ಕೆಸರಿನ ಸುನಾಮಿ: ನೇಪಾಳದ ಭೀಕರ ಪ್ರವಾಹಕ್ಕೆ ಕಾರಣವೇನು?
Photo Credit : PTI
ನೇಪಾಳದ ಭೋಟೆ ಕೋಶಿ ನದಿ ಕಣಿವೆಯಲ್ಲಿ ಹರಿದುಬಂದ ಅಗಾಧ ಪ್ರಮಾಣದ ನೀರು, ಮಂಜುಗಡ್ಡೆ, ಕೆಸರು ಮತ್ತು ಕಲ್ಲುಗಳ ರಭಸದ ಹರಿವಿಗೆ 400ಕ್ಕೂ ಅಧಿಕ ಮಂದಿ ಬಲಿಯಾಗಿದ್ದು, ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ಈ ಭೀಕರ ಪ್ರವಾಹವು ಸುಮಾರು 170 ಕಿಲೋಮೀಟರ್‌ಗೂ ಹೆಚ್ಚು ದೂರ ಹರಿದುಬಂದಿದೆ. ಈ ಕಣಿವೆಯು ನೇಪಾಳದ ಕಾಠ್ಮಂಡು ಮತ್ತು ಟಿಬೆಟ್‌ನ ಲಾಸಾ ನಗರಗಳನ್ನು ಸಂಪರ್ಕಿಸುವ ಮುಖ್ಯ ರಸ್ತೆಯಾಗಿದೆ. ಘಟನೆಯಲ್ಲಿ ಕನಿಷ್ಠ 34 ಆಸ್ಟ್ರೇಲಿಯನ್ನರು ಕಾಣೆಯಾಗಿದ್ದಾರೆ. ಈ ದುರಂತ ಸಂಭವಿಸುವ ಮುನ್ನ ಯಾವುದೇ ಮುನ್ಸೂಚನೆ ಸಿಕ್ಕಿರಲಿಲ್ಲ.
ಕೆಸರು ಮಿಶ್ರಿತ ಈ ಭೀಕರ ದಿಢೀರ್ ಪ್ರವಾಹದ ದೃಶ್ಯಗಳು ಜಗತ್ತನ್ನೇ ಬೆಚ್ಚಿಬೀಳಿಸಿವೆ. ದುರದೃಷ್ಟವಶಾತ್, ಇಂತಹ ಘಟನೆ ನಡೆಯುವುದು ಅಚ್ಚರಿಯೇನಲ್ಲ.
ಹಿಮನದಿ ತಜ್ಞನಾಗಿ, ಜಗತ್ತಿನಾದ್ಯಂತ ತಾಪಮಾನ ಏರಿಕೆಯಿಂದಾಗಿ ಹಿಮನದಿಗಳು ದಿನದಿಂದ ದಿನಕ್ಕೆ ಕರಗಿ ಕಿರಿದಾಗುತ್ತಿರುವುದನ್ನು ಮತ್ತು ಅದರಿಂದ ಉಂಟಾಗುವ ದುರಂತಗಳನ್ನು ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಹಿಮನದಿಯೊಂದು ಇದ್ದಕ್ಕಿದ್ದಂತೆ ಕರಗಿದ್ದೇ ಈ ಭೀಕರ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ವಿಶ್ಲೇಷಣೆಗಳು ಸೂಚಿಸುತ್ತವೆ.
ಹವಾಮಾನ ವೈಪರೀತ್ಯ ಹೆಚ್ಚಾದಂತೆ, ಹಿಮಾಲಯದಂತಹ ಎತ್ತರದ ಪ್ರದೇಶಗಳಲ್ಲೂ ಹಿಮನದಿಗಳು ಕರಗುತ್ತಿವೆ. ಹಿಮಾಲಯದ ಅನೇಕ ಕಡಿದಾದ ಪರ್ವತಗಳ ಇಳಿಜಾರುಗಳು 'ಪರ್ಮಾಫ್ರಾಸ್ಟ್' ಎನಿಸಿಕೊಳ್ಳುವ ಶತಮಾನಗಳಿಂದ ಹೆಪ್ಪುಗಟ್ಟಿದ ಬಂಡೆ ಮತ್ತು ಮಣ್ಣಿನಿಂದ ಕೂಡಿದ್ದು, ಇಲ್ಲಿ ಅಪಾಯದ ಸಾಧ್ಯತೆ ಹೆಚ್ಚು. ತಾಪಮಾನ ಹೆಚ್ಚಾದಂತೆ, ಈ ಇಳಿಜಾರುಗಳು ಕರಗಲು ಅಥವಾ ಸಡಿಲಗೊಳ್ಳಲು ಪ್ರಾರಂಭಿಸುತ್ತವೆ. ಇಂತಹ ಸಮಯದಲ್ಲಿ ಭೂಕಂಪ ಅಥವಾ ಪರ್ವತ ಕುಸಿತ ಸಂಭವಿಸಿದರೆ, ಅದು ಹಠಾತ್ ಮಣ್ಣು-ಕಲ್ಲುಗಳ ಪ್ರವಾಹಕ್ಕೆ ಕಾರಣವಾಗುತ್ತದೆ.
ಈ ಘಟನೆಗೆ ಇದೇ ಖಚಿತ ಕಾರಣ ಎಂದು ಹೇಳಲು ಇದು ಸೂಕ್ತ ಸಮಯವಲ್ಲ. ಆದರೆ ಆರ್ಕ್ಟಿಕ್ ಮತ್ತು ಅಂಟಾರ್ಕ್ಟಿಕಾ ನಂತರ ಅತ್ಯಂತ ಹೆಚ್ಚು ಹಿಮವನ್ನು ಹೊಂದಿದ್ದು, 'ವಿಶ್ವದ ಮೂರನೇ ಧ್ರುವ' ಎಂದು ಕರೆಯಲ್ಪಡುವ ಹಿಮಾಲಯದ ಹಿಮದ ಸಾಲುಗಳು ಈಗ ಸುರಕ್ಷಿತವಾಗಿ ಉಳಿದಿಲ್ಲ ಎಂಬುದು ಮಾತ್ರ ಸ್ಪಷ್ಟ.
ಈ ದುರಂತದ ಬಗ್ಗೆ ...
ನೇಪಾಳದಲ್ಲಿ ಸಂಭವಿಸಿದ ಈ ದುರಂತಕ್ಕೆ ಪರ್ವತದ ಮೇಲಿಂದ ಬೃಹತ್ ಪ್ರಮಾಣದ ಹಿಮ ಮತ್ತು ಬಂಡೆಗಳು ಕುಸಿದುಬಿದ್ದಿದ್ದೇ ಪ್ರಮುಖ ಕಾರಣ ಎನ್ನಲಾಗಿದೆ. ಹೀಗೆ ಕುಸಿದ ಬಂಡೆಗಳು ಕೆಳಗೆ ಧಾವಿಸುವಾಗ ಮಾರ್ಗ ಮಧ್ಯದಲ್ಲಿದ್ದ ಹಿಮ, ನೀರು, ಕಲ್ಲು, ಮರ ಗಿಡಗಳು ಹಾಗೂ ಮಣ್ಣನ್ನು ತನ್ನೊಂದಿಗೆ ಕೊಚ್ಚಿಕೊಂಡು ಬಂದಿವೆ.
ಈ ಭೂಕುಸಿತದ ತೀವ್ರತೆ ಎಷ್ಟು ಭೀಕರವಾಗಿತ್ತೆಂದರೆ, ರಿಕ್ಟರ್ ಮಾಪಕದಲ್ಲಿ ಇದು 4.4 ತೀವ್ರತೆಯ ಭೂಕಂಪನದಂತೆ ದಾಖಲಾಗಿತ್ತು. ಹೀಗಾಗಿ, ಆರಂಭದಲ್ಲಿ ಇದನ್ನು ಭೂಕಂಪ ಎಂದೇ ಭಾವಿಸಲಾಗಿತ್ತು.
ಚೀನಾ ಮತ್ತು ನೇಪಾಳದ ಗಡಿ ದಾಟುವ ಗಿರೋಂಗ್ ಬಂದರನ್ನು ತಲುಪುವ ವೇಳೆಗೆ, ಈ ಹರಿವು 'ಮಣ್ಣಿನ ಸುನಾಮಿ'ಯ ರೂಪ ಪಡೆದುಕೊಂಡಿತ್ತು. ಈ ಬೃಹತ್ ಅಲೆಗಳು ಸುಮಾರು 30 ಮೀಟರ್ ಎತ್ತರಕ್ಕೆ ಚಿಮ್ಮಿದ್ದವು ಎಂದು ಆರಂಭಿಕ ಅಂದಾಜುಗಳು ತಿಳಿಸುತ್ತವೆ.
ಸಂಭಾವ್ಯ ಕಾರಣಗಳೇನು?
ಕೆಲವೊಮ್ಮೆ ಭೂಕುಸಿತದಿಂದಾಗಿ ಸೃಷ್ಟಿಯಾದ ಸರೋವರಗಳಲ್ಲಿ ಕರಗಿದ ಹಿಮನದಿಯ ನೀರು ಶೇಖರಣೆಯಾಗಿ, ಆ ಕಟ್ಟೆ ಒಡೆದುಹೋದಾಗ ಇಂತಹ ದುರಂತಗಳು ಸಂಭವಿಸುತ್ತವೆ. 'ಹಿಮನದಿ ಸರೋವರ ಸ್ಪೋಟದ ಪ್ರವಾಹ' (GLOF) ಎಂದು ಕರೆಯಲಾಗುವ ಇಂತಹದ್ದೇ ಒಂದು ಘಟನೆ 2024ರಲ್ಲಿ ನೇಪಾಳದಲ್ಲಿ ನಡೆದಿತ್ತು.
ಆದರೆ, ಈ ಬಾರಿಯ ದುರಂತಕ್ಕೆ ಸರೋವರ ಒಡೆದದ್ದು ಕಾರಣವಲ್ಲ ಎಂದು ಪ್ರಾಥಮಿಕ ವಿಶ್ಲೇಷಣೆಗಳು ಹೇಳುತ್ತವೆ. ಉಪಗ್ರಹ ಚಿತ್ರಗಳ ಪ್ರಕಾರ, ಭೂಕುಸಿತವು ಹಿಮನದಿಯ ದೊಡ್ಡ ಭಾಗವನ್ನೇ ಸೀಳಿ, ಅದು ಕುಸಿದುಬೀಳುವಂತೆ ಮಾಡಿದೆ.
ಹಿಮನದಿ ಕರಗಲು ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಪ್ರಪಂಚದಾದ್ಯಂತ ತಾಪಮಾನ ಏರಿಕೆಯಿಂದಾಗಿ ಹಿಮನದಿಗಳು ಕರಗುತ್ತಿವೆ, ಇದರ ಬೆನ್ನಲ್ಲೇ ಪ್ರವಾಹ ಮತ್ತು ಮಣ್ಣು-ಕಲ್ಲುಗಳ ಭೀಕರ ಹರಿವಿನಂತಹ ದುರಂತಗಳು ಸಂಭವಿಸುತ್ತವೆ.
ಕಳೆದ ವರ್ಷವೂ ನೇಪಾಳದ ಇದೇ ಜಿಲ್ಲೆಯಲ್ಲಿ ಸಣ್ಣ ಪ್ರಮಾಣದ ಪ್ರವಾಹ ಉಂಟಾಗಿ ಒಂಬತ್ತು ಜನರು ಮೃತಪಟ್ಟಿದ್ದರು. ಅದೇ ವರ್ಷ, ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಹಿಮನದಿ ಕರಗಿ ಉಂಟಾದ ಬೃಹತ್ ಪ್ರವಾಹಕ್ಕೆ 'ಬ್ಲ್ಯಾಟಿನ್' ಎಂಬ ಇಡೀ ಹಳ್ಳಿಯೇ ನಾಶವಾಗಿತ್ತು. 2023ರಲ್ಲಿ ನನ್ನ ತಾಯ್ನಾಡಾದ ಜಾರ್ಜಿಯಾದ ಪರ್ವತ ಪ್ರವಾಸೋದ್ಯಮ ತಾಣವೊಂದರಲ್ಲಿ ಸಂಭವಿಸಿದ ಭೂಕುಸಿತ ಮತ್ತು ಪ್ರವಾಹಕ್ಕೆ 33 ಜನರು ಬಲಿಯಾಗಿದ್ದರು.
ಆದರೆ, ಇದುವರೆಗೆ ಸಂಭವಿಸಿದ ದುರಂತಗಳಲ್ಲೇ ಇದು ಅತ್ಯಂತ ದೊಡ್ಡದಾಗಿದೆ.
ಅಪಾಯದ ಅಂಚಿನಲ್ಲಿ ಪರ್ಮಾಫ್ರಾಸ್ಟ್
ಹಿಮಾಲಯದ ಅತ್ಯಂತ ಎತ್ತರದ ಪ್ರದೇಶದಲ್ಲಿರುವ ಹಿಮನದಿಗಳು, ಕಡಿಮೆ ಎತ್ತರದ ಅಥವಾ ತುಸು ಬೆಚ್ಚಗಿನ ಪ್ರದೇಶಗಳಲ್ಲಿರುವ ಹಿಮನದಿಗಳಿಗಿಂತ ಹವಾಮಾನ ವೈಪರೀತ್ಯಕ್ಕೆ ವಿಭಿನ್ನವಾಗಿ ಸ್ಪಂದಿಸುತ್ತವೆ. ಕರಗುತ್ತಿರುವ ಮತ್ತು ದುರ್ಬಲಗೊಳ್ಳುತ್ತಿರುವ 'ಪರ್ಮಾಫ್ರಾಸ್ಟ್' ಕೂಡ ಹಿಮಾಲಯದ ಕಡಿದಾದ ಇಳಿಜಾರುಗಳ ಸ್ಥಿರತೆಯನ್ನು ಕಳೆದುಕೊಳ್ಳುವಂತೆ ಮಾಡುತ್ತಿದೆ.
'ಪರ್ಮಾಫ್ರಾಸ್ಟ್' ಎಂಬುದು ವರ್ಷಗಟ್ಟಲೆ 0 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಕಡಿಮೆ ತಾಪಮಾನದಲ್ಲಿ ಹೆಪ್ಪುಗಟ್ಟಿರುವ ಬಂಡೆ, ಮಣ್ಣು ಮತ್ತು ಹಿಮದ ಮಿಶ್ರಣವಾಗಿದೆ. ಹವಾಮಾನ ಬೆಚ್ಚಗಾಗುತ್ತಿದ್ದಂತೆ, ಈ ಹೆಪ್ಪುಗಟ್ಟಿದ ಮಣ್ಣು ಕರಗಲು ತೊಡಗುತ್ತದೆ. ಇದರಿಂದ ಬಂಡೆ ಮತ್ತು ಮಣ್ಣನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವ ಹಿಮದ ಶಕ್ತಿ ಕುಂದುತ್ತದೆ.
ಕಡಿದಾದ ಪರ್ವತ ಇಳಿಜಾರುಗಳಲ್ಲಿ ಈ ಹಿಮದ ಪಟ್ಟು ಸಡಿಲಗೊಂಡಾಗ, ಇಳಿಜಾರುಗಳು ಗಟ್ಟಿಯಿರದೆ ಬಂಡೆಗಳು ಕುಸಿಯುವುದು, ಭೂಕುಸಿತ ಮತ್ತು ಮಣ್ಣು ಜಾರುವಂತಹ ಅಪಾಯಗಳು ಹೆಚ್ಚಾಗುತ್ತವೆ. ಇಂತಹ ಸಂದರ್ಭದಲ್ಲಿ ಭೂಕಂಪ, ಶಿಲಾಪಾತ ಅಥವಾ ಸಣ್ಣ ಚಲನವಲನ ಉಂಟಾದರೂ ಸಾಕು, ಬಂಡೆ, ಮಣ್ಣು ಮತ್ತು ಕೆಸರು ವೇಗವಾಗಿ ಕೆಳಗೆ ಹರಿದುಬಂದು ದೊಡ್ಡ ದುರಂತವನ್ನೇ ಸೃಷ್ಟಿಸುತ್ತದೆ.
ಇಂತಹ ದುರಂತಗಳನ್ನು ತಡೆಯಲು ಸಾಧ್ಯವೇ?
ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಹಿಮನದಿ ಕರಗಿದಾಗ ಅಲ್ಲಿ ಯಾವುದೇ ಸಾವು ಸಂಭವಿಸಲಿಲ್ಲ . ಅಲ್ಲಿ ಸೂಕ್ತ ಮುನ್ನೆಚ್ಚರಿಕೆ ವ್ಯವಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದಿದ್ದೇ ಇದಕ್ಕೆ ಕಾರಣ. ಹಿಮನದಿ ಕರಗುವ ಮುನ್ನವೇ ಅಧಿಕಾರಿಗಳು ಅಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದರು.
ತಾಪಮಾನ ಏರಿಕೆಯಾಗುತ್ತಿರುವಂತೆ ಹಾಗೂ ಹವಾಮಾನ ಆಧಾರಿತ ದುರಂತಗಳು ಹೆಚ್ಚಾಗುತ್ತಿರುವ ಈ ಸಮಯದಲ್ಲಿ, ಹಿಮನದಿಗಳು ಮತ್ತು ಕರಗುವ ಪರ್ಮಾಫ್ರಾಸ್ಟ್ ಪ್ರದೇಶಗಳ ಬಳಿ ವಾಸಿಸುವ ಜನರಿಗೆ ಮುನ್ನೆಚ್ಚರಿಕೆ ವ್ಯವಸ್ಥೆಗಳು ಅತ್ಯಂತ ಪ್ರಮುಖವೆನಿಸಲಿವೆ.
ಈ ವ್ಯವಸ್ಥೆಗಳು ನದಿಗಳಲ್ಲಿ ದಿಢೀರ್ ಏರಿಕೆಯಾಗುವ ನೀರಿನ ಮಟ್ಟ, ಭಾರೀ ಮಳೆ ಮತ್ತು ಭೂಕಂಪನದ ತರಂಗಗಳನ್ನು ಸತತವಾಗಿ ನಿಗಾ ವಹಿಸಿ, ದುರಂತ ಸಂಭವಿಸುವ ಮುನ್ನವೇ ಅಧಿಕಾರಿಗಳನ್ನು ಎಚ್ಚರಿಸುತ್ತವೆ.
ಆದರೆ, ಪರಿಣಾಮಕಾರಿ ಮುನ್ನೆಚ್ಚರಿಕೆ ವ್ಯವಸ್ಥೆಗಳನ್ನು ಅಳವಡಿಸಲು ಮತ್ತು ನಿರ್ವಹಿಸಲು ಭಾರೀ ಬಂಡವಾಳದ ಅಗತ್ಯವಿದೆ. ಇದು ಕಡಿಮೆ ಆದಾಯವಿರುವ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸವಾಲಿನ ವಿಷಯ. ಉತ್ತಮ ವಿಷಯವೆಂದರೆ, ನೇಪಾಳದಲ್ಲಿ ಆಧುನಿಕ ಉಸ್ತುವಾರಿ ವ್ಯವಸ್ಥೆಗಳನ್ನು ಅಳವಡಿಸಲು 'ಗ್ರೀನ್ ಕ್ಲೈಮೇಟ್ ಫಂಡ್' ಕಳೆದ ವರ್ಷ ಅನುದಾನ ಘೋಷಿಸಿದೆ.
ಮತ್ತೊಂದು ಗಂಭೀರ ಸಮಸ್ಯೆಯೂ ಇಲ್ಲಿದೆ. ಹಿಮಾಲಯದ ಹಿಮನದಿಗಳು ಕರಗಿ ಹರಿಯುವ ನೀರು ನೇಪಾಳ, ಪಾಕಿಸ್ತಾನ, ಭಾರತ ಮತ್ತು ಚೀನಾದ ಶತಕೋಟಿ ಜನರಿಗೆ ಜಲಮೂಲವಾಗಿದೆ.
ಹವಾಮಾನ ಬಿಸಿಯಾಗುತ್ತಿದ್ದಂತೆ ಹಿಮನದಿಗಳು ವೇಗವಾಗಿ ಕರಗಿ, ನದಿಗಳ ಹರಿವು ತಾತ್ಕಾಲಿಕವಾಗಿ ಹೆಚ್ಚಾಗಬಹುದು ಮತ್ತು ಕೆಲವು ಕಡೆ ಪ್ರವಾಹದ ಅಪಾಯವನ್ನು ತಂದೊಡ್ಡಬಹುದು. ಆದರೆ ಹಿಮನದಿಗಳು ಕರಗಿ ಕುಗ್ಗುತ್ತಾ ಹೋದಂತೆ, ನದಿಗಳಿಗೆ ಹರಿದುಬರುವ ನೀರಿನ ಪ್ರಮಾಣ ಕಡಿಮೆಯಾಗಿ, ವಿಶೇಷವಾಗಿ ಬೇಸಿಗೆಯಲ್ಲಿ ನೀರಿನ ಅಭಾವ ಎದುರಾಗಬಹುದು.
ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ವೇಗವಾಗಿ ಕಡಿಮೆ ಮಾಡುವುದು, ಮುನ್ನೆಚ್ಚರಿಕೆ ವ್ಯವಸ್ಥೆಗಳಲ್ಲಿ ಹೂಡಿಕೆ ಮಾಡುವುದು ಮತ್ತು ಅಪಾಯದ ಅಂಚಿನಲ್ಲಿರುವ ಪರ್ವತ ಪ್ರದೇಶಗಳ ಮೇಲೆ ನಿರಂತರ ನಿಗಾ ಇಡುವುದರಿಂದ ಸಾರ್ವಜನಿಕರು ದುರಂತ ಎದುರಿಸಲು ಸಜ್ಜಾಗಬಹುದು. ಈ ಕ್ರಮಗಳು ಪ್ರತಿಯೊಂದು ದುರಂತವನ್ನೂ ತಡೆಯಲಾರವು, ಆದರೆ ಜನರ ಪ್ರಾಣ ಉಳಿಸಲು ಮತ್ತು ಬದಲಾಗುತ್ತಿರುವ ಹವಾಮಾನಕ್ಕೆ ಹೊಂದಿಕೊಳ್ಳಲು ಖಂಡಿತ ನೆರವಾಗಲಿವೆ.
ಲೇಖಕರು : ಲೆವಾನ್ ಟಿಲಿಡ್ಜೆ, ರಿಸರ್ಚ್ ಫೆಲೋ ಇನ್ ಗ್ಲೇಷಿಯಲ್ ಜಿಯೋಮಾರ್ಫಾಲಜಿ, ಮೊನಾಶ್ ವಿಶ್ವವಿದ್ಯಾಲಯ
ಈ ಲೇಖನವನ್ನು 'ದಿ ಕಾನ್ವರ್ಸೇಷನ್' ಜಾಲತಾಣದಿಂದ ಕ್ರಿಯೇಟಿವ್ ಕಾಮನ್ಸ್ ಪರವಾನಗಿಯಡಿಯಲ್ಲಿ ದಿ ಹಿಂದೂನಲ್ಲಿ ಮರುಪ್ರಕಟಿಸಿದೆ.
ಕೃಪೆ: thehindu.com