ನಾಲವಾರ: ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಪುಣ್ಯಕ್ಷೇತ್ರ, ಭಕ್ತರ ಆರಾಧ್ಯ ಕೇಂದ್ರವಾದ ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದಲ್ಲಿ ಆಯುಧಪೂಜೆಯ ಪುಣ್ಯದಿನದಂದು ಶ್ರೀಮಠದ ಪ್ರಸ್ತುತ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಡಾ. ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಜನ್ಮೋತ್ಸವ ವರ್ಧಂತಿ ಮಹೋತ್ಸವ ಹಾಗೂ ಶ್ರೀಮಠದ ಹಿಂದಿನ ಗುರುಗಳಾದ ಲಿಂ.ತೋಟೇಂದ್ರ ಶಿವಯೋಗಿಗಳ ಪುಣ್ಯಸ್ಮರಣೋತ್ಸವವು ಸಹಸ್ರಾರು ಭಕ್ತರ ಜಯಘೋಷ, ಭಕ್ತಿಭಾವದ ನಡುವೆ ಅದ್ಧೂರಿಯಾಗಿ ನೆರವೇರಿತು.

ಆಯುಧಪೂಜೆ ದಿನ ರಾತ್ರಿ ಲಿಂ.ತೋಟೇಂದ್ರ ಶಿವಯೋಗಿಗಳ ಪುಣ್ಯಸ್ಮರಣೋತ್ಸವದ ಅಂಗವಾಗಿ ಕರ್ತೃ ಗದ್ದುಗೆಗೆ ವಿಧಿ-ವಿಧಾನಗಳೊಂದಿಗೆ ವಿಶೇಷ ಪೂಜೆ, ರುದ್ರಾಭಿಷೇಕ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ಶ್ರೀಮಠದ ಮುಂಭಾಗದ ಆವರಣದಲ್ಲಿ ನಿರ್ಮಿಸಲಾಗಿದ್ದ ಭವ್ಯ ವೇದಿಕೆಯ ಮೇಲೆ ಡಾ. ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ವರ್ಧಂತಿ ಮಹೋತ್ಸವ ಕಾರ್ಯಕ್ರಮ ಜರುಗಿತು.

ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಪರಮಪೂಜ್ಯ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ನಾಡು ಎದುರಿಸುತ್ತಿರುವ ಭೀಕರ ಬರಗಾಲದ ಕುರಿತು ಮಾತನಾಡಿ ರೈತರಲ್ಲಿ ಆತ್ಮಸ್ಥೈರ್ಯ ತುಂಬಿದರು.

"ನಾಡಿನ ರೈತರು ಬರಗಾಲಕ್ಕೆ ಹೆದರಿ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಭಗವಂತ ನಮ್ಮ ಜೊತೆಗಿದ್ದಾನೆ ಎಂಬ ದೃಢ ನಂಬಿಕೆಯಿಂದ ಮುನ್ನಡೆದಾಗ ಯಾವುದೇ ಆತಂಕ ಎದುರಾಗುವುದಿಲ್ಲ. ಮುಂಗಾರು ಮಳೆ ಕೈಕೊಟ್ಟು ಭೂಮಿ ಬರಡಾಗಿದೆ, ಹಿಂಗಾರಿನ ಮೂಲಕವಾದರೂ ವರುಣದೇವ ಧರೆಯನ್ನು ತಣಿಸಲಿ ಎಂದು ಎಲ್ಲರೂ ಸೇರಿ ಭಗವಂತನಲ್ಲಿ ಪ್ರಾರ್ಥನೆ ಮಾಡೋಣ" ಎಂದು ಅವರು ಭಾವಪೂರ್ಣವಾಗಿ ನುಡಿದರು.

ಕಾರ್ಯಕ್ರಮದ ನೇತೃತ್ವವನ್ನು ಮುದನೂರಿನ ಶ್ರೀ ಸಿದ್ಧಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಸೂಗೂರಿನ ಶ್ರೀ ಚನ್ನರುದ್ರಮುನಿ ಶಿವಾಚಾರ್ಯರು, ಚಟ್ನಳ್ಳಿಯ ವಿಶ್ವಾರಾಧ್ಯ ಸ್ವಾಮಿಗಳು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯಾದಗಿರಿ ಕ್ಷೇತ್ರದ ಶಾಸಕರಾದ ಚನ್ನಾರೆಡ್ಡಿ ಪಾಟೀಲ ತುನ್ನೂರ, ಮುಖಂಡರಾದ ಸಂಗಾರೆಡ್ಡಿಗೌಡ ಮಲ್ಹಾರ, ಸಾಯಿನಾಥ್ ಇಂಜಿನಿಯರ್, ಮಹೇಶ ಸ್ವಾಮಿ ಚಿಂಚೋಳಿ, ಪ್ರದೀಪ ಪುರಾಣಿಕ, ಬೆಂಗಳೂರಿನ ಶಿವಲಿಂಗ ಭೀಮನಹಳ್ಳಿ, ಶ್ರೀಕಾಂತಗೌಡ ಮಡ್ನಾಳ ಇಬ್ರಾಹಿಮಪುರ ಮಠದ ಭಕ್ತರ ಆದ ಮಹಾದೇವ ಗಂವ್ಹಾರ ಸೇರಿದಂತೆ ಅನೇಕ ಗಣ್ಯರು, ಸುತ್ತಮುತ್ತಲಿನ ಗ್ರಾಮಗಳ ಸಹಸ್ರಾರು ಭಕ್ತರು ಪಾಲ್ಗೊಂಡು ಗುರುಗಳ ಆಶೀರ್ವಾದ ಪಡೆದರು.

ಸಮಾರಂಭದ ಆಕರ್ಷಣೆಯಾಗಿ ವೇ.ಮೂ. ಮಂಜುನಾಥ ಶಾಸ್ತ್ರಿ ನೇತೃತ್ವದ ವೈದಿಕ ತಂಡದಿಂದ ಉತ್ತರ ಭಾರತದ ಪ್ರಸಿದ್ಧ ಗಂಗಾರತಿ ಕಾರ್ಯಕ್ರಮವು ಭಕ್ತರಲ್ಲಿ ಭಕ್ತಿ ಭಾವವನ್ನು ಇಮ್ಮಡಿಗೊಳಿಸಿತು. ಮಹಾರಾಷ್ಟ್ರದ ವಾರ್ಕರಿ ಸಂಪ್ರದಾಯದ ವಿಶೇಷ ಭಜನಾ ಮೇಳದ ಭಜನಾ ಕಾರ್ಯಕ್ರಮ ವಿಶಿಷ್ಟವಾಗಿ ಮೂಡಿಬಂದಿತು. ಕು.ಈಶಾ ಪಡಶೆಟ್ಟಿ ತಂಡದವರು, ಕು. ಪ್ರತೀಕಾ ಚಿತ್ತಾಪುರ, ನಿತ್ಯಶ್ರೀ ಪಾಟೀಲ ಅವರಿಂದ ಭರತನಾಟ್ಯ ಸೇರಿದಂತೆ ಹಲವಾರು ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಪತ್ರಕರ್ತ ಡಾ.ಸಿದ್ಧರಾಜರೆಡ್ಡಿ ಯಾದಗಿರಿ ಅವರು ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor