Yadgiri | ಸಂಸತ್ ವಿಸರ್ಜಿಸಿ ಬ್ಯಾಲೆಟ್ ಪೇಪರ್ನಲ್ಲಿ ಚುನಾವಣೆ ನಡೆಸುವ ಧೈರ್ಯ ಬಿಜೆಪಿಗಿದೆಯೇ? : ಭೀಮಣ್ಣ ಮೇಟಿ ಸವಾಲು
ಯಾದಗಿರಿ: ಬಿಜೆಪಿ ತಕ್ಷಣವೇ ಸಂಸತ್ತನ್ನು ವಿಸರ್ಜಿಸಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸುವ ತಾಕತ್ತು ಮತ್ತು ಧೈರ್ಯ ಹೊಂದಿದೆಯೇ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ರಾಜ್ಯ ಉಪಾಧ್ಯಕ್ಷ ಡಾ.ಭೀಮಣ್ಣ ಮೇಟಿ ಸವಾಲು ಹಾಕಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಇತ್ತೀಚೆಗೆ ನಡೆದ ನಾಲ್ಕು ಸ್ಥಾನಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರಬಹುದು. ಅಷ್ಟೊಂದು ಆತ್ಮವಿಶ್ವಾಸವಿದ್ದರೆ ತಕ್ಷಣವೇ ಸಂಸತ್ತನ್ನು ವಿಸರ್ಜಿಸಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ಎದುರಿಸಲಿ ಎಂದು ಸವಾಲು ಹಾಕಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಃ ಪ್ರತಿನಿಧಿಸುವ ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿದೆ. ಹಾಗಾದರೆ, ಇದು ಮುಂದಿನ ದಿನಗಳಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆಯೇ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ನಾಲ್ಕು ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ನಾಯಕರು ಈ ಫಲಿತಾಂಶವೇ ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದು ಹೇಳುವ ಮೂಲಕ ಅತಿಯಾದ ಆತ್ಮವಿಶ್ವಾಸದಿಂದ ಬೀಗುತ್ತಿದ್ದಾರೆ. ಆದರೆ, ಅವರ ಈ ನಿರೀಕ್ಷೆ ಎಂದಿಗೂ ಈಡೇರುವುದಿಲ್ಲ. 2028ರಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಎಂದ ಮೇಲೆ ಸೋಲು-ಗೆಲುವು ಸಹಜ. ಕಾಂಗ್ರೆಸ್ ಪಕ್ಷವು ಮತದಾರರ ತೀರ್ಪನ್ನು ಗೌರವಯುತವಾಗಿ ಸ್ವೀಕರಿಸುತ್ತದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ದುರಾಡಳಿತದಿಂದ ಜನರು ಸಂಪೂರ್ಣವಾಗಿ ಬೇಸತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದರು.
ಸುಳ್ಳು ಹೇಳಿಕೊಂಡು ಆಡಳಿತ ನಡೆಸಲಾಗುತ್ತಿದೆ. ಇದು ಬಹಳ ದಿನಗಳ ಕಾಲ ಮುಂದುವರಿಯುವುದಿಲ್ಲ. ಶೀಘ್ರದಲ್ಲೇ ಅಂತ್ಯವಾಗಲಿದೆ. ಈ ಬದಲಾವಣೆಯನ್ನು ಜನರೇ ತರುತ್ತಾರೆ ಎಂದು ಭೀಮಣ್ಣ ಮೇಟಿ ವಿಶ್ವಾಸ ವ್ಯಕ್ತಪಡಿಸಿದರು.