ಆಲಮಟ್ಟಿ- ಹುಣಸಗಿ-ಯಾದಗಿರಿ ರೈಲು ಮಾರ್ಗ ಸಮೀಕ್ಷೆಗೆ ಹಸಿರು ನಿಶಾನೆ
ಯಾದಗಿರಿ : ರಾಯಚೂರು ಲೋಕಸಭಾ ಕ್ಷೇತ್ರದ ಸಂಸದ ಜಿ.ಕುಮಾರ ನಾಯಕ ಅವರು ಡಿಸೆಂಬರ್‌ನಲ್ಲಿ, ಕೇಂದ್ರ ರೈಲ್ವೆ ಸಚಿವರನ್ನು ಭೇಟಿಯಾಗಿ ಆಲಮಟ್ಟಿ- ಹುಣಸಗಿ-ಯಾದಗಿರಿ ರೈಲು ಮಾರ್ಗ ಸಮೀಕ್ಷೆಗೆ ಅನುಮೋದನೆ ನೀಡಿವಂತೆ ಒತ್ತಾಯಿಸಿದ್ದರು ಹಾಗೂ ಎಪ್ರಿಲ್‌ನಲ್ಲಿ ಸಚಿವರ ಕಾರ್ಯನಿರ್ವಾಹಕ ನಿರ್ದೇಶಕರಾದ ವಿಕಾಸ್ ಜೈನ್ ಅವರನ್ನು ಭೇಟಿ ಮಾಡಿ ತ್ವರಿತವಾಗಿ ಅನುಮೋದನೆ ನೀಡುವಂತೆ ಒತ್ತಾಯಿಸಿದರ ಫಲ ಇಂದು ಸಮೀಕ್ಷೆಗೆ 4.05 ಕೋಟಿ ಮಂಜೂರಾಗಿದೆ.
ಆಲಮಟ್ಟಿ ಯಾದಗಿರಿ ನಡುವಿನ 162 ಕಿಮೀ ಉದ್ದದ ನೂತನ ರೈಲು ಮಾರ್ಗದ ಅಂತಿಮ ಸರ್ವೆ ಕಾರ್ಯ ಮಾಡಲು ಕೇಂದ್ರ ರೈಲ್ವೆ ಇಲಾಖೆ ಇಂದು ಆದೇಶಿಸಿದೆ. ಈ ಯೋಜನೆಯು ವಿಶೇಷವಾಗಿ ಆಲಮಟ್ಟಿ-ಹುಣಸಿಗಿ-ಯಾದಗಿರಿ ಭಾಗದ ಜನರ ಬಹುಕಾಲದ ಬೇಡಿಕೆಯಾಗಿತ್ತು. ಇದರಿಂದ ಸಂಪರ್ಕವನ್ನು ಸುಧಾರಿಸಲು ಮತ್ತು ಆರ್ಥಿಕ ಸಾಮರ್ಥ್ಯವನ್ನು ಮತ್ತಷ್ಟು ದೃಢಪಡಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ಇದು ಪ್ರಾದೇಶಿಕ ಅಭಿವೃದ್ಧಿ ಮತ್ತು ಸಮಗ್ರ ಬೆಳವಣಿಗೆಗೆ ದೊಡ್ಡ ಉತ್ತೇಜನವಾಗಿದೆ ಎಂದು ತಿಳಿಸಿದ್ದಾರೆ.
ರೈಲ್ವೆ ಸಚಿವಾಲಯವು ತ್ವರಿತವಾಗಿ ಸ್ಪಂದಿಸಿದ್ದಕ್ಕಾಗಿ ಸಂಸದ ಜಿ.ಕುಮಾರ ನಾಯಕರವರು ಯಾದಗಿರಿ ಜಿಲ್ಲೆಯ ಪರವಾಗಿ ಕೃತಜ್ಞತೆಗಳನ್ನು ತಿಳಿಸಿದರು.