ಶಹಾಪುರ | ಮಂಡಗಳ್ಳಿ ನಿರಾಶ್ರಿತರಿಗೆ ನಿವೇಶನ ಕಲ್ಪಿಸಲು ಆಗ್ರಹಿಸಿ ಧರಣಿ
ಶಹಾಪುರ: ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆದರೂ ಶಹಾಪುರ ತಾಲೂಕಿನ ಮಂಡಗಳ್ಳಿ ಗ್ರಾಮದ ನಿರಾಶ್ರಿತರಿಗೆ ನಿವೇಶನ ಸೌಲಭ್ಯ ಕಲ್ಪಿಸದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಸಮತಾ ಸೈನಿಕ ದಳದ ನೇತೃತ್ವದಲ್ಲಿ ಗ್ರಾಮಸ್ಥರು ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಿ ಮನವಿ ಸಲ್ಲಿಸಿದರು.
ಗ್ರಾಮದಲ್ಲಿ ಸರ್ಕಾರಿ ಜಮೀನು ಲಭ್ಯವಿದ್ದರೂ ಅರ್ಹ ನಿರಾಶ್ರಿತರಿಗೆ ನಿವೇಶನ ಹಂಚಿಕೆ ಮಾಡಿಲ್ಲ. ಕಂದಾಯ ಇಲಾಖೆಗೆ ಸೇರಿದ 10 ಎಕರೆಗೂ ಅಧಿಕ ಜಮೀನಿನಲ್ಲಿ ಕೆಲವರು ಅಕ್ರಮವಾಗಿ ಸಾಗುವಳಿ ಮಾಡಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಬೆಳೆಯುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸಂಬಂಧಪಟ್ಟ ಅಧಿಕಾರಿಗಳು ಜಮೀನನ್ನು ಪರಿಶೀಲಿಸಿ, ಅರ್ಹ ನಿರಾಶ್ರಿತರಿಗೆ ನಿವೇಶನ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಈ ಹಿಂದೆ ಗ್ರಾಮದ ಅಕ್ಕಪಕ್ಕದಲ್ಲಿ ಆಶ್ರಯ ನಿವೇಶನಗಳಿಗಾಗಿ ಜಮೀನು ಗುರುತಿಸಲಾಗಿದ್ದರೂ, ಅಕ್ರಮ ಸಾಗುವಳಿಯಿಂದಾಗಿ ನಿವೇಶನಗಳ ಸ್ಥಳವನ್ನೇ ಗುರುತಿಸಲಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಸಮತಾ ಸೈನಿಕ ದಳದ ಮುಖಂಡರು ದೂರಿದರು.
ದಲಿತ ಸಮುದಾಯಕ್ಕೆ ಮಂಜೂರಾಗಿದ್ದ ಎರಡು ಎಕರೆ ಜಮೀನನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ, ನಿವೇಶನಕ್ಕಾಗಿ ಸ್ಥಳ ಗುರುತಿಸಿ ಅರ್ಹರಿಗೆ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಮೂಲಸೌಕರ್ಯಗಳಿಲ್ಲದೆ ಗ್ರಾಮಸ್ಥರ ಪರದಾಟ :
ಗ್ರಾಮದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಕೊಳಚೆ ನೀರು ರಸ್ತೆಗಳ ಮೇಲೆ ಹರಿಯುತ್ತಿದ್ದು, ಮನೆಗಳ ಅಂಗಳದಲ್ಲಿ ನೀರು ಸಂಗ್ರಹವಾಗುತ್ತಿದೆ. ಇದರಿಂದ ದುರ್ವಾಸನೆ ಹರಡುವುದರ ಜತೆಗೆ ಮಕ್ಕಳು ಮತ್ತು ವಯೋವೃದ್ಧರು ತೊಂದರೆ ಅನುಭವಿಸುವಂತಾಗಿದೆ. ಗ್ರಾಮದಲ್ಲಿ ಬೀದಿ ದೀಪಗಳ ದುರಸ್ತಿ, ಕುಡಿಯುವ ನೀರಿನ ಸಮಸ್ಯೆ ಪರಿಹಾರ ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ನಿರಾಶ್ರಿತರಿಗೆ ನಿವೇಶನ ಒದಗಿಸುವುದರ ಜತೆಗೆ ಗ್ರಾಮದ ಮೂಲಸೌಕರ್ಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸಮತಾ ಸೈನಿಕ ದಳದ ಅಧ್ಯಕ್ಷ ಶರಣು ರೆಡ್ಡಿ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾದೇವಪ್ಪ ಬಂಕುರ್, ಈಶ್ವರ್ ರೋಜಾ, ಶರಣಪ್ಪ ಚಲವಾದಿ, ಶಿವಮ್ಮ, ಮಹಾಲಕ್ಷ್ಮಿ ಸೇರಿದಂತೆ ಮಂಡಗಳ್ಳಿ ಗ್ರಾಮದ ಅನೇಕ ಮಹಿಳೆಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.