ಹುಣಸಗಿ | ಒಳ ಮೀಸಲಾತಿ ಅನುಷ್ಠಾನಕ್ಕೆ ಒತ್ತಾಯಿಸಿ ಮಾದಿಗ ಸಂಘಟನೆಗಳಿಂದ ರಸ್ತೆ ತಡೆ ಪ್ರತಿಭಟನೆ
ಹುಣಸಗಿ: ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿ ಮಾದಿಗ ಸಂಘಟನೆಗಳ ವತಿಯಿಂದ ಪಟ್ಟಣದ ಬಿ. ಆರ್. ಅಂಬೇಡ್ಕರ್ ವೃತ್ತದಲ್ಲಿ ಮುಖ್ಯರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಸಮುದಾಯದ ಮುಖಂಡ ಶಿವಪ್ಪ ಸದಬ, ಹಲವು ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡ ಸಮುದಾಯಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಸಂವಿಧಾನಬದ್ಧವಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸಿ ಜಾರಿಗೆ ತರಲಾಗಿದೆ. ಆದರೆ ಕರ್ನಾಟಕದಲ್ಲಿ ದಶಕಗಳಿಂದಲೂ ಜನಸಂಖ್ಯೆಗೆ ಅನುಗುಣವಾಗಿ ನ್ಯಾಯದ ಪಾಲು ನೀಡದೇ ಸರ್ಕಾರ ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.
ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕುರಿತು ಭಾರತದ ಸರ್ವೋಚ್ಚ ನ್ಯಾಯಾಲಯ ನೀಡಿರುವ ನಿರ್ದೇಶನಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಾಯ್ದೆ ರೂಪಿಸಿ ರಾಜ್ಯಪಾಲರಿಂದ ಅಂಕಿತ ಪಡೆದಿರುವುದು ಮಾದಿಗ ಸಮುದಾಯದ 35 ವರ್ಷಗಳ ಹೋರಾಟಕ್ಕೆ ದೊರೆತ ಐತಿಹಾಸಿಕ ಜಯವಾಗಿದೆ ಎಂದು ಹೇಳಿದರು.
ಆದರೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 56,432 ಹುದ್ದೆಗಳನ್ನು ಭರ್ತಿ ಮಾಡುವಾಗ ರೋಸ್ಟರ್ ಪ್ರಕಾರ ಒಳ ಮೀಸಲಾತಿ ಅನ್ವಯವಾಗಬೇಕು. ಆಗ ಮಾತ್ರ ಮಾದಿಗ ಸಮುದಾಯಕ್ಕೆ ನ್ಯಾಯ ಸಿಗಲಿದೆ, ಇಲ್ಲವಾದರೆ ಸಮುದಾಯ ಮತ್ತೆ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಅವರು ಹೇಳಿದರು.
ಬಸವರಾಜ ಹಗರಟಗಿ ಮಾತನಾಡಿ, ಸರ್ಕಾರ ಪ್ರಸ್ತುತ ನಡೆಯುತ್ತಿರುವ ನೇಮಕಾತಿಗಳಲ್ಲಿ ಒಳ ಮೀಸಲಾತಿ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಸರ್ಕಾರ ಇದನ್ನು ನಿರ್ಲಕ್ಷಿಸಿದರೆ ಮಾದಿಗರ ತಾಳ್ಮೆಯ ಕಟ್ಟೆ ಒಡೆದು ಹೋಗಿದ್ದು, ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಾಗರಾಜ ದೊಡ್ಡಮನಿ ಕೊಡೇಕಲ್ಲ ಮಾತನಾಡಿ, ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಎಲ್ಲ ಕ್ಷೇತ್ರಗಳಲ್ಲಿ ಒಳ ಮೀಸಲಾತಿ ಅನುಷ್ಠಾನಗೊಳಿಸಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿಯ ಮಕ್ಕಳಿಗೆ ವರ್ಗೀಕರಣದ ಅನುಪಾತದಲ್ಲಿ ಸೌಲಭ್ಯ ನೀಡಬೇಕು. ಸಂವಿಧಾನದ Article 16(4) of the Constitution of India ಪ್ರಕಾರ ಉದ್ಯೋಗ ಮೀಸಲಾತಿಯಲ್ಲಿ ನೇರ ನೇಮಕಾತಿ, ಬಡ್ತಿ ಹಾಗೂ ಬ್ಯಾಕ್‌ಲಾಗ್ ನೇಮಕಾತಿ ಸೇರಿದಂತೆ ಎಲ್ಲಾ ಹುದ್ದೆಗಳಿಗೂ ಒಳ ಮೀಸಲಾತಿ ಅನ್ವಯವಾಗಬೇಕು ಎಂದು ಆಗ್ರಹಿಸಿದರು.
ಸರ್ಕಾರ ತಕ್ಷಣ ಸ್ಪಂದಿಸದಿದ್ದರೆ ಸಾಮಾಜಿಕ ನ್ಯಾಯಕ್ಕಾಗಿ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉದ್ದೇಶಿಸಿ ಬರೆದ ಮನವಿಪತ್ರವನ್ನು ಗ್ರೇಡ್–2 ತಹಶೀಲ್ದಾರರಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತಿಪ್ಪಣ್ಣ ಕಡಿಮನಿ, ಸಂಗಣ್ಣ ಅಗ್ನಿ, ನೋಟಪ್ಪ ಗ್ಯಾಂಗಮ್ಯಾನ, ಅಮಲಪ್ಪ ಹಳ್ಳಿ, ದೇವಪ್ಪ ಮಂಜಲಾಪೂರ, ಸಿದ್ದಣ್ಣ ಮೇಲಿನಮನಿ, ಬಸವರಾಜ ದೊಡ್ಡಮನಿ, ಪರಮಣ್ಣ ಕಟ್ಟಿಮನಿ, ಮಹಾಂತೇಶ ದೊಡ್ಡಮನಿ, ಪ್ರಭು ಕಚಕನೂರ, ಹಣಮಂತ ಕಚನೂರ, ಭೀಮಶಂಕರ ಯಡಹಳ್ಳಿ, ನಾಗಪ್ಪ ಯಡಹಳ್ಳಿ, ಪರಮಣ್ಣ ಕನ್ನೆಳ್ಳಿ, ತಾಯಪ್ಪ ಕನ್ನಳ್ಳಿ, ತಿಮ್ಮಣ್ಣ ವಜ್ಜಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.