Yadgiri | ಕಾಲುವೆಗೆ ಮಕ್ಕಳನ್ನು ಎಸೆದ ತಂದೆಯ ಬಂಧನ: ಇಬ್ಬರು ಮಕ್ಕಳ ಮೃತದೇಹ ಪತ್ತೆ

Update: 2026-08-19 21:44 IST

ಯಾದಗಿರಿ: ಶಹಾಪುರ ತಾಲೂಕಿನ ಗೋಗಿ ಸಮೀಪದ ಕಾಲುವೆಗೆ ತನ್ನ ಇಬ್ಬರು ಮಕ್ಕಳನ್ನು ಎಸೆದ ಆರೋಪದ ಪ್ರಕರಣದಲ್ಲಿ ತಂದೆ ಶಾಂತಪ್ಪನನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 103ರ ಅಡಿ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಅವರು, ಶಾಂತಪ್ಪ 112 ತುರ್ತು ಸಹಾಯವಾಣಿಗೆ ಕರೆ ಮಾಡಿ ಗೋಗಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾಲುವೆಗೆ ತನ್ನ ಇಬ್ಬರು ಮಕ್ಕಳನ್ನು ಎಸೆದಿರುವುದಾಗಿ ತಿಳಿಸಿದ್ದ. ಮಾಹಿತಿ ಆಧರಿಸಿ ಪೊಲೀಸರು ಸ್ಥಳಕ್ಕೆ ತೆರಳಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು ಎಂದರು.

ಶಾಂತಪ್ಪ ಮಧ್ಯಾಹ್ನ ಸುಮಾರು 2.15ಕ್ಕೆ ತನ್ನ ಮೂವರು ಮಕ್ಕಳೊಂದಿಗೆ ಬೈಕ್‌ನಲ್ಲಿ ಕಾಲುವೆ ಬಳಿ ತೆರಳಿದ್ದ. ಬಳಿಕ 9 ವರ್ಷದ ಸಾನ್ವಿ ಹಾಗೂ 3 ವರ್ಷದ ಸೃಜನ್ ಅವರನ್ನು ಕಾಲುವೆಗೆ ತಳ್ಳಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಹೇಳಿದರು.

ರಾತ್ರಿ ವೇಳೆ ಶೋಧ ಕಾರ್ಯಾಚರಣೆ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಅಗ್ನಿಶಾಮಕ ದಳ ಹಾಗೂ ಕೆಬಿಜೆಎನ್‌ಎಲ್ ಅಧಿಕಾರಿಗಳ ಸಹಕಾರದೊಂದಿಗೆ ಶೋಧ ಕಾರ್ಯಾಚರಣೆ ಆರಂಭಿಸಲಾಯಿತು. ಮಧ್ಯಾಹ್ನ ಸೃಜನ್ ಹಾಗೂ ಸಂಜೆ ಸಾನ್ವಿಯ ಮೃತದೇಹ ಪತ್ತೆಯಾಗಿದೆ ಎಂದು ಎಸ್ಪಿ ತಿಳಿಸಿದರು.

ಆರೋಪಿ ಶಾಂತಪ್ಪ ಮಾನಸಿಕವಾಗಿ ತೊಂದರೆ ಅನುಭವಿಸುತ್ತಿರುವ ಸಾಧ್ಯತೆ ಇದೆ. ಮಕ್ಕಳು ತಾಯಿ ರೇಣುಕಾ ಅವರೊಂದಿಗೆ ಹೆಚ್ಚು ಆತ್ಮೀಯರಾಗಿದ್ದು, ತಮ್ಮೊಂದಿಗೆ ಹೊಂದಾಣಿಕೆ ಇರಲಿಲ್ಲ ಎಂದು ವಿಚಾರಣೆ ವೇಳೆ ಆತ ಹೇಳಿದ್ದಾನೆ. ಈ ಎಲ್ಲ ಅಂಶಗಳ ಕುರಿತು ತನಿಖೆ ಮುಂದುವರಿದಿದೆ ಎಂದು ಪೃಥ್ವಿಕ್ ಶಂಕರ್ ತಿಳಿಸಿದರು.

ಪ್ರಕರಣದಲ್ಲಿ ಆರಂಭದಲ್ಲಿ ಅಪಹರಣ ಪ್ರಕರಣ ದಾಖಲಿಸಲಾಗಿತ್ತು. ಇದೀಗ ತನಿಖೆಯ ಆಧಾರದ ಮೇಲೆ ಬಿಎನ್‌ಎಸ್ ಸೆಕ್ಷನ್ 103ರ ಅಡಿ ಕೊಲೆ ಪ್ರಕರಣ ದಾಖಲಿಸಿ ಶಾಂತಪ್ಪನನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News