×
Ad

ಯಾದಗಿರಿ ನಗರದಲ್ಲಿ ಮೂಲಸೌಕರ್ಯ ಸುಧಾರಣೆಗೆ ಡಿಸಿ ರಾಹುಲ್ ಪಾಂಡ್ವೆ ಕಟ್ಟುನಿಟ್ಟಿನ ಸೂಚನೆ

Update: 2026-06-24 19:24 IST

ಯಾದಗಿರಿ: ನಗರದ ನಾಗರಿಕರಿಗೆ ಮೂಲಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವ ನಿಟ್ಟಿನಲ್ಲಿ ನಗರಸಭೆ ಅಧಿಕಾರಿಗಳು ಇನ್ನಷ್ಟು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಡಳಿತಾಧಿಕಾರಿ ರಾಹುಲ್ ಪಾಂಡ್ವೆ ಸೂಚಿಸಿದರು.

ನಗರಸಭೆ ಕಚೇರಿಯಲ್ಲಿ ಬುಧವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ನಗರಕ್ಕೆ ಪ್ರತಿದಿನ ನಿಗದಿತ ವೇಳೆಯಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಯಾಗುವಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಗರದ ಹಸಿ ಮತ್ತು ಒಣ ಕಸವನ್ನು ಶೇ.100ರಷ್ಟು ಸಂಗ್ರಹಿಸಿ ತಕ್ಷಣವೇ ವಿಲೇವಾರಿ ಮಾಡಬೇಕು. ಕಸ ಸಂಗ್ರಹಣೆ, ರಸ್ತೆ ಹಾಗೂ ಚರಂಡಿಗಳ ಸ್ವಚ್ಛತೆ ಕುರಿತು ಅಧಿಕಾರಿಗಳು ದಿನನಿತ್ಯ ಮೇಲ್ವಿಚಾರಣೆ ನಡೆಸಬೇಕು ಎಂದು ಸೂಚಿಸಿದರು.

ಚಿಕನ್ ಹಾಗೂ ಮಟನ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದಂತೆ ಅಂಗಡಿ ಮಾಲೀಕರಿಗೆ ನೋಟಿಸ್ ನೀಡುವಂತೆ ಸೂಚಿಸಿದ ಅವರು, ತೆರಿಗೆ ವಸೂಲಾತಿಯಲ್ಲಿ ಆರು ತಿಂಗಳೊಳಗೆ ಶೇ.100ರಷ್ಟು ಗುರಿ ಸಾಧಿಸುವಂತೆ ಕಂದಾಯ ವಿಭಾಗಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಅನುಮತಿ ಪಡೆಯದೇ ಕಟ್ಟಡ ನಿರ್ಮಾಣ ಮಾಡುವವರು, ರಸ್ತೆ ಅತಿಕ್ರಮಣ ಮಾಡುವವರು ಹಾಗೂ ನಿರ್ಮಾಣ ತ್ಯಾಜ್ಯವನ್ನು ರಸ್ತೆಗೆ ಸುರಿಯುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.

ನಗರದ ವಿವಿಧ ಬಡಾವಣೆಗಳಲ್ಲಿ ಉದ್ಯಾನವನಗಳ ಸ್ಥಿತಿಗತಿ, ಕುಡಿಯುವ ನೀರಿನ ಟ್ಯಾಂಕ್‌ಗಳ ಸ್ವಚ್ಛತೆ, ಆರ್‌ಒ ಘಟಕಗಳ ನಿರ್ವಹಣೆ, ಬೀದಿ ನಾಯಿಗಳ ಲಸಿಕೆ ಕಾರ್ಯ ಹಾಗೂ ಅನಧಿಕೃತ ಜಾಹೀರಾತು ಫಲಕಗಳ ತೆರವು ಕುರಿತಂತೆ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಿದರು.

ಇದೇ ವೇಳೆ ಶಾಸ್ತ್ರೀ ವೃತ್ತದಿಂದ ರೈಲ್ವೆ ನಿಲ್ದಾಣದವರೆಗೆ ರಸ್ತೆ ಅಗಲೀಕರಣ, ಅತಿಕ್ರಮಣ ತೆರವು ಹಾಗೂ ಭೂಸ್ವಾಧೀನ ಕುರಿತಂತೆ ಸರ್ವೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸಂಬಂಧಿತ ಇಲಾಖೆಗೆ ಸೂಚಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಉಮೇಶ್ ಚವ್ಹಾಣ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News