ಪ್ರಿಯಾಂಕ್ ಖರ್ಗೆಗೆ ಡಿಸಿಎಂ ಸ್ಥಾನ ನೀಡಿ: ಬಲಗೈ ಜಾತಿಗಳ ಮಹಾ ಒಕ್ಕೂಟ ಆಗ್ರಹ
ಯಾದಗಿರಿ: ನಮ್ಮ ದಲಿತ ಸಮುದಾಯದ ಪ್ರಭಾವಿ ನಾಯಕರಾದ ಪ್ರಿಯಾಂಕ್ ಖರ್ಗೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟ ಹಾಗೂ ವಿವಿಧ ದಲಿತ ಸಂಘಟನೆಗಳ ಒಕ್ಕೂಟದಿಂದ ಆಗ್ರಹಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟ ಹಾಗೂ ವಿವಿಧ ದಲಿತ ಸಂಘಟನೆಗಳ ಒಕ್ಕೂಟದಿಂದ ಸಭೆ ನಡೆಸಿ ನಂತರ ಯಾದಗಿರಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸರೆಡ್ಡಿ ಎಂ ಪಾಟೀಲ್ ಅನಪುರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ನಂತರ ಮಾತನಾಡಿದ ಮುಖಂಡರು, ಸಾಮಾಜಿಕ ನ್ಯಾಯ ಹಾಗೂ ಸಂವಿಧಾನದ ಮೌಲ್ಯಗಳ ಪರ ನಿರಂತರ ಹೋರಾಟ ನಡೆಸುತ್ತಿರುವ ಪ್ರಿಯಾಂಕ್ ಖರ್ಗೆ ಅವರು ಯುವಕರಿಗೆ ಆಶಾಕಿರಣವಾಗಿದ್ದಾರೆ ಬೆಂಗಳೂರುದಲ್ಲಿನ ಡಾ. ಬಿ. ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಸ್ಥಾಪನೆಗೆ ಪ್ರಮುಖ ಪಾತ್ರವಹಿಸಿರುವ ಅವರು ಶಿಕ್ಷಣ ಕ್ಷೇತ್ರದಲ್ಲಿ ದೂರದೃಷ್ಟಿಯ ಕೆಲಸ ಮಾಡಿದ್ದಾರೆ. ಸಮಾಜ ಕಲ್ಯಾಣ ಸಚಿವರಾಗಿದ್ದ ವೇಳೆ ಜಾರಿಗೆ ತಂದ ‘ಸಮೃದ್ಧಿ’, ‘ಐರಾವತ’, ‘ಪ್ರಬುದ್ಧ’ ಹಾಗೂ ‘ಉನ್ನತಿ’ ಯೋಜನೆಗಳು ದಲಿತ ಹಾಗೂ ಹಿಂದುಳಿದ ವರ್ಗದ ಯುವಕರಿಗೆ ನೆರವಾಗಿವೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಅವರು ನೀಡಿದ ಆಡಳಿತ ದೇಶಮಟ್ಟದಲ್ಲಿ ಮೆಚ್ಚುಗೆ ಪಡೆದಿದೆ. ಪಂಚಾಯತ್ ರಾಜ್ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಕರ್ನಾಟಕವನ್ನು ಮುಂಚೂಣಿಗೆ ತರುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಬಿಟ್‌ಕಾಯಿನ್ ಹಗರಣ, ಪಿಎಸ್‌ಐ ನೇಮಕಾತಿ ಅಕ್ರಮ, ಕೆಪಿಟಿಸಿಎಲ್ ಹಾಗೂ ಗಂಗಾ ಕಲ್ಯಾಣ ಯೋಜನೆ ಅವ್ಯವಹಾರಗಳ ವಿರುದ್ಧ ದಾಖಲೆ ಸಮೇತ ಹೋರಾಟ ನಡೆಸಿದ ನಾಯಕರಲ್ಲಿ ಪ್ರಿಯಾಂಕ್ ಖರ್ಗೆ ಪ್ರಮುಖರು ಎಂದು ಹೇಳಿದರು.
ರೈತರು, ಮಹಿಳೆಯರು, ದಲಿತರು ಹಾಗೂ ನಿರುದ್ಯೋಗಿಗಳ ಸಮಸ್ಯೆಗಳನ್ನು ಸದನದೊಳಗೂ ಹೊರಗೂ ನಿರಂತರವಾಗಿ ಪ್ರಸ್ತಾಪಿಸಿರುವ ಅವರು ಕಾಂಗ್ರೆಸ್ ಪಕ್ಷವನ್ನು ರಾಜ್ಯಾದ್ಯಂತ ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕೂಡ್ಲೂರು, ಯಾದಗಿರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಈಟೇ, ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ, ಗೌರವಾಧ್ಯಕ್ಷ ಡಾ.ಭಗವಂತ ಅನವಾರ, ಉಪಾಧ್ಯಕ್ಷ ನೀಲಕಂಠ ಬಡಿಗೇರ, ಸಂಚಾಲಕ ಶ್ರೀಶೈಲ ಹೊಸ್ಮನಿ, ಪ್ರಧಾನ ಕಾರ್ಯದರ್ಶಿ ಮರೆಪ್ಪ ಚಟ್ಟೇರಕರ್, ಖಜಾಂಚಿ ವೀರಭದ್ರಪ್ಪ ಯಡ್ಡಳ್ಳಿ, ಗೋಪಾಲ ತೆಳಗೇರಿ, ಹೊನ್ನಪ್ಪ ಗಂಗನಾಳ, ರಾಮಣ್ಣ ಬಡಿಗೇರ, ಭೀಮರಾಯ ತಳವಾರ್, ಶರಣಪ್ಪ ನೀರಡಿಗಿ, ಪರಶುರಾಮ ಒಡೆಯರ್, ಭೀಮರಾಯ ಹೊಸ್ಮನಿ, ಚಂದ್ರಕಾಂತ ಮಾಸ್ಟರ್ ಮುನಿಯಪ್ಪನೋರ್, ಶಿವುಕುಮಾರ ಕರದಳ್ಳಿ, ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.