ಯಾದಗಿರಿ | ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ : ಶಾಸಕ ಶರಣಗೌಡ ಕಂದಕೂರ
ಯಾದಗಿರಿ : ಅಭಿವೃದ್ಧಿ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು, ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸುವುದರಿಂದ ಜನರಿಗೆ ಅದರ ಲಾಭವಾಗಲಿದೆ, ಅದರ ಜೊತೆಗೆ ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ಗುರುಮಠಕಲ್ ಮತಕ್ಷೇತ್ರದ ಶಾಸಕರಾದ ಶರಣಗೌಡ ಕಂದಕೂರ ಹೇಳಿದರು.
ತಾಲೂಕಿನ ಯಡ್ಡಳ್ಳಿ ಗ್ರಾಮದಲ್ಲಿ ಕೇಂದ್ರ ರಸ್ತೆ ಮೂಲಸೌಕರ್ಯ ನಿಧಿಯಡಿಯಲ್ಲಿ ೬ ಕೋಟಿ ವೆಚ್ಚದಲ್ಲಿ ಯಡ್ಡಳ್ಳಿ – ಚಾಮನಳ್ಳಿ ರಸ್ತೆ ಡಾಂಬರೀಕರಣ ಹಾಗೂ 30 ಲಕ್ಷ ರೂ. ವೆಚ್ಚದ ಚಾಮನಳ್ಳಿ, ಯಡ್ಡಳ್ಳಿ, ಬಂದಳ್ಳಿ, ಚಾಮನಳ್ಳಿ ತಾಂಡಾ ಗ್ರಾಮಗಳಲ್ಲಿನ ಸಿಸಿ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
ಯಡ್ಡಳ್ಳಿ ಗ್ರಾಮಸ್ಥರು ನೀಡಿದ ಅಭಿವೃದ್ಧಿ ಕಾಮಗಾರಿಗಳ ಪಟ್ಟಿಯ ಅನ್ವಯ ಹಂತಹಂತವಾಗಿ ಒಂದೊಂದು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇನೆ. ಇಲ್ಲಿನ ಮಸೀದಿ ಅಭಿವೃದ್ಧಿಗೆ ಮನವಿ ಸಲ್ಲಿಸಿದ್ದೀರಿ ವಕ್ಫ್ ಬೋರ್ಡ್ ನಲ್ಲಿ ಆ ಮಸೀದಿ ನೋಂದಣಿ ಇದ್ದರೆ ತಿಳಿಸಿ ಅಭಿವೃದ್ಧಿಗೆ ಅನುದಾನ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.
ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಅಂಬೇಡ್ಕರ್ ಅಭಿವೃದ್ಧಿ ನಿಗಮ, ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ಸೇರಿದಂತೆ ಹಲವು ಯೋಜನೆಗಳ ಸದುಪಯೋಗವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಪ್ರಾಮಾಣಿಕವಾಗಿ ಪಕ್ಷದ ಕಾರ್ಯಕರ್ತರು ಮತ್ತು ಅಧಿಕಾರಿಗಳು ಮಾಡಬೇಕು ಎಂದು ಹೇಳಿದರು.
ರಸ್ತೆ ಮತ್ತು ಚರಂಡಿಗಳಂತಹ ಮೂಲ ಸೌಲಭ್ಯಗಳಿಗೆ ಅಭಿವೃದ್ಧಿ ಸೇರಿದಂತೆ ಅಂಗನವಾಡಿ ಹಾಗೂ ಶಾಲೆ ಕಟ್ಟಡಗಳ ದುರಸ್ತಿಗೆ ಕ್ರಮಕೈಗೊಳ್ಳಬೇಕಿದೆ ಆದುದರಿಂದ ನಾನು ಕೇವಲ ಅಡಿಗಲ್ಲು ಸಮಾರಂಭಕ್ಕೆ ಆಗಮಿಸುತ್ತಿಲ್ಲ ಬದಲಿಗೆ ತಾಲೂಕು ಮಟ್ಟದ ಅಧಿಕಾರಿಗಳನ್ನು ನನ್ನ ಜೊತೆಗೆ ಕರೆದುಕೊಂಡು ಬರುತ್ತಿದ್ದು ಜನ ಸಮಸ್ಯೆಗೆ ನೇರವಾಗಿ ಸ್ಪಂದಿಸಲಾಗತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾದ ರಾಮಣ್ಣ ಕೋಟಗೇರಾ, ಭೋಜನಗೌಡ ಯಡ್ಡಳ್ಳಿ, ಮಲ್ಲಣ್ಣಗೌಡ ಹತ್ತಿಕುಣಿ, ಮಲ್ಲಿಕಾರ್ಜುನ ಅರುಣಿ, ಈಶ್ವರ ನಾಯಕ ರಾಠೋಡ, ಗಿರಿನಾಥರಡ್ಡಿ ಚಿಂತಗುಂಟಾ, ಈಶಪ್ಪ ರ‍್ಯಾಕಾ, ಸಣ್ಣೆಪ್ಪ ಕೋಟಗೇರಾ, ಬಸಣ್ಣಗೌಡ ಚಾಮನಳ್ಳಿ, ಅಮರೇಶಗೌಡ ಬಂದಳ್ಳಿ, ನರಸಪ್ಪ ಕವಡೆ, ಭೀಮರಾಯ ಬದ್ದೇಪಲ್ಲಿ, ತಾಯಪ್ಪ ಬದ್ದೇಪಲ್ಲಿ, ಮರೆಪ್ಪ ನಾಟೇಕಾರ ಕಿಲ್ಲನಕೇರಾ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ, ಪಿಆರ್‌ಇ ಇಲಾಖೆ ಅಧಿಕಾರಿಗಳು ಇದ್ದರು.
ಅಂಗನವಾಡಿ ಅಭಿವೃದ್ಧಿಗೆ, ಅಂಗನವಾಡಿ ಕೇಂದ್ರದ ಮೇಲ್ವಿಚಾರಕರು ಮೂಲಸೌಕರ್ಯ ಒದಗಿಸುವಂತೆ ಶಾಸಕರಿಗೆ ಮನವಿ ಮಾಡಿದ ಪ್ರಯುಕ್ತ ಸ್ಥಳದಲ್ಲಿದ್ದ ಪಿಡಿಓ ರವರಿಗೆ ಸೂಚಿಸಿ, ನಿಮ್ಮ ಗ್ರಾಮ ಪಂಚಾಯತ್ ಅನುದಾನದಲ್ಲಿ ಆದಷ್ಟು ಅನುದಾನ ನೀಡಿ ಕಾಂಪೌಂಡ್ ಇನ್ನೀತರ ಕಾರ್ಯ ಮಾಡಿಸಿಕೊಡಿ ಒಂದು ವೇಳೆ ಹೆಚ್ಚಿನ ಅನುದಾನ ಬೇಕಿದ್ದಲ್ಲಿ ನನಗೆ ತಿಳಿಸಿ ಶಾಸಕರ ಅನುದಾನದಲ್ಲಿ ಮಾಡಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.
ನಿಮ್ಮಾಶೀರ್ವಾದವೇ ನನಗೆ ಬಲ :
ಯಡ್ಡಳ್ಳಿ ವಾಲ್ಮೀಕಿ ನಾಯಕ ಸಮಾಜದ ಬಹುದಿನದ ಬೇಡಿಕೆಯಾದ ವಾಲ್ಮೀಕಿ ಭವನ ನಿರ್ಮಾಣ ಖಂಡಿತಾ ಮಾಡಿಕೊಡುತ್ತೇನೆ ಹಾಗೆಯೇ ಯಡ್ಡಳ್ಳಿ ಗ್ರಾಮದ ತಾಯಂದಿರು ಬಹಳ ದಿನಗಳಿಂದ ಕೇಳುತ್ತಿರುವ ಕಾಳಿಕಾದೇವಿ ದೇವಸ್ಥಾನ ಅಭಿವೃದ್ಧಿಗೆ ಈಗಲೇ 5ಲಕ್ಷ ರೂ. ಅನುದಾನ ಕೊಡ್ತಿನಿ ನಂತರ ಇನ್ನೂ ಬೇಕಿರುವ ಅನುದಾನ ಕೊಟ್ಟು ದೇವಸ್ಥಾನ ಅಭಿವೃದ್ಧಿ ಮಾಡುತ್ತೇನೆ ನಿಮ್ಮಾಶೀರ್ವಾದ ಸದಾ ನನ್ನ ಮೇಲಿರಲಿ. ತಾಯಂದಿರ ಆಶೀರ್ವಾದ ಹಾಗೂ ಯಡ್ಡಳ್ಳಿ ಗ್ರಾಮವು ಕಂದಕೂರ ಕುಟುಂಬದ ನೋವು, ನಲಿವಿನಲ್ಲಿ ನೀವಿದ್ದಿರಿ ನಿಮ್ಮ ಋಣ ತೀರಿಸುವ ಕಾಲ ಬಂದಿದೆ ಎಂದರು.
ಜಾತಿ ನೋಡಿ ಓಟ್ ಹಾಕಬ್ಯಾಡ್ರಿ :
ಕಳೆದ 10 ವರ್ಷಗಳಿಂದ ನಮ್ಮ ತಂದೆಯವರ ಕಾಲದಿಂದಲೂ ನಾವು ಯಾವುದೇ ಜಾತಿ, ಧರ್ಮ ಮಾಡಿಲ್ಲ. ಆದರೆ, ಅಭಿವೃದ್ಧಿ ಮಾತ್ರ ಮಾಡಿದ್ದೇವೆ. 5 ವರ್ಷದ ನಂತರ ಒಂದ್ ಬಾರಿ ನಾವ್ ಓಟ್ ಕೆಳೋಕೆ ಬರ್ತಿವಿ ನಿಮ್ ಕಷ್ಟ ಬಂದಾಗ, ಅಭಿವೃದ್ಧಿ ಬೇಕಾದಾಗ ಯಾರಿಗೂ ಜಾತಿ ಇರಲ್ಲ. ಪ್ರತಿಯೊಬ್ಬರಿಗೂ ಕಷ್ಟಕಾಲದಲ್ಲಿ ನಾವ್ ನಿಲ್ಲುತ್ತೇವೆ. ಆಗ ಜಾತಿ ನೋಡಲ್ಲ ಓಟ್ ಹಾಕುವಾಗ ಯಾಕ್ ಜಾತಿ ನೊಡ್ತಿರಿ.
- ಶರಣಗೌಡ ಕಂದಕೂರ ಶಾಸಕರು, ಗುರುಮಠಕಲ್ ಮತಕ್ಷೇತ್ರ