×
Ad

ಯಾದಗಿರಿ | ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿಸಲು ಪಣತೊಟ್ಟು ಕಾರ್ಯಪ್ರವೃತರಾಗಲು ಜಿಲ್ಲಾಧಿಕಾರಿ ಸೂಚನೆ

Update: 2025-01-29 20:54 IST

ಯಾದಗಿರಿ : ಜಿಲ್ಲೆಯಾದ್ಯಂತ ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿಸಲು ಪಣತೊಟ್ಟು ಕಾರ್ಯಪ್ರವೃತರಾಗಿ, ಗ್ರಾಮ ಪಂಚಾಯತ್, ನಗರ ಪ್ರದೇಶಗಳ ವಾಪ್ತಿಯಲ್ಲಿ ಹೆಚ್ಚಾಗಿ ಜಾಗೃತಿಯನ್ನು ಮೂಡಿಸಬೇಕು ಎಂದು ಯಾದಗಿರಿ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಅವರು ಹೇಳಿದರು.

ಯಾದಗಿರಿ ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಜಿಲ್ಲಾ ಸಮನ್ವಯ ಸಮಿತಿ ಡಿಟಿಎಫ್ ಸಭೆಯಲ್ಲಿ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನವನ್ನು ಉದ್ದೇಶಿಸಿ ಅವರು ಮಾತನಾಡಿದರು.

ನಗರದ ವ್ಯಾಪ್ತಿಯಲ್ಲಿ ಬರುವ ಜೀವನ ಜೋತಿ (ಕುಷ್ಠರೋಗಿಗಳ) ಕಾಲೋನಿಗೆ ಬೇಟಿ ನೀಡಿ ಜಾಗೃತಿಯ ಜೊತೆಗೆ ಆರೋಗ್ಯ ತಪಾಸಣೆ ಮಾಡಿ ಅವರಿಗೆ ಅವಶ್ಯವಿರುವ ಸ್ವಯಂ ರಕ್ಷಣೆ ಕಿಟ್ ಮತ್ತು ಪಾದರಕ್ಷೆ ಹಾಗೂ ಇನ್ನಿತರ ಉಪಕರಣಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು.

ಶಂಕಿತ ಕುಷ್ಠರೋಗದ ಲಕ್ಷಣಗಳು ಚರ್ಮದ ಮೇಲಿನ ಯಾವುದೇ ತಿಳಿ, ಬಿಳಿ, ತಾಮ್ರ ಬಣ್ಣದ ಮಚ್ಚೆ, ದಪ್ಪನಾದ ಎಣ್ಣೆ ಪಸರಿಸಿದಂತಹ ಹೊಳೆಯುವ ಚರ್ಮ, ದೇಹದ ಮೇಲಿನ ಗಂಟುಗಳು, ಕಣ್ಣಿನರೆಪ್ಪೆಗಳನ್ನು ಮುಚ್ಚುವಲ್ಲಿ ತೊಂದರೆ, ಕೈ ಅಥವಾ ಕಾಲುಗಳಲ್ಲಿ ಬಹುದಿನದ ಗಾಯ, ಕೈ ಅಥವಾ ಕಾಲುಗಳಲ್ಲಿ ಬೆರಳು ಮಡಿಚಿಕೊಂಡಿರುವುದು, ನಡೆಯುವಾಗ ಕಾಲು ಎಳೆಯುವುದು, ಕೈ ಅಥವಾ ಕಾಲುಗಳಲ್ಲಿ ಜುಮ್ಮೆನಿಸುವಿಕೆ ಅಥವಾ ಮರುಗಟ್ಟುವಿಕೆ, ಅಂಗೈ ಅಥವಾ ಪಾದಗಳಲ್ಲಿ ಶೀತ/ಬಿಸಿ/ಸಂವೇದನೆ ನಷ್ಟವಾಗಿರುವುದು. ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಹತ್ತಿರದ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕರು ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಭೆಯಲ್ಲಿ ಜಾಗೃತಿ ಬಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಮಹೇಶ ಬಿರದಾರ ಅವರು ಮಾತನಾಡಿ, ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ ಜ.30 ರಿಂದ ಫೆ.13ರ ವರೆಗೆ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದ್ದು, ಸಮುದಾಯ ಹಾಗೂ ವಿವಿಧ ಇಲಾಖೆಗಳ ಸಹಕಾರ ತುಂಬಾ ಅವಶ್ಯಕತೆ ಇದ್ದು, ಈ ಕಾರ್ಯಕ್ರಮಕ್ಕೆ ಸಹಕರಿಸಬೇಕು ಎಂದು ಹೇಳಿದರು.

ಜಿಲ್ಲಾ ಕುಷ್ಠರೋಗ ನಿರ್ಮೂಲಾಧಿಕಾರಿಗಳಾದ ಡಾ.ಪದ್ಮಾನಂದ ಎ.ಗಾಯಕವಾಡ ಮಾತನಾಡಿ, ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತದೆ. ಕುಷ್ಠರೋಗದ ಬಗ್ಗೆ ಭಯಬೇಡ ಜಾಗೃತಿ ಇರಲಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಸ್ಎಂಓ ಡಾ.ಅನಿಲ ಕುಮಾರ ತಾಳಿಕೋಟಿ, ಆರ್ಸಿಹೆಚ್ಓ ಡಾ.ಮಲ್ಲಪ್ಪ, ಎಫ್ಡಬ್ಲ್ಯೂಓ ಡಾ.ಜೋತಿ ಕಟ್ಟಿಮನಿ, ಟಿಹೆಚ್ಓ ಡಾ.ಹಣಮಂತರೆಡ್ಡಿ, ಡಿಹೆಚ್ಇಓ (ಪ್ರಭಾರಿ) ತುಳಸಿರಾಮ ಚವ್ಹಾಣ, ಡಿಪಿಎಮ್ ಮನೋಹರ ಪಾಟೀಲ್, ಡಾ.ಸುನಿತಾ, ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವೀರನಗೌಡ, ಹಾಗೂ ಅಧಿಕಾರಿ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News