ಶಹಾಪುರ: ನಗರದ ವಿವಿಧ ಬಡಾವಣೆಗಳಲ್ಲಿ ನಡೆಯುತ್ತಿರುವ ಕೋಟ್ಯಂತರ ರೂಪಾಯಿ ವೆಚ್ಚದ ಒಳಚರಂಡಿ ಕಾಮಗಾರಿ ಕಳಪೆಯಾಗಿದೆ ಎಂದು ಕಲ್ಯಾಣ ಕರ್ನಾಟಕ ಕಾರ್ಮಿಕ ಹಿತರಕ್ಷಣಾ ಸಂಘ ಸಂಸ್ಥಾಪಕ ಮೌನೇಶ್ ಹಳಿಸಗರ ಆರೋಪಿಸಿದರು.

ಕಾಮಗಾರಿಯಲ್ಲಿ ಬಳಸುವ ಎಂ-ಸ್ಯಾಂಡ್‌ನಲ್ಲಿ ಕರಿಮಣ್ಣಿನ ಅಂಶವಿದ್ದು, ಸಿಮೆಂಟ್‌ ಮತ್ತು ಜಲ್ಲಿಯನ್ನು ಸಮರ್ಪಕ ಪ್ರಮಾಣದಲ್ಲಿ ಬಳಸುತ್ತಿಲ್ಲ. ಅಲ್ಲದೆ, ಕಾಂಕ್ರೀಟ್‌ ಕಾಮಗಾರಿ ಬಳಿಕ ಸರಿಯಾಗಿ ಕ್ಯೂರಿಂಗ್‌ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ‌.

ಒಳಚರಂಡಿ ಟ್ಯಾಂಕ್‌ ನಿರ್ಮಿಸಿದ ಬಳಿಕ ಸಮರ್ಪಕ ಕ್ಯೂರಿಂಗ್‌ ಮಾಡದೆ ಮಣ್ಣು ತುಂಬಿ ಮುಚ್ಚಲಾಗುತ್ತಿದೆ. ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸುತ್ತಿಲ್ಲ ಎಂದು ದೂರಿದರು.

ಕಾಮಗಾರಿಗೆ ಬಳಸುವ ಸಾಮಗ್ರಿಗಳ ಮಾದರಿಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಬೇಕು. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಾಮಗಾರಿಯ ಅಂದಾಜು ಪತ್ರಿಕೆ ಹಾಗೂ ಗುತ್ತಿಗೆದಾರರ ವಿವರಗಳನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು. ಲೋಪಗಳು ಸಾಬೀತಾದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor