ಹುಣಸಗಿ | ದೇವರಗಡ್ಡಿಯಲ್ಲಿ ಬಸ್ ಓಡಾಟ ಆರಂಭ : ಗ್ರಾಮಸ್ಥರಲ್ಲಿ ಸಂಭ್ರಮ
ಹುಣಸಗಿ: ಹುಣಸಗಿ ತಾಲೂಕಿನ ಕಟ್ಟೆಕಡೆ ಗ್ರಾಮ ಹಾಗೂ ಸುಕ್ಷೇತ್ರ ದೇವರಗಡ್ಡಿ ಹಲವು ವರ್ಷಗಳಿಂದ ಸಾರಿಗೆ ಸಂಪರ್ಕದಿಂದ ವಂಚಿತವಾಗಿದ್ದು, ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಇದೀಗ ಡಿ.26ರಿಂದ ನಾರಾಯಣಪೂರ–ದೇವರಗಡ್ಡಿ ಮಾರ್ಗದಲ್ಲಿ ಬಸ್ ಓಡಾಟ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಶುಕ್ರವಾರ ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ಪೂಜೆ ಸಲ್ಲಿಸುವ ಮೂಲಕ ಸಂತಸ ವ್ಯಕ್ತಪಡಿಸಿದರು.
ನಾರಾಯಣಪೂರ ಗ್ರಾಮಕ್ಕೆ ಬಸ್ ಸಂಚರಿಸಲು ಹಲವು ವರ್ಷಗಳಿಂದ ಸಾರ್ವಜನಿಕರು, ಕೂಲಿ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ಟಂ-ಟಂ ಅಥವಾ ಖಾಸಗಿ ವಾಹನಗಳ ಮೇಲೆ ಅವಲಂಬಿತರಾಗಿದ್ದರು. ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಸಂಚಾರ ಸಮಸ್ಯೆ ಗ್ರಾಮಸ್ಥರ ದೈನಂದಿನ ಜೀವನಕ್ಕೆ ದೊಡ್ಡ ಅಡ್ಡಿಯಾಗಿತ್ತು. ಗ್ರಾಮಸ್ಥರ ಬಹುಕಾಲದ ಬೇಡಿಕೆ ಕೊನೆಗೂ ಹಲವು ಸಂಘಟನೆಗಳು ಹಾಗೂ ಮಾಧ್ಯಮ ಸ್ನೇಹಿತರ ಶ್ರಮದಿಂದ ಈಡೇರಿದ್ದು, ದೇವರಗಡ್ಡಿಗೆ ಬಸ್ ಓಡಾಟ ಆರಂಭವಾಗಿರುವುದು ಗ್ರಾಮಕ್ಕೆ ಹೊಸ ಉತ್ಸಾಹ ತಂದಿದೆ.
ಸಾರಿಗೆ ನಿಯಂತ್ರಕರ ಮಾಹಿತಿ ಪ್ರಕಾರ, ನಾರಾಯಣಪೂರದಿಂದ ಬೆಳಿಗ್ಗೆ 8.30ಕ್ಕೆ ಹೊರಡುವ ಬಸ್ ದೇವರಗಡ್ಡಿಗೆ 9 ಗಂಟೆಗೆ ತಲುಪಲಿದೆ. ಅದೇ ರೀತಿಯಾಗಿ ಸಂಜೆ 4.30ಕ್ಕೆ ನಾರಾಯಣಪೂರದಿಂದ ಹೊರಡುವ ಬಸ್ ದೇವರಗಡ್ಡಿಗೆ 5 ಗಂಟೆಗೆ ತಲುಪಲಿದೆ.
ದೇವರಗಡ್ಡಿಗೆ ಬಸ್ ಸಂಪರ್ಕ ಕಲ್ಪಿಸಲು ಶ್ರಮಿಸಿದ ಸಾರಿಗೆ ವಿಭಾಗೀಯ ಅಧಿಕಾರಿ ವಿ.ಆರ್.ರೆಡ್ಡಿ, ಸುರಪುರ ಘಟಕ ವ್ಯವಸ್ಥಾಪಕ ಭೀಮಸಿಂಗ್ ರಾಠೋಡ್, ಸಾರಿಗೆ ನಿಯಂತ್ರಕ ಐ.ಎ.ಕರಣಿ ಹಾಗೂ ಸಂಘಟಕರ ಸಹಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ನಾರಾಯಣಪೂರದ ಮಾಧ್ಯಮ ಸ್ನೇಹಿತೆ ಪ್ರೀತಿ ರಾಠಿ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಬಳಗದ ಸದಸ್ಯರು, ಚಾಲಕ ಹಾಗೂ ನಿರ್ವಾಹಕರನ್ನು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಸಾರಿಗೆ ನಿಯಂತ್ರಕ ಐ.ಎ.ಕರಣಿ, ಸಿಬ್ಬಂದಿಗಳಾದ ವಿಜಯಕುಮಾರ, ಚಂದ್ರು, ಸ್ಥಳೀಯ ಶಾಲಾ ಮಕ್ಕಳು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.