ಸೆ.7ರ ಯಾದಗಿರಿ ಬಂದ್‌ಗೆ ದಲಿತ ಸಂಘರ್ಷ ಸಮಿತಿ ಬೆಂಬಲ
ನಾಲ್ಕು ಕ್ಷೇತ್ರಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹ
ಯಾದಗಿರಿ: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸುವಂತೆ ಒತ್ತಾಯಿಸಿ ಸೆಪ್ಟೆಂಬರ್ 7ರಂದು ಹಮ್ಮಿಕೊಂಡಿರುವ ಯಾದಗಿರಿ ಬಂದ್‌ಗೆ ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್) ಜಿಲ್ಲಾ ಸಮಿತಿ ಬೆಂಬಲ ಘೋಷಿಸಿದೆ.
ಈ ಕುರಿತು ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಮರೆಪ್ಪ ಚಟ್ಟೆರಕರ್ ಮಾತನಾಡಿ, ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಸರ್ಕಾರ ಕೂಡಲೇ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿ, ರೈತರಿಗೆ ಅಗತ್ಯ ಪರಿಹಾರ ಮತ್ತು ನೆರವು ಒದಗಿಸಬೇಕು ಎಂದು ಆಗ್ರಹಿಸಿದರು.
ಬರ ಪರಿಸ್ಥಿತಿಯಿಂದ ರೈತರು ಹಾಗೂ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ತಕ್ಷಣವೇ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಯಾದಗಿರಿ ಬಂದ್‌ಗೆ ಗೋಪಾಲ ತೆಳಿಗೇರಿ, ಭೀಮರಾಯ ಹೊಸಮನಿ, ಪರಶುರಾಮ ಒಡೆಯರ್, ಶಿವಕುಮಾರ ಕುರುಕುಂಬಳಕರ್, ಸೈದಪ್ಪ ಕೂಲೂರು, ಮಲ್ಲು ಜೀನಕೇರಿ, ಲಾಲಪ್ಪ ತಲಾರಿ ಸೇರಿದಂತೆ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಸಾರ್ವಜನಿಕರು, ರೈತರು ಹಾಗೂ ವಿವಿಧ ಸಂಘಟನೆಗಳು ಬಂದ್‌ಗೆ ಸಹಕರಿಸುವಂತೆ ಡಿಎಸ್‌ಎಸ್ ಮುಖಂಡರು ಮನವಿ ಮಾಡಿದ್ದಾರೆ.