ಹುಣಸಗಿ | ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಕೇಂದ್ರ ನೀರಾವರಿ ತಜ್ಞರ ತಂಡ ಭೇಟಿ
ಹುಣಸಗಿ: ತಾಲೂಕಿನ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಕೇಂದ್ರ ನೀರಾವರಿ ತಜ್ಞರ ತಂಡದ ಅಧ್ಯಕ್ಷ ಡಾ. ಶರದ್ ಜೋಶಿ ಹಾಗೂ ಎಸ್. ರಂಗರಾಮ್ ಭೇಟಿ ನೀಡಿ, ಜಲಾಶಯದ ಸುರಕ್ಷತೆ ಹಾಗೂ ತಾಂತ್ರಿಕ ವ್ಯವಸ್ಥೆಗಳ ಕುರಿತು ಸ್ಥಳೀಯ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದರು.
ಜಲಾಶಯದ ಮೇಲ್ಭಾಗದಲ್ಲಿರುವ ಸುರಕ್ಷತಾ ವ್ಯವಸ್ಥೆ, ತಾಂತ್ರಿಕ ಅಂಶಗಳು ಹಾಗೂ ಜಲಾಶಯದ ಭದ್ರತೆಯ ಕುರಿತು ತಂಡ ಪರಿಶೀಲನೆ ನಡೆಸಿತು. ಜಲಾಶಯದ ಸುರಕ್ಷತೆ ಕಾಪಾಡುವುದು ಅಧಿಕಾರಿಗಳ ಆದ್ಯ ಕರ್ತವ್ಯವಾಗಿದ್ದು, ಮುಂದಿನ ದಿನಗಳಲ್ಲಿ ಕೇಂದ್ರದಿಂದ ಮತ್ತೊಂದು ವಿಶೇಷ ತಂಡ ಭೇಟಿ ನೀಡುವ ಸಾಧ್ಯತೆ ಇರುವುದರಿಂದ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದರು.
ಗೇಟುಗಳ ನಿರ್ವಹಣೆಗೆ ಆದ್ಯತೆ :
ಮಳೆಗಾಲದಲ್ಲಿ ನದಿಗೆ ನೀರು ಹರಿಸುವ ಮುನ್ನವೇ ಜಲಾಶಯದ ಗೇಟುಗಳ ನಿರ್ವಹಣೆ ಪೂರ್ಣಗೊಳಿಸಬೇಕು. ಗೇಟುಗಳ ಚೈನ್, ಅಳವಡಿಕೆ ವ್ಯವಸ್ಥೆ, ಲಿಫ್ಟ್ ಹಾಗೂ ಕಬ್ಬಿಣದ ಸುರಕ್ಷತಾ ವ್ಯವಸ್ಥೆಗಳನ್ನು ಕಾಲಕಾಲಕ್ಕೆ ಪರಿಶೀಲಿಸಬೇಕು ಎಂದು ತಜ್ಞರು ಸೂಚಿಸಿದರು.
ಜಲಾಶಯದಲ್ಲಿನ ನೀರಿನ ಸಂಗ್ರಹ, ಕ್ರಸ್ಟ್ ಗೇಟುಗಳ ನಿರ್ವಹಣೆ ಹಾಗೂ ಅಳವಡಿಸಿರುವ ದೀಪಗಳ ಕಾರ್ಯವೈಖರಿಯತ್ತ ಹೆಚ್ಚಿನ ಗಮನ ಹರಿಸಬೇಕು. ಹಳೆಯ ಕ್ರಸ್ಟ್ ಗೇಟುಗಳ ಗುಣಮಟ್ಟವನ್ನು ಪರಿಶೀಲಿಸಿ, ಅವುಗಳ ಆಧುನೀಕರಣಕ್ಕೆ ಸರ್ಕಾರದೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಯಂತ್ರೋಪಕರಣಗಳ ತಪಾಸಣೆ, ವಿದ್ಯುತ್ ಸರಬರಾಜು ವ್ಯವಸ್ಥೆ ಸೇರಿದಂತೆ ಜಲಾಶಯದ ವಿವಿಧ ತಾಂತ್ರಿಕ ವ್ಯವಸ್ಥೆಗಳನ್ನು ಪರಿಶೀಲಿಸುತ್ತಿರಬೇಕು. ಯಾವುದೇ ರೀತಿಯ ನೀರು ಸೋರಿಕೆಯಾಗದಂತೆ ನಿರಂತರ ನಿಗಾ ವಹಿಸಬೇಕು ಎಂದು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಂಡದ ಶಿವಪ್ರಸಾದ್, ಜಲತಜ್ಞ ರಾಜಶೇಖರ್, ಮುಖ್ಯ ಎಂಜಿನಿಯರ್ ಜೆ.ಜೆ. ಪವಾರ್, ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ಬಿ. ಕೊಣ್ಣೂರ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಘವೇಂದ್ರ, ಅಭಿಯಂತರರಾದ ಹರಳಿ, ವಿಜಯಕುಮಾರ್, ಅಮರೇಶ್, ಬಾಲಸುಬ್ರಮಣ್ಯಂ ಹಾಗೂ ಚಾಲಚಂದ್ರ ಉಪಸ್ಥಿತರಿದ್ದರು.