ಯಾದಗಿರಿ | ಬಂಜಾರಾ ಸಮುದಾಯದ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ : ಜಿಲ್ಲಾಧಿಕಾರಿ ಡಾ.ಸುಶೀಲಾ. ಬಿ
ಯಾದಗಿರಿ : ಶಿಕ್ಷಣದಿಂದಲೇ ಉನ್ನತಿ ಸಾಧ್ಯ. ಬಂಜಾರ ಸಮುದಾಯದ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಅದರಲ್ಲೂ ಹೆಣ್ಣು ಮಕ್ಕಳಿಗೆ ಶಾಲೆ ಅರ್ಧಕ್ಕೆ ಬಿಡಿಸಿ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡಬೇಡಿ ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು ಕರೆ ನೀಡಿದರು.
ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಮಹಾರಾಜ್ ರ ಜಯಂತಿ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ, ಸಂತ ಸೇವಾಲಾಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಅರ್ಪಿಸಿ ಅವರು ಮಾತನಾಡಿದ ಅವರು, ಸಂತ ಸೇವಾಲಾಲ್ ಮಹಾರಾಜರು ತಮ್ಮ ಜೀವಿತಾವಧಿಯಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದರು. ಸಂಚಾರ ಮಾಡುತ್ತಿದ್ದ ವೇಳೆ ದಾರಿಯಲ್ಲಿ ಸಿಗುವ ತಾಂಡಾಗಳಿಗೆ ಭೇಟಿ ನೀಡಿ, ಇದನ್ನೇ ಜನಕ್ಕೆ ಹೇಳುತ್ತಿದ್ದರು. ಅದಕ್ಕಾಗಿ ಅವರ ಆಶಯ ನಿಜರೂಪದಲ್ಲಿ ಜಾರಿಯಾಗಬೇಕಾದರೆ ಹಿಂದುಳಿದ ಈ ಸಮಾಜದ ಮಕ್ಕಳು ಶಿಕ್ಷಣ ಪಡೆಯಬೇಕು. ಈ ಸಮಾಜದಲ್ಲಿನ ಅಕ್ಷರಸ್ಥರು ಪಾಲಕರಿಗೆ ತಿಳಿಹೇಳಬೇಕೆಂದರು.
ವಿಶೇಷ ಉಪನ್ಯಾಸ ನೀಡಿದ ಬಂಗಾರು ಜೆ.ಟಿ.ರಾಠೋಡ್, ಸಂತ ಸೇವಾಲಾಲ್ ರ ಜೀವನ ಆರ್ದಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನಾಯಕ ಮಾಲಿಪಾಟೀಲ್, ಡಿವೈಎಸ್ಪಿ ಅರುಣಕುಮಾರ್, ಸಂತ ಸೇವಾಲಾಲ ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ಸುಭಾಷ ರಾಠೋಡ್, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ ಇದ್ದರು. ಕಾರ್ಯಕ್ರಮದಲ್ಲಿ ಸಮಾಜದ ಅಪಾರ ಜನರು ಭಾಗವಹಿಸಿದ್ದರು. ಇದಕ್ಕೂ ಮುನ್ನ ಜಯಂತಿ ಅಂಗವಾಗಿ ಸಮಾಜದ ಸಾವಿರಾರು ಜನರು ನಗರದಲ್ಲಿ ಭವ್ಯ ಮೆರವಣಿಗೆ ನಡೆಸಿದರು.