SIR ನೋಟಿಸ್ ಪಡೆದವರ ಮನೆಗೇ ತೆರಳಿ ದಾಖಲೆ ಸಂಗ್ರಹಿಸುವಂತೆ BLOಗಳಿಗೆ ಚುನಾವಣಾ ಆಯೋಗದಿಂದ ಸೂಚನೆ
►‘ಕ್ಯಾಬಿನೆಟ್ ಕಾರ್ಯದರ್ಶಿಗೆ ಬರೆದ ಪತ್ರ ಅಧಿಕಾರಿಯ ಕಾರ್ಯನಿರ್ವಹಣೆಗೆ ಸಂಬಂಧಿಸಿದ್ದು’ ►ದಿಲ್ಲಿ, ಮಹಾರಾಷ್ಟ್ರದಲ್ಲಿ ಅಹವಾಲು - ಆಕ್ಷೇಪಣೆ ಸಲ್ಲಿಕೆ ಗಡುವು ವಿಸ್ತರಣೆ
ಭಾರತೀಯ ಚುನಾವಣಾ ಆಯೋಗ | PTI
ಹೊಸದಿಲ್ಲಿ, ಸೆ.26: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ವೇಳೆ ‘ಮ್ಯಾಪ್’ ಆಗದಿರುವುದು ಅಥವಾ ತಾರ್ಕಿಕ ವ್ಯತ್ಯಾಸಗಳ ಕಾರಣ ನೋಟಿಸ್ ಪಡೆದಿರುವವರ ಮನೆಗಳಿಗೆ ಬೂತ್ ಮಟ್ಟದ ಅಧಿಕಾರಿಗಳು (BLO) ತೆರಳಿ ದಾಖಲೆಗಳನ್ನು ಸಂಗ್ರಹಿಸಬೇಕು ಎಂದು ಭಾರತೀಯ ಚುನಾವಣಾ ಆಯೋಗ ಸೂಚಿಸಿದೆ.
ಸಂಗ್ರಹಿಸಿದ ದಾಖಲೆಗಳನ್ನು ಮತದಾರರ ನೋಂದಣಿ ಅಧಿಕಾರಿ (ERO) ಅವರ ನಿರ್ಧಾರಕ್ಕಾಗಿ ‘ECINet’ನಲ್ಲಿ ಅಪ್ಲೋಡ್ ಮಾಡಬೇಕು. ನೋಟಿಸ್ ಪಡೆದವರನ್ನು ವಿಚಾರಣೆಗಾಗಿ ERO ಅಥವಾ ಸಹಾಯಕ ಮತದಾರರ ನೋಂದಣಿ ಅಧಿಕಾರಿ (AERO) ಕಚೇರಿಗೆ ಕರೆಯುವ ಅಗತ್ಯವಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.
ERO ನಿರ್ಧರಿಸುವ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ವಿಚಾರಣೆ ನಡೆಸಬೇಕು. ಸಾಧ್ಯವಾದಷ್ಟು ವಿಚಾರಣೆಯನ್ನು ಆನ್ಲೈನ್ನಲ್ಲಿ ನಡೆಸಬೇಕು. ಅಗತ್ಯವಿದ್ದರೆ ಮತದಾರರ ಪರವಾಗಿ ಕುಟುಂಬದ ಯಾವುದೇ ವಯಸ್ಕ ಸದಸ್ಯರು ವಿಚಾರಣೆಗೆ ಹಾಜರಾಗಬಹುದು. ಆನ್ಲೈನ್ ವಿಚಾರಣೆಯ ಸೌಲಭ್ಯಗಳನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಆಯೋಗ ತಿಳಿಸಿದೆ.
ರಾತ್ರಿ ಆಶ್ರಯ ತಾಣಗಳಲ್ಲಿ ವಾಸಿಸುವವರು, ಕಾರ್ಮಿಕರು, ಬಡವರು ಮತ್ತು ನಿರಾಶ್ರಿತರಿಗಾಗಿ ಜಿಲ್ಲಾ ಚುನಾವಣಾಧಿಕಾರಿಗಳು (DEO) ಅಗತ್ಯ ಸಂಖ್ಯೆಯಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಬೇಕು ಅಥವಾ ವಿಶೇಷ ಶಿಬಿರಗಳನ್ನು ಆಯೋಜಿಸಬೇಕು ಎಂದು ಸೂಚಿಸಲಾಗಿದೆ.
►ನಮೂನೆ 6ರ ಘೋಷಣೆಗೆ ಸುಪ್ರೀಂ ಕೋರ್ಟ್ ಮಾನ್ಯತೆ
SIR ಅವಧಿಯಲ್ಲಿ ನಮೂನೆ 6ರೊಂದಿಗೆ ನೀಡಬೇಕಾದ ಘೋಷಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. SIR ಮುಗಿದ ಬಳಿಕ 1960ರ ಮತದಾರರ ನೋಂದಣಿ ನಿಯಮಗಳ ಪ್ರಕಾರ ಇರುವ ನಮೂನೆಗಳನ್ನೇ ಬಳಸಲಾಗುವುದು ಎಂದು ಆಯೋಗ ತಿಳಿಸಿದೆ.
ಕ್ಷೇತ್ರ ಮಟ್ಟದ ಅಧಿಕಾರಿಗಳಿಗೆ ಅವರ ಅಧಿಕಾರಕ್ಕೆ ಅನುಗುಣವಾಗಿ ECINet ಬಳಸಲು ಅವಕಾಶ ನೀಡಲಾಗುವುದು. ಹಿರಿಯ ಉಪ ಚುನಾವಣಾ ಆಯುಕ್ತರ (DEC) ನೇತೃತ್ವದಲ್ಲಿ IIT/IIITಯ ಸ್ವತಂತ್ರ ತಜ್ಞರನ್ನು ಒಳಗೊಂಡ ಸಮಿತಿಯು ECINet ವ್ಯವಸ್ಥೆಯನ್ನು ಪರಿಶೀಲಿಸಲಿದೆ. ವ್ಯವಸ್ಥೆಯು ಕಾಯ್ದೆ ಮತ್ತು ನಿಯಮಗಳಿಗೆ ಅನುಗುಣವಾಗಿದೆಯೇ ಎಂಬುದನ್ನು ಪರಿಶೀಲಿಸಿ ಸಮಿತಿಯು ಆಯೋಗಕ್ಕೆ ವರದಿ ಸಲ್ಲಿಸಲಿದೆ.
ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳ (CEO) ಸಲಹೆಗಳ ಆಧಾರದ ಮೇಲೆ ಕಳೆದ ಕೆಲವು ತಿಂಗಳಲ್ಲಿ ಪೋರ್ಟಲ್ನಲ್ಲಿ ಹಲವು ನವೀಕರಣಗಳನ್ನು ಮಾಡಲಾಗಿದೆ. ಕ್ಷೇತ್ರ ಮಟ್ಟದ ಅಧಿಕಾರಿಗಳಿಗೆ ಇನ್ನಷ್ಟು ನಮ್ಯತೆ ಅಗತ್ಯವಿದ್ದರೆ ಅದನ್ನು ಜಾರಿಗೆ ತರಲಾಗುವುದು. ಇನ್ನು ಮುಂದೆ IT ಮಾಡ್ಯೂಲ್ಗಳು ಮತ್ತು ಪೋರ್ಟಲ್ಗಳಿಗೆ ಸಂಬಂಧಿಸಿದ ಎಲ್ಲ ಹೊಸ ಉಪಕ್ರಮಗಳನ್ನು ಆಯೋಗದ ಅನುಮೋದನೆಗೆ ಮುನ್ನ ಅಧಿಕಾರಿಗಳ ಸಮಿತಿಯಲ್ಲಿ (COO) ಚರ್ಚಿಸಲಾಗುವುದು.
►ದಿಲ್ಲಿ, ಮಹಾರಾಷ್ಟ್ರದಲ್ಲಿ ಗಡುವು ವಿಸ್ತರಣೆ
ದಿಲ್ಲಿಯಲ್ಲಿ ಅಹವಾಲು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಗಡುವನ್ನು ಅಕ್ಟೋಬರ್ 30, 2026ರವರೆಗೆ ವಿಸ್ತರಿಸಲಾಗಿದೆ. ನೋಟಿಸ್ ಗಳು ಹಾಗೂ ಅಹವಾಲು ಮತ್ತು ಆಕ್ಷೇಪಣೆಗಳನ್ನು ವಿಲೇವಾರಿ ಮಾಡುವ ಗಡುವನ್ನು ನವೆಂಬರ್ 30ರವರೆಗೆ ವಿಸ್ತರಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಅಹವಾಲು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಗಡುವನ್ನು ಅಕ್ಟೋಬರ್ 12ರವರೆಗೆ ವಿಸ್ತರಿಸಲಾಗಿದೆ. ನೋಟಿಸ್ ಗಳು ಹಾಗೂ ಅಹವಾಲುಗಳು ಮತ್ತು ಆಕ್ಷೇಪಣೆಗಳನ್ನು ವಿಲೇವಾರಿ ಮಾಡುವ ಗಡುವನ್ನು ನವೆಂಬರ್ 10ರವರೆಗೆ ವಿಸ್ತರಿಸಲಾಗಿದೆ.
ಆಯೋಗದ ಎಲ್ಲ ಸಭೆಗಳ ಕಾರ್ಯಸೂಚಿಯನ್ನು ಮುಂಚಿತವಾಗಿ ಹಂಚಿಕೊಳ್ಳಬೇಕು ಮತ್ತು ಸಭೆಯ ನಡವಳಿಗಳನ್ನು ಹೊರಡಿಸಬೇಕು ಎಂದು ನಿರ್ಧರಿಸಲಾಗಿದೆ.
ಎಲ್ಲ ಅಧಿಕಾರಿಗಳ ವಾರ್ಷಿಕ ಕಾರ್ಯಕ್ಷಮತೆ ವರದಿಗಳನ್ನು (APAR) ಪ್ರತಿವರ್ಷ ಡಿಸೆಂಬರ್ 31ರೊಳಗೆ ಪೂರ್ಣಗೊಳಿಸಬೇಕು. ಅಧಿಕಾರಿಗಳು ವಿದೇಶ ಪ್ರವಾಸ ಕೈಗೊಳ್ಳುವ ಮೊದಲು ಆಯೋಗದ ಅನುಮೋದನೆ ಪಡೆಯಬೇಕು. ಆಯುಕ್ತರು ನೀಡುವ ಎಲ್ಲ ನಿರ್ದೇಶನಗಳನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆಯೋಗ ಸೂಚಿಸಿದೆ.
►20 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ SIR ಪೂರ್ಣ
ಬಿಹಾರ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ 20 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ SIR ಈಗಾಗಲೇ ಪೂರ್ಣಗೊಂಡಿದೆ.
SIR ಸಂದರ್ಭದಲ್ಲಿ ಅಥವಾ ಬಳಿಕ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದೆ ಉಳಿದವರು ಸಂಬಂಧಪಟ್ಟ EROಗೆ ಅರ್ಜಿ ಸಲ್ಲಿಸಿ ಹೆಸರು ಸೇರಿಸಿಕೊಳ್ಳಬಹುದು. ಮತದಾನಕ್ಕೆ ಅರ್ಹತೆ ಪಡೆದ ಯುವ ಮತದಾರರು ಹಾಗೂ ಮೊದಲ ಬಾರಿಗೆ ಮತ ಚಲಾಯಿಸುವವರೂ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು.
ಈ ಪ್ರಕ್ರಿಯೆಗೆ ಅನುಕೂಲ ಕಲ್ಪಿಸುವಂತೆ CEOಗಳಿಗೆ ನಿರ್ದೇಶನ ನೀಡಲಾಗಿದೆ. CEOಗಳು, DEOಗಳು ಮತ್ತು EROಗಳು ಇಂತಹ ಮತದಾರರ ನೋಂದಣಿಗಾಗಿ ತಕ್ಷಣವೇ ವಿಶೇಷ ಅಭಿಯಾನ ಆರಂಭಿಸಲಿದ್ದಾರೆ.
►‘ಕ್ಯಾಬಿನೆಟ್ ಕಾರ್ಯದರ್ಶಿಗೆ ಬರೆದ ಪತ್ರ ನೀತಿಗೆ ಸಂಬಂಧಿಸಿದ್ದಲ್ಲ’
ಕ್ಯಾಬಿನೆಟ್ ಕಾರ್ಯದರ್ಶಿಗೆ ಬರೆಯಲಾದ ಪತ್ರವು ಆಯೋಗದ ಯಾವುದೇ ನೀತಿ ವಿಷಯ ಅಥವಾ IT ವಿಭಾಗಕ್ಕೆ ಸಂಬಂಧಿಸಿದ್ದಲ್ಲ. ಅದು ಭಾರತೀಯ ಚುನಾವಣಾ ಆಯೋಗಕ್ಕೆ ನಿಯೋಜನೆಯ ಮೇಲೆ ಬಂದಿದ್ದ ಅಧಿಕಾರಿಯೊಬ್ಬರ ಕಾರ್ಯನಿರ್ವಹಣೆಗೆ ಸಂಬಂಧಿಸಿದ್ದಾಗಿತ್ತು ಎಂದು ಆಯೋಗ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ಇಬ್ಬರು ಆಯುಕ್ತರ ಆದೇಶಗಳ ನಂತರವೂ ಸಂಬಂಧಪಟ್ಟ ಅಧಿಕಾರಿ ಹೊರಡಿಸಿದ್ದ ಕೆಲಸದ ಮರುಹಂಚಿಕೆ ಆದೇಶಗಳು ವಾಸ್ತವವಾಗಿ ಜಾರಿಗೆ ಬಂದಿರಲಿಲ್ಲ. IT ವಿಭಾಗದ ಮೇಲಿನ DECಯ ಮೇಲ್ವಿಚಾರಣೆಯನ್ನೂ ವಾಸ್ತವವಾಗಿ ಎಂದಿಗೂ ಹಿಂಪಡೆಯಲಾಗಿರಲಿಲ್ಲ ಎಂದು ಆಯೋಗ ತಿಳಿಸಿದೆ.
►SIR ಆದೇಶಕ್ಕೆ ಸರ್ವಾನುಮತದ ಅನುಮೋದನೆ
ಇತ್ತೀಚಿನ ತಿಂಗಳಲ್ಲಿ ಆಯೋಗವು ದೇಶದಾದ್ಯಂತ SIR ಸೇರಿದಂತೆ ಹಲವು ನಿರ್ಧಾರಗಳನ್ನು ಕೈಗೊಂಡಿದೆ.
ಬಿಹಾರದಿಂದ ಆರಂಭಿಸಿ, ಬಳಿಕ ಪಶ್ಚಿಮ ಬಂಗಾಳ ಮತ್ತು ಇತರ 30 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯವಾಗುವಂತೆ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ 2025ರ ಜೂನ್ 24ರಂದು ಹೊರಡಿಸಲಾದ SIR ಆದೇಶಕ್ಕೆ ಆಯೋಗದ ಸರ್ವಾನುಮತದ ಅನುಮೋದನೆ ಇತ್ತು. ಈ ಆದೇಶವನ್ನು ಸುಪ್ರೀಂ ಕೋರ್ಟ್ 2026ರ ಮೇ 27ರಂದು ನೀಡಿದ ಆದೇಶದ ಮೂಲಕ ಎತ್ತಿಹಿಡಿದಿದೆ.
12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ SIR ವೇಳಾಪಟ್ಟಿಯನ್ನು 2025ರ ಅಕ್ಟೋಬರ್ 27ರಂದು ಹಾಗೂ 19 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ವೇಳಾಪಟ್ಟಿಯನ್ನು 2026ರ ಮೇ 14ರಂದು ಆಯೋಗದ ಸರ್ವಾನುಮತದ ಅನುಮೋದನೆಯೊಂದಿಗೆ ಹೊರಡಿಸಲಾಗಿತ್ತು.
ಮೂರನೇ ಹಂತದ (Phase-III) ಉಳಿದ 12 ರಾಜ್ಯಗಳಲ್ಲಿ ಅಂತಿಮ ಪ್ರಕಟನೆ ಹೊರಬಂದ ಬಳಿಕವಷ್ಟೇ ಮತದಾರರ ಸಂಖ್ಯೆಯ ಅಂತಿಮ ಅಂಕಿಅಂಶ ತಿಳಿಯಲಿದೆ.
►ಗೋವಾದಲ್ಲಿ 97ರಲ್ಲಿ 81 ಮಂದಿ ನಮೂನೆ 6 ಭರ್ತಿ
ಗೋವಾದ ಮುಖ್ಯ ಚುನಾವಣಾಧಿಕಾರಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗದೆ ಉಳಿದಿರುವ ಮತದಾರರಿಂದ ಅರ್ಜಿ ನಮೂನೆಗಳನ್ನು ಸಂಗ್ರಹಿಸಲು ಸಂಬಂಧಪಟ್ಟ BLOಗಳಿಗೆ ಮನೆ ಮನೆಗೆ ಭೇಟಿ ನೀಡುವಂತೆ ಸೂಚಿಸಿದ್ದಾರೆ.
97 ಮತದಾರರ ಪೈಕಿ 81 ಮಂದಿ ಈಗಾಗಲೇ ಮತದಾರರ ಪಟ್ಟಿಗೆ ಸೇರ್ಪಡೆಗಾಗಿ ನಮೂನೆ 6 ಭರ್ತಿ ಮಾಡಿದ್ದಾರೆ ಎಂದು ಆಯೋಗ ತಿಳಿಸಿದೆ.
ಸೆಪ್ಟೆಂಬರ್ 26ರಂದು ನಡೆದ ಆಯೋಗದ ಸಭೆಯ ನಿರ್ಧಾರಗಳ ಅನ್ವಯ ಈ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ. ಇದಕ್ಕೆ ಪೂರ್ಣ ಆಯೋಗದ ಅನುಮೋದನೆ ಇದೆ ಎಂದು ಉಪ ನಿರ್ದೇಶಕ ಪಿ. ಪವನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.