ಸುರಪುರ | ಶಾದಿಖಾನ ಪಕ್ಕದ ಸರ್ಕಾರಿ ಜಾಗ ಒತ್ತುವರಿ ಆರೋಪ; ತೆರವುಗೊಳಿಸುವಂತೆ ಆಗ್ರಹಿಸಿ ಧರಣಿ
ಸುರಪುರ: ಪಟ್ಟಣದ ಖುರೇಷಿ ಮೊಹಲ್ಲಾದ ಶಾದಿಖಾನ ಪಕ್ಕದಲ್ಲಿರುವ ಸರ್ಕಾರಿ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ, ಒತ್ತುವರಿ ತೆರವುಗೊಳಿಸಿ ಸರ್ಕಾರಿ ಜಾಗವನ್ನು ಸಂರಕ್ಷಿಸುವಂತೆ ಆಗ್ರಹಿಸಿ ಸಾರ್ವಜನಿಕರು ನಗರಸಭೆ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದರು.
ಧರಣಿಯಲ್ಲಿ ಭಾಗವಹಿಸಿದ್ದ ದಲಿತಪರ ಹೋರಾಟಗಾರ ಮಲ್ಲಿಕಾರ್ಜುನ ಕ್ರಾಂತಿ ಸೇರಿದಂತೆ ಹಲವರು ಮಾತನಾಡಿ, ಶಾದಿಖಾನ ಪಕ್ಕದ ಸರ್ಕಾರಿ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು ಒತ್ತುವರಿ ಮಾಡಿಕೊಂಡು ಮನೆ ಹಾಗೂ ಕಾಂಪೌಂಡ್ ನಿರ್ಮಿಸಲು ಮುಂದಾಗಿದ್ದಾರೆ. ಒತ್ತುವರಿ ಸುಮಾರು 50 ಅಡಿ ವಿಸ್ತೀರ್ಣದಲ್ಲಿದ್ದು, ಇದರಿಂದ ಶಾದಿಖಾನಕ್ಕೆ ತೆರಳಲು ಸಾರ್ವಜನಿಕರಿಗೆ ರಸ್ತೆ ಇಲ್ಲದಂತಾಗಿದೆ ಎಂದು ಆರೋಪಿಸಿದರು.
ತಕ್ಷಣ ಒತ್ತುವರಿ ತೆರವುಗೊಳಿಸಿ ಸರ್ಕಾರಿ ಜಾಗವನ್ನು ಸಂರಕ್ಷಿಸುವುದರ ಜೊತೆಗೆ, ಶಾದಿಖಾನ ಕಟ್ಟಡಕ್ಕೆ ತೆರಳಲು ಸುಗಮ ರಸ್ತೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು. ಬೇಡಿಕೆ ಈಡೇರುವವರೆಗೆ ಧರಣಿ ಮುಂದುವರಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.
ಧರಣಿ ಸ್ಥಳಕ್ಕೆ ಆಗಮಿಸಿದ ನಗರಸಭೆ ಪೌರಾಯುಕ್ತ ಬಸವರಾಜ ಟಣಕೆದಾರ ಅವರು ಪ್ರತಿಭಟನಾಕಾರರ ಮನವಿ ಆಲಿಸಿ, ಬಳಿಕ ವಿವಾದಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಪ್ರತಿಭಟನಾಕಾರರಿಗೆ ಹಿಂಬರಹ ನೀಡಿ, ಒತ್ತುವರಿ ತೆರವುಗೊಳಿಸುವಂತೆ ಖಾಸಗಿ ವ್ಯಕ್ತಿಗೆ ಮೂರು ನೋಟಿಸ್‌ಗಳನ್ನು ಜಾರಿ ಮಾಡಲಾಗುವುದು. ಎರಡು ವಾರಗಳಲ್ಲಿ ಸ್ಥಳವನ್ನು ಒತ್ತುವರಿಯಿಂದ ಮುಕ್ತಗೊಳಿಸಿ ಸಂರಕ್ಷಿಸುವುದಾಗಿ ಭರವಸೆ ನೀಡಿದರು.
ಅಧಿಕಾರಿಗಳ ಭರವಸೆಯ ಬಳಿಕ ಪ್ರತಿಭಟನಾಕಾರರು ಮನವಿ ಸಲ್ಲಿಸಿ ಧರಣಿಯನ್ನು ಅಂತ್ಯಗೊಳಿಸಿದರು.
ಧರಣಿಯಲ್ಲಿ ಜಮೈತುಲ್ ಖುರೇಷಿ ಸಮಿತಿಯ ಅಧ್ಯಕ್ಷ ದಾವೂದ್ ಸಾಬ್, ಉಪಾಧ್ಯಕ್ಷ ದಾವಲಸಾಬ್, ಕಾರ್ಯದರ್ಶಿ ಖಾಜಾ ಅಜ್ಮೀರ್, ದಾವೂಸಾಬ್ ಖಾದರ್ ಸಾಬ್, ನಬಿಲಾಲ್, ಆರುನ್, ವೀರ ರೆಹಮಾನ್ ಸಾಬ್, ಉಸ್ಮಾನಸಾಬ್, ರಿಯಾಜಸಾಬ್, ಮಹಿಬೂಬ್ ಸಾಬ್, ಬಸಿರಸಾಬ್ ಸೇರಿದಂತೆ ಸಮಿತಿಯ 90ಕ್ಕೂ ಹೆಚ್ಚು ಜನರು ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ಅನೇಕ ಮುಖಂಡರು ಭಾಗವಹಿಸಿದ್ದರು.