ಹಿಮಂತ ಬಿಸ್ವ ಶರ್ಮಾ CM ಆದ ಬಳಿಕ ಅಸ್ಸಾಂ ಸರ್ಕಾರದ ಜಾಹೀರಾತು ವೆಚ್ಚ ಮೂರು ಪಟ್ಟು ಹೆಚ್ಚಳ: ಪತ್ನಿ ಕೆಲಸ ಮಾಡುತ್ತಿರುವ ಮಾಧ್ಯಮ ಸಮೂಹಕ್ಕೆ ಹರಿದುಬಂತು 20 ಕೋಟಿ ರೂ.!

ಬಸಂತ್‌ ಕುಮಾರ್ - newslaundry. com ವರದಿ

Update: 2026-08-21 22:30 IST

ಹಿಮಂತ ಬಿಸ್ವ ಶರ್ಮಾ | Photo Credit : PTI  

ಹಿಮಂತ ಬಿಸ್ವ ಶರ್ಮಾ ಅಸ್ಸಾಂ ಮುಖ್ಯಮಂತ್ರಿಯಾದ ನಂತರದ ಐದು ಹಣಕಾಸು ವರ್ಷಗಳಲ್ಲಿ, ಅವರ ಸರ್ಕಾರವು ಮಾಧ್ಯಮ ಮತ್ತು ಜಾಹೀರಾತುಗಳಿಗಾಗಿ 460.82 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಅವರು 2021ರ ಮೇ 10ರಂದು ಅಧಿಕಾರ ವಹಿಸಿಕೊಳ್ಳುವ ಮೊದಲಿನ ಐದು ವರ್ಷಗಳಲ್ಲಿ ರಾಜ್ಯ ಸರ್ಕಾರ ವೆಚ್ಚ ಮಾಡಿದ್ದು 145.01 ಕೋಟಿ ರೂಪಾಯಿ ಮಾತ್ರ. ಅಂದರೆ, ಈಗಿನ ವೆಚ್ಚವು ಹಿಂದಿನದಕ್ಕಿಂತ ಮೂರಕ್ಕಿಂತ ಹೆಚ್ಚು ಪಟ್ಟು ಅಧಿಕವಾಗಿದೆ.

ಹೆಚ್ಚಿಸಲಾದ ಈ ಬಜೆಟ್ ನ ಫಲಾನುಭವಿಗಳಲ್ಲಿ ‘ಪ್ರೈಡ್ ಈಸ್ಟ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯೂ ಸೇರಿದೆ. ಇದು ರಾಜ್ಯದ ಅತಿದೊಡ್ಡ ಮಾಧ್ಯಮ ಸಮೂಹವಾಗಿದ್ದು, ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಇದರ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಅಧ್ಯಕ್ಷೆಯಾಗಿದ್ದಾರೆ. ಸರ್ಕಾರದ ಒಟ್ಟಾರೆ ಜಾಹೀರಾತು ವೆಚ್ಚದ ಭಾರೀ ಏರಿಕೆಗೆ ಹೋಲಿಸಿದರೆ, ಪ್ರೈಡ್ ಈಸ್ಟ್ ಗೆ ನೀಡಲಾದ ಹಣವು ಸಣ್ಣ ಭಾಗದಂತಿದೆ.

2010-11ರಿಂದ 2020-21ರವರೆಗಿನ 11 ಹಣಕಾಸು ವರ್ಷಗಳಲ್ಲಿ ಈ ಕಂಪೆನಿಯು ಒಟ್ಟು 10.4 ಕೋಟಿ ರೂಪಾಯಿ ಆಸುಪಾಸಿನ ಜಾಹೀರಾತು ಪಡೆದಿತ್ತು. ಆದರೆ, 2021-22ರಿಂದ ಆಗಸ್ಟ್ 2024ರ ನಡುವಿನ ಕೇವಲ ಮೂರೂವರೆ ವರ್ಷಗಳ ಅವಧಿಯಲ್ಲೇ ಸುಮಾರು 20.11 ಕೋಟಿ ರೂಪಾಯಿ ಸರ್ಕಾರಿ ಜಾಹೀರಾತುಗಳನ್ನು ಪಡೆದುಕೊಂಡಿದೆ.

ಶಾಸಕ ವಾಜೆದ್ ಅಲಿ ಚೌಧರಿ ಅವರ ಪ್ರಶ್ನೆಗೆ ಉತ್ತರಿಸುತ್ತಾ ಕಳೆದ ತಿಂಗಳು ವಿಧಾನಸಭೆಯ ಮುಂದಿಡಲಾದ ಒಟ್ಟಾರೆ ಜಾಹೀರಾತು ವೆಚ್ಚದ ಅಂಕಿ-ಅಂಶಗಳಿಗೂ, ಪ್ರೈಡ್ ಈಸ್ಟ್ ಗೆ ಸಂಬಂಧಿಸಿದ ನಿರ್ದಿಷ್ಟ ವಿವರಗಳಿಗೂ ವ್ಯತ್ಯಾಸವಿದೆ. ಪ್ರೈಡ್ ಈಸ್ಟ್ ಪಡೆದ ಹಣದ ಕುರಿತು ಶಾಸಕ ಆಸಿಫ್ ಮೊಹಮ್ಮದ್ ನಜರ್ ಕೇಳಿದ್ದ ಪ್ರಶ್ನೆಗೆ 2024ರ ಆಗಸ್ಟ್ 22ರಂದು ವಿಧಾನಸಭೆಯಲ್ಲಿ ಸಲ್ಲಿಕೆಯಾದ ಪ್ರತ್ಯೇಕ ಉತ್ತರದಿಂದ ಈ ವಿವರಗಳು ಲಭ್ಯವಾಗಿವೆ. ಈ ಎರಡೂ ಮಾಹಿತಿಗಳು ಬೇರೆ ಬೇರೆ ಕಾಲಾವಧಿಗೆ ಸಂಬಂಧಿಸಿವೆ. ಚೌಧರಿ ಅವರ ಉತ್ತರವು 2025-26ರ ಕೊನೆಯವರೆಗಿನ ಅವಧಿಯನ್ನು ಒಳಗೊಂಡಿದ್ದರೆ, ಪ್ರೈಡ್ ಈಸ್ಟ್ನ ಅಂಕಿ-ಅಂಶಗಳು ಆಗಸ್ಟ್ 2024ರವರೆಗೆ ಮಾತ್ರ ಲಭ್ಯವಿವೆ ಎಂದು ‘newslaundry’ ವರದಿ ಮಾಡಿದೆ.

2008ರಲ್ಲಿ ಸ್ಯಾಟಲೈಟ್ ಸುದ್ದಿ ವಾಹಿನಿಯಾಗಿ ಪ್ರಾರಂಭವಾದ ಪ್ರೈಡ್ ಈಸ್ಟ್, ಈಗ ರಾಜ್ಯದ ಅತಿದೊಡ್ಡ ಮಾಧ್ಯಮ ಸಮೂಹವಾಗಿ ಬೆಳೆದಿದೆ. ಇದು ಕನಿಷ್ಠ ಎರಡು ಸುದ್ದಿ ವಾಹಿನಿಗಳು, ಮೂರು ಮನರಂಜನಾ ವಾಹಿನಿಗಳು, ಒಂದು ಡಿಜಿಟಲ್ ನ್ಯೂಸ್ ಪೋರ್ಟಲ್, ಹಲವು ನಿಯತಕಾಲಿಕೆಗಳು ಮತ್ತು ‘ನಿಯಮೀಯ ಬಾರ್ತಾ’ ದಿನಪತ್ರಿಕೆಯನ್ನು ನಡೆಸುತ್ತಿದೆ. 2023ರ ಮೇನಲ್ಲಿ ಇದು ‘ಟೈಮ್ 8’ ಪ್ರಾದೇಶಿಕ ನ್ಯೂಸ್ ಪೋರ್ಟಲ್ ಅನ್ನು ಸಹ ಸ್ವಾಧೀನಪಡಿಸಿಕೊಂಡಿದೆ. ‘ಬಾರ್ಕ್’ (BARC) ದತ್ತಾಂಶಗಳ ಪ್ರಕಾರ, ಇದರ ಅಸ್ಸಾಮಿ ಭಾಷೆಯ ವಾಹಿನಿ ‘ನ್ಯೂಸ್ ಲೈವ್’ ಅಸ್ಸಾಂನಲ್ಲಿ ಅತ್ಯಂತ ಹೆಚ್ಚು ವೀಕ್ಷಿಸಲ್ಪಡುವ ಸ್ಯಾಟಲೈಟ್ ಚಾನೆಲ್ ಆಗಿದೆ ಎಂದು ‘newslaundry’ ಈ ಹಿಂದೆ ವರದಿ ಮಾಡಿತ್ತು.

►ಅಂಕಿ-ಅಂಶಗಳು ಏನು ಹೇಳುತ್ತವೆ?

ವರದಿಯಲ್ಲಿ ಉಲ್ಲೇಖಿಸಲಾದ ಹೆಚ್ಚಿನ ಅವಧಿಯಲ್ಲಿ ನೀಡಲಾದ ಮೊತ್ತವು ತೀರಾ ಕನಿಷ್ಠವಾಗಿತ್ತು. ಪ್ರೈಡ್ ಈಸ್ಟ್ 2010-11ರಲ್ಲಿ 5.95 ಲಕ್ಷ ರೂ., ಮರುವರ್ಷ 7.77 ಲಕ್ಷ ರೂ. ಹಾಗೂ 2012-13ರಲ್ಲಿ 2.92 ಲಕ್ಷ ರೂ. ಪಡೆದಿತ್ತು. ಜಾಹೀರಾತು ಮೊತ್ತವು 2013-14ರಿಂದ ಏರಿಕೆಯಾಗಲು ಪ್ರಾರಂಭಿಸಿತು. ಆ ವರ್ಷ ಕಂಪೆನಿಯು 30.27 ಲಕ್ಷ ರೂ. ಪಡೆಯಿತು. ನಂತರ 2014-15ರಲ್ಲಿ 73.36 ಲಕ್ಷ ರೂ., 2015-16ರಲ್ಲಿ 77.85 ಲಕ್ಷ ರೂ. ಮತ್ತು 2016-17ರಲ್ಲಿ 85.17 ಲಕ್ಷ ರೂ. ತಲುಪಿತು.

2017-18ರಲ್ಲಿ ಈ ಪಾವತಿಯು ಕೋಟಿಯ ಗಡಿ ದಾಟಿ 1.37 ಕೋಟಿ ರೂ. ತಲುಪಿತು. ಅಲ್ಲಿಂದ ಏರಿಕೆ ಮುಂದುವರಿದು 2018-19ರಲ್ಲಿ 1.44 ಕೋಟಿ ರೂ., 2019-20ರಲ್ಲಿ 2.08 ಕೋಟಿ ರೂ. ಮತ್ತು 2020-21ರಲ್ಲಿ 2.68 ಕೋಟಿ ರೂಪಾಯಿಗೆ ಏರಿತು. ಶರ್ಮಾ ಅವರು ಮುಖ್ಯಮಂತ್ರಿಯಾಗುವ ಮೊದಲಿನಿಂದಲೂ ಈ ಏರಿಕೆಯ ಹಾದಿ ಇತ್ತು. ಆ ಸಮಯದಲ್ಲಿ ಅವರು ಮೊದಲು ಕಾಂಗ್ರೆಸ್ ಸರ್ಕಾರದಲ್ಲಿ, ನಂತರ 2016ರಿಂದ ಸರ್ಬಾನಂದ ಸೋನೊವಾಲ್ ನೇತೃತ್ವದ BJP ಸರ್ಕಾರದಲ್ಲಿ ಸಚಿವರಾಗಿ ಸತತವಾಗಿ ಕಾರ್ಯನಿರ್ವಹಿಸುತ್ತಿದ್ದರು.

2021ರ ಮೇ ನಂತರ ಇದರ ಪ್ರಮಾಣ ಸಂಪೂರ್ಣವಾಗಿ ಬದಲಾಯಿತು. 2021-22ರಲ್ಲಿ ದಾಖಲಾದ ಮೊತ್ತ 5.52 ಕೋಟಿ ರೂಪಾಯಿ, ಅಂದರೆ ಹಿಂದಿನ ವರ್ಷದ ಒಟ್ಟು ಮೊತ್ತಕ್ಕಿಂತ ಎರಡಕ್ಕೂ ಹೆಚ್ಚು ಪಟ್ಟು ಅಧಿಕ. ಶರ್ಮಾ ಪ್ರಮಾಣವಚನ ಸ್ವೀಕರಿಸಿದ್ದು ಮೇ ತಿಂಗಳಿನಲ್ಲಾದರೆ, ಈ ಹಣಕಾಸು ವರ್ಷವು ಏಪ್ರಿಲ್ 2021ರಿಂದಲೇ ಪ್ರಾರಂಭವಾಗಿತ್ತು. 2022-23ರಲ್ಲಿ ಈ ಪಾವತಿಯು 3.75 ಕೋಟಿ ರೂಪಾಯಿಗೆ ಇಳಿಯಿತಾದರೂ, 2023-24ರಲ್ಲಿ ಭಾರೀ ಜಿಗಿತ ಕಂಡು 10.05 ಕೋಟಿ ರೂಪಾಯಿಗೆ ಏರಿತು. ಇದು ದಾಖಲೆಯಲ್ಲಿ ಲಭ್ಯವಿರುವ ಏಕೈಕ ವರ್ಷದ ಅತ್ಯಧಿಕ ಮೊತ್ತವಾಗಿದ್ದು, 2020-21ರವರೆಗಿನ 11 ವರ್ಷಗಳಲ್ಲಿ ಕಂಪೆನಿಯು ಪಡೆದ ಒಟ್ಟು ಮೊತ್ತಕ್ಕೆ ಸರಿಸಮನಾಗಿದೆ.

2023-24ರ ಹಣಕಾಸು ವರ್ಷದಲ್ಲಿ ರಾಜ್ಯದ ಒಟ್ಟು ಟಿವಿ ಜಾಹೀರಾತು ವೆಚ್ಚದಲ್ಲಿ ಪ್ರೈಡ್ ಈಸ್ಟ್ ಪಡೆದ ಪಾಲು ಅತ್ಯಂತ ದೊಡ್ಡದಾಗಿತ್ತು. 2023-24ರ ಸರ್ಕಾರಿ ವೆಚ್ಚದ ಡೇಟಾ ಪ್ರಕಾರ, ಟಿವಿ ಪ್ರಚಾರಕ್ಕಾಗಿ ಒಟ್ಟು ಸುಮಾರು 32 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಇದರರ್ಥ, ಆ ವರ್ಷ ರಾಜ್ಯದ ಒಟ್ಟು ಟಿವಿ ಜಾಹೀರಾತು ವೆಚ್ಚದ ಮೂರನೇ ಒಂದು ಭಾಗದಷ್ಟು ಹಣ ಪ್ರೈಡ್ ಈಸ್ಟ್ ಸಂಸ್ಥೆಗೆ ಸಂದಾಯವಾಗಿದೆ.

ಸರ್ಕಾರದ ಮಾಹಿತಿಯು 2024-25ರ ಅವಧಿಗೆ 78.9 ಲಕ್ಷ ರೂಪಾಯಿಗಳನ್ನು ಉಲ್ಲೇಖಿಸಿದೆ. ಈ ಅಂಕಿ-ಅಂಶವು ಆಗಸ್ಟ್ 2024ರವರೆಗಿನ ಅವಧಿಗೆ ಮಾತ್ರ ಸೀಮಿತವಾಗಿದ್ದು, ಇದನ್ನು ಪೂರ್ಣ ವರ್ಷದ ಒಟ್ಟು ಮೊತ್ತವೆಂದು ಪರಿಗಣಿಸಲು ಸಾಧ್ಯವಿಲ್ಲ.

2021ರಲ್ಲಿ ಪ್ರೈಡ್ ಈಸ್ಟ್ ತನ್ನ ಜಾಹೀರಾತು ದರಗಳನ್ನು ಹೆಚ್ಚಿಸಿದೆಯೇ ಎಂದೂ ನಜರ್ ಪ್ರಶ್ನಿಸಿದ್ದರು. ಅದಕ್ಕೆ ಉತ್ತರಿಸಿದ್ದ ಅಂದಿನ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಪಿಯೂಷ್ ಹಜಾರಿಕಾ, ದರ ಹೆಚ್ಚಳವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಶರ್ಮಾ ನೇತೃತ್ವದ ಹಿಂದಿನ ಸರ್ಕಾರದಲ್ಲಿ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಹಜಾರಿಕಾ ಅವರ ಉಸ್ತುವಾರಿಯಲ್ಲಿತ್ತು. ಈ ವರ್ಷ, ಈ ಇಲಾಖೆಯು ಗೃಹ, ಇಂಧನ ಮತ್ತು ಇತರ ಹಲವು ಇಲಾಖೆಗಳೊಂದಿಗೆ ನೇರವಾಗಿ ಶರ್ಮಾ ಅವರ ಬಳಿಯೇ ಇದೆ.

‘newslaundry’ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮತ್ತು ರಿನಿಕಿ ಭುಯಾನ್ ಶರ್ಮಾ ಅವರಿಗೆ ಪ್ರಶ್ನೆಗಳನ್ನು ಕಳುಹಿಸಿದ್ದು, ವರದಿ ಪ್ರಕಟವಾಗುವವರೆಗೆ ಉತ್ತರ ಲಭಿಸಿಲ್ಲ.

►ದೊಡ್ಡ ಮಟ್ಟದಲ್ಲೇ ಹೆಚ್ಚಿದ ಜಾಹೀರಾತು ಬಜೆಟ್

2026ರ ಜುಲೈ 10ರಂದು ಶಾಸಕ ವಾಜೆದ್ ಅಲಿ ಚೌಧರಿ ಅವರಿಗೆ ನೀಡಲಾದ ಉತ್ತರದ ಪ್ರಕಾರ, ಪ್ರೈಡ್ ಈಸ್ಟ್ ಪಡೆದ ಜಾಹೀರಾತು ಆದಾಯದ ಏರಿಕೆಯು ರಾಜ್ಯದ ಒಟ್ಟಾರೆ ಪ್ರಚಾರ ವೆಚ್ಚದ ಭಾರೀ ವಿಸ್ತರಣೆಯ ಭಾಗವಾಗಿದೆ.

ಶರ್ಮಾ ಮುಖ್ಯಮಂತ್ರಿಯಾಗುವ ಮೊದಲಿನ ಐದು ಹಣಕಾಸು ವರ್ಷಗಳಲ್ಲಿ (2016-17ರಿಂದ 2020-21) ಅಸ್ಸಾಂ ಸರ್ಕಾರವು ಮಾಧ್ಯಮ ಮತ್ತು ಜಾಹೀರಾತುಗಳಿಗಾಗಿ 145.01 ಕೋಟಿ ರೂಪಾಯಿ ವೆಚ್ಚ ಮಾಡಿತ್ತು. 2021-22ರಿಂದ 2025-26ರವರೆಗಿನ ಐದು ವರ್ಷಗಳಲ್ಲಿ ಈ ವೆಚ್ಚವು 460.82 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಅಂದರೆ, ಮೂರಕ್ಕಿಂತ ಹೆಚ್ಚು ಪಟ್ಟು ಹೆಚ್ಚಾಗಿದೆ. ಈ ಅಂಕಿ-ಅಂಶಗಳು 2026ರ ಜುಲೈ 13ರಂದು ವಿಧಾನಸಭೆಯಲ್ಲಿ ಮಂಡಿಸಲಾದ ಪ್ರತ್ಯೇಕ ಉತ್ತರದಿಂದ ಲಭ್ಯವಾಗಿವೆ.

ವರ್ಷವಾರು ವೆಚ್ಚದ ವಿವರ ಹೀಗಿದೆ: ಸರ್ಕಾರವು 2016-17ರಲ್ಲಿ 27.06 ಕೋಟಿ ರೂ., 2017-18ರಲ್ಲಿ 17.29 ಕೋಟಿ ರೂ., 2018-19ರಲ್ಲಿ 23.61 ಕೋಟಿ ರೂ., 2019-20ರಲ್ಲಿ 30.7 ಕೋಟಿ ರೂ. ಮತ್ತು 2020-21ರಲ್ಲಿ 46.35 ಕೋಟಿ ರೂಪಾಯಿ ವೆಚ್ಚ ಮಾಡಿತ್ತು. ತದನಂತರದ ವರ್ಷಗಳಲ್ಲಿ ವೆಚ್ಚವು 2021-22ರಲ್ಲಿ 72.83 ಕೋಟಿ ರೂ. ಹಾಗೂ 2022-23ರಲ್ಲಿ 78.69 ಕೋಟಿ ರೂಪಾಯಿಗೆ ಏರಿಕೆಯಾಗಿ, 2023-24ರಲ್ಲಿ ಸಾರ್ವಕಾಲಿಕ ಗರಿಷ್ಠ ಅಂದರೆ 160.9 ಕೋಟಿ ರೂಪಾಯಿಗೆ ತಲುಪಿತ್ತು. ನಂತರ 2024-25ರಲ್ಲಿ 69.17 ಕೋಟಿ ರೂಪಾಯಿಗೆ ಇಳಿಕೆಯಾಗಿ, 2025-26ರಲ್ಲಿ 79.23 ಕೋಟಿ ರೂಪಾಯಿಯಷ್ಟಿತ್ತು.

ಎರಡೂ ಅವಧಿಗಳಲ್ಲಿ ಮುದ್ರಣ ಮಾಧ್ಯಮವೇ ಹೆಚ್ಚಿನ ಪಾಲು ಪಡೆದುಕೊಂಡಿತ್ತಾದರೂ, ನಂತರದ ದಿನಗಳಲ್ಲಿ ಈ ಅಂತರ ಮತ್ತಷ್ಟು ಹಿಗ್ಗಿದೆ.

ಹಿಂದಿನ ಐದು ವರ್ಷಗಳ ಒಟ್ಟು ಮೊತ್ತದಲ್ಲಿ ಮುದ್ರಣ ಮಾಧ್ಯಮದ ಜಾಹೀರಾತು ಪಾಲು 120.98 ಕೋಟಿ ರೂಪಾಯಿಯಾಗಿದ್ದರೆ, ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ 4.63 ಕೋಟಿ ರೂ. ಮತ್ತು ಹೋರ್ಡಿಂಗ್ಸ್ ಹಾಗೂ ಬ್ಯಾನರ್ಗಳಿಗೆ 19.41 ಕೋಟಿ ರೂಪಾಯಿ ವೆಚ್ಚ ಮಾಡಲಾಗಿತ್ತು. ನಂತರದ ಅವಧಿಯಲ್ಲಿ ಮುದ್ರಣ ಮಾಧ್ಯಮದ ವೆಚ್ಚವು 335.55 ಕೋಟಿ ರೂಪಾಯಿಗೆ, ಎಲೆಕ್ಟ್ರಾನಿಕ್ ಮಾಧ್ಯಮದ ವೆಚ್ಚವು 69.70 ಕೋಟಿ ರೂಪಾಯಿಗೆ ಮತ್ತು ಹೋರ್ಡಿಂಗ್ಸ್ ಹಾಗೂ ಬ್ಯಾನರ್ಗಳ ವೆಚ್ಚವು 50.04 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ, ಹಿಂದಿನ ದತ್ತಾಂಶಗಳಲ್ಲಿ ಇಲ್ಲದ ಹೊಸ ಮಾಧ್ಯಮಗಳಿಗೂ ವೆಚ್ಚ ಮಾಡಲಾಗಿದೆ. ಸೋಷಿಯಲ್ ಮೀಡಿಯಾಕ್ಕಾಗಿ 2.64 ಕೋಟಿ ರೂ. ಮತ್ತು ಡಿಜಿಟಲ್ ಮಾಧ್ಯಮಕ್ಕಾಗಿ 2.89 ಕೋಟಿ ರೂಪಾಯಿ ವೆಚ್ಚವಾಗಿರುವುದು ದಾಖಲಾಗಿದೆ.

ಅತ್ಯಂತ ಹೆಚ್ಚು ವೆಚ್ಚವಾದ 2023-24ರ ಹಣಕಾಸು ವರ್ಷದಲ್ಲೂ ಮುದ್ರಣ ಮಾಧ್ಯಮದ ಪಾಲೇ ಪ್ರಮುಖವಾಗಿತ್ತು. ಆ ವರ್ಷ ವೆಚ್ಚವಾದ ಒಟ್ಟು 160.90 ಕೋಟಿ ರೂಪಾಯಿಯಲ್ಲಿ 120.56 ಕೋಟಿ ರೂಪಾಯಿ ದಿನಪತ್ರಿಕೆಗಳಿಗೆ ಸಂದಾಯವಾಗಿದೆ.

►ಯಾರಿಗೆ ಎಷ್ಟು ಹಣ ಸಂದಾಯವಾಗಿದೆ?

2016-17ರಿಂದ 2025-26ರ ನಡುವೆ ಅಸ್ಸಾಂನಲ್ಲಿ ಅತ್ಯಂತ ಹೆಚ್ಚು ಪ್ರಸಾರವಿರುವ 10 ಪ್ರಮುಖ ದಿನಪತ್ರಿಕೆಗಳಿಗೆ ನೀಡಲಾದ ಪಾವತಿಯ ವಿವರಗಳನ್ನು ಶಾಸಕ ಚೌಧರಿ ಅವರಿಗೆ ಜುಲೈ 2026ರಲ್ಲಿ ನೀಡಲಾದ ಉತ್ತರದಲ್ಲಿ ವರ್ಗೀಕರಿಸಲಾಗಿದೆ.

ಇಂಗ್ಲಿಷ್ ದಿನಪತ್ರಿಕೆಯಾದ ‘ದಿ ಅಸ್ಸಾಂ ಟ್ರಿಬ್ಯೂನ್’ ಅತ್ಯಂತ ಹೆಚ್ಚು ಅಂದರೆ 43.1 ಕೋಟಿ ರೂಪಾಯಿ ಪಡೆದುಕೊಂಡಿದ್ದರೆ, ‘ದಿ ಸೆಂಟಿನೆಲ್’ 30.20 ಕೋಟಿ ರೂಪಾಯಿಗಳನ್ನು ಪಡೆದಿದೆ. ಅಸ್ಸಾಮಿ ದಿನಪತ್ರಿಕೆಗಳ ಪೈಕಿ ‘ಅಸೋಮಿಯಾ ಪ್ರತಿದಿನ್’ 21.08 ಕೋಟಿ ರೂಪಾಯಿಗಳೊಂದಿಗೆ ಮುಂಚೂಣಿಯಲ್ಲಿದ್ದರೆ, ‘ಅಮರ್ ಅಸೋಮ್’ (19.59 ಕೋಟಿ ರೂ.), ‘ದೈನಿಕ ಜನಂಭೂಮಿ’ (19.42 ಕೋಟಿ ರೂ.), ‘ದೈನಿಕ ಅಗ್ರದೂತ್’ (17.15 ಕೋಟಿ ರೂ.) ಮತ್ತು ‘ಅಸೋಮಿಯಾ ಖಬರ್’ (14.18 ಕೋಟಿ ರೂ.) ನಂತರದ ಸ್ಥಾನಗಳಲ್ಲಿವೆ. ಪಟ್ಟಿಯಲ್ಲಿರುವ ಮೂರು ಹಿಂದಿ ದಿನಪತ್ರಿಕೆಗಳು ಪಡೆದ ಮೊತ್ತ ಗಣನೀಯವಾಗಿ ಕಡಿಮೆಯಿದೆ: ‘ದೈನಿಕ ಪೂರ್ವೋದಯ್’ 7.24 ಕೋಟಿ ರೂ., ‘ಪೂರ್ವಾಂಚಲ್ ಪ್ರಹರಿ’ 5.11 ಕೋಟಿ ರೂ. ಹಾಗೂ ‘ಪ್ರಾತಃ ಖಬರ್’ 2.34 ಕೋಟಿ ರೂಪಾಯಿ ಪಡೆದಿವೆ.

ಇದೇ ಪ್ರಶ್ನೆಯಲ್ಲಿ ಟಿವಿ ಜಾಹೀರಾತುಗಳ ವಿವರಗಳನ್ನು ಕೋರಲಾಗಿತ್ತಾದರೂ, ಸರ್ಕಾರ ಆ ಮಾಹಿತಿ ಒದಗಿಸಿಲ್ಲ.

2024ರ ಆಗಸ್ಟ್ನಲ್ಲಿ ನೀಡಿದ ಉತ್ತರದಲ್ಲಿ ಟಿವಿ ನೆಟ್ವರ್ಕ್ ಗಳು ಮತ್ತು ಅಸ್ಸಾಂ ಹೊರಗಿನ ಮಾಧ್ಯಮಗಳಿಗೆ ನೀಡಿರುವ ಪಾವತಿಗಳ ವಿವರಗಳು ಲಭ್ಯವಾಗಿವೆ. ಈ ವಿವರವು ಮೇ 2021ರಿಂದ ಜುಲೈ 31, 2024ರವರೆಗಿನ ಅವಧಿಯಲ್ಲಿ 22 ರಾಷ್ಟ್ರೀಯ ದಿನಪತ್ರಿಕೆಗಳಿಗೆ ನೀಡಲಾದ ವೆಚ್ಚವನ್ನು ಒಳಗೊಂಡಿದೆ.

ಪತ್ರಿಕೆಗಳ ಪೈಕಿ ‘ದಿ ಟೈಮ್ಸ್ ಆಫ್ ಇಂಡಿಯಾ’ ಅತ್ಯಧಿಕ ಅಂದರೆ 21.27 ಕೋಟಿ ರೂಪಾಯಿ ಪಡೆದಿದ್ದರೆ, ‘ಹಿಂದುಸ್ತಾನ್ ಟೈಮ್ಸ್’ (12.14 ಕೋಟಿ ರೂ.) ಮತ್ತು ‘ದೈನಿಕ ಜಾಗರಣ್’ (10.72 ಕೋಟಿ ರೂ.) ನಂತರದ ಸ್ಥಾನಗಳಲ್ಲಿವೆ. ‘ದಿ ಇಂಡಿಯನ್ ಎಕ್ಸ್ಪ್ರೆಸ್’ 7.01 ಕೋಟಿ ರೂ. ಮತ್ತು ‘ದಿ ಹಿಂದೂ’ 6.92 ಕೋಟಿ ರೂಪಾಯಿಗಳನ್ನು ಪಡೆದಿವೆ. ಇತರ ಪತ್ರಿಕೆಗಳ ಪೈಕಿ ‘ಅಮರ್ ಉಜಾಲಾ’ (3.62 ಕೋಟಿ ರೂ.), ‘ದೈನಿಕ ಭಾಸ್ಕರ್’ (2 ಕೋಟಿ ರೂ.), ‘ಆನಂದಬಜಾರ್ ಪತ್ರಿಕಾ’ (1.66 ಕೋಟಿ ರೂ.), ‘ದಿ ಟೆಲಿಗ್ರಾಫ್’ (1.61 ಕೋಟಿ ರೂ.), ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ (1.19 ಕೋಟಿ ರೂ.), ‘ಸಂದೇಶ್’ (42.8 ಲಕ್ಷ ರೂ.), ‘ಪಂಜಾಬ್ ಕೇಸರಿ’ (59.49 ಲಕ್ಷ ರೂ.), ‘ಡೆಕ್ಕನ್ ಹೆರಾಲ್ಡ್’ (36.59 ಲಕ್ಷ ರೂ.), ‘ಹಿಂದುಸ್ತಾನ್’ (35.7 ಲಕ್ಷ ರೂ.), ‘ವರ್ತಮಾನ್’ (28.83 ಲಕ್ಷ ರೂ.), ‘ಪ್ರಮೇಯ’ (16.8 ಲಕ್ಷ ರೂ.), ‘ನವಭಾರತ್ ಟೈಮ್ಸ್’ (12.81 ಲಕ್ಷ ರೂ.) ಮತ್ತು ‘ಹಿಂದ್ ಸಮಾಚಾರ್’ (57,898 ರೂ.) ಜಾಹೀರಾತು ಮೊತ್ತ ಪಡೆದುಕೊಂಡಿವೆ.

ಇದೇ ಉತ್ತರದಲ್ಲಿ ಆ ಅವಧಿಯ ಟಿವಿ ಮತ್ತು ರೇಡಿಯೋ ಪಾವತಿಗಳನ್ನು ಪಟ್ಟಿ ಮಾಡಲಾಗಿದೆ. ‘ಪ್ರತಿದಿನ್ ಟೈಮ್’ 4.16 ಕೋಟಿ ರೂ., ‘DY365’ 4.03 ಕೋಟಿ ರೂ., ‘ಪ್ರಾಗ್ ನ್ಯೂಸ್’ 3.84 ಕೋಟಿ ರೂ., ‘ND24’ 3.64 ಕೋಟಿ ರೂ. ಮತ್ತು ‘NK TV’ 3.55 ಕೋಟಿ ರೂಪಾಯಿಗಳನ್ನು ಪಡೆದಿವೆ. ಹಾಗೆಯೇ ‘ನ್ಯೂಸ್18’ 3.16 ಕೋಟಿ ರೂ., ‘NE ನ್ಯೂಸ್’ 1.92 ಕೋಟಿ ರೂ., ‘ಅಸ್ಸಾಂ ಟಾಕ್ಸ್’ 1.38 ಕೋಟಿ ರೂ., ‘ಪ್ರಥಮ್ ಖಬರ್’ 1.33 ಕೋಟಿ ರೂ. ಹಾಗೂ ‘ರಂಗ್’ 1.31 ಕೋಟಿ ರೂಪಾಯಿ ಪಡೆದಿವೆ. ಪ್ರೈಡ್ ಈಸ್ಟ್ ಸಂಸ್ಥೆಯ ‘ನ್ಯೂಸ್ ಲೈವ್’ ಮತ್ತು ‘ನಾರ್ತ್ಈಸ್ಟ್ ಲೈವ್’ ವಾಹಿನಿಗಳು ಅನುಕ್ರಮವಾಗಿ 3.45 ಕೋಟಿ ರೂ. ಮತ್ತು 1.8 ಕೋಟಿ ರೂಪಾಯಿಗಳನ್ನು ಪಡೆದುಕೊಂಡಿವೆ.

ರಾಷ್ಟ್ರೀಯ ನ್ಯೂಸ್ ಚಾನೆಲ್ಗಳ ಪೈಕಿ ‘ಆಜ್ ತಕ್’ 1.45 ಕೋಟಿ ರೂ. ಹಾಗೂ ‘ಟೈಮ್ಸ್ ನೌ’ 1.04 ಕೋಟಿ ರೂಪಾಯಿಗಳನ್ನು ಪಡೆದಿದ್ದರೆ, ‘Zee ಟಿವಿ’ (55.22 ಲಕ್ಷ ರೂ.), ‘ಇಂಡಿಯಾ ಟಿವಿ’ (52.11 ಲಕ್ಷ ರೂ.), ‘ಎಬಿಪಿ ನ್ಯೂಸ್’ (40.61 ಲಕ್ಷ ರೂ.), ‘ರಿಪಬ್ಲಿಕ್ ಟಿವಿ’ (35.78 ಲಕ್ಷ ರೂ.), ‘ಇಂಡಿಯಾ ಟುಡೇ’ (33.35 ಲಕ್ಷ ರೂ.) ಮತ್ತು ‘ಟಿವಿ9 ಭಾರತ್ವರ್ಷ್’ (26.34 ಲಕ್ಷ ರೂ.) ನಂತರದ ಸ್ಥಾನಗಳಲ್ಲಿವೆ. ರೇಡಿಯೋ ಕ್ಷೇತ್ರದಲ್ಲಿ ‘ಆಲ್ ಇಂಡಿಯಾ ರೇಡಿಯೋ’ 49.94 ಲಕ್ಷ ರೂ. ಹಾಗೂ ‘ರೇಡಿಯೋ ಮಿರ್ಚಿ’ 46.36 ಲಕ್ಷ ರೂಪಾಯಿಗಳನ್ನು ಪಡೆದಿದ್ದು, ರೆಡ್ ಎಫ್ಎಂ, ಬಿಗ್ ಎಫ್ಎಂ, ರೇಡಿಯೋ ಸಿಟಿ ಮತ್ತು ಫೀವರ್ ಎಫ್ಎಂಗಳಿಗೂ ಸಣ್ಣ ಮೊತ್ತ ಪಾವತಿಯಾಗಿದೆ.

2021-22ರಿಂದ ಆಗಸ್ಟ್ 2024ರ ನಡುವೆ ಪ್ರೈಡ್ ಈಸ್ಟ್ ಸಂಸ್ಥೆಯು ಒಟ್ಟು ಸುಮಾರು 20 ಕೋಟಿ ರೂಪಾಯಿ ಪಡೆದಿದೆಯಾದರೂ, ಈ ಮೊತ್ತದ ಪ್ರತ್ಯೇಕ ಮಾಧ್ಯಮವಾರು ವಿವರಗಳು ಲಭ್ಯವಿಲ್ಲ. ಆಸಿಫ್ ಮೊಹಮ್ಮದ್ ನಜರ್ ಅವರಿಗೆ ವಿಧಾನಸಭೆಯಲ್ಲಿ ನೀಡಲಾದ ಉತ್ತರದ ಪ್ರಕಾರ, 2021ರ ಮೇಯಿಂದ 2024ರ ಜುಲೈವರೆಗೆ ‘ನಿಯಮೀಯ ಬಾರ್ತಾ’ ದಿನಪತ್ರಿಕೆಗೆ 12.8 ಕೋಟಿ ರೂ. ಮತ್ತು ಪ್ರೈಡ್ ಈಸ್ಟ್ ವಾಹಿನಿಗಳಿಗೆ ಸುಮಾರು 5.25 ಕೋಟಿ ರೂಪಾಯಿ ಪಾವತಿಯಾಗಿದೆ.

►ಪಟ್ಟಿಯಲ್ಲಿರುವ ಹೋರ್ಡಿಂಗ್ಸ್ ವಿವರ

ವಿಧಾನಸಭೆಯಲ್ಲಿ ನೀಡಲಾದ ಮತ್ತೊಂದು ಉತ್ತರದ ಪ್ರಕಾರ, ಮೂರು ಹಣಕಾಸು ವರ್ಷಗಳಲ್ಲಿ ಹೊರಾಂಗಣ ಜಾಹೀರಾತುಗಳಿಗಾಗಿ ಒಟ್ಟು 22.15 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಇದರಲ್ಲಿ 2021-22ರಲ್ಲಿ 10.50 ಕೋಟಿ ರೂ., 2022-23ರಲ್ಲಿ 4.43 ಕೋಟಿ ರೂ. ಮತ್ತು 2023-24ರಲ್ಲಿ 7.22 ಕೋಟಿ ರೂಪಾಯಿ ಸೇರಿದೆ.

2021-22ರಲ್ಲಿ ಅತ್ಯಂತ ದೊಡ್ಡ ಮೊತ್ತವು ‘ಎಆರ್ಟಿ ಎಂಟರ್ಟೈನ್ಮೆಂಟ್ & ಸರ್ವಿಸ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಗೆ (5.41 ಕೋಟಿ ರೂ.) ಸಂದಾಯವಾಗಿದೆ. ನಂತರದ ಸ್ಥಾನಗಳಲ್ಲಿ ‘ಔಟ್ರೀಚ್ ಅಡ್ವರ್ಟೈಸಿಂಗ್ ಪ್ರೈವೇಟ್ ಲಿಮಿಟೆಡ್’ (1.90 ಕೋಟಿ ರೂ.) ಮತ್ತು ‘ಫಾಸ್ಟ್ ಟ್ರ್ಯಾಕ್ ಇಂಟಿಗ್ರೇಟೆಡ್ ಮಾರ್ಕೆಟಿಂಗ್ ಸರ್ವಿಸ್’ (1.50 ಕೋಟಿ ರೂ.) ಇವೆ. ಉಳಿದಂತೆ ‘ಪ್ರಿಯಾ ಕಮ್ಯುನಿಕೇಷನ್’ (99.98 ಲಕ್ಷ ರೂ.), ‘ಆಕ್ಮೆ ಇವೆಂಟ್ & ಎಂಪೋ’ (32.63 ಲಕ್ಷ ರೂ.), ‘ಮಾರ್ಕಾಮ್ ಮೀಡಿಯಾ’ (21.58 ಲಕ್ಷ ರೂ.) ಹಾಗೂ ‘ಉರ್ವಶಿ ರಿಫ್ಲೆಕ್ಷನ್ & ಕೋ’ (14.53 ಲಕ್ಷ ರೂ.) ಸಂಸ್ಥೆಗಳಿಗೆ ಸಣ್ಣ ಮೊತ್ತ ಪಾವತಿಯಾಗಿದೆ.

ನಂತರದ ವರ್ಷದಲ್ಲಿ, ಒಟ್ಟು 4.43 ಕೋಟಿ ರೂಪಾಯಿಗಳನ್ನು ಕೇವಲ ಎರಡು ಸಂಸ್ಥೆಗಳಿಗೆ ನೀಡಲಾಗಿದೆ: ‘ಔಟ್ರೀಚ್ ಅಡ್ವರ್ಟೈಸಿಂಗ್’ ಸಂಸ್ಥೆಗೆ 3.22 ಕೋಟಿ ರೂ. ಹಾಗೂ ‘ಆಕ್ಸಿಸ್ ಮೈ ಇಂಡಿಯಾ’ ಸಂಸ್ಥೆಗೆ 1.21 ಕೋಟಿ ರೂಪಾಯಿ ಸಂದಾಯವಾಗಿದೆ. 2023-24ರಲ್ಲೂ ‘ಔಟ್ರೀಚ್ ಅಡ್ವರ್ಟೈಸಿಂಗ್’ ಸಂಸ್ಥೆಯು 4.01 ಕೋಟಿ ರೂಪಾಯಿಗಳೊಂದಿಗೆ ಮುಂಚೂಣಿಯಲ್ಲಿದ್ದರೆ, ‘ಆಕ್ಸಿಸ್ ಮೈ ಇಂಡಿಯಾ’ 2.41 ಕೋಟಿ ರೂ. ಮತ್ತು ‘ಉರ್ವಶಿ ರಿಫ್ಲೆಕ್ಷನ್ & ಕೋ’ 59.94 ಲಕ್ಷ ರೂಪಾಯಿಗಳನ್ನು ಪಡೆದಿವೆ. ಉಳಿದಂತೆ ‘ಎಕ್ಸ್ಕ್ಲೂಸಿವ್ ಅಡ್ವರ್ಟೈಸಿಂಗ್ ಪ್ರೈವೇಟ್ ಲಿಮಿಟೆಡ್’ (9.79 ಲಕ್ಷ ರೂ.), ‘ಎಆರ್ಟಿ ಎಂಟರ್ಟೈನ್ಮೆಂಟ್’ (8.70 ಲಕ್ಷ ರೂ.), ‘ರೆಸೊನೆನ್ಸ್ ಬ್ರಾಂಡ್ ಕಮ್ಯುನಿಕೇಷನ್’ (1.30 ಲಕ್ಷ ರೂ.) ಮತ್ತು ‘ತೂಲಿಕಾ ಆರ್ಟ್’ (48,000 ರೂ.) ಸಂಸ್ಥೆಗಳಿಗೆ ಕಡಿಮೆ ಮೊತ್ತ ನೀಡಲಾಗಿದೆ.

ಎರಡು ವರ್ಷಗಳಲ್ಲಿ ಒಟ್ಟು 3.62 ಕೋಟಿ ರೂಪಾಯಿ ಪಡೆದುಕೊಂಡಿರುವ ‘ಆಕ್ಸಿಸ್ ಮೈ ಇಂಡಿಯಾ’ ಸಂಸ್ಥೆಯು ಚುನಾವಣಾ ಸಮೀಕ್ಷೆ ನಡೆಸುವ ಸಂಸ್ಥೆಯಾಗಿ ಪ್ರಸಿದ್ಧವಾಗಿದೆ. ಇದರ ಸಂಸ್ಥಾಪಕ ಹಾಗೂ ಅಧ್ಯಕ್ಷ ಪ್ರದೀಪ್ ಗುಪ್ತಾ, ಭಾರತದ ಪ್ರಮುಖ ಸಮೀಕ್ಷಕರಲ್ಲಿ ಒಬ್ಬರಾಗಿದ್ದಾರೆ. ಆದರೆ, ಈ ಸಂಸ್ಥೆಗೆ ಯಾವ ರೀತಿಯ ಕೆಲಸಕ್ಕಾಗಿ ಹಣ ಪಾವತಿಸಲಾಗಿದೆ ಎಂಬುದನ್ನು ವಿಧಾನಸಭೆಯ ಉತ್ತರದಲ್ಲಿ ಸ್ಪಷ್ಟಪಡಿಸಿಲ್ಲ.

ಸೌಜನ್ಯ: newslaundry.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News