ಸುರಪುರ: ತಾಲೂಕಿನ ಬಿಜಾಸಪುರ ಗ್ರಾಮದಲ್ಲಿ ದಸರಾ ಹಬ್ಬವನ್ನು ಭಾರ ಎತ್ತುವ ಸ್ಪರ್ಧೆ ಆಯೋಜಿಸುವ ಮೂಲಕ ವಿಶೇಷವಾಗಿ ಆಚರಿಸಲಾಯಿತು. ಸ್ಪರ್ಧೆಯಲ್ಲಿ ಶಹಾಪುರ ತಾಲೂಕಿನ ಶಾರದಹಳ್ಳಿ ಗ್ರಾಮದ ಮರೆಪ್ಪ ಅವರು 230 ಕೆ.ಜಿ. ಮರಳು ತುಂಬಿದ ಚೀಲವನ್ನು ಎತ್ತುವ ಮೂಲಕ ಜಯಗಳಿಸಿದರು. ವಿಜೇತರಿಗೆ 11 ತೊಲೆ ಬೆಳ್ಳಿಯ ಕಡಗವನ್ನು ತೊಡಿಸಿ ಗೌರವಿಸಲಾಯಿತು.

ದಸರಾ ಅಂಗವಾಗಿ ಗ್ರಾಮದಲ್ಲಿರುವ ಬನ್ನಿ ಮಹಾಕಾಳಿ ದೇವಿಗೆ ಮೊದಲಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಪಲ್ಲಕ್ಕಿ ಉತ್ಸವದ ಮೆರವಣಿಗೆ ನಡೆಸಲಾಯಿತು. ಗ್ರಾಮದ ಮುಖಂಡರು ಸೇರಿದಂತೆ ನೂರಾರು ಜನರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಪಲ್ಲಕ್ಕಿ ಉತ್ಸವದ ಸಂದರ್ಭದಲ್ಲಿ ಮಹಿಳೆಯರು ಬನ್ನಿ ಮಹಾಕಾಳಿ ದೇವಿಗೆ ಹೂವು, ಹಣ್ಣು, ಕಾಯಿ ಹಾಗೂ ಕರ್ಪೂರ ಅರ್ಪಿಸಿ ಭಕ್ತಿ ಸಮರ್ಪಿಸಿದರು.

ಸಂಜೆಯ ವೇಳೆಗೆ ಪ್ರತಿವರ್ಷದಂತೆ ಈ ವರ್ಷವೂ ಭಾರ ಎತ್ತುವ ಸ್ಪರ್ಧೆ ಆರಂಭಿಸಲಾಯಿತು. ಯಾದಗಿರಿ ಜಿಲ್ಲೆ ಮಾತ್ರವಲ್ಲದೆ ಇತರ ಜಿಲ್ಲೆಗಳಿಂದಲೂ ಅನೇಕರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮರಳು ತುಂಬಿದ ಚೀಲವನ್ನು ಎತ್ತುವ ಈ ಸ್ಪರ್ಧೆಯಲ್ಲಿ ಶಾರದಹಳ್ಳಿ ಗ್ರಾಮದ ಮರೆಪ್ಪ ಅವರು 230 ಕೆ.ಜಿ. ತೂಕದ ಚೀಲವನ್ನು ಎತ್ತಿ ಜಯಶಾಲಿಯಾದರು. ಬಳಿಕ ಅವರಿಗೆ 11 ತೊಲೆ ಬೆಳ್ಳಿಯ ಕಡಗವನ್ನು ತೊಡಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಉತ್ಸವ ಸಮಿತಿ ಅಧ್ಯಕ್ಷ ಸಂಗರೆಡ್ಡಿಗೌಡ ಬಿಜಾಸಪುರ, ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ನಿಂಗಪ್ಪ ನಾಯಕ, ಕಾಸಿಂಸಾಬ್ ಪಠಣ, ನಾಗರಾಜ ಸಾಹುಕಾರ, ದೇವೇಂದ್ರಪ್ಪ ಸಾಹುಕಾರ, ಭೀಮಣ್ಣ ಸುರಪುರ, ಸಂಗೂ ಕಾಜಿಗರ್ ಹಾಗೂ ಬನ್ನಿ ಮಹಾಕಾಳಿ ದೇವಸ್ಥಾನದ ಅರ್ಚಕರಾದ ದೇವೇಂದ್ರಮ್ಮ ಟೀಚರ್ ಮಂಡಗಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor