ಸುರಪುರ | ಅಕ್ರಮ ಜಾನುವಾರು ಸಾಗಾಟದ ವಿರುದ್ಧ ಕಠಿಣ ಕ್ರಮ : ಡಿವೈಎಸ್ಪಿ ಜಾವಿದ್
ಸುರಪುರ : ಬಕ್ರೀದ್ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸಂಪೂರ್ಣ ಬದ್ಧವಾಗಿದೆ. ಜಾನುವಾರು ಅಕ್ರಮ ಸಾಗಾಣಿಕೆ ಕಂಡುಬಂದರೆ ಸಾರ್ವಜನಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಡಿವೈಎಸ್‌ಪಿ ಜಾವೇದ್ ಇನಾಮದಾರ್ ಹೇಳಿದರು.
ಪಟ್ಟಣದ ಡಿವೈಎಸ್‌ಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಯಾವುದೇ ಅಕ್ರಮ ಚಟುವಟಿಕೆ ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.
ಜಾನುವಾರು ಅಕ್ರಮ ಸಾಗಾಟ ಮತ್ತು ಕಟಾವು ಕುರಿತು ಮಾಹಿತಿ ಇದ್ದಲ್ಲಿ ಸಾರ್ವಜನಿಕರು ಅಥವಾ ಸಂಘಟನೆಗಳು ನೇರವಾಗಿ ಕ್ರಮ ಕೈಗೊಳ್ಳಬಾರದು. ಪೊಲೀಸರು ಹಾಗೂ ಪಶುವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾನೂನು ಕ್ರಮ ಜರುಗಿಸುತ್ತಾರೆ. ನೈತಿಕ ಪೊಲೀಸ್‌ಗಿರಿ ಮಾಡಬಾರದು ಎಂದು ಅವರು ಎಚ್ಚರಿಸಿದರು.
ಜಾನುವಾರು ಅಕ್ರಮ ಸಾಗಾಣಿಕೆ ತಡೆಯಲು ಜಿಲ್ಲೆಯ ವಿವಿಧ ಭಾಗಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಬಂಡೋಳ್ಳಿ, ಮಾಳೂರು, ಐಬಿ ತಾಂಡಾ, ನಾರಾಯಣಪುರ, ಮುಡಬೋಳ ಹಾಗೂ ಮಲ್ಲಾಬಿ ಪ್ರದೇಶಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದ್ದು, ಪ್ರತಿಯೊಂದು ಕೇಂದ್ರದಲ್ಲೂ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಹೊರಗಿನಿಂದ ಬರುವ ವಾಹನಗಳ ಮೇಲೆ ತೀವ್ರ ನಿಗಾ ಇರಿಸಲಾಗುತ್ತದೆ. ಕಳೆದ ಐದು ವರ್ಷಗಳಲ್ಲಿ ಜಾನುವಾರು ಕಳ್ಳತನ ಅಥವಾ ಅಕ್ರಮ ಸಾಗಾಟದಲ್ಲಿ ಭಾಗಿಯಾಗಿರುವವರನ್ನು ಎಂಒಬಿ ಪಟ್ಟಿಗೆ ಸೇರಿಸಿ, ಅವರ ವಿರುದ್ಧ ಪ್ರಿವೆಂಟಿವ್ ಆಕ್ಷನ್ ರಿಪೋರ್ಟ್ (ಪಿಆರ್) ಸಿದ್ಧಪಡಿಸಿ ಬಾಂಡ್ ಪಡೆಯಲಾಗುತ್ತದೆ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಉಂಟುಮಾಡುವ ರೀತಿಯ ಪೋಸ್ಟ್, ಶೇರ್ ಅಥವಾ ಕಾಮೆಂಟ್ ಮಾಡುವವರ ವಿರುದ್ಧ ಐಟಿ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪಿಐ ಉಮೇಶ್ ಎಂ.ನಾಯಕ ಉಪಸ್ಥಿತರಿದ್ದರು.