ಪಿವಿ ಸಿಂಧು | Photo Credit : PTI 

ಚೀನಾದ ಚೆನ್ ಯು ಫೀ ವಿರುದ್ಧ ಕ್ವಾರ್ಟರ್‌ ಫೈನಲ್‌ ನಲ್ಲಿ ಅನುಭವಿಸಿದ ಸೋಲಿನ ಜೊತೆಗೆ ಏಷ್ಯನ್ ಗೇಮ್ಸ್‌ ನಿಂದ ಹೊರಬಿದ್ದಿರುವ ಪಿವಿ ಸಿಂಧು, 18 ಗಂಟೆಗಳ ಅವಧಿಯಲ್ಲಿ ಮೂರು ಪಂದ್ಯಗಳನ್ನು ಆಡಿರುವುದು ದೈಹಿಕ ಮತ್ತು ಮಾನಸಿಕ ಸಾಮರ್ಥ್ಯದ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.

ಏಷ್ಯನ್ ಗೇಮ್ಸ್‌ ನ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಚೀನಾದ ಚೆನ್ ಯು ಫೀ ವಿರುದ್ಧ ಸೋತ ನಂತರ ಭಾರತದ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು, 18 ಗಂಟೆಗಳ ಅಂತರದಲ್ಲಿ ಮೂರು ಪಂದ್ಯಗಳನ್ನು ಆಡಿರುವುದು ತಮ್ಮ ಮೇಲೆ ಭಾರಿ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.

ರವಿವಾರ ಚೆನ್ ವಿರುದ್ಧ ಅವರು 21-11, 18-21, 10-21 ಅಂತರದಲ್ಲಿ ಸೋತು ಸ್ಪರ್ಧೆಯಿಂದ ಹೊರಬಿದ್ದಿದ್ದರು. ಬಳಿಕ ‘ಎಕ್ಸ್‌’ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಪಂದ್ಯಗಳ ನಡುವೆ ವಿರಾಮಕ್ಕೆ ಕಡಿಮೆ ಸಮಯ ಸಿಕ್ಕಿರುವ ಬಗ್ಗೆ ಪ್ರಸ್ತಾಪಿಸಿದ್ದಾರೆ.

“ಇದನ್ನು ಶಬ್ದಗಳಲ್ಲಿ ವಿವರಿಸಲು ನನಗೆ ಸ್ವಲ್ಪ ಸಮಯ ಬೇಕಾಯಿತು. ನನ್ನ ಏಷ್ಯನ್ ಗೇಮ್ಸ್ ಅಭಿಯಾನ ಕೊನೆಗೊಂಡಿರುವುದು ನನಗೆ ತುಂಬಾ ನೋವು ಕೊಟ್ಟಿದೆ. ಕ್ವಾರ್ಟರ್‌ ಫೈನಲ್ ಪಂದ್ಯವನ್ನು ಗೆದ್ದು ಮುಗಿಸಲು ಕೇವಲ ಮೂರೇ ಅಂಕಗಳು ಬಾಕಿ ಇದ್ದವು. ನಾನು ಪದೇಪದೇ ಆ ಮೂರು ಅಂಕಗಳ ಬಗ್ಗೆಯೇ ಯೋಚಿಸುತ್ತಿದ್ದೇನೆ. ಚೀನಾದಲ್ಲಿ ನಡೆದಂತೆಯೇ ಅತ್ಯಂತ ನಿರ್ಣಾಯಕ ಕ್ಷಣಗಳಲ್ಲಿ ನಡೆದ ಸುದೀರ್ಘ ಮತ್ತು ಕಠಿಣ ಆಟವು ಪಂದ್ಯದ ಗತಿಯನ್ನೇ ಬದಲಿಸಿತು” ಎಂದು ಅವರು ಬರೆದುಕೊಂಡಿದ್ದಾರೆ.


ನಂತರ ವಿವರ ನೀಡಿದ ಅವರು, “ನನಗೆ ಅವಕಾಶವಿತ್ತು. ಅದನ್ನು ಕೈಚೆಲ್ಲಿದ್ದು ತುಂಬಾ ನೋವು ನೀಡುತ್ತಿದೆ. 18 ಗಂಟೆಗಳಲ್ಲಿ ಮೂರು ಪಂದ್ಯಗಳು. ಮುಂಜಾನೆ 3 ಗಂಟೆಗೆ ಮರಳಿ ಬಂದು ಮತ್ತೆ ಬೆಳಿಗ್ಗೆ 8.30ಕ್ಕೆ ಕಣಕ್ಕೆ ಇಳಿಯಬೇಕಾಗಿ ಬಂತು. ಇದು ದೈಹಿಕವಾಗಿ ಮತ್ತು ಮಾನಸಿಕವಾಗಿ ಸುಸ್ತು ಮಾಡಿದೆ. ಆದರೆ ನನ್ನ ಮೇಲೆ ನಂಬಿಕೆ ಇಡಲು ಎಲ್ಲಾ ಕಾರಣಗಳನ್ನು ನೀಡಿದ್ದ ತರಬೇತಿ ಶಿಬಿರದ ನಂತರ ನಾನು ಇನ್ನೂ ಹೆಚ್ಚಿನದನ್ನು ಬಯಸಿದ್ದೆ. ಪಂದ್ಯದ ಅಂತಹ ಕೊನೆಯ ಕ್ಷಣಗಳನ್ನು ಯಶಸ್ವಿಯಾಗಿ ಮುಗಿಸುವ ನಿಟ್ಟಿನಲ್ಲಿ ನನ್ನ ತಂಡ ಮತ್ತು ನಾನು ಈಗಾಗಲೇ ಕೆಲಸ ಮಾಡಲು ಪ್ರಾರಂಭಿಸಿದ್ದೇವೆ. ನಾವು ಇದನ್ನು ಸರಿಪಡಿಸುತ್ತೇವೆ” ಎಂದು ಅವರು ಬರೆದುಕೊಂಡಿದ್ದಾರೆ.

ಶನಿವಾರ ಸಿಂಧು ಅವರಿಗೆ ಅತ್ಯಂತ ಕಠಿಣ ದಿನವಾಗಿತ್ತು. ಅವರ ಮೊದಲ ಪಂದ್ಯ ವಿಳಂಬವಾಯಿತು ಮತ್ತು ಎರಡನೇ ಪಂದ್ಯವನ್ನು ಬೇರೆ ಕೋರ್ಟ್‌ ಗೆ ಬದಲಿಸಲಾಯಿತು. ಅವರು ತಮ್ಮ ಎರಡನೇ ಪಂದ್ಯವನ್ನು ರಾತ್ರಿ 1 ಗಂಟೆ ಸುಮಾರಿಗೆ ಮುಗಿಸಿದರು. ಬಳಿಕ ಹೋಟೆಲ್‌ ಗೆ ಮರಳಿ ರಾತ್ರಿಯ ಊಟ ಮತ್ತು ಚೇತರಿಕೆಯ ಪ್ರಕ್ರಿಯೆಗಳನ್ನು ಪೂರೈಸಿ ಸುಮಾರು 3 ಗಂಟೆಗೆ ಮಲಗಿದರು.

ಚೆನ್ ವಿರುದ್ಧದ ಕ್ವಾರ್ಟರ್‌ಫೈನಲ್ ಪಂದ್ಯಕ್ಕಾಗಿ ಅವರು ರವಿವಾರ ಬೆಳಿಗ್ಗೆ 8:30ಕ್ಕೆ ಮತ್ತೆ ಎದ್ದರು. ಚೀನಾದ ಮಾಜಿ ವಿಶ್ವ ಚಾಂಪಿಯನ್ ವಿರುದ್ಧ ಸಿಂಧು ಬಲವಾದ ಆರಂಭ ಪಡೆದು ಮೊದಲ ಗೇಮ್ ಅನ್ನು 21-11ರಿಂದ ಗೆದ್ದುಕೊಂಡರು. ಆದರೆ ಚೆನ್ ನಂತರ ಪ್ರತಿ ಆಟವನ್ನು ದೀರ್ಘಗೊಳಿಸುವ ಮೂಲಕ ಪ್ರತಿಕ್ರಿಯಿಸಿ, ಅಂತಿಮವಾಗಿ ಪಂದ್ಯದ ಗತಿಯನ್ನು ಬದಲಿಸಿದರು. ಸಿಂಧು ಎರಡನೇ ಗೇಮ್ ಅನ್ನು 18-21ರಿಂದ ಸೋತರು ಮತ್ತು ನಿರ್ಣಾಯಕ ಗೇಮ್‌ನಲ್ಲಿ 10-21ರಿಂದ ಪರಾಭವಗೊಂಡರು.

“ನನಗೆ ನೋವಾಗುತ್ತಿದೆ. ಆದರೆ ಪರವಾಗಿಲ್ಲ. ಈ ಸೋಲು ಇಷ್ಟು ನೋವುಂಟು ಮಾಡುತ್ತಿದೆ ಎಂದರೆ ನನಗೆ ಇದರ ಮೇಲಿರುವ ಪ್ರೀತಿ ಮತ್ತು ಹಂಬಲ ಇನ್ನೂ ಜೀವಂತವಾಗಿದೆ ಎಂದರ್ಥ. ನನಗಿನ್ನೂ ಇದು ಬೇಕಾಗಿದೆ. ನಾನು ಇಂದಿಗೂ ಆ ಅಂಕಣದಲ್ಲಿ ನನ್ನ ಸಂಪೂರ್ಣ ಶಕ್ತಿ ಧಾರೆ ಎರೆಯುತ್ತಿದ್ದೇನೆ. ಆ ಭಾವನೆಯೇ ನನ್ನನ್ನು ಮುನ್ನಡೆಸುತ್ತಿದೆ” ಎಂದು ಸಿಂಧು ಬರೆದುಕೊಂಡಿದ್ದಾರೆ.

2014ರ ಆವೃತ್ತಿಯಲ್ಲಿ ಪದಾರ್ಪಣೆ ಮಾಡಿದಾಗಿನಿಂದ ಏಷ್ಯನ್ ಗೇಮ್ಸ್‌ ನ ಸುದೀರ್ಘ ಪಯಣದ ಬಗ್ಗೆಯೂ ಅವರು ಮೆಲುಕು ಹಾಕಿದ್ದಾರೆ. “ಇಲ್ಲಿ ಹೆಮ್ಮೆ ಪಡಲು ಕೂಡ ಕಾರಣವಿದೆ. 2014ರ ನನ್ನ ಮೊದಲ ಏಷ್ಯನ್ ಗೇಮ್ಸ್‌ ನಿಂದ ತೊಡಗಿ ಈಗಿನ ನನ್ನ ನಾಲ್ಕನೇ ಏಷ್ಯನ್ ಗೇಮ್ಸ್‌ ವರೆಗೆ ಭಾರತಕ್ಕಾಗಿ ನನ್ನ ಎಲ್ಲವನ್ನೂ ನೀಡಿದ 12 ವರ್ಷಗಳ ಸುದೀರ್ಘ ಪಯಣವಿದು. ಆ ಹೆಮ್ಮೆಯನ್ನು ನಾನು ಅನುಭವಿಸಲು ಬಯಸುತ್ತೇನೆ. ಅತ್ಯಂತ ಮಹತ್ವದ ಈ ಸುದೀರ್ಘ ಪಯಣ ಕೇವಲ ಒಂದು ನೋವಿನ ಫಲಿತಾಂಶ ನಿರ್ಧರಿಸಲು ಸಾಧ್ಯವಿಲ್ಲ” ಎಂದು ಅವರು ಬರೆದಿದ್ದಾರೆ.

“ರಾತ್ರಿಯಿಡೀ ಎಚ್ಚರವಿದ್ದು ನನ್ನನ್ನು ಪ್ರೋತ್ಸಾಹಿಸಿ ಮತ್ತು ನನ್ನನ್ನು ನಂಬಿದ ಪ್ರತಿಯೊಬ್ಬರಿಗೂ ಆ ಕೊನೆಯ ಮೂರು ಅಂಕಗಳನ್ನು ನಿಮಗಾಗಿ ಕೂಡ ಗೆಲ್ಲಲು ನಾನು ಬಯಸಿದ್ದೆ. ನನ್ನ ಜೊತೆಯಾಗಿ ನಿಂತಿದ್ದಕ್ಕಾಗಿ ಧನ್ಯವಾದಗಳು. ನಾನು ಮತ್ತೆ ಪ್ರಯತ್ನಿಸುತ್ತೇನೆ, ಮುನ್ನುಗ್ಗುತ್ತೇನೆ” ಎಂದು ಅವರು ಬರೆದಿದ್ದಾರೆ.

ಸಿಂಧು ಅವರ ನಿರ್ಗಮನ ಮತ್ತು ಜಪಾನ್‌ ನ ಅಕಾನೆ ಯಮಗುಚಿ ವಿರುದ್ಧ ಕ್ವಾರ್ಟರ್‌ ಫೈನಲ್‌ ನಲ್ಲಿ ಉನ್ನತಿ ಹೂಡಾ ಅವರ ಸೋಲಿನೊಂದಿಗೆ ಈ ಕ್ರೀಡಾಕೂಟದಲ್ಲಿ ಭಾರತದ ವೈಯಕ್ತಿಕ ಬ್ಯಾಡ್ಮಿಂಟನ್ ಅಭಿಯಾನ ಅಂತ್ಯಗೊಂಡಿದೆ. ಬ್ಯಾಡ್ಮಿಂಟನ್ ವಿಭಾಗದಲ್ಲಿ ಪುರುಷರ ತಂಡ ಗೆದ್ದ ಕಂಚಿನ ಪದಕವೊಂದೇ ಭಾರತಕ್ಕೆ ದಕ್ಕಿದ ಪದಕವಾಯಿತು.

ಪಂದ್ಯಾವಳಿಯ ವೇಳಾಪಟ್ಟಿಯು ಇತರ ಆಟಗಾರರ ಟೀಕೆಗೂ ಗುರಿಯಾಯಿತು. ತಡ ರಾತ್ರಿಯವರೆಗೂ ಆಡಬೇಕಾದ ಅನಿವಾರ್ಯತೆ ಮತ್ತು ವಿರಾಮಕ್ಕೆ ಕಡಿಮೆ ಸಮಯ ಸಿಗುವಂತಹ ಸಮಸ್ಯೆಗಳನ್ನು ಇಂಡೋನೇಷ್ಯಾದ ಜೋನಾತನ್ ಕ್ರಿಸ್ಟಿ ಮತ್ತು ಜಪಾನ್‌ ನ ಕೊಡೈ ನರಾವೊಕಾ ಅವರಂತಹ ಆಟಗಾರರೂ ಎದುರಿಸಬೇಕಾಯಿತು.

ಚೀನಾದ ಮಹಿಳಾ ಡಬಲ್ಸ್ ವಿಭಾಗದ ವಿಶ್ವದ ನಂ. 1 ಆಟಗಾರ್ತಿ ಟಾನ್ ನಿಂಗ್ ಕೂಡ ವೇಳಾಪಟ್ಟಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಭಾಗವಹಿಸುವ ಕ್ರೀಡಾಪಟುಗಳ ಸಂಖ್ಯೆಯಲ್ಲಿ ಬದಲಾವಣೆಯಾದ ಬಳಿಕ ಆಯೋಜಕರು ಈ ಹಿಂದೆ ಬ್ಯಾಡ್ಮಿಂಟನ್ ಕಾರ್ಯಕ್ರಮದ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದ್ದರು. ಹಾಗಿದ್ದರೂ, ಆಟಗಾರರ ಇತ್ತೀಚಿನ ದೂರುಗಳ ಬಳಿಕ ಯಾವುದೇ ಅಧಿಕೃತ ಸ್ಪಷ್ಟನೆ ನೀಡಲಾಗಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor