ಯಾದಗಿರಿ | ಸ್ಮಶಾನದಲ್ಲಿ ಜನುಮ ದಿನ ಆಚರಿಸಿ ಮೂಢ ನಂಬಿಕೆ ವಿರುದ್ಧ ಜಾಗೃತಿ ಮೂಡಿಸಿದ ಕಾಂಗ್ರೆಸ್ ಮುಖಂಡ
ಯಾದಗಿರಿ: ಪ್ರತಿಯೊಬ್ಬರು ಮೂಢ ನಂಬಿಕೆಗಳ ಬಗ್ಗೆ ಜಾಗೃತಿ ಹೊಂದಿದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದು ಕಾಂಗ್ರೆಸ್ ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ ದೊರೆ ಆಲ್ದಾಳ ತಿಳಿಸಿದರು.
ಬೆಂಗಳೂರಿನ ಶ್ರೀರಾಮಪುರದ ಹರಿಶ್ಚಂದ್ರ ಘಾಟ್ (ಸ್ಮಶಾನದಲ್ಲಿ) ತನ್ನ ಜನುಮ ದಿನವನ್ನು ಆಚರಿಸಿಕೊಂಡು ಮಾತನಾಡಿದ ರಮೇಶ ದೊರೆ ಆಲ್ದಾಳ, ನಮ್ಮ ನಾಯಕರಾದ ಸತೀಶ ಜಾರಕಿಹೊಳಿ ಅವರು ಮಾನವ ಬಂಧುತ್ವ ವೇದಿಕೆ ಮೂಲಕ ಮೂಢನಂಬಿಕೆಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲು ಪ್ರೇರಣೆಯಾಗಿದ್ದಾರೆ. ಅದರಂತೆ ಕಳೆದ ಅನೇಕ ವರ್ಷಗಳಿಂದ ನನ್ನ ಜನುಮ ದಿನವನ್ನು ಸ್ಮಶಾನಗಳಲ್ಲಿಯೇ ಆಚರಣೆ ಮಾಡಿಕೊಂಡು ಜನರಲ್ಲಿ ಜಾಗೃತಿ ಮೂಢಿಸುವ ಕಾರ್ಯವನ್ನು ಮಾಡುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ವಿಜಯಕುಮಾರ ನಾಯಕ್,ರಮೇಶ ದೊರೆ ಅವರು ತಮ್ಮ ಜನುಮ ದಿನವನ್ನು ಇಂದು ಹರಿಶ್ಚಂದ್ರ ಘಾಟ್‌ನಲ್ಲಿ ಆಚರಣೆ ಮಾಡಿಕೊಳ್ಳುವ ಮೂಲಕ ಎಲ್ಲರಲ್ಲಿ ಸ್ಮಶಾನ ಎಂದರೆ ದೆವ್ವ ಭೂತಗಳಿರುತ್ತವೆ ಎಂಬ ನಂಬಿಕೆಯನ್ನು ದೂರಗೊಳಿಸುವ ಕಾರ್ಯ ಮಾಡಿರುವುದು ತುಂಬಾ ಹೆಮ್ಮೆ ಮೂಡಿಸಿದೆ ಎಂದರು.
ಈ ವೇಳೆ ಠಾಣೆ ಚಿತ್ರದ ನಟ ಪ್ರವೀಣ್, ಮುಖಂಡರಾದ ಶಶಿಕುಮಾರ್, ಸುಭಾಷ್ ದೊರೆ, ಗೋಪಾಲ ವಿಶ್ವಕರ್ಮ ಅವರು ರಮೇಶ ದೊರೆ ಅವರನ್ನು ಸನ್ಮಾನಿಸಿ ಜನುಮ ದಿನಕ್ಕೆ ಶುಭ ಹಾರೈಸಿದರು.