×
Ad

ಮಧ್ಯಪ್ರದೇಶದಿಂದ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್ ಅವರ ರಾಜ್ಯಸಭಾ ನಾಮಪತ್ರ ತಿರಸ್ಕೃತಗೊಂಡಿದ್ದು ಏಕೆ?

Update: 2026-06-11 22:26 IST

 ಮೀನಾಕ್ಷಿ ನಟರಾಜನ್ | Photo Credit : PTI  

ರಾಜ್ಯಸಭಾ ಚುನಾವಣೆಗೆ ಮುನ್ನ ಮಂಗಳವಾರ (ಜೂ 9) ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್ ಅವರ ಉಮೇದುವಾರಿಕೆ ತಿರಸ್ಕೃತಗೊಂಡಿರುವುದು ಕಾಂಗ್ರೆಸ್ ಪಕ್ಷದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಿರ್ಧಾರವನ್ನು ಪ್ರತಿಭಟಿಸಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಅವರು ಹೊಸದಿಲ್ಲಿಯಲ್ಲಿ ಚುನಾವಣಾ ಆಯೋಗದ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.

ಒಟ್ಟು 24 ಸ್ಥಾನಗಳಿಗೆ ನಡೆಯುತ್ತಿರುವ ಈ ಬಾರಿಯ ರಾಜ್ಯಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶದ ಮೂರು ಸ್ಥಾನಗಳೂ ಸೇರಿವೆ. ಹಿರಿಯ ಕಾಂಗ್ರೆಸ್ ನಾಯಕಿ ಮತ್ತು ಮಾಜಿ ಲೋಕಸಭಾ ಸಂಸದೆಯಾಗಿರುವ ಮೀನಾಕ್ಷಿ ನಟರಾಜನ್ ಅವರನ್ನು ಕಾಂಗ್ರೆಸ್ ಪಕ್ಷವು ಮಧ್ಯಪ್ರದೇಶದಿಂದ ಕಣಕ್ಕಿಳಿಸಿತ್ತು. ತಮ್ಮದೇ ಪಕ್ಷದ ಶಾಸಕರಿಂದ ಯಾವುದೇ ರೀತಿಯ ಕ್ರಾಸ್ ವೋಟಿಂಗ್ ನಡೆಯದಂತೆ ತಡೆದು, ಅವರ ಆಯ್ಕೆ ಸುಗಮವಾಗುವಂತೆ ನೋಡಿಕೊಳ್ಳಲು ಕಾಂಗ್ರೆಸ್ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿತ್ತು.

ಆದರೆ, ಮಂಗಳವಾರ ನಡೆದ ನಾಮಪತ್ರಗಳ ಪರಿಶೀಲನೆ ವೇಳೆ ಸಂಬಂಧಪಟ್ಟ ಚುನಾವಣಾಧಿಕಾರಿ ಅವರ ಉಮೇದುವಾರಿಕೆಯನ್ನು ತಿರಸ್ಕರಿಸಿದ್ದಾರೆ. ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕೃತಗೊಳ್ಳಲು ಕಾರಣಗಳೇನು? ಸಂಸತ್ತಿನ ಮೇಲ್ಮನೆಗೆ ಸ್ಪರ್ಧಿಸುವ ವ್ಯಕ್ತಿಯ ಉಮೇದುವಾರಿಕೆಯನ್ನು ಅನರ್ಹಗೊಳಿಸಲು ಇರುವ ನಿಯಮಗಳೇನು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಮೀನಾಕ್ಷಿ ಅವರ ರಾಜಕೀಯ ಹಿನ್ನೆಲೆ

ಮೀನಾಕ್ಷಿ ನಟರಾಜನ್ ಅವರು ಯೂತ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆಯಾಗಿದ್ದು, ಮಧ್ಯಪ್ರದೇಶದ ಮಂದಸೌರ್ ಲೋಕಸಭಾ ಕ್ಷೇತ್ರದಿಂದ (2009–14) ಸಂಸದೆಯಾಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್‌ ನ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿರುವ ಇವರು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.

ನಟರಾಜನ್ ಅವರ ಉಮೇದುವಾರಿಕೆಯು ಕಾಂಗ್ರೆಸ್ ಪಕ್ಷದೊಳಗೆಯೇ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ರಾಜ್ಯ ಘಟಕದ ಹಿರಿಯ ನಾಯಕ ನರೇಶ್ ಗ್ಯಾನ್‌ಚಂದಾನಿ ಅವರು ಪಕ್ಷದ ನಿರ್ಧಾರವನ್ನು ಬಹಿರಂಗವಾಗಿ ಪ್ರಶ್ನಿಸಿದ್ದರಲ್ಲದೆ, ಕಾಂಗ್ರೆಸ್ ಶಾಸಕರಿಂದ ಕ್ರಾಸ್ ವೋಟಿಂಗ್ ನಡೆಯುವ ಸಾಧ್ಯತೆಯನ್ನೂ ವ್ಯಕ್ತಪಡಿಸಿದ್ದರು. ಇದಾದ ಬೆನ್ನಲ್ಲೇ ಅವರು ಸೋಮವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.

ಮತ್ತೊಂದೆಡೆ, ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಕೊಠಾರಿ ಅವರು ಚುನಾವಣಾಧಿಕಾರಿಗೆ ಮೀನಾಕ್ಷಿ ನಟರಾಜನ್ ಅವರ ಉಮೇದುವಾರಿಕೆಯ ವಿರುದ್ಧ ಆಕ್ಷೇಪಣೆ ಸಲ್ಲಿಸಿದರು. ನಾಮಪತ್ರದ ಜೊತೆಗೆ ಸಲ್ಲಿಸಿದ ಅಫಿಡವಿಟ್‌ ನಲ್ಲಿ ತಮ್ಮ ಮೇಲಿರುವ ಪ್ರಕರಣವೊಂದರ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಲು ಮೀನಾಕ್ಷಿ ಅವರು ವಿಫಲರಾಗಿದ್ದಾರೆ ಎಂದು ಕೊಠಾರಿ ಆರೋಪಿಸಿದ್ದರು. ಹೈದರಾಬಾದ್ ನ್ಯಾಯಾಲಯದಲ್ಲಿ ವಿವಿಧ ವ್ಯಕ್ತಿಗಳ ವಿರುದ್ಧ ಬಾಕಿ ಇರುವ ಖಾಸಗಿ ದೂರಿಗೆ ಸಂಬಂಧಿಸಿದಂತೆ ಕೊಠಾರಿ ಈ ಆಕ್ಷೇಪ ಎತ್ತಿದ್ದರು.

ಏನಿದು ಪ್ರಕರಣ?

ನಟರಾಜನ್ ಅವರ ನಾಮಪತ್ರದ ಮೇಲಿನ ಆಕ್ಷೇಪಣೆಯು ಹಿಂದಿನ ಪ್ರಕರಣವೊಂದಕ್ಕೆ ಸಂಬಂಧಿಸಿದ್ದಾಗಿದೆ. 2022ರಲ್ಲಿ ತೆಲಂಗಾಣದಲ್ಲಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವೊಂದು ಇದಕ್ಕೆ ಮೂಲ ಕಾರಣ. ಹಿರಿಯ ಕಾಂಗ್ರೆಸ್ ರಾಜಕಾರಣಿಯೊಬ್ಬರ ಮಾಜಿ ಸಹವರ್ತಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಈ ಪ್ರಕರಣ ದಾಖಲಾಗಿತ್ತು. ಹಲವಾರು ತಿಂಗಳುಗಳ ವೈಯಕ್ತಿಕ ಸಂಬಂಧದ ಅವಧಿಯಲ್ಲಿ ತಮ್ಮನ್ನು ನಿರಂತರ ನಿಂದನೆ, ದಬ್ಬಾಳಿಕೆ, ಬೆದರಿಕೆ ಮತ್ತು ಶೋಷಣೆಗೆ ಒಳಪಡಿಸಲಾಗಿದೆ ಎಂದು ಮಹಿಳೆ ದೂರು ನೀಡಿದ್ದರು. ಈ ಪ್ರಕರಣವು ಪ್ರಸ್ತುತ ಆರೋಪಗಳ ಪರಿಶೀಲನೆಯ ಹಂತದಲ್ಲಿದೆ.

2022ರಲ್ಲಿ ದಾಖಲಾಗಿದ್ದ ಮೂಲ ಕ್ರಿಮಿನಲ್ ಪ್ರಕರಣದಲ್ಲಿ ಮೀನಾಕ್ಷಿ ನಟರಾಜನ್ ಅವರ ಹೆಸರು ಇರಲಿಲ್ಲ. ಆದರೆ 2025ರ ಆಗಸ್ಟ್‌ನಲ್ಲಿ ಅದೇ ಮಹಿಳೆ ಹೈದರಾಬಾದ್ ನ್ಯಾಯಾಲಯದಲ್ಲಿ ಸಲ್ಲಿಸಿದ ಪ್ರತ್ಯೇಕ ಖಾಸಗಿ ದೂರಿನಲ್ಲಿ ಅವರನ್ನು ಆರೋಪಿಯನ್ನಾಗಿ ಹೆಸರಿಸಲಾಗಿದೆ. ಈ ವಿವಾದದ ಹಿನ್ನೆಲೆಯಾಗಿರುವ ಕ್ರಿಮಿನಲ್ ಪ್ರಕರಣಗಳಿಗಿಂತ ಭಿನ್ನವಾಗಿ, ಈ ಖಾಸಗಿ ದೂರು ಕೇವಲ ಮುಖ್ಯ ಆರೋಪಿಯ ವಿರುದ್ಧ ಮಾತ್ರವಲ್ಲದೆ, ಕಾಂಗ್ರೆಸ್‌ ನ ಹಲವಾರು ಪದಾಧಿಕಾರಿಗಳು, ಶಾಸಕರು ಮತ್ತು ಕಾರ್ಯಕರ್ತರ ವಿರುದ್ಧವೂ ಇದೆ. ನಿರಂತರ ದೂರುಗಳು ಮತ್ತು ಕಾನೂನು ಪ್ರಕ್ರಿಯೆಗಳು ನಡೆಯುತ್ತಿದ್ದರೂ, ಈ ನಾಯಕರು ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ದೂರುದಾರೆ ಆರೋಪಿಸಿದ್ದಾರೆ.

ಈ ದೂರು ದಾಖಲಾಗುವ ಹೊತ್ತಿಗೆ ಮೀನಾಕ್ಷಿ ಅವರು ಕಾಂಗ್ರೆಸ್‌ನ ತೆಲಂಗಾಣ ಉಸ್ತುವಾರಿಯಾಗಿದ್ದರು. ತಾವು ವೈಯಕ್ತಿಕವಾಗಿ ಮೀನಾಕ್ಷಿ ನಟರಾಜನ್ ಅವರ ಗಮನಕ್ಕೆ ಈ ವಿಷಯವನ್ನು ತಂದಿದ್ದು, ಪ್ರಮುಖ ಆರೋಪಿಯ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಕೋರಿದ್ದೆವು ಎಂದು ದೂರುದಾರೆ ಹೇಳಿದ್ದಾರೆ.

ಅರ್ಜಿಯ ಪ್ರಕಾರ, ಆರೋಪಿಯನ್ನು ಈಗಾಗಲೇ ಪಕ್ಷದಿಂದ ಅಮಾನತುಗೊಳಿಸಲಾಗಿದೆ ಎಂದು ಮೀನಾಕ್ಷಿ ಅವರು ತಮಗೆ ತಿಳಿಸಿದ್ದರು. "ಆದರೆ ಅಮಾನತು ಪತ್ರವನ್ನು ಕೇಳಿದಾಗ, ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ" ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಆರೋಪವೇ ಅಂತಿಮವಾಗಿ ಖಾಸಗಿ ದೂರಿನಲ್ಲಿ ಮೀನಾಕ್ಷಿ ಅವರನ್ನು ಆರೋಪಿಯನ್ನಾಗಿ ಹೆಸರಿಸಲು ಕಾರಣವಾಯಿತು.

ಮುಖ್ಯ ಆರೋಪಿಯ ವಿರುದ್ಧ ಹೊರಿಸಲಾಗಿರುವ ಯಾವುದೇ ಕ್ರಿಮಿನಲ್ ಕೃತ್ಯಗಳಲ್ಲಿ ಮೀನಾಕ್ಷಿ ನಟರಾಜನ್ ಭಾಗಿಯಾಗಿದ್ದಾರೆ ಎಂದು ಈ ಅರ್ಜಿ ಆರೋಪಿಸುವುದಿಲ್ಲ. ಬದಲಿಗೆ, ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿಗಳ ವಿರುದ್ಧ ಸಾಂಸ್ಥಿಕವಾಗಿ ಯಾವುದೇ ಕ್ರಮ ಕೈಗೊಳ್ಳದಿರುವುದು ಮತ್ತು ಅವರಿಗೆ ರಾಜಕೀಯವಾಗಿ ಸತತವಾಗಿ ಮನ್ನಣೆ ನೀಡುತ್ತಿರುವುದಕ್ಕೆ ಮೀನಾಕ್ಷಿ ಅವರೇ ಹೊಣೆಗಾರರು ಎಂದು ದೂರುದಾರೆ ಆರೋಪಿಸಿದ್ದಾರೆ.

ಕಾನೂನು ಹೋರಾಟ ಮತ್ತು ಚುನಾವಣಾಧಿಕಾರಿಯ ನಿರ್ಧಾರ

ಈ ವಿಷಯ ಹೈದರಾಬಾದ್ ನ್ಯಾಯಾಲಯದ ಮುಂದೆ ಬಂದಾಗ, ಮೀನಾಕ್ಷಿ ನಟರಾಜನ್ ಅವರು 2025ರ ಅಕ್ಟೋಬರ್ 24ರಂದು ವಿವರವಾದ ಉತ್ತರವನ್ನು ದಾಖಲಿಸಿದ್ದರು. ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿ ಆರೋಪಗಳನ್ನು ನಿರಾಕರಿಸಿದ ಅವರು, ತಮಗೆ ಯಾವುದೇ ನೇರ ಪಾತ್ರವಿಲ್ಲದ ವಿವಾದಕ್ಕೆ ತಮ್ಮನ್ನು ಅನಗತ್ಯವಾಗಿ ಎಳೆದು ತರಲಾಗಿದೆ ಎಂದು ವಾದಿಸಿದ್ದರು.

ಕಾಂಗ್ರೆಸ್ ಕೂಡ ಇದು ಕ್ರಿಮಿನಲ್ ಪ್ರಕರಣವಲ್ಲ ಎಂದು ಸಮರ್ಥಿಸಿಕೊಂಡಿದೆ. ಕಾಂಗ್ರೆಸ್‌ನ ರಾಜ್ಯಸಭಾ ಸಂಸದ ಹಾಗೂ ಹಿರಿಯ ವಕೀಲ ವಿವೇಕ್ ತಂಖಾ ಅವರು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿ, ಕೇವಲ ಕಾನೂನು ನೋಟಿಸ್ ಮಾತ್ರ ಬಂದಿದ್ದು, ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಎಂದು ಹೇಳಿದ್ದಾರೆ.

ಆದರೂ, ಚುನಾವಣಾಧಿಕಾರಿ ಅರವಿಂದ್ ಶರ್ಮಾ ಅವರು ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ತಿರಸ್ಕರಿಸಿದ್ದಾರೆ. ತಮ್ಮ ಆದೇಶದಲ್ಲಿ ಅವರು, "ಮೀನಾಕ್ಷಿ ನಟರಾಜನ್ ಅವರು ಫಾರ್ಮ್ 26ರಲ್ಲಿ ಅಪೂರ್ಣ ಪ್ರಮಾಣಪತ್ರವನ್ನು ಸಲ್ಲಿಸಿದ್ದಾರೆ ಮತ್ತು ನ್ಯಾಯಾಲಯದ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಸಂಗತಿಗಳನ್ನು ಮರೆಮಾಚಿದ್ದಾರೆ" ಎಂದು ದಾಖಲಿಸಿದ್ದಾರೆ. ಇದರಿಂದ ಮತದಾರರಿಂದ ಅಭ್ಯರ್ಥಿಯ ಸಂಪೂರ್ಣ ಮಾಹಿತಿಯನ್ನು ಮುಚ್ಚಿಟ್ಟಂತಾಗುತ್ತದೆ. ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸುವ ಬದಲು ಅಪೂರ್ಣ ಮಾಹಿತಿಯನ್ನು ಪ್ರಸ್ತುತಪಡಿಸಲಾಗಿದೆ ಎಂಬುದು ಸಾಬೀತಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ರಾಜ್ಯಸಭಾ ಉಮೇದುವಾರಿಕೆಯ ಅನರ್ಹತೆಗೆ ಕಾರಣಗಳು

ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿರುವ ದಾಖಲೆಗಳ ಪ್ರಕಾರ, ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳಿಗೆ (ಜಮ್ಮು ಮತ್ತು ಕಾಶ್ಮೀರ ಹೊರತುಪಡಿಸಿ) ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಫಾರ್ಮ್ 26ರ ಅಫಿಡವಿಟ್ ಸಲ್ಲಿಸಬೇಕಾಗುತ್ತದೆ.

ಈ ಅಫಿಡವಿಟ್‌ನಲ್ಲಿ ಅಭ್ಯರ್ಥಿಯ ಕ್ರಿಮಿನಲ್ ಹಿನ್ನೆಲೆ (ಯಾವುದಾದರೂ ಇದ್ದಲ್ಲಿ, ಶಿಕ್ಷೆಯಾದ ಪ್ರಕರಣಗಳು ಮತ್ತು ಬಾಕಿ ಇರುವ ಎಲ್ಲಾ ಪ್ರಕರಣಗಳು), ಪ್ಯಾನ್ ವಿವರಗಳು ಮತ್ತು ಅಭ್ಯರ್ಥಿ, ಅವರ ಸಂಗಾತಿ ಹಾಗೂ ಅವಲಂಬಿತರ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯ ಸ್ಥಿತಿಗತಿ, ಅಭ್ಯರ್ಥಿ, ಸಂಗಾತಿ ಮತ್ತು ಎಲ್ಲಾ ಅವಲಂಬಿತರ ಆಸ್ತಿ (ಚರ ಮತ್ತು ಸ್ಥಿರ ಆಸ್ತಿಗಳು ಸೇರಿದಂತೆ) ಹಾಗೂ ಸರ್ಕಾರ ಮತ್ತು ಸಾರ್ವಜನಿಕ ಹಣಕಾಸು ಸಂಸ್ಥೆಗಳಿಗೆ ಪಾವತಿಸಬೇಕಾದ ಸಾಲಗಳು ಅಥವಾ ಬಾಕಿಗಳ ವಿವರಗಳು, ಅಭ್ಯರ್ಥಿ ಮತ್ತು ಸಂಗಾತಿಯ ವೃತ್ತಿ ಅಥವಾ ಉದ್ಯೋಗದ ವಿವರಗಳು ಮತ್ತು ಅಭ್ಯರ್ಥಿಯ ಗರಿಷ್ಠ ಶೈಕ್ಷಣಿಕ ಅರ್ಹತೆಯ ವಿವರಗಳನ್ನು ಒಳಗೊಂಡಿರಬೇಕಾಗುತ್ತದೆ.

ರಾಜ್ಯಸಭಾ ನಾಮಪತ್ರ ತಿರಸ್ಕಾರ ಪ್ರಕರಣ: ಜೂನ್ 12 ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ

ಮಧ್ಯಪ್ರದೇಶದಿಂದ ರಾಜ್ಯಸಭಾ ಚುನಾವಣೆಗೆ ಸಲ್ಲಿಕೆಯಾಗಿದ್ದ ತಮ್ಮ ನಾಮಪತ್ರ ತಿರಸ್ಕೃತಗೊಂಡಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ (ಜೂನ್ 12) ಕೈಗೆತ್ತಿಕೊಳ್ಳಲಿದೆ. ಚುನಾವಣಾ ಪ್ರಕ್ರಿಯೆ ನಡೆಯುತ್ತಿರುವ ಮಧ್ಯದಲ್ಲೇ ಈ ಅರ್ಜಿಯನ್ನು ಹೇಗೆ ಪುರಸ್ಕರಿಸಲು ಸಾಧ್ಯ ಎಂದು ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಅತುಲ್ ಎಸ್. ಚಂದೂರ್ಕರ್ ಅವರನ್ನೊಳಗೊಂಡ ಪೀಠವು ಪ್ರಶ್ನಿಸಿದೆ.

ಇಂದು (ಜೂನ್ 11) ಮೀನಾಕ್ಷಿ ನಟರಾಜನ್ ಪರ ಹಾಜರಾಗಿದ್ದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರು, ಪ್ರಜಾಪ್ರತಿನಿಧಿ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣವೊಂದನ್ನು ಮುಚ್ಚಿಡಲಾಗಿದೆ ಎಂಬ ಕಾರಣ ನೀಡಿ ಚುನಾವಣಾಧಿಕಾರಿಗಳು ನಾಮಪತ್ರವನ್ನು ತಪ್ಪು ಆಧಾರದ ಮೇಲೆ ತಿರಸ್ಕರಿಸಿದ್ದಾರೆ ಎಂದು ವಾದಿಸಿದರು. ಈ ಹಿನ್ನೆಲೆಯಲ್ಲಿ ಪಟ್ಟಿಯಲ್ಲಿಲ್ಲದ ಈ ಅರ್ಜಿಯ ತುರ್ತು ವಿಚಾರಣೆಯನ್ನು ಪರಿಗಣಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು.

ಮಧ್ಯಪ್ರದೇಶ ವಿಧಾನಸಭೆಯ ಅಧಿಕಾರಿಯೊಬ್ಬರ ಪ್ರಕಾರ, ಆಡಳಿತಾರೂಢ ಬಿಜೆಪಿ ಅಭ್ಯರ್ಥಿ ಮಹೇಶ್ ಕೇಹರ್ಟ್ ಅವರು ಚುನಾವಣಾಧಿಕಾರಿಗೆ ದೂರು ನೀಡಿದ್ದು, ತೆಲಂಗಾಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಮೀನಾಕ್ಷಿ ನಟರಾಜನ್ ಅವರು ಪ್ರಮಾಣಪತ್ರದಲ್ಲಿ ಉಲ್ಲೇಖಿಸಿಲ್ಲ ಎಂದು ಆರೋಪಿಸಿದ್ದರು.

"ಕನಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾದ ಕ್ರಿಮಿನಲ್ ಪ್ರಕರಣಗಳನ್ನು ಮಾತ್ರ ಅಭ್ಯರ್ಥಿಯು ಬಹಿರಂಗಪಡಿಸಬೇಕಾಗುತ್ತದೆ. ಆದರೆ ಪ್ರಸ್ತುತ ಪ್ರಕರಣದಲ್ಲಿ ಕೇವಲ ಸಮನ್ಸ್ ಮಾತ್ರ ಜಾರಿಯಾಗಿದೆ" ಎಂದು ಸಿಂಘ್ವಿ ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಮಿಶ್ರಾ, "ಇದು ಕಾನೂನುಬದ್ಧವಾಗಿ ಪುರಸ್ಕರಿಸಲು ಅರ್ಹವಾಗಿದೆಯೇ?" ಎಂದು ಪ್ರಶ್ನಿಸಿದರಲ್ಲದೆ, ಇದಕ್ಕೆ ಸೂಕ್ತ ಮಾರ್ಗವೆಂದರೆ ಚುನಾವಣಾ ಅರ್ಜಿ ಸಲ್ಲಿಸುವುದಾಗಿದೆ ಎಂದು ಅಭಿಪ್ರಾಯಪಟ್ಟರು.

ಚುನಾವಣಾ ಆಯೋಗದ ಪರ ಹಾಜರಾಗಿದ್ದ ಹಿರಿಯ ವಕೀಲ ಡಿ. ಎಸ್. ನಾಯ್ಡು ಅವರು ಅರ್ಜಿಯ ತುರ್ತು ಪ್ರಸ್ತಾಪವನ್ನು ವಿರೋಧಿಸಿದರು ಮತ್ತು ಅರ್ಜಿಯ ಪ್ರತಿಯನ್ನು ಚುನಾವಣಾ ಆಯೋಗಕ್ಕೆ ತಲುಪಿಸಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

"ನ್ಯೂನತೆಗಳನ್ನು ಸರಿಪಡಿಸುವುದಕ್ಕೆ ಸಂಬಂಧಿಸಿದಂತೆ ಈ ಅರ್ಜಿಯನ್ನು ನಾಳೆ ವಿಚಾರಣೆ ಮಾಡಲಾಗುವುದು" ಎಂದು ಪೀಠ ಹೇಳಿದೆ.

ಮಧ್ಯಪ್ರದೇಶದ ಮೂರು ರಾಜ್ಯಸಭಾ ಸ್ಥಾನಗಳಿಗೆ ಜೂನ್ 18ರಂದು ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಜೂನ್ 8 ಕೊನೆಯ ದಿನವಾಗಿತ್ತು. ಮಂಗಳವಾರದಿಂದ ನಾಮಪತ್ರಗಳ ಪರಿಶೀಲನೆ ಆರಂಭವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News