ಯಾದಗಿರಿ | ಅನಧಿಕೃತ ಶಾಲೆಗಳ ವಿರುದ್ಧ ಕ್ರಮಕ್ಕೆ ಆಗ್ರಹ; ಜು.15ರಂದು ಡಿಡಿಪಿಐ ಕಚೇರಿ ಎದುರು ಪ್ರತಿಭಟನೆ
ಯಾದಗಿರಿ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ಶಾಲೆ ಹಾಗೂ ವಸತಿ ಶಾಲೆಗಳ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಜುಲೈ 15ರಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ (ಡಿಡಿಪಿಐ) ಕಚೇರಿ ಎದುರು ನಮ್ಮ ಕರ್ನಾಟಕ ಸೇನೆ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸೇನೆಯ ರಾಜ್ಯ ಪ್ರಧಾನ ಸಂಚಾಲಕ ಭೀಮಣ್ಣ ಶಖಾಪುರ ತಿಳಿಸಿದ್ದಾರೆ.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಧಿಕೃತ ಶಾಲೆಗಳ ವಿರುದ್ಧ ಹಲವು ಬಾರಿ ಲಿಖಿತ ಮನವಿ ಸಲ್ಲಿಸಿದರೂ ಹಾಗೂ ರಸ್ತೆ ತಡೆ, ಕತ್ತೆಗಳ ಮೆರವಣಿಗೆ ಸೇರಿದಂತೆ ವಿವಿಧ ರೀತಿಯ ಪ್ರತಿಭಟನೆಗಳನ್ನು ನಡೆಸಿದರೂ ಶಿಕ್ಷಣ ಇಲಾಖೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಕಳೆದ ಮೂರು ವರ್ಷಗಳಿಂದ ಹಂತ ಹಂತವಾಗಿ ಹೋರಾಟ ನಡೆಸುತ್ತಿದ್ದೇವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಅನಧಿಕೃತ ಶಿಕ್ಷಣ ಸಂಸ್ಥೆಗಳು ನಿರಾತಂಕವಾಗಿ ಕಾರ್ಯನಿರ್ವಹಿಸುತ್ತಿವೆ. ಜುಲೈ 15ರ ಪ್ರತಿಭಟನೆಗೂ ಸ್ಪಂದಿಸದಿದ್ದರೆ ಹೋರಾಟವನ್ನು ರಾಜ್ಯಮಟ್ಟಕ್ಕೆ ವಿಸ್ತರಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ನಮ್ಮ ಕರ್ನಾಟಕ ಸೇನೆಯ ಜಿಲ್ಲಾಧ್ಯಕ್ಷ ವಿಶ್ವಾರಾಧ್ಯ ದಿಮ್ಮೆ ಮಾತನಾಡಿ, ಕಳೆದ ನವೆಂಬರ್‌ನಲ್ಲಿ ಬಿಇಒ ಕಚೇರಿ ಎದುರು ನಡೆಸಿದ ಧರಣಿ ವೇಳೆ ಅಧಿಕಾರಿಗಳು ಲಿಖಿತ ಭರವಸೆ ನೀಡಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರಿಗಳ ಭರವಸೆಗಳು ಕೇವಲ ಕಾಗದಕ್ಕೆ ಸೀಮಿತವಾಗಿವೆ. ಸಾರ್ವಜನಿಕರ ದೂರುಗಳಿಗೆ ಸ್ಪಂದಿಸದಿರುವುದು ಬೇಜವಾಬ್ದಾರಿತನವಾಗಿದೆ. ಸಂಬಂಧಿಸಿದ ಉನ್ನತ ಅಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಕು. ಶ್ರೀದೇವಿ ಕಟ್ಟಿಮನಿ, ಅಂಬ್ರೇಷ್ ದೋರನಳ್ಳಿ, ಅಬ್ದುಲ್ ರಿಯಾಜ್ ಸಾಹುಕಾರ, ಅಬ್ದುಲ್ ಅಜೀಜ್, ಚೆನ್ನಬಸವ ಕನಕ, ಮಹೇಶ, ಮಲ್ಲು ಕಲ್ಮನಿ, ರಾಜು ಗುಂಡಗುರ್ತಿ, ಭೀಮು ಮಳ್ಳಳ್ಳಿ, ಮರೆಪ್ಪ ಜಿನಿಕೇರಿ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.