ಭಾರತದ ಸಂವಿಧಾನ ವಿಶ್ವದ ಅತೀ ಶ್ರೇಷ್ಠ ಸಂವಿಧಾನ: ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ
ಯಾದಗಿರಿ: ಭಾರತದ ಸಂವಿಧಾನ ವಿಶ್ವದ ಅತೀ ಶ್ರೇಷ್ಠ ಹಾಗೂ ದೊಡ್ಡ ಸಂವಿಧಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ನಮಗೆಲ್ಲರಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಅವರು ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಇದರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಸಂವಿಧಾನದ ಬಗ್ಗೆ ಎಲ್ಲರೂ ಜ್ಞಾನ ಹೊಂದುವುದು ಸೂಕ್ತ. ವಿಶೇಷವಾಗಿ ವಿದ್ಯಾರ್ಥಿಗಳು ಈ ಕುರಿತು ಹೆಚ್ಚಿನ ಅರಿವು ಹೊಂದಬೇಕು. ಸಂವಿಧಾನವು ಭಾರತೀಯರಿಗಾಗಿ ಮೌಲ್ಯಯುತ ಪ್ರಜಾಪ್ರಭುತ್ವ ವ್ಯವಸ್ಥೆ ಕಲ್ಪಿಸಿದ್ದು ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ಹೇಳಿದರು.
ಮೂಲಭೂತ ಹಕ್ಕು, ಮೂಲಭೂತ ಕರ್ತವ್ಯಗಳು, ರಾಜ್ಯನಿರ್ದೇಶನ ತತ್ವಗಳು ಸೇರಿದಂತೆ ದೇಶದ ಸಮಗ್ರತೆ, ಐಕ್ಯತೆ ಹಾಗೂ ಉತ್ತಮ ನಾಗರಿಕರಾಗಿ ಬದುಕಲು ಸಂವಿಧಾನದ ಮೂಲಕ ಮಾರ್ಗದರ್ಶನ, ಹಾಗೂ ಅಭಿವೃದ್ಧಿಪರ ಚಿಂತನೆಗಳನ್ನು ಸಂವಿಧಾನದಲ್ಲಿ ಅಳವಡಿಸಿರುವುದು ವಿಶೇಷ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜುಬೀನ್ ಮಹಾಪಾತ್ರ ಅವರು ಮಾತನಾಡಿ, ಅನೇಕ ವಿದ್ವಾಂಸರ ಪರಿಶ್ರಮದ ಫಲವಾಗಿ ,ವಿಶೇಷವಾಗಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪರಿಶ್ರಮ ಹಾಗೂ ಕಾಳಜಿಯಿಂದಾಗಿ ವಿಶ್ವದಲ್ಲಿಯೇ ಅತಿ ದೊಡ್ಡ ಹಾಗೂ ಶ್ರೇಷ್ಠ ಸಂವಿಧಾನ ರಚಿಸಲಾಗಿದೆ. ಒಳ್ಳೆಯ ನಾಗರಿಕ ಹಾಗೂ ಒಳ್ಳೆಯ ವ್ಯಕ್ತಿಗಳಾಗಲು ಇದು ನೆರವಾಗಿದೆ. ದೇಶಕ್ಕೆ ಹಾನಿಯಾಗದೆ ಹಾಗೂ ಪರಸ್ಪರ ಸ್ವಾರ್ಥ, ದ್ವೇಷ ಸಾಧಿಸದೇ ನಿಜಜೀವನದಲ್ಲಿ ಪ್ರತಿಯೊಬ್ಬರು ಸಂವಿಧಾನ ದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು. ಸಂವಿಧಾನದ ಪೀಠಿಕೆ ವಾಚನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಅಪರ್ ಜಿಲ್ಲಾಧಿಕಾರಿ ರಮೇಶ್ ಕೋಲಾರ, ಸಹಾಯಕ ಆಯುಕ್ತ ಶ್ರೀಧರ್ ಗೋಟುರ್ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಚನ್ನಬಸಪ್ಪ ಅವರು ಸ್ವಾಗತಿಸಿದರು. ರಿಯಾಜ್ ಪಟೇಲ್ ಕಾರ್ಯಕ್ರಮ ನಿರೂಪಿಸಿದರು. ದೇವೇಂದ್ರಪ್ಪ ವಂದಿಸಿದರು.