ಸುರಪುರ: ನಾರಾಯಣಪುರ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ಡಿಸೆಂಬರ್ ಕೊನೆಯ ವಾರದವರೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ದೇವಾಪುರ ಕ್ರಾಸ್‌ನಲ್ಲಿ ಅಹೋರಾತ್ರಿ ಧರಣಿ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ವಿಜಯಕುಮಾರ ಮುಸ್ಟೂರ ಮಾತನಾಡಿ, ರೈತರು ಲಕ್ಷಾಂತರ ಎಕರೆ ಪ್ರದೇಶದಲ್ಲಿ ಬೆಳೆದಿರುವ ಬೆಳೆಗಳು ನೀರಿಲ್ಲದೆ ಒಣಗಿ ಹಾಳಾಗುತ್ತಿವೆ. ಆದರೆ, ಸರ್ಕಾರ ನೀರು ಬಿಡುವ ಕುರಿತು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅನ್ನ ನೀಡುವ ರೈತರ ಬಾಯಿಗೆ ಮಣ್ಣು ಹಾಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೃಷ್ಣಾ ನದಿಯಿಂದ ನೀರನ್ನು ತೆಲಂಗಾಣಕ್ಕೆ ಹರಿಸಲಾಗುತ್ತಿದೆ. ಆದರೆ, ರೈತರ ಜಮೀನುಗಳಿಗೆ ನೀರು ಬಿಡುತ್ತಿಲ್ಲ. ಸರ್ಕಾರ ರೈತರ ಜೀವದೊಂದಿಗೆ ಚೆಲ್ಲಾಟವಾಡಬಾರದು. ಈಗಾಗಲೇ ಸಾವಿರಾರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತರ ಆತ್ಮಹತ್ಯೆ ತಡೆಯಲು ಅವರ ಜಮೀನುಗಳಿಗೆ ನೀರು ಒದಗಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

ಇನ್ನೇನು ಕೆಲವೇ ದಿನಗಳಲ್ಲಿ ಕಟಾವು ಮಾಡಿ ರಾಶಿ ಮಾಡಬೇಕಿದ್ದ ಭತ್ತದ ಬೆಳೆ ಕಣ್ಣೆದುರೇ ಹಾಳಾಗುತ್ತಿದೆ. ಹೀಗಾಗಿ ರೈತರು ಊಟ, ನೀರು ಬಿಟ್ಟು, ಮನೆಮಠ ತೊರೆದು ಹಗಲು-ರಾತ್ರಿ ಧರಣಿ ನಡೆಸುವ ಮೂಲಕ ಬೆಳೆಗಳಿಗೆ ನೀರು ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಸರ್ಕಾರದ ನಿರ್ಲಕ್ಷ್ಯ ಮುಂದುವರಿದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದಕ್ಕೆ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಧರಣಿಯಲ್ಲಿ ರವಿ ಮುತ್ಯಾ ದೇವಪುರ, ಸಂಘದ ರಾಜ್ಯ ಕಾರ್ಯದರ್ಶಿ ಮಹೇಶಗೌಡ ಸುಬೇದಾರ್, ರಾಜ್ಯ ಸಂಚಾಲಕ ನಾಗಯ್ಯ ಮುತ್ಯಾ ಹುಣಸಗಿ, ತಾಲೂಕು ಅಧ್ಯಕ್ಷ ಮಲ್ಲನಗೌಡ, ಉಪಾಧ್ಯಕ್ಷ ರಮೇಶ್, ನಾರಾಯಣಪುರ ಅಧ್ಯಕ್ಷ ಮರಿಲಿಂಗಪ್ಪ ಗೌಡ, ಕಾರ್ಯದರ್ಶಿ ಬಸವರಾಜ್ ದಿವಳಗುಡ್ಡ, ಮೌನೇಶ್ ದಳಪತಿ, ಭೀಮನಗೌಡ ಪಾಟೀಲ ನಾಗರಾಳ, ದಶರಥ ನಾಯಕ, ಬಸಯ್ಯ ಮುತ್ಯಾ, ಹಣಮಂತ ಅರಳಹಳ್ಳಿ, ಮಾರುತಿರಾವ್ ಹಾವಿನಾರಳ ಸೇರಿದಂತೆ ಅನೇಕ ರೈತಪರ ಹೋರಾಟಗಾರರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor