×
Ad

ಹುಲಿ ಜೀವಂತವಿದ್ದರೆ ಸಾಕೆ? ಆವಾಸ ಸ್ಥಾನದ ಪ್ರಶ್ನೆಯ ಸುತ್ತ ಅಪಾಯಕಾರಿ ಭವಿಷ್ಯ ಎದುರಿಸುತ್ತಿರುವ ಹುಲಿಗಳು…

Update: 2026-05-17 18:50 IST

ಸಾಂದರ್ಭಿಕ ಚಿತ್ರ | PC : Gemini AI

ದಶಕಗಳಿಂದ ಅಳಿವನ್ನು ತಡೆಗಟ್ಟುವ ಸುತ್ತ ಸಂರಕ್ಷಣಾ ನೀತಿ ವಿನ್ಯಾಸಗೊಂಡಿದೆ. ಹೀಗಾಗಿ ಏರಿದ ಹುಲಿಗಳ ಸಂಖ್ಯೆ ವಿಜಯದ ಸಂಕೇತವಾಯಿತು. ಆದರೆ ಇದೀಗ ಹುಲಿಗಳನ್ನು ಉಳಿಸಲು ಪರಿಸರವೂ ಅಗತ್ಯ ಎನ್ನುವತ್ತ ಚರ್ಚೆ ಸಾಗಿದೆ.

ಭಾರತದ ಕಾಡುಗಳಿಂದ ಹುಲಿಗಳ ಸಂಖ್ಯೆ ಕುಸಿಯುತ್ತಿರುವ ಕಾಲವೊಂದಿತ್ತು. 1960ರಿಂದ 1970ರ ದಶಕದ ನಡುವೆ ಅತಿರೇಕದ ಬೇಟೆ, ಆವಾಸಸ್ಥಾನ ನಾಶ ಮತ್ತು ಬೇಟೆಯಾಡುವಿಕೆಯು ಭಾರತದ ರಾಷ್ಟ್ರೀಯ ಪ್ರಾಣಿಯನ್ನು ಅಪಾಯಕಾರಿಯಾಗಿ ವಿನಾಶದ ಸಮೀಪಕ್ಕೆ ತಳ್ಳಿತ್ತು. ಹಿಮಾಲಯದಿಂದ ಪಶ್ಚಿಮಘಟ್ಟಗಳವರೆಗೆ ವಿಸ್ತರಿಸಿರುವ ಕಾಡುಗಳಲ್ಲಿ ಹುಲಿಗಳ ಕಣ್ಮರೆಯು ವಿಶ್ವದ ಅತಿ ಮಹಾತ್ವಾಕಾಂಕ್ಷೆಯ ‘ಪ್ರಾಜೆಕ್ಟ್ ಟೈಗರ್’ ಆರಂಭಕ್ಕೆ ಕಾರಣವಾಯಿತು.

ನಂತರ ಭಾರತದ ಅತಿದೊಡ್ಡ ಹುಲಿ ಸಂರಕ್ಷಣಾ ಯಶಸ್ಸನ್ನು ಗಳಿಸಿತು. 2000 ದಶಕದ ಮಧ್ಯಭಾಗದಲ್ಲಿ ಕೇವಲ 1400 ಹುಲಿಗಳ ಅಂದಾಜು ಸಂಖ್ಯೆಯಿಂದ ಸ್ಥಿರವಾಗಿ ಮೇಲೇರಿತು. ಅರಣ್ಯ ಮೀಸಲು ಪ್ರದೇಶಗಳನ್ನು ವಿಸ್ತರಿಸಿದವು. ಕ್ಯಾಮೆರಾ ಟ್ರಾಪ್ಗಳು ಹಳೆಯ ಜನಗಣತಿ ವಿಧಾನಗಳನ್ನು ಬದಲಿಸಿದವು. ಸಂರಕ್ಷಣಾ ನಿಧಿ ಹೆಚ್ಚಾಯಿತು ಮತ್ತು ಹುಲಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಯಿತು. ಗ್ರಾಮಗಳನ್ನು ಆವಾಸಸ್ಥಾನದಿಂದ ಸ್ಥಳಾಂತರಿಸಲಾಯಿತು.

2022ರ ಜನಗಣತಿ ಪ್ರಕಾರ ಇಂದು ಭಾರತದಲ್ಲಿ 3000ಕ್ಕೂ ಮೀರಿ ಹುಲಿಗಳ ಸಂಖ್ಯೆಯಿವೆ. ಅವುಗಳಲ್ಲಿ ಶೇ 75ರಷ್ಟು ಕಾಡಿನಲ್ಲಿರುವ ಹುಲಿಗಳು. ಆದರೆ ಈ ಯಶಸ್ಸು ಸಂರಕ್ಷಣಾ ಬಿಕ್ಕಟ್ಟು ಸೃಷ್ಟಿಸಬಹುದು ಎಂದು ವನ್ಯಜೀವಿ ತಜ್ಞರು ಎಚ್ಚರಿಸಿದ್ದಾರೆ. ಭಾರತದಲ್ಲಿ ಹುಲಿಗಳನ್ನು ಉಳಿಸಿಕೊಳ್ಳಲು ಅರಣ್ಯ ಉಳಿದಿವೆಯೇ ಎಂಬ ಪ್ರಶ್ನೆ ಎದ್ದಿದೆ.

ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರಾಖಂಡ ಮತ್ತು ರಾಜಸ್ಥಾನದ ಕಾಡುಗಳಲ್ಲಿ ಯುವ ಹುಲಿಗಳು ಮೀಸಲು ಪ್ರದೇಶಗಳಿಂದ ಹೊರಗೆ ಅಲೆದಾಡುತ್ತಿವೆ. ಹೀಗಾಗಿ ಮಾನವ-ಪ್ರಾಣಿ ಸಂಘರ್ಷ ಹೆಚ್ಚುತ್ತಿದೆ. ಪ್ರವಾಸೋದ್ಯಮದ ಮೇಲೆ ಒತ್ತಡ ಬೀಳುತ್ತಿದೆ. ಹೆದ್ದಾರಿಗಳು, ರೈಲ್ವೆ ಹಳಿಗಳು, ಗಣಿಗಾರಿಕೆ ಮತ್ತು ವಿಸ್ತಾರವಾಗುತ್ತಿರುವ ರೆಸಾರ್ಟ್ಗಳ ನಡುವೆ ಅರಣ್ಯ ಕಾರಿಡಾರ್ ಕುಸಿಯುತ್ತಿದೆ. ಹುಲಿಗಳ ಸಾವು ತೀವ್ರವಾಗಿ ಏರುತ್ತಿವೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (NTCA) ಇತ್ತೀಚೆಗಿನ ಮಾಹಿತಿ ಪ್ರಕಾರ 2026ರಲ್ಲಿ ಈವರೆಗೆ 71ಕ್ಕೂ ಹೆಚ್ಚು ಹುಲಿಗಳ ಸಾವು ದಾಖಲಾಗಿದೆ. ಭಾರತದ ಹುಲಿ ರಾಜ್ಯ ಎಂದು ಕರೆಸಿಕೊಳ್ಳುವ ಮಧ್ಯಪ್ರದೇಶದಲ್ಲಿ 28 ಹುಲಿಗಳು ಸತ್ತಿವೆ. ಎಪ್ರಿಲ್ ಆರಂಭದಲ್ಲೇ 12 ಸಾವು ಸೇರಿವೆ.

ಈ ಸಾವುಗಳು ಪ್ರಮುಖ ಪ್ರಶ್ನೆಯೊಂದನ್ನು ಎತ್ತಿವೆ. ಹುಲಿ ಸಂರಕ್ಷಣೆಯು ಹುಲಿಗಳ ಸಂಖ್ಯೆ ಏರಿಸಲು ಕೈಗೊಂಡ ಕ್ರಮಗಳಷ್ಟೇ ಅವುಗಳ ವಾಸಸ್ಥಾನ ವಿಸ್ತರಿಸುವ ಕಡೆಗೆ ಗಮನಹರಿಸಿರಲಿಲ್ಲ. ಆರಂಭದಲ್ಲಿ ಹುಲಿಗಳ ಹೆಜ್ಜೆ ಗುರುತಿನ ಮೂಲಕ ಗಣತಿ ಮಾಡುವ ವ್ಯವಸ್ಥೆಯ ನಿಖರತೆಯ ಕಾಳಜಿಯ ನಂತರ ಡಾ ಉಲ್ಲಾಸ್ ಕಾರಂತ್ರಂತಹ ಸಂರಕ್ಷಣಾವಾದಿಗಳು ಕ್ಯಾಮರಾ ಟ್ರ್ಯಾಪ್ಗಳು ಮತ್ತು ಹೆಜ್ಜೆಗುರುತನ್ನು ಪ್ರತ್ಯೇಕಿಸಿ ಗುರುತಿಸುವ ಸಂಕ್ಷಣಾ ವಿಧಾನಕ್ಕೆ ಆದ್ಯತೆ ನೀಡಿದರು. ಈ ಬದಲಾವಣೆಯಿಂದ ಹುಲಿಗಳ ಅಂದಾಜಿನಲ್ಲಿ ದೊಡ್ಡ ಕ್ರಾಂತಿಯನ್ನು ತಂದಿತ್ತು. ಆದರೆ ಪರಿಸರ ವ್ಯವಸ್ಥೆಯೇ ಬೇರೆ ರೀತಿ ಇರುತ್ತದೆ. ಹುಲಿಗಳು ಸಾಮಾನ್ಯವಾಗಿ ಚಲಿಸುವ ವಸ್ತುಗಳಲ್ಲ ಬದಲಾಗಿ ತಮ್ಮ ನೆಲೆಯನ್ನುಗುರುತಿಸಿ ನೆಲೆಸುವ ಪ್ರಾಣಿಗಳು.

2006ರಲ್ಲಿ ಹುಲಿಗಳ ಸಂಖ್ಯೆ 1411 ಇದ್ದರೆ, 2010ರಲ್ಲಿ 1706, 2014ರಲ್ಲಿ 2226 ಹಾಗೂ 2018ರಲ್ಲಿ 2967 ಹುಲಿಗಳಿದ್ದವು. ಹೀಗೆ ಏರುತ್ತಿರುವ ಗಣತಿ ಸಂಖ್ಯೆಗಳು ಯಶಸ್ಸಿನ ಸಂಭ್ರಮಾಚರಣೆಗೆ ಕಾರಣವಾದರೂ, ಆವಾಸಸ್ಥಾನ ವಿಸ್ತಾರಗೊಳ್ಳಲಿಲ್ಲ. ಕಾಡುಗಳನ್ನು ಪರಸ್ಪರ ಸಂಪರ್ಕಿಸುವ ಅದೃಶ್ಯ ಪರಿಸರ ಹೆದ್ದಾರಿಗಳಾದ ಪ್ರಾಣಿ ಕಾರಿಡಾರ್ಗಳು ಈಗ ಕಣ್ಮರೆಯಾಗಿವೆ. ಹೀಗಾಗಿ ಹೊಸ ನೆಲೆಯನ್ನು ಹುಡುಕುವ ಯುವ ಹುಲಿಗಳು ಚದುರಿ ಹೋಗುತ್ತವೆ. ಅವುಗಳ ಕಾರಿಡಾರ್ ಮಾನವ ಅಭಿವೃದ್ಧಿಯಿಂದ ನಿರ್ಬಂಧಿಸಲಾಗಿದೆ. ಪ್ರವಾಸೋದ್ಯಮ ಮೂಲಸೌಕರ್ಯ, ಹೆದ್ದಾರಿ, ರೈಲ್ವೆ ಮಾರ್ಗ, ಗಣಿಗಾರಿಕೆ ಮತ್ತು ವಿಸ್ತರಿಸುತ್ತಿರುವ ನಗರೀಕರಣ ಕಾಡು ನಾಶಕ್ಕೆ ಕಾರಣವಾಗಿದೆ.

ಉದಾಹರಣೆಗೆ ನೇಪಾಳ ಮತ್ತು ಉತ್ತರಖಂಡ ಮತ್ತು ಉತ್ತರಪ್ರದೇಶದ ಪ್ರಾಣಿ ಕಾರಿಡಾರ್ ಆಗಿರುವ ಟೆರಾಯ್ ಆರ್ಕ್ ಲ್ಯಾಂಡ್ಸ್ಕೇಪ್ ಇದೀಗ ರಸ್ತೆಗಳು, ವಸಾಹತುಗಳು ಮತ್ತು ರೆಸಾರ್ಟ್ಗಳಿಂದ ಕೂಡಿವೆ. ಪರಿಣಾಮ ಗಂಭೀರವಾಗಿದೆ. ಮಾನವ ವಸತಿಯಲ್ಲಿರುವ ಜಾನುವಾರುಗಳ ಮೇಲೆ ಹುಲಿಗಳು ಹೆಚ್ಚಾಗಿ ದಾಳಿ ಮಾಡುತ್ತಿವೆ. ಮಾನವ-ಹುಲಿ ಸಂಘರ್ಷವಾದಾಗ ಹುಲಿಯನ್ನು ಶಾಶ್ವತವಾಗಿ ಬಂಧನದಲ್ಲಿರಿಸಲಾಗುತ್ತಿದೆ.

ಭಾರತದಲ್ಲಿ 2021ರಲ್ಲಿ 130 ಹುಲಿಗಳು ಸಾವನ್ನಪ್ಪಿದರೆ, 2022ರಲ್ಲಿ 122, 2023ರಲ್ಲಿ 182, 2024ರಲ್ಲಿ 128, 2025ರಲ್ಲಿ 173 ಮತ್ತು 2026ರಲ್ಲಿ 71 ಹುಲಿಗಳು ಸಾವನ್ನಪ್ಪಿವೆ. ಆರಂಭದಲ್ಲಿ ಹುಲಿಗಳನ್ನು ಒಂಟಿ ಪರಭಕ್ಷಕ ಪ್ರಾಣಿ ಎಂದು ಪರಿಗಣಿಸಲಾಗಿತ್ತು. ಆದರೆ ಇದೀಗ ಗಂಡು ಹುಲಿಗಳು ಸಾಂದರ್ಭಿಕವಾಗಿ ಮರಿ ಸಾಕರಣೆಯಲ್ಲಿ ಭಾಗವಹಿಸುತ್ತಿರುವ ವಿರಳವಾದ ಪ್ರವೃತ್ತಿ ಕಂಡುಬಂದಿದೆ. ಇದನ್ನು ತಜ್ಞರು ನಡವಳಿಕೆಯ ಹೊಂದಾಣಿಕೆ ಎಂದು ವಿಶ್ಲೇಷಿಸಿದ್ದಾರೆ.

ಅನಿಮಲ್ ಕನ್ಸರ್ವೇಶನ್ ಜರ್ನಲ್ನಲ್ಲಿ ಪ್ರಕಟವಾದ ಸೆಂಟರ್ ಫಾರ್ ಸೆಲ್ಯುಲಾರ್ ಮತ್ತು ಮಾಲಿಕ್ಯುಲರ್ ಬಯಾಲಜಿಯ ಸಂಶೋಧಕರ ಇತ್ತೀಚೆಗಿನ ಅಧ್ಯಯನವು, “ವನ್ಯಜೀವಿ ಪ್ರವಾಸೋದ್ಯಮವು ಭಾರತೀಯ ಹುಲಿಗಳಲ್ಲಿ ಒತ್ತಡದ ಮಟ್ಟವನ್ನು ಗಮನಾರ್ಹವಾಗಿ ಹೆಚ್ಚಿಸುತ್ತಿದೆ” ಎಂದು ಹೇಳಿದೆ.

ಸಫಾರಿ ಸಂಚಾರದಿಂದ ಮುಕ್ತವಾದ ಸಂತಾನೋತ್ಪತ್ತಿ ಸ್ಥಳಗಳನ್ನು ಪತ್ತೆ ಹಚ್ಚಲು ಹುಲಿಗಳು ಕಾಡಿನ ನಿಬಿಡ ಪ್ರದೇಶಗಳನ್ನು ಹುಡುಕಿ ಸಾಗುತ್ತಿವೆ ಎನ್ನಲಾಗಿದೆ. ಆದರೆ ಕೆಲವು ವನ್ಯತಜ್ಞರ ಪ್ರಕಾರ ಪ್ರವಾಸೋದ್ಯಮ ಮಾತ್ರ ಹುಲಿಗಳಿಗೆ ಹಾನಿ ಮಾಡುವುದಿಲ್ಲ. ಬಹುತೇಕ ಉದ್ಯಾನವನಗಳು ಅರಣ್ಯ ಪ್ರದೇಶಗಳ ಒಂದು ಸಣ್ಣ ಭಾಗವನ್ನು ಮಾತ್ರ ಪ್ರವಾಸಿಗರಿಗೆ ಒಡ್ಡುತ್ತವೆ. ಆದರೆ ಭಾರತದ ವನ್ಯಜೀವಿ ಪ್ರವಾಸೋದ್ಯಮದಲ್ಲೇ ದೋಷವಿದೆ.

ಕಳೆದ ದಶಕದಲ್ಲಿ ಭಾರತದ ಹುಲಿ ಮೀಸಲು ಪ್ರದೇಶಗಳನ್ನು ಕಳಪೆ ಯೋಜಿತ ಪ್ರವಾಸೋದ್ಯಮ ಮೂಲಸೌಕರ್ಯಗಳ ಸ್ಫೋಟಕ್ಕೆ ಸಾಕ್ಷಿಯಾಗಿವೆ. ಐಷಾರಾಮಿ ರೆಸಾರ್ಟ್ಗಳು ಈಗ ಅರಣ್ಯದ ಅಂಚುಗಳ ಸಾಲಿನಲ್ಲಿವೆ. ಸೀಮಿತ ಪ್ರವಾಸೋದ್ಯಮ ವಲಯಕ್ಕೆ ಸಫಾರಿ ವಾಹನಗಳು ದೌಡಾಯಿಸುತ್ತವೆ. ಗೈಡ್ಗಳು ಮತ್ತು ಚಾಲಕರಿಗೆ ಸೂಕ್ತ ತರಬೇತಿ ಕೊಡಲಾಗಿರುವುದಿಲ್ಲ. ಪ್ರವಾಸೋದ್ಯಮದ ತೃಪ್ತಿಗಾಗಿ ಪ್ರಾಣಿಗಳನ್ನು ಬೆನ್ನಟ್ಟಲಾಗುತ್ತದೆ. ಪ್ರವಾಸೋದ್ಯಮವನ್ನು ವೃತ್ತಿಪರ ಪರಿಸರ ಅನುಭವವಾಗಿ ವಿನ್ಯಾಸಗೊಳಿಸಲಾಗಿಲ್ಲ. ಕಾರ್ಬೆಟ್ ಹುಲಿ ಅಭಯಾರಣ್ಯ, ಬಾಂಧವಗಢ ರಾಷ್ಟ್ರೀಯ ಉದ್ಯಾನವನ, ರಣಥಂಬೋತ್ ರಾಷ್ಟ್ರೀಯ ಉದ್ಯಾನವನ ಮತ್ತು ಕನ್ಹಾ ರಾಷ್ಟ್ರೀಯ ಉದ್ಯಾನವನ ದೇಶದ ಪ್ರಮುಖ ಪ್ರವಾಸೋದ್ಯಮ ತಾಣಗಳಾಗಿದ್ದು, ಹೆಚ್ಚು ಹುಲಿಗಳ ಸಾವನ್ನೂ ಕಂಡಿವೆ.

ಕಾಡು ಮತ್ತು ಬೀದಿ ನಾಯಿಗಳಿಂದ ಹರಡುವ ಕ್ಯಾನೈನ್ ಡಿಸ್ಟೆಂಪರ್ ಎನ್ನುವ ವೈರಲ್ ಕಾಯಿಲೆ ಇದೀಗ ಭಾರತದಲ್ಲಿ ಹುಲಿಗಳ ಸಂಖ್ಯೆಗೆ ಮತ್ತೊಂದು ಗಂಭೀರ ಬೆದರಿಕೆಯಾಗುತ್ತಿದೆ. ಕನ್ಹಾದಲ್ಲಿ ಇತ್ತೀಚೆಗೆ ಸತ್ತ ಹುಲಿಗಳು ಈ ರೋಗಗಳನ್ನು ತಗಲಿಸಿಕೊಂಡಿರುವುದು ಸಂರಕ್ಷಣಾಕಾರರನ್ನು ಎಚ್ಚರಿಸಿವೆ. ಈ ರೋಗ ನಾಯಿ ಮಾತ್ರವಲ್ಲದೆ, ತೋಳ, ನರಿ, ಹೈನಾ ಮತ್ತು ಬೆಕ್ಕುಗಳಲ್ಲೂ ಹರಡುತ್ತದೆ.

ದಶಕಗಳಿಂದ ಅಳಿವನ್ನು ತಡೆಗಟ್ಟುವ ಸುತ್ತ ಸಂರಕ್ಷಣಾ ನೀತಿ ವಿನ್ಯಾಸಗೊಂಡಿದೆ. ಹೀಗಾಗಿ ಏರಿದ ಹುಲಿಗಳ ಸಂಖ್ಯೆ ವಿಜಯದ ಸಂಕೇತವಾಯಿತು. ಆದರೆ ಇದೀಗ ಹುಲಿಗಳನ್ನು ಉಳಿಸಲು ಪರಿಸರವೂ ಅಗತ್ಯ ಎನ್ನುವತ್ತ ಚರ್ಚೆ ಸಾಗಿದೆ. ಒಂದೇ ರೀತಿಯ ಮರಗಳ ತೋಟಗಾರಿಕೆಯ ಬದಲು ನೈಸರ್ಗಿಕ ಅರಣ್ಯವನ್ನು ರಕ್ಷಿಸುವುದು ಮುಖ್ಯವಾಗುತ್ತದೆ. ಕುಗ್ಗುತ್ತಿರುವ ದ್ವೀಪದಂತಹ ಅರಣ್ಯ ಪ್ರದೇಶಗಳಲ್ಲಿ ಹುಲಿಗಳನ್ನು ಸಂರಕ್ಷಿಸಲು ಸಾಧ್ಯವಿಲ್ಲ.

ಮಾಹಿತಿ ಕೃಪೆ: India Today

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News