×
Ad

TMC ಯಲ್ಲಿ ಬಿಕ್ಕಟ್ಟು, ಕಾಂಗ್ರೆಸ್ ಜೊತೆ ವಿಲೀನದ ವದಂತಿ; ಸಯೋನಿ ಘೋಷ್ ಸೇರಿದಂತೆ ಪಕ್ಷದ ನಿಷ್ಠಾವಂತರು ಮಮತಾರಿಂದ ದೂರ ಸರಿದಿದ್ದೇಕೆ?

Update: 2026-06-11 23:00 IST

ಸಯೋನಿ ಘೋಷ್ | ಮಮತಾ ಬ್ಯಾನರ್ಜಿ - Photo Credit : PTI

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಥಾಪಿಸಿದ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಸಂಸದರು ಮತ್ತು ಶಾಸಕರು ಬಂಡಾಯ ಬಣಗಳನ್ನು ರಚಿಸುತ್ತಿದ್ದಾರೆ, ಮೇಯರ್‌ ಗಳು ರಾಜೀನಾಮೆ ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದೊಂದಿಗೆ TMC ವಿಲೀನವಾಗಲಿದೆ ಎಂಬ ವದಂತಿಗಳ ನಡುವೆಯೇ ಪಕ್ಷದ ನಾಯಕರಲ್ಲೇ ಭಿನ್ನಾಭಿಪ್ರಾಯಗಳು ಮೂಡುತ್ತಿವೆ.

ಸತತ ಹಿನ್ನಡೆಗಳಿಂದ ಕಂಗಾಲಾಗಿರುವ ಮಮತಾ ಬ್ಯಾನರ್ಜಿ ಅವರಿಗೆ ಗುರುವಾರ ಮತ್ತೊಂದು ದೊಡ್ಡ ಆಘಾತ ಎದುರಾಗಿದ್ದು, ಮತ್ತೊಬ್ಬ ರಾಜ್ಯಸಭಾ ಸಂಸದ ಪ್ರಕಾಶ್ ಚಿಕ್ ಬಾರೈಕ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ಈ ವಾರದಲ್ಲೇ ನಡೆದ ಮೂರನೇ ರಾಜೀನಾಮೆಯಾಗಿದೆ. ಇದಕ್ಕೂ ಮುನ್ನ ಬುಧವಾರ ಸುಶ್ಮಿತಾ ದೇವ್ ಅವರು ರಾಜ್ಯಸಭಾ ಸಂಸದ ಸ್ಥಾನ ಹಾಗೂ ಟಿಎಂಸಿ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು. ಪಕ್ಷದಲ್ಲಿನ "ಅತಿರೇಕದ ಭ್ರಷ್ಟಾಚಾರ" ಮತ್ತು "ಅರಾಜಕತೆಯ ಆಡಳಿತ"ವನ್ನು ಆರೋಪಿಸಿ TMC ನಾಯಕ ಸುಖೇಂದು ಶೇಖರ್ ರಾಯ್ ಅವರು ರಾಜ್ಯಸಭೆಗೆ ರಾಜೀನಾಮೆ ನೀಡಿದ ಕೇವಲ ಎರಡು ದಿನಗಳಲ್ಲೇ ಸುಶ್ಮಿತಾ ದೇವ್ ರಾಜೀನಾಮೆ ನೀಡಿದ್ದಾರೆ.

ಬಂಗಾಳ ವಿಧಾನಸಭೆಯಲ್ಲಿ TMC ಈಗಾಗಲೇ ವಿಭಜನೆಯನ್ನು ಎದುರಿಸುತ್ತಿದ್ದು, ಅದರ ಬೆನ್ನಲ್ಲೇ ದೇವ್ ಮತ್ತು ರಾಯ್ ಅವರ ರಾಜೀನಾಮೆಗಳು ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ದೊಡ್ಡ ಹೊಡೆತ ನೀಡಿವೆ. ಬಂಗಾಳ ವಿಧಾನಸಭೆಯ 58 ಶಾಸಕರು ಬಂಡಾಯ ನಾಯಕ ರಿತಬ್ರತ ಬ್ಯಾನರ್ಜಿ ಅವರನ್ನು ಬೆಂಬಲಿಸಿದ್ದು, ಅವರು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಹಕ್ಕು ಮಂಡಿಸಿದ್ದಾರೆ. ಮತ್ತೊಂದೆಡೆ, ಸಂಸತ್ತಿನಲ್ಲೂ ಪಕ್ಷದೊಳಗೆ ಬಿರುಕು ಕಾಣಿಸಿಕೊಂಡಿದ್ದು, ಸಂಸದೆ ಕಾಕೋಲಿ ಘೋಷ್ ಅವರು ಸೋಮವಾರ ಎನ್‌ಡಿಎಗೆ ಬೆಂಬಲ ಸೂಚಿಸಿದ್ದಾರೆ. ಅಷ್ಟೇ ಅಲ್ಲದೆ, ಪಕ್ಷಾಂತರ ನಿಷೇಧ ಕಾಯ್ದೆಯಿಂದ ಪಾರಾಗಲು ಅಗತ್ಯವಿರುವ 19 ಇತರ ಸಂಸದರ ಬೆಂಬಲವೂ ತಮಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಈ ಎಲ್ಲ ರಾಜಕೀಯ ಪ್ರಕ್ಷುಬ್ಧತೆಗಳ ನಡುವೆ, ಮಮತಾ ಬ್ಯಾನರ್ಜಿ ಅವರು ಮಂಗಳವಾರ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದು, ಈ ಭೇಟಿಯ ನಂತರ ಟಿಎಂಸಿ ಪಕ್ಷವು ಕಾಂಗ್ರೆಸ್ ಜೊತೆ "ವಿಲೀನ"ವಾಗಲಿದೆ ಎಂಬ ವದಂತಿಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.

ಟಿಎಂಸಿಯಲ್ಲಿ ಬಿಕ್ಕಟ್ಟು: ಇಲ್ಲಿವರೆಗಿನ ಬೆಳವಣಿಗೆಗಳು

ಶಾಸಕರ ಬಂಡಾಯ:

ಕಳೆದ ವಾರ ವಿಧಾನಸಭಾ ಸ್ಪೀಕರ್ ರತೀಂದ್ರ ನಾಥ್ ಬೋಸ್ ಅವರು ಶಾಸಕ ರಿತಬ್ರತ ಬ್ಯಾನರ್ಜಿ ನೇತೃತ್ವದ 58 ಬಂಡಾಯ ಟಿಎಂಸಿ ಶಾಸಕರ ಗುಂಪನ್ನು ಮುಖ್ಯ ವಿರೋಧ ಪಕ್ಷದ ಬಣವಾಗಿ ಗುರುತಿಸಿದ್ದಾರೆ. ಪಕ್ಷದ ನಾಯಕತ್ವವು ಸರ್ವಾಧಿಕಾರಿಯ ರೀತಿಯಲ್ಲಿ ವರ್ತಿಸುತ್ತಿದೆ ಎಂದು ಆರೋಪಿಸಿರುವ ಬಂಡಾಯಗಾರರು, ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಪಾತ್ರವನ್ನು ಬಹಿರಂಗವಾಗಿ ಪ್ರಶ್ನಿಸಿದ್ದಾರೆ. ಈ 58 ಶಾಸಕರು ರಿತಬ್ರತ ಬ್ಯಾನರ್ಜಿ ಅವರಿಗೆ ಬೆಂಬಲ ನೀಡಿದ್ದು, ಅವರು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಹಕ್ಕು ಮಂಡಿಸಿದ್ದಾರೆ.

ಸಂಸದರ ಬಂಡಾಯ:

ಸೋಮವಾರ TMC ಪಕ್ಷದಲ್ಲಿ ಮತ್ತೊಂದು ರೀತಿಯ ಬಿಕ್ಕಟ್ಟು ಕಂಡುಬಂದಿದ್ದು, ಸಂಸದೆ ಕಾಕೋಲಿ ಘೋಷ್ ಅವರು ತಮಗೆ 19 ಸಂಸದರ ಬೆಂಬಲವಿದೆ ಮತ್ತು ಅವರೊಂದಿಗೆ ಬಿಜೆಪಿ ನೇತೃತ್ವದ NDA ಒಕ್ಕೂಟಕ್ಕೆ ಬೆಂಬಲ ನೀಡಲು ಸಿದ್ಧರಾಗಿರುವುದಾಗಿ ತಿಳಿಸಿದ್ದಾರೆ.

"ಬಂಗಾಳದ ಅಭಿವೃದ್ಧಿಗಾಗಿ ನನ್ನನ್ನು ಸೇರಿ, ಸುಮಾರು 20 ಟಿಎಂಸಿ ಸಂಸದರು NDA ಅನ್ನು ಬೆಂಬಲಿಸಲು ನಿರ್ಧರಿಸಿದ್ದೇವೆ. ನಾವು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು ಅಧಿಕೃತವಾಗಿ NDAಗೆ ಬೆಂಬಲ ನೀಡಲಿದ್ದೇವೆ" ಎಂದು ಸಂಸದೆ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

"ಪತ್ರವು ಈಗಾಗಲೇ ಸ್ಪೀಕರ್‌ಗೆ ತಲುಪಿದೆ. ನಮಗೆ ಪ್ರತ್ಯೇಕ ಬಣವಾಗಿ ಬೇರೆ ಆಸನದ ವ್ಯವಸ್ಥೆ ಮಾಡುವಂತೆ ಕೋರಿದ್ದೇವೆ" ಎಂದಿದ್ದರವರು. ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮದಿಂದ ಪಾರಾಗಲು ಬಂಡಾಯಗಾರರಿಗೆ ಟಿಎಂಸಿಯ ಒಟ್ಟು 28 ಲೋಕಸಭಾ ಸದಸ್ಯರಲ್ಲಿ ಕನಿಷ್ಠ 19 ಸಂಸದರ ಬೆಂಬಲದ ಅಗತ್ಯವಿದೆ.

ಬಂಡಾಯ ಬಣ ಸೇರಿದ ಪ್ರಭಾವಿ ನಾಯಕರು

ಬಂಡಾಯಗಾರರ ಪಟ್ಟಿಯಲ್ಲಿ ಟಿಎಂಸಿಯ ಕೆಲವು ಪ್ರಭಾವಿ ನಾಯಕರಿದ್ದಾರೆ. ಇದರಲ್ಲಿ ಆಕ್ರಮಣಕಾರಿ ನಾಯಕಿ ಮತ್ತು ಜಾದವ್‌ಪುರ ಸಂಸದೆ ಸಯೋನಿ ಘೋಷ್ ಕೂಡ ಸೇರಿದ್ದಾರೆ. ಸಯೋನಿ ಘೋಷ್ ಮತ್ತು ಕೋಲ್ಕತಾ ದಕ್ಷಿಣದ ಸಂಸದೆ ಮಾಲಾ ರಾಯ್ ಬುಧವಾರ ಬಂಡಾಯ ಸಂಸದರ ಗುಂಪನ್ನು ಸೇರಿಕೊಂಡಿದ್ದಾರೆ.

ಸಂಸದರಾದ ಅಬು ತಾಹೆರ್, ಅಸಿತ್ ಮಲ್, ಅರೂಪ್ ಚಕ್ರವರ್ತಿ, ಕಾಳಿಪದ ಸೊರೇನ್, ಜಗದೀಶ್ ಬಸುನಿಯಾ, ಪ್ರಸೂನ್ ಬ್ಯಾನರ್ಜಿ, ಶರ್ಮಿಳಾ ಸರ್ಕಾರ್, ಶತಾಬ್ದಿ ರಾಯ್, ಯೂಸುಫ್ ಪಠಾಣ್, ಜೂನ್ ಮಾಲಿಯಾ, ಖಲೀಲುರ್ ರೆಹಮಾನ್, ಬಾಪಿ ಹಲ್ದಾರ್, ರಚನಾ ಬ್ಯಾನರ್ಜಿ, ಮಿತಾಲಿ ಬಾಗ್, ದೇವ್ ಅಧಿಕಾರಿ ಮತ್ತು ಪಾರ್ಥ ಭೌಮಿಕ್ ಬಂಡಾಯ ಬಣದಲ್ಲಿದ್ದಾರೆ ಎನ್ನಲಾಗಿದೆ. ಶತ್ರುಘ್ನ ಸಿನ್ಹಾ ಅವರ ಹೆಸರೂ ಬಂಡಾಯಗಾರರಲ್ಲಿದೆ ಎಂದು ವರದಿಯಾಗಿದ್ದರೂ, ಈ ನಟ-ರಾಜಕಾರಣಿ ಮಮತಾ ಬ್ಯಾನರ್ಜಿ ಅವರೊಂದಿಗೇ ಇದ್ದಾರೆ ಎಂದು ಟಿಎಂಸಿ ಮೂಲಗಳು ಹೇಳಿರುವುದಾಗಿ ಪಿಟಿಐ ವರದಿ ಉಲ್ಲೇಖಿಸಿದೆ.

ಕಾಂಗ್ರೆಸ್-ಟಿಎಂಸಿ ವಿಲೀನದ ವದಂತಿ:

ಟಿಎಂಸಿ ಒಳಗಿನ ತೀವ್ರ ಭಿನ್ನಾಭಿಪ್ರಾಯಗಳು ಕಾಂಗ್ರೆಸ್ ಪಕ್ಷದೊಂದಿಗೆ ಅದರ ಸಂಭಾವ್ಯ ವಿಲೀನದ ವದಂತಿಗಳಿಗೆ ರೆಕ್ಕೆಪುಕ್ಕ ನೀಡಿವೆ. ಮಂಗಳವಾರ ದಿಲ್ಲಿಯಲ್ಲಿ ಮಮತಾ ಬ್ಯಾನರ್ಜಿ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿಯಾದ ನಂತರ ಈ ವದಂತಿಗಳು ಮತ್ತಷ್ಟು ಹರಡಲು ಕಾರಣವಾಯಿತು. ಆದರೆ, ಈ ವಿಲೀನದ ವದಂತಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಬುಧವಾರ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ "ಸಂಬಂಧಗಳನ್ನು ಗಟ್ಟಿಗೊಳಿಸುವ ಸಾಧ್ಯತೆಗಳ" ಬಗ್ಗೆ ಚರ್ಚಿಸಿದರೆ, ಕಾಂಗ್ರೆಸ್ ಮಾತ್ರ ಈ ವದಂತಿಗಳು ನಿಖರವಲ್ಲ ಎಂದಿದೆ.

ವಿಲೀನದ ವದಂತಿ 'ಆಧಾರರಹಿತ':

ಕಾಂಗ್ರೆಸ್ ಮತ್ತು ಟಿಎಂಸಿ ನಡುವಿನ ವಿಲೀನದ ಮಾತುಕತೆಗಳು ಸಂಪೂರ್ಣ ಆಧಾರರಹಿತವಾಗಿದ್ದು, ಉಭಯ ಪಕ್ಷಗಳು ವಿಲೀನಗೊಳ್ಳುವ ಯಾವುದೇ ಪ್ರಸ್ತಾವನೆ ಸದ್ಯಕ್ಕೆ ಪರಿಶೀಲನೆಯಲ್ಲಿಲ್ಲ ಎಂದು ಈ ವಿಷಯದ ನಿಕಟವರ್ತಿಗಳು ಬುಧವಾರ ಸ್ಪಷ್ಟಪಡಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕೂಡ ಎಕ್ಸ್ ಪೋಸ್ಟ್‌ನಲ್ಲಿ, "ಶ್ರೀಮತಿ ಸೋನಿಯಾ ಗಾಂಧಿ ಮತ್ತು ಮಮತಾ ಬ್ಯಾನರ್ಜಿ ನಡುವಿನ ಭೇಟಿಯಲ್ಲಿ ನಡೆದಿದೆ ಎನ್ನಲಾದ ಕೆಲವು ಸುದ್ದಿಗಳು ಸಂಪೂರ್ಣವಾಗಿ ಸುಳ್ಳು. ಅವರ ನಡುವಿನ ದೀರ್ಘಕಾಲದ ಸಂಬಂಧದ ಹಿನ್ನೆಲೆಯಲ್ಲಿ ಈ ಭೇಟಿಯು ಅತ್ಯಂತ ಸೌಹಾರ್ದಯುತವಾಗಿತ್ತು ಮತ್ತು ಅನೇಕ ವೈಯಕ್ತಿಕ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ" ಎಂದು ಹೇಳಿದ್ದಾರೆ.

ಮೇಯರ್‌ ಗಳ ನಿರ್ಗಮನ, TMC ನಾಯಕರ ಬಂಧನ:

ಮೇಲಿನ ಬೆಳವಣಿಗೆಗಳ ಬೆನ್ನಲ್ಲೇ ಟಿಎಂಸಿ ಪಕ್ಷದ ಫಿರ್ಹಾದ್ ಹಕೀಮ್ ಮತ್ತು ಕೃಷ್ಣ ಚಕ್ರವರ್ತಿ ಅವರು ಕಳೆದ ವಾರ ಕೋಲ್ಕತಾ ಮತ್ತು ಬಿಧಾನನಗರ ಮಹಾನಗರ ಪಾಲಿಕೆಗಳ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಸೋಮವಾರ, ಪ್ರಮುಖ ಅಲ್ಪಸಂಖ್ಯಾತ ಮುಖವಾಗಿರುವ ಹಕೀಮ್ ಬಂಡಾಯ ಗುಂಪನ್ನು ಸೇರಿಕೊಂಡಂತೆ ಕಂಡುಬಂದಿದ್ದಾರೆ.

ಈ ಮಧ್ಯೆ, ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ನಾಯಕ ಜಹಾಂಗೀರ್ ಖಾನ್ ಅವರನ್ನು ಸೋಮವಾರ ಭಾರತ-ನೇಪಾಳ ಗಡಿಯ ಬಳಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲವಾರು ಕ್ರಿಮಿನಲ್ ತನಿಖೆಗಳ ನಡುವೆ ಖಾನ್ ಕಳೆದ ಕೆಲವು ದಿನಗಳಿಂದ ಕಾನೂನು ಜಾರಿ ಸಂಸ್ಥೆಗಳ ಕಣ್ತಪ್ಪಿಸಿ ಓಡಾಡುತ್ತಿದ್ದರು ಎನ್ನಲಾಗಿದೆ.

ಅಭಿಷೇಕ್ ಬ್ಯಾನರ್ಜಿ ವಿರುದ್ಧ ಕಲ್ಯಾಣ್ ಬ್ಯಾನರ್ಜಿ ವಾಗ್ದಾಳಿ

"ನನ್ನನ್ನು ಇಲ್ಲವೇ ಅಭಿಷೇಕ್ ಬ್ಯಾನರ್ಜಿಯನ್ನು ಆರಿಸಿ" ಎಂದು TMC ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಇದು ಪಕ್ಷದಲ್ಲಿ ಪ್ರಸ್ತುತ ನಡೆಯುತ್ತಿರುವ ಬಿಕ್ಕಟ್ಟು ಮತ್ತು ಸಂಸದರ ಸಾಮೂಹಿಕ ರಾಜೀನಾಮೆ ಪರ್ವವನ್ನು ಮತ್ತಷ್ಟು ತೀವ್ರಗೊಳಿಸಿದೆ.

ಮಮತಾ ಅವರಿಗೆ ನಿಷ್ಠಾವಂತರಾಗಿರುವ ಕಲ್ಯಾಣ್ ಅವರು ಗುರುವಾರ ಮಮತಾ ಅವರ ಸೋದರಳಿಯ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಭಿಷೇಕ್ ಒಬ್ಬ "ಅಹಂಕಾರಿ" ಮತ್ತು "ಎಲ್ಲರೂ ತನಗಿಂತ ಕೆಳಗಿರುವವರು" ಎಂದು ಭಾವಿಸುವ ವ್ಯಕ್ತಿ ಎಂದು ಬ್ಯಾನರ್ಜಿ ಕಿಡಿಕಾರಿದ್ದಾರೆ.

ತಾವು ದೀದಿಯನ್ನು ಬೆಂಬಲಿಸುತ್ತೇವೆ, ಆದರೆ ಅವರ ಸೋದರಳಿಯನ ನಡವಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕಲ್ಯಾಣ್ ಹೇಳಿದ್ದಾರೆ. "ನಾನು ಈಗಲೂ ದೀದಿ ಜೊತೆಗಿದ್ದೇನೆ. ಆದರೆ ಅಭಿಷೇಕ್ ಬ್ಯಾನರ್ಜಿಯ ಅಹಂಕಾರವನ್ನು ಸಹಿಸುವುದಿಲ್ಲ. ಅಭಿಷೇಕ್‌ಗೆ ಸಂಬಂಧಿಸಿದ ಎಲ್ಲ ಕಾನೂನು ಪ್ರಕರಣಗಳಿಂದ ನಾನು ಹಿಂದೆ ಸರಿದಿದ್ದೇನೆ" ಎಂದು ಕಲ್ಯಾಣ್ ಬ್ಯಾನರ್ಜಿ ತಿಳಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಕಲ್ಯಾಣ್ ಬ್ಯಾನರ್ಜಿ ಅವರು ಬಂಡಾಯ ಸಂಸದರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರಾದರೂ, ಈಗ ಸ್ವತಃ ಅವರೇ ಟಿಎಂಸಿ ನಾಯಕಿಗೆ ನೀಡಿರುವ ಈ ಅಂತಿಮ ಎಚ್ಚರಿಕೆಯು ಪಕ್ಷದಲ್ಲಿ ಮತ್ತೊಂದು ಬಿರುಕು ಉಂಟಾಗುವ ವದಂತಿಗಳಿಗೆ ತುಪ್ಪ ಸುರಿದಿದೆ.

"ದೀದಿಗೆ ನನ್ನ ವಿನಂತಿ ಏನೆಂದರೆ, ನೀವು ಅಭಿಷೇಕ್ ಬ್ಯಾನರ್ಜಿ ಮೇಲೆಯೇ ಅವಲಂಬಿತರಾಗಿರಲು ಬಯಸಿದರೆ, ಅವರೊಂದಿಗೇ ಇರಿ ಮತ್ತು ನನ್ನನ್ನು ಬಿಟ್ಟುಬಿಡಿ. ಆದರೆ, ನೀವು ಅಭಿಷೇಕ್ ಬ್ಯಾನರ್ಜಿಯಿಂದ ದೂರ ಸರಿದರೆ, ನಾನು ನಿಮ್ಮೊಂದಿಗಿರುತ್ತೇನೆ. ಅವನು ನಮ್ಮ ಪಕ್ಷವನ್ನು ನಾಶಪಡಿಸಿದ್ದಾನೆ" ಎಂದು ಮಾಧ್ಯಮದವರ ಮುಂದೆ ಮಾತನಾಡಿದ ಕಲ್ಯಾಣ್ ಬ್ಯಾನರ್ಜಿ ಹೇಳಿದ್ದಾರೆ.

ಅಭಿಷೇಕ್ ಬ್ಯಾನರ್ಜಿ ಟಿಎಂಸಿಯ ಭಾಗವಾಗಿರುವವರೆಗೂ ಪಕ್ಷವು ಹೆಚ್ಚು ದಿನ ಉಳಿಯುವುದಿಲ್ಲ ಎಂದ ಅವರು, ತಾವು ಮಮತಾ ಅವರಿಗೆ ನಿಷ್ಠರಾಗಿ ಉಳಿಯುತ್ತೇವೆ ಎಂದಿದ್ದಾರೆ. ಆದರೆ ಭವಿಷ್ಯದಲ್ಲಿ ಯಾರೊಂದಿಗೆ ಮುನ್ನಡೆಯಬೇಕು ಎಂಬುದನ್ನು ಅವರೇ ಆಯ್ಕೆ ಮಾಡಿಕೊಳ್ಳಬೇಕು ಎಂದರು.

ಕಳೆದ ಕೆಲವು ವರ್ಷಗಳಲ್ಲಿ, ಅಭಿಷೇಕ್ ಅವರು ಪಕ್ಷದ ವ್ಯವಹಾರಗಳಲ್ಲಿ ತಮ್ಮ ಪಾತ್ರವನ್ನು ವಿಸ್ತರಿಸಿಕೊಂಡಿದ್ದಾರೆ, ಹಲವು ಚುನಾವಣಾ ಪ್ರಚಾರಗಳ ನೇತೃತ್ವ ವಹಿಸಿದ್ದಾರೆ ಮತ್ತು ಪಕ್ಷವನ್ನು ಆಧುನೀಕರಿಸಿದ್ದಾರೆ. ಆದರೆ, ಪಕ್ಷದಲ್ಲಿ ಅಸಮಾಧಾನಗೊಂಡಿರುವ ನಾಯಕರು ಅವರ ಮೇಲೆ ಭ್ರಷ್ಟಾಚಾರ, ಕಳಪೆ ಸಾಂಸ್ಥಿಕ ನಿರ್ವಹಣೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಅಲಭ್ಯರಾಗಿರುವ ಆರೋಪಗಳನ್ನು ಮಾಡಿದ್ದಾರೆ.

ಅಮಾನತುಗೊಂಡಿರುವ ಟಿಎಂಸಿ ನಾಯಕ ರಿಜು ದತ್ತಾ ಅವರು ಕೂಡ ಅಭಿಷೇಕ್ ಪಕ್ಷಕ್ಕೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಅವರು ನಾಯಕರಿಗೆ ಗೌರವ ನೀಡುತ್ತಿಲ್ಲ, ಸಂಘಟನೆಯನ್ನು ದುರ್ಬಲಗೊಳಿಸಿದ್ದಾರೆ ಮತ್ತು ಟಿಎಂಸಿ ಒಳಗಿನ ಪ್ರಮುಖ ನಾಯಕರ ನಿರ್ಗಮನ ಹಾಗೂ ಉಚ್ಚಾಟನೆಗಳಿಗೆ ಅವರೇ ಕಾರಣ ಎಂದು ಆರೋಪಿಸಿದ್ದಾರೆ.

ವಿಧಾನಸಭೆಯ ಪ್ರಮುಖ ಹುದ್ದೆಗಳಿಗಾಗಿ ಹಲವಾರು ಟಿಎಂಸಿ ನಾಯಕರ ಸಹಿಗಳನ್ನು ನಕಲು ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ಪಶ್ಚಿಮ ಬಂಗಾಳದ CID ಅಭಿಷೇಕ್ ಬ್ಯಾನರ್ಜಿ ವಿರುದ್ಧ ತನಿಖೆ ನಡೆಸುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆಗಳು ನಡೆದಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News