Yadgiri | ಯರಗೋಳ ಗ್ರಾಮದಲ್ಲಿ ಮೂಲಸೌಕರ್ಯ ಕೊರತೆ; ತಮಟೆ ಬಾರಿಸಿ ಉಮೇಶ್ ಮುದ್ನಾಳ್ ನೇತೃತ್ವದಲ್ಲಿ ಪ್ರತಿಭಟನೆ
ಯಾದಗಿರಿ: ತಾಲೂಕಿನ ಯರಗೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯರಗೋಳ ಗ್ರಾಮದ ವಾರ್ಡ್ ನಂ. 2ರಲ್ಲಿ ಶುದ್ಧ ಕುಡಿಯುವ ನೀರು, ಸಿಸಿ ರಸ್ತೆ ಹಾಗೂ ಚರಂಡಿ ಸೇರಿದಂತೆ ಮೂಲಸೌಕರ್ಯಗಳ ಕೊರತೆಯಿಂದ ಗ್ರಾಮಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ್ ಆರೋಪಿಸಿದ್ದಾರೆ.
ಶನಿವಾರ ಬೆಳಿಗ್ಗೆ ಗ್ರಾಮಕ್ಕೆ ಭೇಟಿ ನೀಡಿದ ಉಮೇಶ್ ಮುದ್ನಾಳ್, ವಾರ್ಡ್ ನಂ. 2ರಲ್ಲಿ ಕಾಲ್ನಡಿಗೆ ಸಂಚಾರ ನಡೆಸಿ ತಮಟೆ ಬಾರಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಕಲುಷಿತ ನೀರು ತಗ್ಗು ಗುಂಡಿಗಳಲ್ಲಿ ನಿಂತು ದುರ್ವಾಸನೆ ಬೀರುತ್ತಿದ್ದು, ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ ಎಂದು ಹೇಳಿದರು.
ಗ್ರಾಮದಲ್ಲಿ ಸಿಸಿ ರಸ್ತೆ, ಶುದ್ಧ ಕುಡಿಯುವ ನೀರಿನ ಪೈಪ್‌ಲೈನ್, ಮಹಿಳೆಯರ ಶೌಚಾಲಯ ಹಾಗೂ ಬೀದಿ ದೀಪಗಳ ಸಮರ್ಪಕ ವ್ಯವಸ್ಥೆ ಇಲ್ಲ. ಯರಗೋಳ ಬೈಪಾಸ್‌ನಿಂದ ರೈಲ್ವೆ ಸೇತುವೆವರೆಗೆ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಜಾಲಿ ಕಂಟಿಗಳು ಬೆಳೆದಿರುವುದರಿಂದ ರೈತರು ಜಮೀನುಗಳಿಗೆ ತೆರಳಲು ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.
ಕಲುಷಿತ ನೀರು ಮತ್ತು ಸೊಳ್ಳೆಗಳ ಹಾವಳಿಯಿಂದ ಜನರು ಹಾಗೂ ಜಾನುವಾರುಗಳು ತತ್ತರಿಸಿದ್ದು, ಮಕ್ಕಳು ಸಹ ಭಯದ ವಾತಾವರಣದಲ್ಲಿ ಓಡಾಡುವಂತಾಗಿದೆ. ಗ್ರಾಮಾಭಿವೃದ್ಧಿಗೆ ಬಿಡುಗಡೆಯಾದ ಅನುದಾನ ಸಮರ್ಪಕವಾಗಿ ಬಳಕೆಯಾಗಿಲ್ಲ ಎಂದು ಅವರು ಆರೋಪಿಸಿದರು.
ಒಂದು ವಾರದೊಳಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಹರಿಸದಿದ್ದರೆ ಯಾದಗಿರಿ–ಕಲಬುರಗಿ ಮುಖ್ಯರಸ್ತೆಯ ನಿಜಶರಣ ಅಂಬಿಗರ ಚೌಡಯ್ಯ ವೃತ್ತದಲ್ಲಿ ಭಾರಕೋಲ ಹಿಡಿದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಉಮೇಶ್ ಕೆ. ಮುದ್ನಾಳ್ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಭೀಮಾಶಂಕರ, ಮಲ್ಲೇಶಿ, ಸೂರ್ಯಕಾಂತ, ಶರಣಪ್ಪ, ಚಂದ್ರಪ್ಪ, ಸಾಬಣ್ಣ, ಶರಣಪ್ಪ, ಬಸವರಾಜ, ಈಶಪ್ಪ, ದೇವಪ್ಪ, ನೀಲಕಂಠ, ಭೀಮಾ, ಲಕ್ಷ್ಮಣ, ಮೌನೇಶ, ಅಶೋಕ,. ರೇಡ್ಡೆಪ್ಪ, ಮಲ್ಲಪ್ಪ, ಕಲ್ಲಪ್ಪ, ಕರ್ಣಪ್ಪ, ಮಹಾದೇವಪ್ಪ, ರಾಮಪ್ಪ, ಸೂರ್ಯ, ಮೋನಮ್ಮ, ನಿಂಗಮ್ಮ, ಮಲ್ಲಮ್ಮ, ಚಂದ್ರಮ್ಮ, ಬಸಮ್ಮ, ಸಾಬವ್ವ, ಮಹಾದೇವಿ, ಮಶೆಮ್ಮ, ಈಶಮ್ಮ, ಶರಣಮ್ಮ, ಭೀಮವ್ವ, ಕಾಂತಮ್ಮ, ಈರಮ್ಮ, ವಿಜ್ಜಮ್ಮ, ಗಂಗಮ್ಮ, ರೇಣಮ್ಮ, ಮರಮ್ಮ, ಸಾಬವ್ವ, ಗೌರಮ್ಮ, ಶೀವಲೀಲಾ, ಸೇರಿದಂತೆ ಅನೇಕ ಗ್ರಾಮದ ಮುಖಂಡರು ಯುವಕರು ಈ ವಿನೂತನ ಪ್ರತಿಭಟನೆಯಲ್ಲಿ ಭಾಗವಹಿಸಿದರು .