ಸುರಪುರ: ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದಾಗಿ ಈ ಭಾಗದಲ್ಲಿ ತೀವ್ರ ಬರ ಪರಿಸ್ಥಿತಿ ಎದುರಾಗಿದೆ. ಮಳೆಯ ಅಭಾವದಿಂದ ಬಿತ್ತನೆ ವಿಳಂಬವಾಗಿದ್ದರೂ ರೈತರು ಆಶಾಭಾವನೆಯಿಂದ ಭತ್ತ, ತೊಗರಿ, ಹತ್ತಿ ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಪ್ರಸ್ತುತ ಬೆಳೆಗಳು ಫಲಕಟ್ಟುವ ಹಂತದಲ್ಲಿದ್ದು, ಈ ಸಂದರ್ಭದಲ್ಲಿ ನೀರಿನ ಅವಶ್ಯಕತೆ ಹೆಚ್ಚಾಗಿದೆ. ಬೆಳೆಗಳು ಕೈಕೊಟ್ಟರೆ ರೈತರು ಸಂಕಷ್ಟಕ್ಕೆ ಸಿಲುಕುವುದಲ್ಲದೆ, ಸಾಮಾನ್ಯ ನಾಗರಿಕರ ಮೇಲೂ ಅದರ ಪರಿಣಾಮ ಬೀರಲಿದೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರಸ್ತುತ ಅವಳಿ ಜಲಾಶಯಗಳಾದ ಆಲಮಟ್ಟಿ ಮತ್ತು ನಾರಾಯಣಪುರದಲ್ಲಿರುವ ನೀರಿನ ಮಟ್ಟವನ್ನು ಗಮನದಲ್ಲಿಟ್ಟುಕೊಂಡು, ಮುಂಬರುವ ದಿನಗಳಲ್ಲಿ ಕುಡಿಯುವ ನೀರು ಹಾಗೂ ಇತರ ಅಗತ್ಯಗಳಿಗಾಗಿ ನೀರನ್ನು ಮೀಸಲಿಡಬೇಕು. ಉಳಿದ ಲಭ್ಯ ನೀರನ್ನು ಅಕ್ಟೋಬರ್ 10ರವರೆಗೆ ನಿರಂತರವಾಗಿ ಕಾಲುವೆಗಳಿಗೆ ಹರಿಸಿದರೆ ಕಾಲುವೆಯ ಕೊನೆಯ ಭಾಗದ ರೈತರಿಗೂ ನೀರು ದೊರೆಯಲಿದೆ ಎಂದು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಒತ್ತಾಯಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಆದರೆ, ಎಂಟು ದಿನಗಳ ಕಾಲ ಕಾಲುವೆಗಳಿಗೆ ನೀರು ಸ್ಥಗಿತಗೊಳಿಸಿ, ನಂತರ ಹತ್ತು ದಿನಗಳವರೆಗೆ ನಿರಂತರವಾಗಿ ನೀರು ಹರಿಸುವಂತೆ ಆದೇಶಿಸಲಾಗಿದೆ. ಈ ಆದೇಶದಿಂದ ರೈತರ ಬೆಳೆಗಳಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಈಗಾಗಲೇ ಅಲ್ಪಸ್ವಲ್ಪ ಬೆಳೆಗಳು ಫಲಕಟ್ಟುವ ಹಂತದಲ್ಲಿದ್ದು, ಈ ಸಂದರ್ಭದಲ್ಲಿ ನೀರು ಸಮರ್ಪಕವಾಗಿ ದೊರೆಯದಿದ್ದರೆ ಬೆಳೆ ನಷ್ಟವಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಆದ್ದರಿಂದ ರೈತರ ಹಿತದೃಷ್ಟಿಯಿಂದ ಅಕ್ಟೋಬರ್ 10ರೊಳಗೆ ಮತ್ತೊಮ್ಮೆ ನೀರಾವರಿ ಸಲಹಾ ಸಮಿತಿಯ ಸಭೆ ಕರೆಯಬೇಕು. ಬೆಳೆಗಳ ರಕ್ಷಣೆಗೆ ಅಗತ್ಯವಿರುವ ನೀರು ಒದಗಿಸುವ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಸರ್ಕಾರವನ್ನು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor