿದೆ.
ಪ್ರಧಾನ ಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮ ಮತ್ತು ಆಯುಷ್ಮಾನ್ ಭಾರತ್
ಪ್ರಧಾನ ಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮವನ್ನು (PMNDP) 2016ರಲ್ಲಿ ಪ್ರಾರಂಭಿಸಲಾಯಿತು.
ಆರೋಗ್ಯ ಸಚಿವಾಲಯದ ಕಾರ್ಯದರ್ಶಿಯವರು ಸಮಿತಿಯ ಸದಸ್ಯರಿಗೆ ನೀಡಿದ ಮಾಹಿತಿ ಪ್ರಕಾರ, ವಾರ್ಷಿಕ ಹೀಮೋಡಯಾಲಿಸಿಸ್ ಉಚಿತ ಚಿಕಿತ್ಸಾ ಅವಧಿಗಳ ಸಂಖ್ಯೆ 2019–20ರಲ್ಲಿ ಸುಮಾರು 25 ಲಕ್ಷದಷ್ಟಿದ್ದುದು 2024–25ರ ವೇಳೆಗೆ ಸರಿಸುಮಾರು 70 ಲಕ್ಷಕ್ಕೆ ಏರಿಕೆಯಾಗಿದೆ.
ಸಮಿತಿಯು ಈ ಪ್ರಗತಿಯನ್ನು ಮೆಚ್ಚಿದರೂ, ಮೇಲ್ವಿಚಾರಣೆಯ ಕೊರತೆ, ಡಯಾಲಿಸಿಸ್ ಉಪಕರಣಗಳ ನಿರ್ವಹಣೆ, ಚಿಕಿತ್ಸಾ ಸಾಮಗ್ರಿಗಳ ಪೂರೈಕೆಯಲ್ಲಾಗುವ ವಿಳಂಬ ಮತ್ತು ಅನುದಾನ ಬಿಡುಗಡೆಯಲ್ಲಿನ ತಡೆಗಳಂತಹ ಕಾರ್ಯನಿರ್ವಹಣಾ ಸವಾಲುಗಳನ್ನು ಎತ್ತಿ ತೋರಿಸಿದೆ.
“ಅಗತ್ಯವಿರುವ ನುರಿತ ಸಿಬ್ಬಂದಿ, ಗುಣಮಟ್ಟದ ಖಾತರಿ, ಸಮಯಕ್ಕೆ ಸರಿಯಾದ ಉಪಕರಣ ನಿರ್ವಹಣೆ ಮತ್ತು ಅಗತ್ಯ ಸಾಮಗ್ರಿಗಳ ಅಡೆತಡೆಯಿಲ್ಲದ ಪೂರೈಕೆಯನ್ನು ಖಚಿತಪಡಿಸಿಕೊಳ್ಳದೆ ಕೇವಲ ಡಯಾಲಿಸಿಸ್ ಮೂಲಸೌಕರ್ಯಗಳನ್ನು ವಿಸ್ತರಿಸುವುದರಿಂದ ಚಿಕಿತ್ಸೆಯ ಗುಣಮಟ್ಟ, ಸತತ ಸೇವೆ ಹಾಗೂ ಲಭ್ಯತೆಗೆ ಧಕ್ಕೆಯಾಗಬಹುದು” ಎಂದು ಸಮಿತಿ ತಿಳಿಸಿದೆ.
ಪ್ರಧಾನ ಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮ ಮತ್ತು ಆಯುಷ್ಮಾನ್ ಭಾರತ್ ಯೋಜನೆಯ (ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ವಿಮೆ ಒದಗಿಸುವ ಯೋಜನೆ) ಮೂಲಕ ಪ್ರಗತಿ ಸಾಧಿಸಲಾಗಿದ್ದರೂ, ಮೂತ್ರಪಿಂಡ ಕಾಯಿಲೆಗೆ ಚಿಕಿತ್ಸೆ ಪಡೆಯುವಲ್ಲಿ ಎದುರಾಗುವ ಹಣಕಾಸಿನ ಸವಾಲುಗಳು ಸಕ್ರಿಯವಾಗಿಯೇ ಇವೆ.
ಈ ಎರಡೂ ಯೋಜನೆಗಳು ರೋಗದ ಅಂತಿಮ ಹಂತದಲ್ಲಿ ಅಗತ್ಯವಿರುವ ಡಯಾಲಿಸಿಸ್ ಮತ್ತು ಕಿಡ್ನಿ ಕಸಿ (ಆಯುಷ್ಮಾನ್ ಭಾರತ್ ಮೂಲಕ) ಮುಂತಾದ ಚಿಕಿತ್ಸೆಗಳಿಗೆ ಮಾತ್ರ ನೆರವು ನೀಡುತ್ತವೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
“ಹೆಚ್ಚಿನ ಅಪಾಯವಿರುವ ವ್ಯಕ್ತಿಗಳ ತಪಾಸಣೆ, ನಿಯಮಿತ ರೋಗನಿರ್ಣಯ ಪರೀಕ್ಷೆಗಳು, ಹೊರರೋಗಿ ಸಮಾಲೋಚನೆಗಳು, ಅಗತ್ಯ ಔಷಧಗಳು ಮತ್ತು ಕಾಯಿಲೆಯ ತೊಡಕುಗಳ ನಿರ್ವಹಣೆ ಸೇರಿದಂತೆ ರೋಗದ ಆರಂಭಿಕ ಹಂತಗಳಲ್ಲಿ ತಗುಲುವ ವೆಚ್ಚಗಳು ಯೋಜನೆಯಿಂದ ಹೊರಗುಳಿದಿವೆ ಅಥವಾ ಅಪೂರ್ಣವಾಗಿ ಸೇರ್ಪಡೆಯಾಗಿವೆ” ಎಂದು ವರದಿ ಗಮನಿಸಿದೆ. ಇದರಿಂದಾಗಿ, ಆರಂಭಿಕ ಹಂತದ ನಿರ್ವಹಣಾ ವೆಚ್ಚವನ್ನು ರೋಗಿಗಳು ತಮ್ಮ ಸ್ವಂತ ಜೇಬಿನಿಂದಲೇ ಭರಿಸಬೇಕಾಗಿದೆ.
ಈ ರೀತಿ ರೋಗಿಗಳು ತಮ್ಮ ಕೈಯಿಂದಲೇ ಹೆಚ್ಚಿನ ಹಣ ವೆಚ್ಚ ಮಾಡಬೇಕಿರುವುದರಿಂದ ರೋಗನಿರ್ಣಯ ವಿಳಂಬವಾಗುತ್ತದೆ, ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯಲು ಸಾಧ್ಯವಾಗುವುದಿಲ್ಲ. ಇದು ಕುಟುಂಬಗಳನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳುವುದಲ್ಲದೆ ಕಿಡ್ನಿ ವೈಫಲ್ಯದ ಹಂತವನ್ನು ವೇಗಗೊಳಿಸುತ್ತದೆ.
►ರೋಗನಿರ್ಣಯದಲ್ಲಾಗುತ್ತಿರುವ ಲೋಪಗಳು
ಮೂತ್ರಪಿಂಡ ಕಾಯಿಲೆಗಳ ಹೆಚ್ಚಳಕ್ಕೆ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳೇ ಪ್ರಮುಖ ಕಾರಣವಾಗಿವೆ. ಈ ಕಾಯಿಲೆಗಳ ತಡೆಗಟ್ಟುವಿಕೆ ಮತ್ತು ನಿರ್ವಹಣೆಯಲ್ಲಿ ಇನ್ನೂ ಹೆಚ್ಚಿನ ಕೆಲಸಗಳು ನಡೆಯಬೇಕಿದೆ ಎಂದು ಸಮಿತಿ ಹೇಳಿದೆ.
ಪ್ರಸ್ತುತ ಲಭ್ಯವಿರುವ ಸಂಪನ್ಮೂಲಗಳ ಹೆಚ್ಚಿನ ಭಾಗವನ್ನು ಡಯಾಲಿಸಿಸ್ ಮತ್ತು ಕಿಡ್ನಿ ಕಸಿ ಚಿಕಿತ್ಸೆಗಳಿಗೇ ವಿನಿಯೋಗಿಸಲಾಗುತ್ತಿದ್ದು, ದೀರ್ಘಕಾಲೀನ ಆರೋಗ್ಯ ವೆಚ್ಚವನ್ನು ತಗ್ಗಿಸಬಲ್ಲ ಮುನ್ನೆಚ್ಚರಿಕೆಯ 'ಪ್ರಿವೆಂಟಿವ್ ನೆಫ್ರಾಲಜಿ' ವಿಭಾಗವನ್ನು ನಿರ್ಲಕ್ಷಿಸಲಾಗಿದೆ.
ಈ ಕಾಯಿಲೆಯು ಗಂಭೀರ ಸ್ವರೂಪಕ್ಕೆ ತಿರುಗುವುದನ್ನು ತಡೆಯಲು ಇರುವ ಮತ್ತೊಂದು ಹಾದಿಯೆಂದರೆ ಆರಂಭಿಕ ಹಂತದಲ್ಲೇ ರೋಗಪತ್ತೆ ಮಾಡುವುದು. ಇದಕ್ಕೆ 'ಹೆಚ್ಚಿನ ಅಪಾಯದಲ್ಲಿರುವ ವ್ಯಕ್ತಿಗಳನ್ನು' ಪೂರ್ವಭಾವಿಯಾಗಿ ತಪಾಸಣೆಗೆ ಒಳಪಡಿಸಬೇಕಾಗುತ್ತದೆ.
ಕುಟುಂಬದಲ್ಲಿ ಕಿಡ್ನಿ ಕಾಯಿಲೆಯ ಇತಿಹಾಸ ಹೊಂದಿರುವವರು ಅಥವಾ ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಕಿಡ್ನಿ ಕಾಯಿಲೆಗೆ ಕಾರಣವಾಗುವ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರನ್ನು ಇಂತಹ 'ಹೆಚ್ಚಿನ ಅಪಾಯದಲ್ಲಿರುವ ವ್ಯಕ್ತಿಗಳು' ಎಂದು ಗುರುತಿಸಲಾಗುತ್ತದೆ.
ಸಂಬಂಧಿತ ಕಾಯಿಲೆಗಳ ನಿರ್ವಹಣಾ ನೀತಿಗಳಲ್ಲಿ ಮೂತ್ರಪಿಂಡದ ಆರೋಗ್ಯ ತಪಾಸಣೆಯನ್ನು ಸಮಗ್ರವಾಗಿ ಅಳವಡಿಸಿಕೊಳ್ಳದ ಕಾರಣ, ಕಿಡ್ನಿ ಕಾಯಿಲೆಗಳು ಇಂದಿಗೂ "ಪ್ರಮುಖವಾಗಿ" ಕೊನೆಯ ಅಥವಾ ಮುಂದುವರಿದ ಹಂತಗಳಲ್ಲೇ ಪತ್ತೆಯಾಗುತ್ತಿವೆ ಎಂದು ಸಮಿತಿ ಎಚ್ಚರಿಸಿದೆ.
ಮೂತ್ರಪಿಂಡ ಸಂಬಂಧಿತ ಕಾಯಿಲೆಗಳ ತಪಾಸಣೆಯು ಸರಕಾರದ ಸಾಂಕ್ರಾಮಿಕವಲ್ಲದ ರೋಗಗಳ ನಿಯಂತ್ರಣ ಕಾರ್ಯಕ್ರಮದ ಭಾಗವಾಗಿದೆ. ಇದರಡಿಯಲ್ಲಿ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ತಪಾಸಣೆ ನಡೆಸಲಾಗುತ್ತದೆ. ಆದರೆ ಈ ಕಾರ್ಯಕ್ರಮವು ಗ್ರಾಮೀಣ ಪ್ರದೇಶದ ಆರೋಗ್ಯ ಮಂದಿರಗಳಿಗೆ (ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು) ಅಥವಾ ಇತರ ಆರೋಗ್ಯ ಕೇಂದ್ರಗಳಿಗೆ ಬರುವ ಜನರಿಗೆ ಮಾತ್ರ ಸೀಮಿತವಾಗಿದೆ ಎಂದು ಸಮಿತಿ ಹೇಳಿದೆ. ಹೀಗಾಗಿ, ಸಮುದಾಯ ಮಟ್ಟದ ತಪಾಸಣೆಯು ರೋಗಿಗಳು ಆಸ್ಪತ್ರೆಗೆ ಬರುವುದನ್ನೇ ನೆಚ್ಚಿಕೊಂಡಿರುವುದರಿಂದ ಅದು ಪೂರ್ಣ ಪ್ರಮಾಣದಲ್ಲಿ ತಲುಪುತ್ತಿಲ್ಲ.
ರೋಗನಿರ್ಣಯದಲ್ಲಿ ವಿಳಂಬವಾಗುವುದನ್ನು ತಡೆಯಲು, ಹೆಚ್ಚಿನ ಅಪಾಯದಲ್ಲಿರುವ ಎಲ್ಲಾ ವ್ಯಕ್ತಿಗಳನ್ನು ವರ್ಷಕ್ಕೊಮ್ಮೆ ತಪಾಸಣೆಗೆ ಒಳಪಡಿಸುವುದನ್ನು ಕಡ್ಡಾಯಗೊಳಿಸಬೇಕು. ಜೊತೆಗೆ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ವರ್ಷಕ್ಕೆ ಎರಡು ಬಾರಿ ಉಚಿತ ಕಿಡ್ನಿ ಕಾರ್ಯನಿರ್ವಹಣೆ ಪರೀಕ್ಷೆಯನ್ನು (ರಕ್ತ ಪರೀಕ್ಷೆ) ಕಡ್ಡಾಯವಾಗಿ ಒದಗಿಸಬೇಕು ಎಂದು ಸಮಿತಿ ಒತ್ತಿಹೇಳಿದೆ.
ಅಂಗಾಂಗ ಕಸಿ ಮತ್ತು ಇತರ ವೈದ್ಯಕೀಯ ನೆರವು
ಅಂಗಾಂಗ ದಾನದ ಕುರಿತು ಜನರಲ್ಲಿ ಅರಿವು ಮೂಡಿಸಲು ಕೇಂದ್ರ ಸರಕಾರವು 'ರಾಷ್ಟ್ರೀಯ ಅಂಗಾಂಗ ಕಸಿ ಕಾರ್ಯಕ್ರಮ'ವನ್ನು (NOTP) ಪ್ರಾರಂಭಿಸಿದೆ. ತೀವ್ರ ಸ್ವರೂಪದ ಮೂತ್ರಪಿಂಡ ರೋಗಿಗಳಿಗೆ ಕಸಿ ಚಿಕಿತ್ಸೆ ಅತ್ಯಗತ್ಯವಾಗಿರುತ್ತದೆ.
ಸರ್ಕಾರದ ಈ ಕಾರ್ಯಕ್ರಮವನ್ನು ಶ್ಲಾಘಿಸಿರುವ ಸಮಿತಿಯು, ಭಾರತದಲ್ಲಿ ಮರಣೋತ್ತರ ಅಂಗಾಂಗ ದಾನದ ಪ್ರಮಾಣವು ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ಇಂದಿಗೂ ಅತ್ಯಂತ ಕಡಿಮೆಯಿದೆ ಎಂಬುದನ್ನು ಎತ್ತಿಹಿಡಿದಿದೆ. ಸಾಮಾಜಿಕ ತಪ್ಪು ಕಲ್ಪನೆಗಳು, ಸಾರ್ವಜನಿಕರಲ್ಲಿ ಅರಿವಿನ ಕೊರತೆ, ಅಂಗಾಂಗ ಸಂಗ್ರಹಣೆಗೆ ಅಗತ್ಯವಿರುವ ಮೂಲಸೌಕರ್ಯಗಳ ಅಭಾವ ಹಾಗೂ ನಿಯಮಾವಳಿಗಳ ತೊಡಕುಗಳೇ ಇದಕ್ಕೆ ಮುಖ್ಯ ಕಾರಣಗಳಾಗಿವೆ.
ಅಂಗಾಂಗ ಕಸಿ ನಂತರದ ಆರೈಕೆಯೂ ಅಷ್ಟೇ ಮುಖ್ಯವಾಗಿರುತ್ತದೆ. ದಾನಿಯಿಂದ ಅಂಗಾಂಗ ಪಡೆದ ರೋಗಿಯು ಜೀವಿತಾವಧಿಯವರೆಗೆ 'ಇಮ್ಯುನೊಸಪ್ರೆಸಿವ್' (ರೋಗನಿರೋಧಕ ಶಕ್ತಿಯನ್ನು ನಿಯಂತ್ರಿಸುವ) ಮದ್ದುಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಔಷಧಗಳು ದೇಹದ ರೋಗನಿರೋಧಕ ವ್ಯವಸ್ಥೆಯು ಹೊಸದಾಗಿ ಅಳವಡಿಸಿದ ಅಂಗಾಂಗದ ಮೇಲೆ ದಾಳಿ ಮಾಡದಂತೆ ತಡೆಯುತ್ತವೆ.
ಈ ಔಷಧಗಳ ನಿಯಮಿತ ವೆಚ್ಚವು, "ಈಗಾಗಲೇ ಡಯಾಲಿಸಿಸ್ ಮತ್ತು ಅಂಗಾಂಗ ಕಸಿಗಾಗಿ ಭಾರಿ ಹಣ ವೆಚ್ಚ ಮಾಡಿರುವ ರೋಗಿಗಳ ಮೇಲೆ ಮತ್ತಷ್ಟು ದೊಡ್ಡ ಆರ್ಥಿಕ ಹೊರೆಯಾಗುತ್ತಿದೆ" ಎಂದು ಸಮಿತಿ ಗಮನಿಸಿದೆ.
ಜನರು ನೋವು ನಿವಾರಣೆಗಾಗಿ ವೈದ್ಯರ ಚೀಟಿ ಇಲ್ಲದೆ ನೇರವಾಗಿ ಅಂಗಡಿಗಳಲ್ಲಿ ಖರೀದಿಸಿ ಸೇವಿಸುವ 'ಸ್ಟಿರಾಯ್ಡ್ ರಹಿತ ಉರಿಯೂತ ನಿವಾರಕ ಔಷಧಗಳ' (NSAIDs) ಅತಿಯಾದ ಬಳಕೆಯ ಕುರಿತು ಜನಪ್ರತಿನಿಧಿಗಳ ಸಮಿತಿ ಕಳವಳ ವ್ಯಕ್ತಪಡಿಸಿದೆ. ಇವುಗಳ ದೀರ್ಘಕಾಲೀನ ಬಳಕೆಯು ಕಿಡ್ನಿಗೆ ವಿಷಕಾರಿಯಾಗಿ ಪರಿಣಮಿಸಿ (Nephrotoxicity) ಹಾನಿ ಉಂಟುಮಾಡಬಹುದು.
ದೇಶದ ಔಷಧ ನಿಯಂತ್ರಕ ಸಂಸ್ಥೆಯಾದ 'ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್' (CDSCO) ಈ ಕುರಿತು ಕಟ್ಟುನಿಟ್ಟಿನ ನಿಯಂತ್ರಣ ಹೇರಬೇಕು ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಹೆಚ್ಚಿನ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
ದೇಶದ ಹಲವು ಆರೋಗ್ಯ ಕಾರ್ಯಕ್ರಮಗಳಿಗೆ ಹಿನ್ನಡೆಯಾಗುತ್ತಿರುವುದಕ್ಕೆ ನಿಖರವಾದ ದತ್ತಾಂಶಗಳ ಅಭಾವವೇ ಮುಖ್ಯ ಕಾರಣವಾಗಿದ್ದು, ಮೂತ್ರಪಿಂಡ ಕಾಯಿಲೆಯೂ ಇದಕ್ಕೆ ಹೊರತಾಗಿಲ್ಲ.
ಭಾರತದ ವಯಸ್ಕ ಜನಸಂಖ್ಯೆಯ ಸುಮಾರು ಶೇ. 13ರಿಂದ 16ರಷ್ಟು ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಸಮಿತಿ ಹೇಳಿದೆಯಾದರೂ, ಈ ಬಗ್ಗೆ ಯಾವುದೇ ನೈಜ ಸಮಯದ ಅಥವಾ ಇತ್ತೀಚಿನ ಡೇಟಾ ಲಭ್ಯವಿಲ್ಲ.
"ರೋಗದ ಸಂಭವ, ತೀವ್ರತೆ, ಚಿಕಿತ್ಸಾ ವಿಧಾನಗಳು, ಚಿಕಿತ್ಸೆಯ ಫಲಿತಾಂಶಗಳು ಮತ್ತು ಮರಣ ಪ್ರಮಾಣಕ್ಕೆ ಸಂಬಂಧಿಸಿದ ರೋಗಿ ಮಟ್ಟದ ದತ್ತಾಂಶಗಳನ್ನು ಸಂಗ್ರಹಿಸದೆ" ಈ ವಲಯದ ಎಲ್ಲಾ ನೀತಿಗಳನ್ನು ರೂಪಿಸಲಾಗುತ್ತಿದೆ. ಆದ್ದರಿಂದ, ಸರ್ಕಾರವು ತಕ್ಷಣವೇ 'ರಾಷ್ಟ್ರೀಯ ಮೂತ್ರಪಿಂಡ ನೋಂದಣಿ ವ್ಯವಸ್ಥೆಯನ್ನು' (National Kidney Registry) ರೂಪಿಸಬೇಕೆಂದು ಸಮಿತಿ ಶಿಫಾರಸು ಮಾಡಿದೆ.
ಸೌಜನ್ಯ: thewire.in