ವಿಕಲಚೇತನರಿಗೆ ಸರಕಾರಿ ಸೌಲಭ್ಯಗಳು ಸಕಾಲಕ್ಕೆ ಸಿಗುವಂತಾಗಬೇಕು: ಅಧಿಕಾರಿಗಳಿಗೆ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಸೂಚನೆ
ಯಾದಗಿರಿ: ವಿಕಲಚೇತನರಿಗೆ ಸರಕಾರ ನೀಡುವ ಸೌಲಭ್ಯಗಳನ್ನು ಸಕಾಲಕ್ಕೆ ತಲುಪಿಸುವ ಕೆಲಸ ಸಂಬಂಧಪಟ್ಟ ಅಧಿಕಾರಿಗಳು ಮಾಡಬೇಕೆಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಹೇಳಿದರು.
ನಗರದ ಕಚೇರಿಯಲ್ಲಿ ಸೋಮವಾರ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲಿಕರಣ ಇಲಾಖೆಯಡಿ 2024-25 ಸಾಲಿನ ಯಾದಗಿರಿ ಮತಕ್ಷೇತ್ರದ ಫಲಾನುಭವಿಗಳಿಗೆ ತ್ರಿಚಕ್ರ ವಾಹನವನ್ನು ವಿತರಣೆ ಮಾಡಿ ಮಾತನಾಡಿದ ಚೆನ್ನಾರೆಡ್ಡಿ ಪಾಟೀಲ್, ವಿಕಲಚೇತನರಿಗೆ ಅನುಕಂಪದ ಬದಲಿಗೆ ಅವಕಾಶ ನೀಡಬೇಕು. ಅಂದಾಗಲೇ ಅವರಲ್ಲಿನ ಪ್ರತಿಭೆ ಹೊರಬರಲು ಸಾಧ್ಯವೆಂದರು.
ವಿವಿಧ ಇಲಾಖೆಗಳಲ್ಲಿ ಇವರಿಗಾಗಿಯೇ ಪ್ರತ್ಯೇಕ ಬಜೆಟ್ ಇರುತ್ತದೆ. ಅನೇಕ ಸಲಕರಣೆಗಳು ನೀಡಲಾಗುತ್ತದೆ. ಅವುಗಳು ಅವಶ್ಯಕತೆ ಮತ್ತು ಅರ್ಹತೆ ಇದ್ದವರಿಗೆ ನೀಡಬೇಕೆಂದರು.
ವಿಕಲಚೇತನ ಮಕ್ಕಳು ಸರಿಯಾಗಿ ಅಭ್ಯಾಸ ಮಾಡಿ ಉನ್ನತ ಸ್ಥಾನ ಪಡೆಯಬೇಕು. ನೌಕರಿಯಲ್ಲಿ ಕೂಡಾ ಮಿಸಲಾತಿ ಇದೆ. ಅದರ ಲಾಭ ಪಡೆಯಬೇಕು ಎಂದು ಹೇಳಿದರು.
ಜಿಲ್ಲಾ ಅಂಗವಿಕರ ಕಲ್ಯಾಣಾಧಿಕಾರಿ ಶರಣಪ್ಪ ಪಾಟೀಲ್ ಮಾತನಾಡಿ, ತ್ರಿಚಕ್ರ ವಾಹನಗಳು ಸೇರಿದಂತೆಯೇ ಎಲ್ಲ ಸೌಲಭ್ಯಗಳು ಜಿಲ್ಲೆಯ ವಿಕಲಚೇತನರಿಗೆ ತಲುಪಿಸಲಾಗುತ್ತಿದೆ ಎಂದರು.