ಸಾಮಾನ್ಯ ಪೆಟ್ರೋಲ್‌ಗಿಂತ 20 ರೂಪಾಯಿ ಅಗ್ಗ: ಎಥೆನಾಲ್ ಇಂಧನ ಬಗ್ಗೆ ಬ್ರೆಝಿಲ್‌ನಿಂದ ಭಾರತ ಕಲಿಯಬೇಕಾದದು ಏನು?
ಸಾಂದರ್ಭಿಕ ಚಿತ್ರ | Photo Credit : magnific
ದಿಲ್ಲಿಯಲ್ಲಿ ಮೊದಲ 'E85' ಇಂಧನ ಪಂಪ್‌ನ ಪರಿಚಯವು ಭಾರತದ ಎಥೆನಾಲ್ ಪಯಣದ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ಪ್ರಸ್ತುತ ದಿಲ್ಲಿಯಲ್ಲಿ E20 ಪೆಟ್ರೋಲ್ ಬೆಲೆ ಲೀಟರ್‌ಗೆ 102 ರೂಪಾಯಿ ಇದ್ದರೆ, E85 ಇಂಧನ ಲೀಟರ್‌ಗೆ 82.12 ರೂಪಾಯಿಯಂತೆ ಮಾರಾಟವಾಗುತ್ತಿದೆ. ಅಂದರೆ, ಸಾಮಾನ್ಯ ಪೆಟ್ರೋಲ್‌ಗಿಂತ ಇದು ಸುಮಾರು 20 ರೂಪಾಯಿ ಅಗ್ಗವಾಗಿದೆ. ಮೇಲ್ನೋಟಕ್ಕೆ ಈ ಬೆಲೆ ವ್ಯತ್ಯಾಸ ಆಕರ್ಷಕವಾಗಿ ಕಾಣಬಹುದು. ಆದರೆ, ಬ್ರೆಝಿಲ್‌ನ ದಶಕಗಳ ಎಥೆನಾಲ್ ಪ್ರಯೋಗದಿಂದ ಭಾರತ ಬಹಳಷ್ಟು ಕಲಿಯುವುದಿದೆ. ಅದೇನೆಂದರೆ ಇಂಧನದ ಯಶಸ್ಸು ಕೇವಲ ಪಂಪ್‌ನಲ್ಲಿ ಕಾಣುವ ಕಡಿಮೆ ಬೆಲೆಯ ಮೇಲೆ ಅವಲಂಬಿತವಾಗಿರುವುದಿಲ್ಲ.
► ಬ್ರೆಝಿಲ್‌ನ ಯಶಸ್ಸಿನ ಸೂತ್ರ
ಬ್ರೆಝಿಲ್ ವಿಶ್ವದ ಅತ್ಯಂತ ಯಶಸ್ವಿ 'ಫ್ಲೆಕ್ಸ್-ಫ್ಯೂಯಲ್' (Flex-fuel) ಮಾರುಕಟ್ಟೆ ಎಂದು ಪರಿಗಣಿಸಲ್ಪಟ್ಟಿದೆ. ದಶಕಗಳ ಕಾಲ ಕಬ್ಬನ್ನು ಮುಖ್ಯ ಕಚ್ಚಾ ವಸ್ತುವಾಗಿ ಬಳಸಿಕೊಂಡು, ಪೆಟ್ರೋಲ್, ಎಥೆನಾಲ್ ಅಥವಾ ಇವೆರಡರ ಯಾವುದೇ ಮಿಶ್ರಣದಲ್ಲಿ ಚಲಿಸಬಲ್ಲ ಫ್ಲೆಕ್ಸ್-ಫ್ಯೂಯಲ್ ವಾಹನಗಳ ಅಭಿವೃದ್ಧಿಗೆ ಬ್ರೆಝಿಲ್ ಉತ್ತೇಜನ ನೀಡಿತು. ಇಂದು ಅಲ್ಲಿ ಮಾರಾಟವಾಗುವ ಬಹುತೇಕ ಹೊಸ ಕಾರುಗಳು ಫ್ಲೆಕ್ಸ್-ಫ್ಯೂಯಲ್ ಆಗಿರುವುದರಿಂದ, ವಾಹನ ಸವಾರರು ಲಭ್ಯತೆ ಮತ್ತು ಆರ್ಥಿಕತೆಗೆ ಅನುಗುಣವಾಗಿ ಇಂಧನವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಬ್ರೆಝಿಲ್‌ನ ಮಾದರಿಯ ಯಶಸ್ಸಿಗೆ ಕಾರಣ ಸರ್ಕಾರದ ನೀತಿ ಅಥವಾ ವಾಹನ ತಂತ್ರಜ್ಞಾನ ಮಾತ್ರವಲ್ಲ. ಗ್ರಾಹಕರಿಗೆ ನಿರಂತರವಾಗಿ ಸ್ಪಷ್ಟವಾದ ಆರ್ಥಿಕ ಲಾಭವನ್ನು ಒದಗಿಸುವ ಎಥೆನಾಲ್‌ನ ಸಾಮರ್ಥ್ಯವೇ ಪ್ರಮುಖ ಕಾರಣ.
► 70 ಪ್ರತಿಶತ ನಿಯಮ
ಬ್ರೆಝಿಲ್‌ನ ವಾಹನ ಸವಾರರು ದೀರ್ಘಕಾಲದಿಂದ 70 ಪ್ರತಿಶತ ನಿಯಮವನ್ನು ಪಾಲಿಸುತ್ತಿದ್ದಾರೆ. ಎಥೆನಾಲ್‌ನಲ್ಲಿ ಪೆಟ್ರೋಲ್‌ಗಿಂತ ಕಡಿಮೆ ಶಕ್ತಿಯಿರುವುದರಿಂದ, ವಾಹನಗಳು ಪೆಟ್ರೋಲ್‌ನಲ್ಲಿ ಚಲಿಸುವಷ್ಟು ಕಿಲೋಮೀಟರ್ ಎಥೆನಾಲ್‌ನಲ್ಲಿ ಚಲಿಸುವುದಿಲ್ಲ. ಪರಿಣಾಮವಾಗಿ, ಎಥೆನಾಲ್ ಬೆಲೆಯು ಪೆಟ್ರೋಲ್ ಬೆಲೆಯ 70 ಪ್ರತಿಶತ ಅಥವಾ ಅದಕ್ಕಿಂತ ಕಡಿಮೆ ಇದ್ದಾಗ ಮಾತ್ರ ಅದು ಗ್ರಾಹಕರಿಗೆ ಆರ್ಥಿಕವಾಗಿ ಲಾಭದಾಯಕವೆನಿಸುತ್ತದೆ.
ಇಲ್ಲಿಯೇ ಭಾರತದ E85 ಪ್ರಯೋಗ ತನ್ನ ಮೊದಲ ದೊಡ್ಡ ಪರೀಕ್ಷೆಯನ್ನು ಎದುರಿಸುತ್ತಿರುವುದು.
ಆರ್ಥಿಕತೆಯ ವಾಸ್ತವ: ದಿಲ್ಲಿಯಲ್ಲಿ E85 ಬೆಲೆಯು E20 ಪೆಟ್ರೋಲ್ ಬೆಲೆಯ ಸುಮಾರು 80 ಪ್ರತಿಶತದಷ್ಟಿದೆ. ಕಾಗದದ ಮೇಲೆ ಗ್ರಾಹಕರು ಪ್ರತಿ ಲೀಟರ್‌ಗೆ 20 ರೂಪಾಯಿ ಉಳಿಸುತ್ತಿದ್ದಾರೆ ಎಂದು ಕಾಣಿಸಿದರೂ, ವಾಸ್ತವದಲ್ಲಿ ಪ್ರತಿ ಲೀಟರ್ ಬೆಲೆಗಿಂತ 'ಪ್ರತಿ ಕಿಲೋಮೀಟರ್‌ಗೆ ತಗಲುವ ವೆಚ್ಚ' ಮುಖ್ಯವಾಗಿದೆ.
ಇಂಧನ ದಕ್ಷತೆ: ಪೆಟ್ರೋಲ್‌ನಿಂದ ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಣಕ್ಕೆ ಬದಲಾದಾಗ, ಇಂಧನ ದಕ್ಷತೆ ಶೇ. 20-30ರಷ್ಟು ಕುಸಿಯಬಹುದು. ಈ ಮೈಲೇಜ್ ನಷ್ಟವು, ಪಂಪ್‌ನಲ್ಲಿ ಸಿಗುವ ಉಳಿತಾಯವನ್ನು ಬಹುತೇಕ ಅಳಿಸಿಹಾಕುತ್ತದೆ.
ಬ್ರೆಝಿಲ್‌ನಲ್ಲಿನ ಅನುಭವದ ಪ್ರಕಾರ, ಬೆಲೆಯ ವ್ಯತ್ಯಾಸವು ಪೆಟ್ರೋಲ್‌ಗಿಂತ 30-35 ಪ್ರತಿಶತದಷ್ಟು ಕಡಿಮೆ ಇದ್ದರೆ ಮಾತ್ರ ಗ್ರಾಹಕರು ಎಥೆನಾಲ್ ಕಡೆಗೆ ಆಸಕ್ತಿ ತೋರಿಸುತ್ತಾರೆ. ಆದರೆ, ಈ ರಿಯಾಯಿತಿ ಶೇ. 20-25ಕ್ಕೆ ಇಳಿದರೆ, ಎಥೆನಾಲ್‌ನ ಆರ್ಥಿಕತೆ ಅಷ್ಟೊಂದು ಆಕರ್ಷಕವಾಗಿರುವುದಿಲ್ಲ. ಒಂದು ವೇಳೆ ಪೆಟ್ರೋಲ್ ಬೆಲೆ ಲೀಟರ್‌ಗೆ ಸುಮಾರು 100 ರೂಪಾಯಿ ಆಗಿದ್ದರೆ, ಬ್ರೆಝಿಲ್‌ನ ಈ ಥಂಬ್ ರೂಲ್ ಪ್ರಕಾರ ಎಥೆನಾಲ್ ಬೆಲೆಯು 82 ರೂಪಾಯಿ ಇರುವುದಕ್ಕಿಂತ, 70 ರೂಪಾಯಿಗೆ ಹತ್ತಿರ ಇರಬೇಕಾಗುತ್ತದೆ.
►ಮೂಲಸೌಕರ್ಯದ ಸವಾಲು
ಸವಾಲು ಕೇವಲ ಬೆಲೆಗೆ ಸೀಮಿತವಾಗಿಲ್ಲ. ಬ್ರೆಝಿಲ್‌ನ ಯಶಸ್ಸಿಗೆ ವ್ಯಾಪಕ ಇಂಧನ ಲಭ್ಯತೆ ಕಾರಣ. ಆದರೆ ಭಾರತದಲ್ಲಿ ಮೂಲಸೌಕರ್ಯ ಇನ್ನೂ ಆರಂಭಿಕ ಹಂತದಲ್ಲಿದೆ. ಸರ್ಕಾರವು 2027ರ ವೇಳೆಗೆ 5,000 ಎಥೆನಾಲ್ ವಿತರಣಾ ಕೇಂದ್ರಗಳನ್ನು ಸ್ಥಾಪಿಸುವ ಗುರಿ ಹೊಂದಿದ್ದರೂ, ಸದ್ಯಕ್ಕೆ ಇಂಧನ ಕೇಂದ್ರಗಳು ವಿರಳವಾಗಿವೆ.
ದೇಶಾದ್ಯಂತ ಇಂಧನ ಜಾಲವಿಲ್ಲದೆ, ವಾಹನ ತಯಾರಕರು ದೊಡ್ಡ ಸಂಖ್ಯೆಯಲ್ಲಿ ಫ್ಲೆಕ್ಸ್-ಫ್ಯೂಯಲ್ ವಾಹನಗಳನ್ನು ಬಿಡುಗಡೆ ಮಾಡಲು ಹಿಂಜರಿಯುತ್ತಿದ್ದಾರೆ. ಅತ್ತ, ವಾಹನಗಳು ರಸ್ತೆಗೆ ಬಾರದೆ, ಇಂಧನ ಮಾರಾಟಗಾರರು ವಿತರಣಾ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ.
ಹಾಗಂತ ಇಷ್ಟಕ್ಕೇ E85 ಇಂಧನವು ವಿಫಲವಾಗುತ್ತದೆ ಎಂದರ್ಥವಲ್ಲ. ಭಾರತದ ಪಾಲಿಗೆ ಎಥೆನಾಲ್ ದೂರದೃಷ್ಟಿಯ ಹಿನ್ನೆಲೆಯಲ್ಲಿ ಮುಖ್ಯವಾಗಿದೆ . ಏಕೆಂದರೆ ಇದು ಕಚ್ಚಾ ತೈಲದ ಆಮದನ್ನು ಕಡಿಮೆ ಮಾಡುತ್ತದೆ, ದೇಶೀಯ ಕೃಷಿ ಆರ್ಥಿಕತೆಗೆ ಬೆಂಬಲ ನೀಡುತ್ತದೆ ಮತ್ತು ದೇಶದ ಇಂಧನ ಭದ್ರತೆಯನ್ನು ಬಲಪಡಿಸುತ್ತದೆ. ಆರಂಭದಲ್ಲಿ ಗ್ರಾಹಕರಿಗೆ ಸಿಗುವ ಉಳಿತಾಯವು ಅಲ್ಪ ಪ್ರಮಾಣದಲ್ಲಿದ್ದರೂ ಸಹ, ಈ ದೀರ್ಘಾವಧಿಯ ಲಾಭಗಳ ಕಾರಣಕ್ಕಾಗಿ ಇಂಧನ ನೀತಿ ನಿರೂಪಕರು ಈ ಯೋಜನೆಯನ್ನು ಮುಂದುವರಿಸಿಕೊಂಡು ಹೋಗುವುದು ಸೂಕ್ತ ಎನಿಸಬಹುದು
ಆದರೆ, ಬ್ರೆಝಿಲ್‌ನ ಅನುಭವವು ಒಂದು ವಿಷಯವನ್ನು ಸ್ಪಷ್ಟಪಡಿಸುತ್ತದೆ. ಗ್ರಾಹಕರು ಅಂತಿಮವಾಗಿ ಆರ್ಥಿಕ ಲಾಭಕ್ಕೆ ಸ್ಪಂದಿಸುತ್ತಾರೆಯೇ ಹೊರತು, ಸರ್ಕಾರದ ನೀತಿಗಳ ಉದ್ದೇಶಗಳಿಗಲ್ಲ. E85 ಇಂಧನವು ಕೇವಲ ಒಂದು ಸಣ್ಣ ವರ್ಗಕ್ಕೆ ಸೀಮಿತವಾಗದೆ ಜನಸಾಮಾನ್ಯರನ್ನು ತಲುಪಬೇಕಾದರೆ, ಅದು ಪೆಟ್ರೋಲ್‌ಗಿಂತ ಸ್ಪಷ್ಟವಾದ 'ಪ್ರತಿ ಕಿಲೋಮೀಟರ್ ವೆಚ್ಚದ ಲಾಭ'ವನ್ನು ನೀಡಬೇಕಾಗುತ್ತದೆ. ಇಂದಿನ ಬೆಲೆಯಲ್ಲಿರುವ ಲೀಟರ್‌ಗೆ 20 ರೂಪಾಯಿಯ ರಿಯಾಯಿತಿಯು ಖಂಡಿತವಾಗಿಯೂ ಒಂದು ಉತ್ತಮ ಆರಂಭ. ಆದರೆ, ಎಥೆನಾಲ್‌ನ ಕಡಿಮೆ ಇಂಧನ ದಕ್ಷತೆಯನ್ನು ಮೀರಿ ಈ ಉಳಿತಾಯವು ಗ್ರಾಹಕರನ್ನು ಆಕರ್ಷಿಸುತ್ತದೆಯೇ ಎಂಬ ಪ್ರಶ್ನೆಯೇ ಭಾರತದ ಫ್ಲೆಕ್ಸ್-ಫ್ಯೂಯಲ್ ಪ್ರಯೋಗದ ಯಶಸ್ಸು ಅಥವಾ ವೈಫಲ್ಯವನ್ನು ನಿರ್ಧರಿಸುತ್ತದೆ.
►ಏನಿದು E85 ಮತ್ತು E100 ಇಂಧನ?
E85 ಮತ್ತು E100 ಇಂಧನಗಳು ಅತಿ ಹೆಚ್ಚು ಪ್ರಮಾಣದ 'ಅನ್‌ಹೈಡ್ರಸ್' (ನೀರಿನಂಶವಿಲ್ಲದ) ಎಥೆನಾಲ್ ಮಿಶ್ರಣವನ್ನು ಒಳಗೊಂಡಿರುತ್ತವೆ. E85 ಇಂಧನದಲ್ಲಿ ಶೇಕಡಾ 85 ರಷ್ಟು ಎಥೆನಾಲ್ ಮತ್ತು ಶೇಕಡಾ 15 ರಷ್ಟು ಪೆಟ್ರೋಲ್ ಇರುತ್ತದೆ. ಇನ್ನು E100 ಇಂಧನದಲ್ಲಿ ಶೇಕಡಾ 93 ರಿಂದ 95 ರಷ್ಟು ಎಥೆನಾಲ್ ಇರುತ್ತದೆ. E85 ಇಂಧನವನ್ನು ವಿಶೇಷವಾಗಿ ಫ್ಲೆಕ್ಸ್-ಫ್ಯೂಯಲ್ ವಾಹನಗಳಿಗಾಗಿಯೇ ಪರಿಚಯಿಸಲಾಗಿದೆ. ಗ್ರಾಹಕರು ಕೇವಲ ಒಂದೇ ಒಂದು ಮಾದರಿಯ ಇಂಧನಕ್ಕೆ ಸೀಮಿತವಾಗದೆ, E20 ಇಂದ ಹಿಡಿದು E100 ವರೆಗಿನ ಯಾವುದೇ ಎಥೆನಾಲ್ ಮಿಶ್ರಣದಲ್ಲಿ ಚಲಿಸಬಲ್ಲ ಫ್ಲೆಕ್ಸ್-ಫ್ಯೂಯಲ್ ವಾಹನಗಳ (FFVs) ಬಳಕೆಯನ್ನು ಉತ್ತೇಜಿಸುವುದು ಈ ಯೋಜನೆಯ ಗುರಿಯಾಗಿದೆ.
ಇದನ್ನು ದೇಶಾದ್ಯಂತ ವಿಸ್ತರಿಸುವ ನಿಟ್ಟಿನಲ್ಲಿ, 2026ರ ಡಿಸೆಂಬರ್ ವೇಳೆಗೆ 500 ಇಂಧನ ಕೇಂದ್ರಗಳಲ್ಲಿ ಮತ್ತು 2027ರ ಡಿಸೆಂಬರ್ ವೇಳೆಗೆ ಸುಮಾರು 5,000 ಕೇಂದ್ರಗಳಲ್ಲಿ E85 ಇಂಧನ ಸಿಗುವಂತೆ ಮಾಡಲು ಯೋಜಿಸಲಾಗಿದೆ. ಪೆಟ್ರೋಲಿಯಂ ಸಚಿವಾಲಯವು 2030-31ರ ವೇಳೆಗೆ ಭಾರತದ ಒಟ್ಟಾರೆ ಎಥೆನಾಲ್ ಮಿಶ್ರಣದ ಮಟ್ಟವನ್ನು ಶೇಕಡಾ 26 ಕ್ಕೆ ಏರಿಸಲು ಚಿಂತನೆ ನಡೆಸಿದೆ.
►ಫ್ಲೆಕ್ಸ್-ಫ್ಯೂಯಲ್ ವಾಹನಗಳು (FFVs) ಎಂದರೇನು?
ಸರಳವಾಗಿ ಹೇಳುವುದಾದರೆ, ವಿಭಿನ್ನ ಅನುಪಾತದ ಮಿಶ್ರಿತ ಇಂಧನಗಳಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರುವ ವಾಹನಗಳನ್ನು 'ಫ್ಲೆಕ್ಸ್-ಫ್ಯೂಯಲ್ ವಾಹನಗಳು' ಎನ್ನಲಾಗುತ್ತದೆ. ಸದ್ಯದ ಸಂದರ್ಭದಲ್ಲಿ, ಈ ವಾಹನಗಳು E20, E85 ಮತ್ತು E100 ಮಾದರಿಯ ಇಂಧನಗಳಲ್ಲಿ ಸರಾಗವಾಗಿ ಚಲಿಸಬೇಕಾಗುತ್ತದೆ. ಇಂತಹ ವಾಹನಗಳ ಇಂಜಿನ್ ಮತ್ತು ಇಂಧನ ವ್ಯವಸ್ಥೆಯು ಇಂಧನದಲ್ಲಿರುವ ಎಥೆನಾಲ್ ಪ್ರಮಾಣವನ್ನು ಸ್ವಯಂಚಾಲಿತವಾಗಿ ಪತ್ತೆಹಚ್ಚಿ, ಅದಕ್ಕೆ ತಕ್ಕಂತೆ ಇಂಧನ ಇಂಜೆಕ್ಷನ್ ಮತ್ತು ಇಗ್ನಿಷನ್ ಸಮಯವನ್ನು ಹೊಂದಿಸಿಕೊಳ್ಳುತ್ತವೆ. ಈ ವಾಹನಗಳಲ್ಲಿ ವಿಶೇಷ ಇಂಧನ ಸೆನ್ಸಾರ್‌ಗಳಿದ್ದು, ಇವು ಇಂಧನದ ನಿಖರವಾದ ಶೇಕಡಾವಾರು ಪ್ರಮಾಣವನ್ನು ಗುರುತಿಸುತ್ತವೆ. ನಂತರ ಇಂಜಿನ್ ಕಂಟ್ರೋಲ್ ಸಾಫ್ಟ್‌ವೇರ್ ಆ ನಿರ್ದಿಷ್ಟ ಇಂಧನಕ್ಕೆ ತಕ್ಕಂತೆ ವಾಹನದ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುತ್ತದೆ.
ಅಲ್ಲದೆ, ಹೆಚ್ಚಿನ ಪ್ರಮಾಣದ ಎಥೆನಾಲ್ ಬಳಕೆಯಿಂದಾಗಿ ಇಂಜಿನ್ ಭಾಗಗಳು ತುಕ್ಕು ಹಿಡಿಯದಂತೆ ತಡೆಯುವ ವಿಶೇಷ ಇಂಧನ ವ್ಯವಸ್ಥೆಯ ಘಟಕಗಳನ್ನು ಈ ವಾಹನಗಳು ಹೊಂದಿರುತ್ತವೆ.
►ಸಾಮಾನ್ಯ ವಾಹನಗಳಲ್ಲಿ ಅಥವಾ E20 ವಾಹನಗಳಲ್ಲಿ E85 ಇಂಧನ ಬಳಸಬಹುದೇ?
ಇಲ್ಲ. ಅಂತಹ ವಾಹನಗಳಿಗೆ ಪ್ರತ್ಯೇಕವಾದ ಫ್ಲೆಕ್ಸ್-ಫ್ಯೂಯಲ್ ಇಂಜಿನ್‌ಗಳ ಅಗತ್ಯವಿರುತ್ತದೆ. ಅವುಗಳ ಇಂಧನ ವ್ಯವಸ್ಥೆ ಮತ್ತು ಇಂಜಿನ್ ಮಾಪನಾಂಕ ನಿರ್ಣಯದಲ್ಲಿ ಗಮನಾರ್ಹ ಬದಲಾವಣೆಗಳಾಗಬೇಕಿರುತ್ತದೆ. ಒಂದು ವಾಹನವು E20 ಹೊಂದಾಣಿಕೆ ಹೊಂದಿದೆ ಎಂದರೆ, ಅದರ ಇಂಜಿನ್ ಮತ್ತು ಇಂಧನ ವ್ಯವಸ್ಥೆಯು ಸಾಮಾನ್ಯ ಪೆಟ್ರೋಲ್‌ನಲ್ಲಿ ಗರಿಷ್ಠ ಶೇಕಡಾ 20 ರಷ್ಟು ಎಥೆನಾಲ್ ಮಿಶ್ರಣವನ್ನು ಮಾತ್ರ ತಡೆದುಕೊಳ್ಳಬಲ್ಲದು ಎಂದರ್ಥ.
ಆದರೆ E85 ಇಂಧನದ ಸಂಯೋಜನೆಗೆ ಸಂಪೂರ್ಣವಾಗಿ ಭಿನ್ನವಾದ ಇಂಜಿನ್ ಟ್ಯೂನಿಂಗ್, ದೊಡ್ಡ ಗಾತ್ರದ ಇಂಜೆಕ್ಟರ್‌ಗಳು, ಇಂಧನ ವ್ಯವಸ್ಥೆಯುದ್ದಕ್ಕೂ ಎಥೆನಾಲ್ ನಿರೋಧಕ ಸಾಮಗ್ರಿ ಹಾಗೂ ಇಂಧನ ಮಿಶ್ರಣದ ಅನುಪಾತವನ್ನು ತಕ್ಷಣವೇ ಪತ್ತೆಹಚ್ಚಿ ಹೊಂದಿಕೊಳ್ಳುವ ಸೆನ್ಸಾರ್‌ಗಳ ಅಗತ್ಯವಿರುತ್ತದೆ.
ಒಂದು ವೇಳೆ E20 ಸಾಮರ್ಥ್ಯದ ವಾಹನಕ್ಕೆ E85 ಇಂಧನವನ್ನು ಹಾಕಿದರೆ ಕಾಲಕ್ರಮೇಣ ಇಂಜಿನ್ ಸಂಪೂರ್ಣವಾಗಿ ಹಾಳಾಗುವ ಅಪಾಯವಿರುತ್ತದೆ. ಸರ್ಕಾರದ ಆದೇಶದಂತೆ ಎಪ್ರಿಲ್ 2023 ರಿಂದ ತಯಾರಿಸಲಾದ 'ಭಾರತ್ ಸ್ಟೇಜ್ VI (ಫೇಸ್-II)' ನಿಯಮಾವಳಿಯ ಎಲ್ಲಾ ವಾಹನಗಳು E20 ಇಂಧನಕ್ಕೆ ಹೊಂದಿಕೊಳ್ಳುತ್ತವೆ.
ಭಾರತದ ಆಟೋಮೊಬೈಲ್ ಉದ್ಯಮವು ಸಾಮಾನ್ಯ ಗ್ರಾಹಕರಿಗೆ ಫ್ಲೆಕ್ಸ್-ಫ್ಯೂಯಲ್ ವಾಹನಗಳ ಆಯ್ಕೆಯನ್ನು ಒದಗಿಸುವಲ್ಲಿ ಇನ್ನೂ ಆರಂಭಿಕ ಹಂತದಲ್ಲಿದೆ. ಸದ್ಯಕ್ಕೆ ಹೀರೊ ಮೋಟೋಕಾರ್ಪ್, ಸುಜುಕಿ ಮತ್ತು ಮಾರುತಿ ಸುಜುಕಿ ಸಂಸ್ಥೆಗಳು ಮಾತ್ರ E85 ಇಂಧನ ಗುಣಮಟ್ಟಕ್ಕೆ ಪೂರಕವಾದ ಕೆಲವೇ ಕೆಲವು ಮಾದರಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ.
ಕೃಪೆ: indiatoday.in