×
Ad

ಯಾದಗಿರಿ| ಅನವಾರ ಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ಬಸ್ ನಿಲುಗಡೆಗೆ ದಲಿತ ಸಂಘರ್ಷ ಸಮಿತಿ ಆಗ್ರಹ

Update: 2026-01-21 00:04 IST

ಯಾದಗಿರಿ: ಸುರಪುರ–ಯಾದಗಿರಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಅನವಾರ ಗ್ರಾಮದಲ್ಲಿ ಸಾರಿಗೆ ಬಸ್‌ಗಳು ನಿಲುಗಡೆ ಮಾಡದಿರುವುದರಿಂದ ಶಾಲಾ–ಕಾಲೇಜು ವಿದ್ಯಾರ್ಥಿಗಳು ದಿನನಿತ್ಯ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಯೋಜಕ ಶರಣರೆಡ್ಡಿ ಹತ್ತಿಗೂಡೂರು ಹೇಳಿದ್ದಾರೆ.  

ಅನವಾರ ಗ್ರಾಮದಿಂದ ಹತ್ತಿಗೂಡೂರ್ ಸರಕಾರಿ ಪ್ರೌಢಶಾಲೆ, ಶಹಾಪುರ ಕಾಲೇಜು ಹಾಗೂ ಯಾದಗಿರಿ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಬಸ್ ನಿಲುಗಡೆ ಇಲ್ಲದಿರುವುದರಿಂದ ಪ್ರಯಾಣದಲ್ಲಿ ಅಸೌಕರ್ಯ ಎದುರಾಗುತ್ತಿದೆ. ಈ ಸಮಸ್ಯೆಯನ್ನು ತಕ್ಷಣ ಸರಿಪಡಿಸುವಂತೆ ಒತ್ತಾಯಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳೊಂದಿಗೆ ಯಾದಗಿರಿ ಜಿಲ್ಲಾ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಬಸ್ ನಿಲುಗಡೆ ವ್ಯವಸ್ಥೆಯನ್ನು ತಕ್ಷಣ ಜಾರಿಗೆ ತರದಿದ್ದರೆ ಅನವಾರ ಗ್ರಾಮದ ವಿದ್ಯಾರ್ಥಿಗಳು ಹಾಗೂ ಸಂಘಟನೆಯ ವತಿಯಿಂದ ರಸ್ತೆ ತಡೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಜಿಲ್ಲಾಧ್ಯಕ್ಷ ಹತ್ತಿಗೂಡೂರ್ ಶರಣರೆಡ್ಡಿ, ಸಿದ್ದಪ್ಪ ಹೊಸ್ಮನಿ, ವಿದ್ಯಾರ್ಥಿಗಳಾದ ಆಕಾಶ ದೊಡ್ಮನಿ, ರಾಮ ಪೂಜಾರಿ, ಸಾಬು ಗುತ್ತೇದಾರ್, ರಾಜು ಗುತ್ತೇದಾರ್, ಜೈ ಭೀಮ್ ಹೊಸ್ಮನಿ, ಬೀರಲಿಂಗ ಪೂಜಾರಿ, ಅಯ್ಯಾಳಪ್ಪ, ಸೌಂದರ್ಯ, ಯಶೋಧ, ಸಾನಿಯಾ, ಅನುಶಿಯಾ, ಸವಿತಾ, ಅಕ್ಷತಾ, ಶ್ರೀದೇವಿ, ಮಹಾಲಿಂಗಮ್ಮ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News