ಶಹಾಪುರ: ಜ್ಞಾನಮೇರು, ದ್ವೈತ ಸಿದ್ಧಾಂತದ ಮುಕುಟಮಣಿ ಹಾಗೂ ತತ್ವಜ್ಞಾನ ಪ್ರಪಂಚದಲ್ಲಿ ಪ್ರಜ್ವಲಿಸಿದ ಜಗದ್ಗುರು ಶ್ರೀ ಮಧ್ವಾಚಾರ್ಯರು ತೋರಿದ ಧರ್ಮ ಮತ್ತು ಆಧ್ಯಾತ್ಮಿಕ ಮಾರ್ಗಗಳು ಸರ್ವರಿಗೂ ಸಾಧನೆಯ ಹಾದಿಯಲ್ಲಿ ಪ್ರೇರಣೆಯಾಗಿವೆ ಎಂದು ಖಜಾನೆ ಅಧಿಕಾರಿ ಹಾಗೂ ಇತಿಹಾಸ ಮತ್ತು ಶಿಲಾಶಾಸನ ಸಂಶೋಧಕ ಡಾ. ಮೋನಪ್ಪ ಶಿರವಾಳ ತಿಳಿಸಿದರು.

ನಗರದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಸರ್ಕಾರದ ವತಿಯಿಂದ ಸರಳವಾಗಿ ಆಯೋಜಿಸಿದ್ದ ಶ್ರೀ ಮಧ್ವಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ಕೇವಲ ರಾಜಕೀಯ ರಾಷ್ಟ್ರವಲ್ಲ. ಇಲ್ಲಿನ ನಾಗರಿಕ ಪ್ರಜ್ಞೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆ ಹಾಗೂ ಜ್ಞಾನದ ಶ್ರೀಮಂತಿಕೆಯು ವಿಶಾಲವಾದ ಇತಿಹಾಸವನ್ನು ಹೊಂದಿದೆ. ಧರ್ಮದ ರಕ್ಷಣೆ ಮತ್ತು ಆಧ್ಯಾತ್ಮಿಕ ತಳಹದಿಯನ್ನು ನಿರ್ಮಿಸಿದ ಮಹಾತ್ಮರ ಆದರ್ಶಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು.

ಉಡುಪಿಯ ಪಾಜಕ ಕ್ಷೇತ್ರದಲ್ಲಿ ಜನಿಸಿದ ಶ್ರೀ ಮಧ್ವಾಚಾರ್ಯರು ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸುವುದರ ಜೊತೆಗೆ ಉಡುಪಿಯ ಶ್ರೀಕೃಷ್ಣನ ಪೂಜೆಗಾಗಿ ಅಷ್ಟಮಠಗಳನ್ನು ಸ್ಥಾಪಿಸಿದರು. ಕರ್ತವ್ಯಕರ್ಮವನ್ನು ಎಂದಿಗೂ ಮರೆಯಬಾರದು, ನಮಗಿಂತ ಹೆಚ್ಚು ಕಷ್ಟದಲ್ಲಿರುವವರ ಸೇವೆ ಮಾಡುವುದು ನಿಜವಾದ ಕರ್ತವ್ಯ ಎಂಬ ಸಂದೇಶವನ್ನು ಅವರು ಸಾರಿದರು ಎಂದು ತಿಳಿಸಿದರು.

ಜೀವ ಮತ್ತು ಪರಮಾತ್ಮನ ನಡುವೆ ಭೇದ, ಜೀವಗಳ ನಡುವೆ ಪರಸ್ಪರ ಭೇದ, ಜಡವಸ್ತು ಮತ್ತು ಪರಮಾತ್ಮನ ನಡುವೆ ಭೇದ, ಜಡವಸ್ತುಗಳ ನಡುವೆ ಪರಸ್ಪರ ಭೇದ ಹಾಗೂ ಜಡವಸ್ತು ಮತ್ತು ಜೀವದ ನಡುವಿನ ಭೇದ ಸೇರಿದಂತೆ ಪಂಚಭೇದಗಳನ್ನು ಪ್ರತಿಪಾದಿಸಿದ ಮಧ್ವಾಚಾರ್ಯರು, ಬ್ರಹ್ಮಸೂತ್ರ ಭಾಷ್ಯ ಸೇರಿದಂತೆ ಅನೇಕ ಗ್ರಂಥಗಳನ್ನು ರಚಿಸಿ ತತ್ವಜ್ಞಾನ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.

ವಿಪ್ರ ಸಮಾಜದ ಬಂಧುಗಳು ಶಾಸ್ತ್ರಗ್ರಂಥಗಳನ್ನು ಹೆಚ್ಚು ಓದುವ ಮೂಲಕ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಹಿಂದಿನಿಂದ ನಡೆದುಬಂದ ಸಂಪ್ರದಾಯ, ಧರ್ಮ ಮತ್ತು ಸಂಸ್ಕೃತಿಯ ಪುನರುತ್ಥಾನವಾದಾಗ ದೇಶ ಸುಭಿಕ್ಷವಾಗುತ್ತದೆ. ವಿಪ್ರ ಸಮುದಾಯದ ಉತ್ತಮ ಕಾರ್ಯಗಳಿಗೆ ಸದಾ ಬೆಂಬಲ ನೀಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀ ಮಧ್ವಾಚಾರ್ಯರ ಭಾವಚಿತ್ರಕ್ಕೆ ವೇದಮಂತ್ರಗಳ ಘೋಷದೊಂದಿಗೆ ಪೂಜೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಅಧಿಕಾರಿ ನಂದಕುಮಾರ, ಹಿರಿಯರಾದ ಡಾ. ರಾಮರಾವ್ ಕುಲಕರ್ಣಿ, ವಾಸುದೇವಾಚಾರ್ಯ ಸಗರ, ಪವನ ಕುಲಕರ್ಣಿ, ಪ್ರಸಾದ್ ಕುಲಕರ್ಣಿ, ಕೊನೇರಾಚಾರ್ಯ ಸಗರ, ಕಿರಣ ಭಟ್ ಜೋಶಿ, ಚಂದ್ರಕಾಂತ ಭಟ್, ಶ್ರೀಕಾಂತ ಸರ್ಕಿಲ್, ನರಸಿಂಹಾಚಾರ್ಯ ರೊಟ್ಟಿ, ವಾದಿರಾಜ, ಪ್ರಮೋದ, ವಾಸುದೇವ ಜೋಶಿ, ವಿಜಯೇಂದ್ರ, ವಲ್ಲಭ ಜೋಶಿ, ಮುರಳೀಧರ ಕುಲಕರ್ಣಿ, ಸತೀಶ ಗುಡೂರು, ಅರವಿಂದ ಕುಲಕರ್ಣಿ, ಶ್ಯಾಮಸುಂದರ ಜೋಶಿ, ಮಲ್ಹಾರಾವ್ ಕುಲಕರ್ಣಿ, ಖಂಡೇರಾವ, ಗೋಪಾಲರಾವ, ಶ್ರೀಧರ, ಶ್ರೀಕರ, ವೆಂಕಟೇಶ, ವೇಣುಗೋಪಾಲ ಹಾಗೂ ರಾಘವೇಂದ್ರ ರಸ್ತಾಪುರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor