×
Ad

ಯಾದಗಿರಿ | ನಗರದಲ್ಲಿ ಫೆ.4ರಂದು ಜಿಲ್ಲಾ ಮಟ್ಟದ ಸಿರಿಧಾನ್ಯ, ಸಾವಯವ ಹಬ್ಬ

Update: 2025-02-03 15:40 IST

ರತೇಂದ್ರನಾಥ ಸುಗೂರ

ಯಾದಗಿರಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕೃಷಿ ಇಲಾಖೆ, ಕರ್ನಾಟಕ ರಾಜ್ಯ ಕೃಷಿ ಇಲಾಖೆ ಹಾಗೂ ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಇವರ ಸಹಯೋಗದಲ್ಲಿ ಫೆ.4 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ʼಸಿರಿಧಾನ್ಯ ಮತ್ತು ಸಾವಯವ ಹಬ್ಬʼ ಆಯೋಜಿಸಲಾಗಿದೆ ಎಂದು ಯಾದಗಿರಿ ಜಂಟಿ ಕೃಷಿ ನಿರ್ದೇಶಕರು ರತೇಂದ್ರನಾಥ ಸುಗೂರ ಅವರು ತಿಳಿಸಿದ್ದಾರೆ.

ಕೃಷಿ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಇಂದು ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಅವರು, ಸರ್ಕಾರದ ನಿರ್ದೇಶನದಂತೆ ಯುವಪೀಳಿಗೆ, ತಾಯಂದಿರಲ್ಲಿ, ಸಾರ್ವಜನಿಕರಲ್ಲಿ ಆರೋಗ್ಯಕ್ಕೆ ಅತ್ಯಂತ ಉಪಯುಕ್ತವಾಗಿರುವ ಸಿರಿಧಾನ್ಯ ಆಹಾರದ ಬಗ್ಗೆ ಅರಿವು ಮೂಡಿಸಲು ಈ ಸಿರಿಧಾನ್ಯ ಹಾಗೂ ಸಾವಯವ ಹಬ್ಬ ಹಮ್ಮಿಕೊಂಡಿದ್ದು,ಅಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರಾದ ಶರಣಬಸಪ್ಪ ದರ್ಶನಾಪುರ ಈ ಕಾರ್ಯಕ್ರಮ ಉದ್ಘಾಟಿಸುವರು.

ಕರ್ನಾಟಕ ವಿಧಾನ ಪರಿಷತ್ತು ವಿರೋಧ ಪಕ್ಷದ ನಾಯಕ ಛಲವಾದಿ ಟಿ.ನಾರಾಯಣಸ್ವಾಮಿ ಘನ ಉಪಸ್ಥಿತಿಯಲ್ಲಿ, ಯಾದಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ರಾಯಚೂರು ಲೋಕಸಭಾ ಸದಸ್ಯರು ಜಿ.ಕುಮಾರ ನಾಯಕ, ಕಲಬುರಗಿ ಲೋಕಸಭಾ ಸದಸ್ಯರು ರಾಧಾಕೃಷ್ಣ ದೊಡ್ಡಮನಿ, ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.

ವಿಧಾನ ಪರಿಷತ್ತು ಸದಸ್ಯ ಬಿ.ಜಿ.ಪಾಟೀಲ್, ಡಾ.ಚಂದ್ರಶೇಖರ ಬಿ.ಪಾಟೀಲ್, ಶಶೀಲ್ ಜಿ.ನಮೋಶಿ, ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಶಾಸಕ ಶರಣಗೌಡ ಕಂದಕೂರ, ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕ ರಾಜಾ ವೇಣುಗೋಪಾಲ ನಾಯಕ, ಯಾದಗಿರಿ ನಗರಸಭೆ ಅಧ್ಯಕ್ಷರು ಕುಮಾರಿ ಲಲಿತಾ ಅನಪೂರ, ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ವಿನಾಯಕ ಮಾಲಿ ಪಾಟೀಲ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಬಸನಗೌಡ ಮಾಲಿಪಾಟೀಲ್ ಮಾರ್ಕೆಲ್ ಅತಿಥಿಗಳಾಗಿ ಉಪಸ್ಥಿತರಿರುವರು.

ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲ ಬಿ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರುವರು.

ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಪ್ರಕಾಶ ಕುಚನೂರ, ಕವಡಿಮಟ್ಟಿ ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥರು ಹಾಗೂ ಹಿರಿಯ ವಿಜ್ಞಾನಿ ಗಳಾದ ಡಾ.ಜಯಪ್ರಕಾಶ ನಾರಾಯಣ ಉಪನ್ಯಾಸಕರಾಗಿ ಉಪಸ್ಥಿತರಿರುವರು ಎಂದು ಹೇಳಿದರು.

ಸಿರಿಧಾನ್ಯ ಮ್ಯಾರಥಾನ್ :

ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಸಾವಯವ ಹಬ್ಬದ ಅಂಗವಾಗಿ ಫೆ.4ರ ಮಂಗಳವಾರ ಬೆಳಿಗ್ಗೆ 7 ಗಂಟೆಗೆ ಹೊಸ ಬಸ್ ನಿಲ್ದಾಣದಿಂದ ಶ್ರೀ ಲಾಲ್ಬಹದ್ಧೂರ್ ಶಾಸ್ತ್ರಿ ವೃತ್ತ, ಸುಭಾಷಚಂದ್ರ ಬೋಸ್ ವೃತ್ತದ ಮೂಲಕ ಯಾದಗಿರಿ ಸರ್ಕಾರಿ ಪದವಿ ಮಹಾವಿದ್ಯಾಲಯದವರೆಗೆ ಸಿರಿಧಾನ್ಯ ಮ್ಯಾರಥಾನ್ ಆಯೋಜಿಸಲಾಗಿದೆ.

ಇದರಲ್ಲಿ ರೈತರು, ಯುವಕರು, ನಾಗರಿಕರು, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ, ಅನೇಕ ಶಾಲಾ, ಕಾಲೇಜು ಮಕ್ಕಳು ಭಾಗವಹಿಸಲಿದ್ದಾರೆ. ಇಲ್ಲಿ ಪ್ರತಿಯೊಬ್ಬರಿಗೆ ರಾಗಿ ಜೂಸ್ ಸಹ ನೀಡಲಾಗುವುದೆಂದರು.

ಸಿರಿಧಾನ್ಯ ಸಂಬಂಧಿತ ಮಳಿಗೆಗಳ ಸ್ಥಾಪನೆ :

ಈ ಹಬ್ಬದಲ್ಲಿ ಸಿರಿಧ್ಯಾನ ಮತ್ತು ಕೃಷಿಗೆ ಸಂಬಂಧಿಸಿದಂತೆಯೇ ವಿವಿಧ 30ಕ್ಕೂ ಅಧಿಕ ಮಳಿಗೆಗಳನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಸ್ಥಾಪಿಸಲಾಗುತ್ತಿದೆ.

ಇದರಂಗವಾಗಿ ಇತ್ತೀಚೆಗೆ ಆಯೋಜಿಸಿದ್ದ ಜಿಲ್ಲಾಮಟ್ಟದ ಸಿರಿಧಾನ್ಯ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯಲ್ಲಿ ( ಖಾರ,ಸಿಹಿ ಮತ್ತು ಮರೆತು ಹೋದ ಖಾದ್ಯಗಳ) ವಿಜೇತರಾದ ಒಂಬತ್ತು ಜನರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ನೀಡಲಾಗುವುದೆಂದು ಅವರು ಹೇಳಿದರು.

ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕರ ಆಯ್ಕೆ :

2024-25 ನೇ ಸಾಲಿನ ಆತ್ಮ ಯೋಜನೆಯಡಿ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಜಿಲ್ಲೆಯ ಪ್ರಗತಿಪರ ರೈತರನ್ನು ಆಯ್ಕೆ ಮಾಡಲಾಗಿದೆ. ಪ್ರತಿಯೊಬ್ಬರಿಗೂ ನಗದು 25 ಸಾವಿರ ರೂ., ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಗುವುದು, ಆಧುನಿಕ ಜೀವನ ಶೈಲಿಗೆ ಸಿರಿಧಾನ್ಯ ಆಹಾರದ ಮಹತ್ವ ಕುರಿತು ಏರ್ಪಡಿಸಿದ್ದ ಭಾಷಣ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೂ ಬಹುಮಾನ ನೀಡಲಾಗುವುದೆಂದು ರತೇಂದ್ರನಾಥ ವಿವರಿಸಿದರು.

ಈ ಮಹತ್ವದ ಹಬ್ಬದಂತಹ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಸುಮಾರು ಒಂದು ಸಾವಿರ ಜನರು ಭಾಗವಹಿಸಲಿದ್ದಾರೆ. ವಿಶೇಷವಾಗಿ ಬತ್ತ ಬೆಳೆಯುವ ಕಕ್ಕೇರಾದ ರೈತ ಸುಮಾರು ವಿವಿಧ 40 ನಮೂನೆಯ ತಳಿಗಳನ್ನು ಸಂಗ್ರಹಿಸಿದ್ದು, ಯಲ್ಹೇರಿ ರೈತ ವಿಶ್ವ ಶಂಕರ ಎಂಬುವವರು ದೇಶಿಯ ತಳಿ ಹೊಂದಿದ್ದು, ಇವರಿಬ್ಬರು ಸಹ ಮಳಿಗೆ ಹಾಕುವ ಮೂಲಕ ಬಂದು ಹೋಗುವ ಜನರಿಗೆ ಈ ಮಾಹಿತಿ ನೀಡಲಿದ್ದಾರೆಂದು ಅವರು ಹೇಳಿದರು.

2024- 25 ನೇ ಸಾಲಿನ ಕಂಬೈನ್ಡ್ ಹಾರ್ವೇಸ್ಟರ್ ಹಬ್ ಸ್ಥಾಪನೆಗಾಗಿ ಇಲಾಖೆ ನಿಯಮಗಳ ಪ್ರಕಾರ ಸಾಮಾನ್ಯ, ಪ.ಜಾ., ಪ.ಪಂ ಮತ್ತು ಸಂಘ ಸಂಸ್ಥೆ ಹೀಗೆ ಜಿಲ್ಲೆಯ ನಾಲ್ವರು ಆಯ್ಕೆಯಾಗಿದ್ದು, ಅವರಿಗೆಲ್ಲ ಕಾರ್ಯಕ್ರಮದಲ್ಲಿ ಬೇಕಾದ ಸಾಮಗ್ರಿಗಳು ವಿತರಿಸಲಾಗುವುದೆಂದರು. ಇದಕ್ಕೆ ವರ್ಗವಾರು ರಿಯಾಯಿತಿ ಇದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅಧಿಕಾರಿಗಳಾದ ರಾಜಕುಮಾರ್ , ಸಿಬ್ಬಂಧಿಗಳು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News