“ಇನ್ನು ಮುಂದೆ ಒತ್ತಡವಿಲ್ಲದೆ ಮುಕ್ತವಾಗಿ ಆಡುತ್ತೇನೆ”; ಬದಲಾದ ವಿರಾಟ್ ಕೊಹ್ಲಿ ಮನಸ್ಥಿತಿಯ ಬಗ್ಗೆ ತಜ್ಞರು ಹೇಳುವುದೇನು?
ವಿರಾಟ್ ಕೊಹ್ಲಿ | Photo Credit : PTI
“ನಾನು ಹೆಚ್ಚು ಮುಕ್ತವಾಗಿ ಆಡುವುದಾಗಿ ನನಗೆ ನಾನೇ ಮಾತು ಕೊಟ್ಟಿದ್ದೇನೆ. ನನ್ನ ಬಗ್ಗೆ ಜನರು ಹೊಂದಿರಬಹುದಾದ ನಿರೀಕ್ಷೆಗಳ ಬಗ್ಗೆ ಚಿಂತಿಸುವುದಿಲ್ಲ” ಎಂದು ಕ್ರಿಕೆಟಿಗ ವಿರಾಟ್ ಕೊಹ್ಲಿ ಹೇಳಿರುವುದನ್ನು ಮನಶ್ಶಾಸ್ತ್ರಜ್ಞರು ಹೇಗೆ ವಿಶ್ಲೇಷಿಸುತ್ತಾರೆ?
ಭಾರತೀಯ ಕ್ರಿಕೆಟ್ನ ಎಲ್ಲಾ ಸ್ವರೂಪಗಳಲ್ಲಿ ಅತ್ಯುನ್ನತ ಯಶಸ್ಸನ್ನು ಸಾಧಿಸಿದ ನಂತರ ವಿರಾಟ್ ಕೊಹ್ಲಿ ಅವರಿಗೆ ಇದೀಗ ಇತರರನ್ನು ಮೆಚ್ಚಿಸುವುದಕ್ಕಿಂತ ಹೆಚ್ಚಾಗಿ ಆಟದ ಮೇಲಿನ ಆನಂದ ಮತ್ತು ಶ್ರೇಷ್ಠತೆ ಸಾಧಿಸುವುದು ಮುಖ್ಯವಾಗಿದೆ. ಈ ಬಗ್ಗೆ ಅವರು ಮಾಧ್ಯಮವೊಂದರ ಜೊತೆಗಿನ ಸಂಭಾಷಣೆಯಲ್ಲಿ ತಿಳಿಸಿದ್ದಾರೆ.
ಏಕದಿನ ಕ್ರಿಕೆಟ್ ಆಡುವಾಗ ತಮ್ಮ ಮನಸ್ಥಿತಿಯ ಬಗ್ಗೆ ಮಾತನಾಡಿದ ಅವರು, “ನಾನು ಹೆಚ್ಚು ಮುಕ್ತವಾಗಿ ಆಡುವುದಾಗಿ ನನಗೆ ನಾನೇ ಮಾತು ಕೊಟ್ಟಿದ್ದೇನೆ. ನನ್ನ ಬಗ್ಗೆ ಜನರು ಹೊಂದಿರಬಹುದಾದ ನಿರೀಕ್ಷೆಗಳ ಬಗ್ಗೆ ಚಿಂತಿಸುವುದಿಲ್ಲ. ಏಕೆಂದರೆ ದೀರ್ಘಕಾಲದವರೆಗೆ ನನ್ನ ಪಾತ್ರವು ತಂಡದ ಸ್ಥಿತಿಯನ್ನು ಸ್ಥಿರಗೊಳಿಸುವುದೇ ಆಗಿತ್ತು. ಆಗ ಏನಾಗುತ್ತಿತ್ತು ಎಂದರೆ ನನಗೆ ಆಡಲು ಸಾಮರ್ಥ್ಯವಿದ್ದರೂ ಕಠಿಣ ಪರಿಸ್ಥಿತಿಯಲ್ಲಿ ಒತ್ತಡದಲ್ಲಿ ಏನಾದರೂ ಅಸಾಧಾರಣ ಪ್ರಯತ್ನ ಹಾಕಿ ಕಷ್ಟಪಟ್ಟು ನಿಲ್ಲಬೇಕಾದ ಪರಿಸ್ಥಿತಿ ಇರುತ್ತಿತ್ತು. ಆದರೆ, ಈಗ ನಾನು ಅಪಾಯವನ್ನು ತೆಗೆದುಕೊಳ್ಳದಿರಲು ನಿರ್ಧರಿಸಿದ್ದೇನೆ. ಏಕೆಂದರೆ, ಅಂತಿಮವಾಗಿ ‘ಆಕ್ರಮಣಕಾರಿಯಾಗಿ ಆಡುವ’ ಹಂತಕ್ಕೆ ತಲುಪಲು ನಾನು ಈಗ ಅಡಿಪಾಯ ಹಾಕುತ್ತಿದ್ದೇನೆ” ಎಂದು ಕೊಹ್ಲಿ ಅವರು ಹೇಳಿದ್ದಾರೆ.
ಎಂಪವರ್ ಆದಿತ್ಯಾ ಬಿರ್ಲಾ ಎಜುಕೇಶನ್ ಟ್ರಸ್ಟ್ನ ಕ್ಲಿನಿಕಲ್ ಸೈಕಾಲಜಿಸ್ಟ್ ಆಗಿರುವ ದರ್ಶಿತಾ ಪ್ರಕಾರ, ನಿರೀಕ್ಷೆಗಳನ್ನು ಬದಿಗಿರಿಸುವ ಕುರಿತು ವಿರಾಟ್ ಕೊಹ್ಲಿ ಅವರ ಹೇಳಿಕೆಗಳು ಕೇವಲ ಕ್ರೀಡಾಪಟುಗಳಷ್ಟೇ ಅಲ್ಲದೆ, ನಮ್ಮಲ್ಲಿ ಅನೇಕರು ಅನುಭವಿಸುವ ವಿಷಯದ ಬಗ್ಗೆ ಆಸಕ್ತಿದಾಯಕ ಒಳನೋಟ ನೀಡುತ್ತದೆ. “ಅವರ ಮಾತಿನರ್ಥ ಕಾಳಜಿ ಕಡಿಮೆ ಮಾಡುವುದು ಅಥವಾ ಆಟದ ಮಾನದಂಡವನ್ನು ತಗ್ಗಿಸುವುದಲ್ಲ. ಬದಲಾಗಿ ಪ್ರದರ್ಶನದ ಜೊತೆಗಿನ ಸಂಬಂಧವನ್ನು ಬದಲಿಸಿಕೊಳ್ಳುವ ಬಗ್ಗೆ ಮಾತನಾಡಿದ್ದಾರೆ. ಅವರು ತಮ್ಮ ಪ್ರಯತ್ನವನ್ನು ನಿರಂತರವಾಗಿ ಸ್ವತಃ ಸಾಬೀತುಪಡಿಸಿಕೊಳ್ಳಬೇಕೆಂಬ ಒತ್ತಡದಿಂದ ಪ್ರತ್ಯೇಕಿಸುತ್ತಿರುವುದು ಕಂಡುಬರುತ್ತದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮನೋವೈಜ್ಞಾನಿಕ ದೃಷ್ಟಿಕೋನದಿಂದ ಈ ವ್ಯತ್ಯಾಸ ಬಹಳ ಮುಖ್ಯ ಎಂದು ಅವರು ಹೇಳಿದ್ದಾರೆ, “ನಿರೀಕ್ಷಿತ ಫಲಿತಾಂಶದ ಮೇಲೆ ಅತಿಯಾಗಿ ಗಮನಹರಿಸಿದಾಗ ನಮ್ಮ ಗಮನ ಕೆಲಸದಿಂದಲೇ ದೂರ ಸರಿಯಬಹುದು. ನಮ್ಮ ಮನಸ್ಸಿನ ಒಂದು ಭಾಗವು ವೈಫಲ್ಯದ ಪರಿಣಾಮ, ಇತರರ ಪ್ರತಿಕ್ರಿಯೆ ಮತ್ತು ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳುತ್ತಿದ್ದೇವೆಯೇ ಎಂದು ಗಮನಿಸಲು ಪ್ರಾರಂಭಿಸುತ್ತದೆ. ಇದು ಹೆಚ್ಚುವರಿ ಬೌದ್ಧಿಕ ಮತ್ತು ಭಾವನಾತ್ಮಕ ಹೊರೆಗೆ ಕಾರಣವಾಗುತ್ತದೆ” ಎಂದು ದರ್ಶಿತಾ ವಿವರಿಸಿದ್ದಾರೆ.
ಕ್ರೀಡಾಪಟುಗಳಿಗೆ ತಾಂತ್ರಿಕವಾಗಿ ಏನು ಮಾಡಬೇಕೆಂದು ನಿಖರವಾಗಿ ತಿಳಿದಿದ್ದರು, ಅತಿಯಾದ ಒತ್ತಡದಲ್ಲಿ ಮನಸ್ಸು ಮುಂದಿನ ಎಸೆತದ ಬದಲಿಗೆ ಫಲಿತಾಂಶದ ಬಗ್ಗೆ ಹೆಚ್ಚು ಯೋಚಿಸುವಂತಾಗಬಹುದು ಎಂದು ಅವರು ಈ ಮನಸ್ಥಿತಿಯನ್ನು ವಿವರಿಸಿದ್ದಾರೆ. “ನಿರೀಕ್ಷೆಗಳನ್ನು ಕೈಬಿಡುವುದು ಎಂದಾ ಕ್ಷಣ ನಿರ್ಲಿಪ್ತರೆಂದಲ್ಲ. ಬದಲಾಗಿ ಯಾವುದು ನಿಯಂತ್ರಣದಲ್ಲಿದೆ ಮತ್ತು ಯಾವುದು ಇಲ್ಲ ಎಂಬುದನ್ನು ಗುರುತಿಸುವುದು” ಎಂದು ಅವರು ಹೇಳಿದ್ದಾರೆ.
ಈ ಹೇಳಿಕೆಯಲ್ಲಿನ ಮನಶ್ಶಾಸ್ತ್ರೀಯ ಬದಲಾವಣೆಯೊಂದನ್ನು ತಜ್ಞರು ಗುರುತಿಸಿದ್ದಾರೆ. “ನನ್ನನ್ನು ನಾನು ಸಾಬೀತುಪಡಿಸಬೇಕು” ಎಂಬ ಮನಸ್ಥಿತಿಯಿಂದ “ನನ್ನ ಸಾಮರ್ಥ್ಯ ವ್ಯಕ್ತಪಡಿಸಲು ಬಯಸುತ್ತೇನೆ” ಎಂಬ ಮನಸ್ಥಿತಿಯತ್ತ ಸಾಗುವುದು! ಮೊದಲನೆಯ ಮನಸ್ಥಿತಿ ಹೆಚ್ಚಾಗಿ ಮೌಲ್ಯಮಾಪನದ ಪ್ರೇರಣೆಯಿಂದ ಕೂಡಿದ್ದರೆ, ಎರಡನೆಯದು ಕಾರ್ಯದಲ್ಲಿ ತೊಡಗಿಸಿಕೊಳ್ಳುವಿಕೆಯಿಂದ ಪ್ರೇರೇಪಿತವಾಗಿರುತ್ತದೆ.
“ಪರಿಪೂರ್ಣತೆಗಾಗಿ ಶ್ರಮಿಸುವುದು ಮತ್ತು ಶ್ರೇಷ್ಠತೆಗಾಗಿ ಶ್ರಮಿಸುವುದು ಒಂದೇ ಅಲ್ಲ. ಶ್ರೇಷ್ಠತೆ ಸಾಧಿಸಲು ಯಾವಾಗಲೂ ಒತ್ತಡದ ಅಗತ್ಯವಿರುವುದಿಲ್ಲ. ಕೆಲವೊಮ್ಮೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ವರ್ಷಗಳ ಕಾಲ ಶ್ರಮಿಸಿದ ನಂತರವೂ ಪ್ರತಿ ಬಾರಿ ಅದನ್ನು ಸಾಬೀತು ಮಾಡುವ ಅಗತ್ಯವಿಲ್ಲ ಎಂದು ಅರಿತುಕೊಳ್ಳುವ ಮಾನಸಿಕ ಹಂತವಾಗಿರುತ್ತದೆ” ಎಂದು ದರ್ಶಿತಾ ವಿವರಿಸಿದ್ದಾರೆ.
ಕೃಪೆ: indianexpress.com